ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ

ಆಗ ಸರಮಾದೇವಿ ಇನ್ನೊಂದು ವಿಷಯವನ್ನು ಸೀತೆಗೆ ಹೇಳುತ್ತಾಳೆ. ನನಗೊಬ್ಬಳು ಒಂಬತ್ತು ವರ್ಷದ ಮಗಳಿದ್ದಾಳೆ, ಅವಳನ್ನು ಕಂಡರೆ ನನ್ನ ಭಾವ ರಾವಣನಿಗೆ ಬಹಳ ಪ್ರೀತಿ. ದೊಡ್ಡಪ್ಪ ನನ್ನು ಕಂಡರೆ ಅವಳಿಗೂ ಬಹಳ ಆದರ, ವಿಶ್ವಾಸ. ಆದರೆ ನಿನ್ನನ್ನು ಕದ್ದು ತಂದ ಮೇಲೆ ಅವಳು ಹೇಳುತ್ತಾಳೆ, ಅಮ್ಮಾ, ದೊಡ್ಡಪ್ಪ ಸೀತೆಯನ್ನು ಕದ್ದು ತಂದ ಮೇಲೆ, ನನಗೆ ಅವರನ್ನು ಕಂಡರೆ ಇಷ್ಟವಾಗುತ್ತಿಲ್ಲ, ಅಷ್ಟೇ ಅಲ್ಲ ಅಮ್ಮಾ, ಇಚೀಚೆಗೆ ಅವರು ಒಬ್ಬರೇ ಇದ್ದಾಗ ಅವರ ಬಳಿಗೆ ಹೋಗಲು ನನಗೆ ಭಯವಾಗುತ್ತದೆ ಎನ್ನುತ್ತಾಳೆ

ಕೆಡುಕು ಮಾಡಿದವರ ಕರ್ಮ ಮನೆಯವರನ್ನೂ ಸುತ್ತಿಕೊಳ್ಳುತ್ತದೆ

ಒಂದೊಳ್ಳೆ ಮಾತು

rgururaj628@gmail.com

ಅಶೋಕ ವನದ ಮರದ ಕೆಳಗೆ ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಬಹಳ ದುಃಖಿತಳಾಗಿ ಕುಳಿತಿದ್ದಳು. ಆಗ ಅಲ್ಲಿಗೆ ವಿಭೀಷಣನ ಹೆಂಡತಿ ಸರಮಾದೇವಿ ಬಂದು ಸೀತೆಯನ್ನು ಸಮಾಧಾನ ಪಡಿಸತೊಡಗಿದಳು. ಸೀತೆಗೆ ಯಾರ ಸಮಾಧಾನದ ಮಾತೂ ಬೇಡವಾಗಿತ್ತು. ಸೀತೆ ನಾನು ನತ ದೃಷ್ಟಳು, ದುಃಖಿ, ಶ್ರೀ ರಾಮನಂತಹ ಪೂಜ್ಯ ಪತಿಯನ್ನಗಲಿರುವವಳು.

ನನ್ನೊಡನೆ ಮಾತನಾಡಲು ಏನಿದೆ? ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ ಎಂದಳು. ಆಗ ಸರಮಾದೇವಿ, ನೀನು ದುಃಖಿತಳು ನಿಜ ಸೀತೆ, ಆದರೆ ನಿನಗಿಂತಲೂ ಹೆಚ್ಚು ದುಃಖಿತಳು ನಾನು ಎಂದಳು. ಈಗ ಸೀತೆಗೆ ಆಶ್ಚರ್ಯವಾಯಿತು, ರಾವಣನ ತಮ್ಮನ ಹೆಂಡತಿಯಾದ ಇವಳು ನನಗಿಂತಲೂ ಹೆಚ್ಚು ದುಃಖಿಯೇ! ಅದು ಹೇಗೆ?ಎಂದು ಅವಳ ಮುಖವನ್ನು ಆಶ್ಚರ್ಯದಿಂದ ನೋಡಿದಳು.

