ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census: ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

ವಾಸ್ತವದಲ್ಲಿ ಜಾತಿಗಣತಿ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡಿದರೆ ಈಗಿರುವ ಮೀಸಲು ಪ್ರಮಾಣ ಶೇ.85 ಮೀರುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವುದು ದೂರದ ಮಾತು. ಅದರಲ್ಲೂ ಇದನ್ನು ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸದ್ಯಕ್ಕೆ ಕನಸಿನ ಮಾತು. ಈ ನಿಟ್ಟಿನಲ್ಲಿ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ವಿಫಲ ಯತ್ನ ನಡೆಸಿವೆ

ಸರಕಾರ ಸುಭದ್ರಕ್ಕೆ ಜಾತಿಗಣತಿ ಅಸ್ತ್ರ

Profile Ashok Nayak Apr 17, 2025 9:29 AM

ಶಿವಕುಮಾರ್ ಬೆಳ್ಳಿತಟ್ಟೆ

ವರದಿ ತಿರಸ್ಕಾರ ಕಷ್ಟ | ಶಿಫಾರಸುಗಳ ಜಾರಿ ದಾರಿ ದೂರ

ಬೆಂಗಳೂರು: ಬಹು ಚರ್ಚಿತ ಜಾತಿ ಗಣತಿ ವರದಿ ಈಗಾಗಲೇ ತಿರಸ್ಕಾರವೂ ಆಗದೆ, ಅನುಷ್ಠಾನವೂ ಆಗದೆ ರಾಜ್ಯದ ಪ್ರಬಲ ರಾಜಕೀಯ ಅಸ್ತ್ರವಾಗಿ ಉಳಿಯುವ ಎಲ್ಲ ಸೂಚನೆಗಳು ರಾಜಕೀಯ ವಲಯದಲ್ಲಿ ಕಾಣತೊಡಗಿವೆ. ಸುಮಾರು ದಶಕದ ಹಿನ್ನೆಲೆ ಇರುವ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನ ವರದಿ (ಜಾತಿ ಗಣತಿ )ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನ ಮಾಡುವು ದಕ್ಕೇನೋ ಸಿದ್ಧರಿದ್ದಾರೆ. ಆದರೆ ಪರಿಸ್ಥಿತಿ ಅಷ್ಟು ಸುಲಭವಿಲ್ಲ ಎನ್ನತ್ತವೆ ಮೂಲಗಳು. ಈ ವರದಿಯನ್ನು ರಾಜ್ಯ ಸಂಪುಟದ ಅನೇಕ ಸಚಿವರೂ ಸೇರಿದಂತೆ ಪ್ರತಿಪಕ್ಷಗಳ ಅನೇಕ ನಾಯಕರು ವಿರೋಧಿಸುತ್ತಿದ್ದಾರೆ. ಯಾವ ಸಚಿವರು, ಯಾವ ಕಾರಣಕ್ಕೆ ಹೇಗೆ ವಿರೋಧಿಸುತ್ತಾರೆ ಎನ್ನುವುದು ಗುರುವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯ ನಂತರ ತಿಳಿಯಲಿದೆ. ಹಾಗಂತ ಸಚಿವರು ವಿರೋಧಿಸಿದ್ದಾರೆ ಎಂದು ಈ ಜಾತಿ ಗಣತಿ ವರದಿಯನ್ನು ಏಕಾಏಕಿ ತಿರಸ್ಕರಿಸುವುದಕ್ಕೂ ಸಾಧ್ಯವಿಲ್ಲ.