ಆಗ ಸರಮಾದೇವಿ ಹೌದು ಸೀತೆ, ನೀನು ನನ್ನ ಭಾವನಾದ ರಾವಣನಿಂದ ಅಪಹರಿಸಲ್ಪಟ್ಟವಳಾಗಿ, ನಮ್ಮ ರಾಕ್ಷಸರ ಹಿಂಸೆಯನ್ನು ಅನುಭವಿಸುತ್ತಾ ದುಃಖಿತಳಾಗಿದ್ದೀಯ ನಿಜ. ಆದರೆ ನಿನ್ನ ಮೇಲೆ ಎಲ್ಲರ ಅನುಕಂಪ ಬಹಳವಾಗಿದೆ. ನಿನ್ನ ಪರಿಸ್ಥಿತಿಯನ್ನು ನೋಡಿದವರು, ಕೇಳಿದವರು ನಿನಗಾಗಿ ಮರುಗುತ್ತಾರೆ. ರಾವಣ ಹೀಗೆ ಮಾಡಬಾರದಿತ್ತೆಂದು, ಎಲ್ಲರೂ ಒಳಗೊಳಗೇ ಮರುಗುತ್ತಾರೆ. ಆದರೆ ನಮ್ಮ ಪರಿಸ್ಥಿತಿ ನೋಡು!

ಇದನ್ನೂ ಓದಿ: Roopa Gururaj Column: ಹುಟ್ತಾ ಅಣ್ಣ-ತಮ್ಮಂದಿರು, ಬೆಳೀತಾ ದಾಯಾದಿಗಳು

ನಾವು ಲೋಕನಿಂದಿತರು. ನಮ್ಮ ಭಾವ ರಾವಣ, ಅವನ ವಯಸ್ಸಿಗೆ, ವಿದ್ಯೆ ಘನತೆಗೆ, ಪೌರುಷಕ್ಕೆ ಸರಿಯಲ್ಲದಂತಹ ನೀಚ ಕೆಲಸವನ್ನು ಮಾಡಿದ್ದಾನೆ. ಅದು ನಮ್ಮ ಕುಟುಂಬಕ್ಕೊಂದು ಕಳಂಕ, ಅವಮಾನ. ಲಂಕೆಯ ಜನರೆಲ್ಲರೂ ಒಳಗೊಳಗೇ ನಮ್ಮನ್ನು ಥೂ, ಛೀ, ಎನ್ನುತ್ತಿದ್ದಾರೆ. ನಾವು ದುಃಖದಲ್ಲಿದ್ದಾಗ, ಲೋಕದ ಜನರ ಅನುಕಂಪ ನಮ್ಮ ಮೇಲೆ ಇದ್ದರೆ ಅದೊಂದು ಸಮಾಧಾನ. ಆದರೆ ಎಷ್ಟೇ ಸಿರಿ ಸಂಪತ್ತು ಅಧಿಕಾರವಿದ್ದರೂ, ಲೋಕದ ಜನ ನಮ್ಮನ್ನು ನೋಡಿ ಅಸಹ್ಯ ಪಡುತ್ತಾ, ಅಪಹಾಸ್ಯಮಾಡುತ್ತಿದ್ದರೆ, ಅಂತವರ ಮನೆಯವರು ತುಂಬಾ ಅವಮಾನ, ದುಃಖ ಪಡಬೇಕಾಗುತ್ತದೆ. ರಾವಣನ ಮನೆಯ ರಾಣಿವಾಸದವರೆಲ್ಲಾ ಇಂತಹ ಅವಮಾನದಲ್ಲಿ ಬೆಂದು ಒದ್ದಾಡುತ್ತಿದ್ದೇವೆ ಎಂದು ಹೇಳುತ್ತಾ ಆಕೆ ಜೋರಾಗಿ ಅತ್ತು ಬಿಟ್ಟಳು.

ಆಗ ಸರಮಾದೇವಿ ಇನ್ನೊಂದು ವಿಷಯವನ್ನು ಸೀತೆಗೆ ಹೇಳುತ್ತಾಳೆ. ನನಗೊಬ್ಬಳು ಒಂಬತ್ತು ವರ್ಷದ ಮಗಳಿದ್ದಾಳೆ, ಅವಳನ್ನು ಕಂಡರೆ ನನ್ನ ಭಾವ ರಾವಣನಿಗೆ ಬಹಳ ಪ್ರೀತಿ. ದೊಡ್ಡಪ್ಪ ನನ್ನು ಕಂಡರೆ ಅವಳಿಗೂ ಬಹಳ ಆದರ, ವಿಶ್ವಾಸ. ಆದರೆ ನಿನ್ನನ್ನು ಕದ್ದು ತಂದ ಮೇಲೆ ಅವಳು ಹೇಳುತ್ತಾಳೆ, ಅಮ್ಮಾ, ದೊಡ್ಡಪ್ಪ ಸೀತೆಯನ್ನು ಕದ್ದು ತಂದ ಮೇಲೆ, ನನಗೆ ಅವರನ್ನು ಕಂಡರೆ ಇಷ್ಟವಾಗುತ್ತಿಲ್ಲ, ಅಷ್ಟೇ ಅಲ್ಲ ಅಮ್ಮಾ, ಇಚೀಚೆಗೆ ಅವರು ಒಬ್ಬರೇ ಇದ್ದಾಗ ಅವರ ಬಳಿಗೆ ಹೋಗಲು ನನಗೆ ಭಯವಾಗುತ್ತದೆ ಎನ್ನುತ್ತಾಳೆ.

ನೋಡು ಸೀತೆ, ನಾವು ಯಾರ್ಯಾರಿಂದ ಎಂಥಾ ಮಾತುಗಳನ್ನು ಕೇಳಬೇಕಾಯಿತಲ್ಲಾ, ಈಗ ನೀನೇ ಹೇಳು ಸೀತೆ, ನಿನಗಿಂತ ದುಃಖಿಗಳು ನಾವೇ ಅಲ್ಲವೇ? ಎಂದಳು. ಸೀತೆಗೆ, ಅವಳು ಹೇಳಿದ ಮಾತು ನಿಜವೆನಿಸಿತು. ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ, ಎಂದು ಸಮಾಧಾನ ಪಡಿಸಿದಳು. ಮೇಲಿನ ಕಥೆ ನಿಜವಿರಬಹುದು ಅಥವಾ ಕಾಲ್ಪನಿಕ ವಿರಬಹುದು, ಆದರೆ ತಪ್ಪು ಮಾಡಿದವರ ಮನೆಯವರ ಪರಿಸ್ಥಿತಿಯಂತೂ ಇದಕ್ಕಿಂತ ವಿಭಿನ್ನವಾಗಿ ಇರಲು ಸಾಧ್ಯವೇ ಇರದು. ಇಂದಿನ ದಿನಗಳಲ್ಲಿ ಸಾಮಾ ಜಿಕ ಜಾಲತಾಣಗಳಲ್ಲಿ ತಪ್ಪು ಮಾಡಿದವರನ್ನು ಹಿಗ್ಗ ಮುಗ್ಗ ಬಯ್ಯುತ್ತಾ, ಅವರ ಮಾನ ಹರಾಜು ಹಾಕುವ ಯಾವ ಅವಕಾಶವನ್ನು ನಾವು ತಪ್ಪಿಸಿಕೊಳ್ಳುವುದಿಲ್ಲ.

ಒಂದು ಕಡೆ ಟಿವಿ ಚಾನಲ್‌ಗಳು ಬೆಳಗಿನಿಂದ ರಾತ್ರಿಯವರೆಗೂ ಅವರ ಬಗ್ಗೆ ಹಾಕಿದ ಸುದ್ದಿಯನ್ನೇ ಹಾಕಿ, ಇಲಿ ಹೋದದ್ದನ್ನು ಹುಲಿ ಹೋಯಿತು ಎನ್ನುವಷ್ಟರ ಮಟ್ಟಿಗೆ ಗಲಾಟೆ ಎಬ್ಬಿಸಿದರೆ, ಮತ್ತೊಂದು ಕಡೆ ಸಾಮಾನ್ಯರಾದ ನಾವು ಕೂಡ ಅವರನ್ನು ತೆಗಳುವುದರಲ್ಲಿ ಹಿಂದೆ ಬೀಳುವುದಿಲ್ಲ. ಆದರೆ ಅವರ ಮನೆಯವರ ಕಥೆ ದೇವರಿಗೇ ಪ್ರೀತಿ. ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುವಾಗ ಅಥವಾ ಬರೆಯುವಾಗ ಒಮ್ಮೆ ಅವರ ಮನೆಯವರ ಬಗ್ಗೆ ಮಕ್ಕಳ ಬಗ್ಗೆ ಯೋಚಿಸಿ.