ಏಕೆಂದರೆ, ಇದರ ಅನುಷ್ಠಾನ ಆಗಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಹಾಗೆಯೇ ಇದರ ವಿಚಾರದಲ್ಲಿ ಭಿನ್ನಾಭಿಪ್ರಾಯ ತಂದುಕೊಂಡು ಸರಕಾರಕ್ಕೆ ಸಂಚಕಾರ ತಂದುಕೊಳ್ಳಬಾರದು ಎಂದು ಪಕ್ಷದ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಚಿವರು ತಮ್ಮ ಜಾತಿ, ಜನಾಂಗದ ಸಂಘಟನೆಗಳು ಹೇಳುತ್ತಿರುವ ರೀತಿಯಲ್ಲಿ ವರದಿಯನ್ನೇ ತಿರಸ್ಕರಿಸಿ ಎಂದು ಕಡ್ಡಿ ಮುರಿದಂತೆ ಹೇಳಲಾಗದು.

ಇದನ್ನೂ ಓದಿ: Caste Census: ಜಾತಿ ಗಣತಿ ವರದಿ ಜಾರಿಯಾದ್ರೆ ಸರ್ಕಾರ ಬಿದ್ದೇ ಬೀಳುತ್ತೆ: ಒಕ್ಕಲಿಗರ ಸಂಘ ಎಚ್ಚರಿಕೆ

ವರದಿಯನ್ನು ತೀರಾ ವಿರೋಧಿಸಿದರೆ, ಕ್ಷೇತ್ರ ಮತ್ತು ಜಿಗಳಲ್ಲಿ ಅಹಿಂದ ವರ್ಗದ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವ ಆತಂಕ ಸಚಿವರು, ಶಾಸಕರಿಗಿದೆ. ಹೀಗಾಗಿ ಜಾತಿ ಗಣತಿ ವರದಿಯನ್ನು ಸರಕಾರ ಒಂದೇ ಏಟಿಗೆ ತಿರಸ್ಕರಿಸಲಾಗದು ಎನ್ನುತ್ತಾರೆ ಕಾಂಗ್ರೆಸ್ ನಾಯಕರು.

ಹಾಗಾದರೆ ಇದನ್ನು ಸರಕಾರ ಅನುಷ್ಠಾನ ಮಾಡುವುದು ದಿಟವೇ ಎಂದು ಕೇಳಿದರೆ,ಅದು ಕೂಡ ಸಾಧ್ಯವಿಲ್ಲ ಎನ್ನುತ್ತದೆ ಅಧಿಕೃತ ಮೂಲಗಳು. ವಾಸ್ತವದಲ್ಲಿ ಜಾತಿಗಣತಿ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನ ಮಾಡಿದರೆ ಈಗಿರುವ ಮೀಸಲು ಪ್ರಮಾಣ ಶೇ.85 ಮೀರುತ್ತದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡುವುದು ದೂರದ ಮಾತು. ಅದರಲ್ಲೂ ಇದನ್ನು ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಸದ್ಯಕ್ಕೆ ಕನಸಿನ ಮಾತು. ಈ ನಿಟ್ಟಿನಲ್ಲಿ ಬಿಹಾರ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ವಿಫಲ ಯತ್ನ ನಡೆಸಿವೆ. ಅಷ್ಟಕ್ಕೂ ಈ ಎಲ್ಲ ಪ್ರಯತ್ನಗಳನ್ನು ದೇಶದ ಸರ್ವೋಚ್ಛ ನ್ಯಾಯಾಲಯವೇ ತಿರಸ್ಕರಿಸಿದೆ. ಹೀಗಾಗಿ ರಾಜ್ಯದ ಜಾತಿಗಣತಿ ವರದಿ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.

ಚೆಂಡು ಕೇಂದ್ರದ ಅಂಗಳಕ್ಕೆ?: ಸಾಮಾನ್ಯವಾಗಿ ಸರಕಾರ ನೇಮಿಸಿದ ಯಾವುದೇ ಆಯೋಗದ ವರದಿಯನ್ನು ಯಾವುದೇ ಸರಕಾರ ಯಾವ ವಿರೋಧವನ್ನೂ ಎದುರಿಸದೆ ಅನುಷ್ಠಾನ ಮಾಡಿರುವ ಉದಾಹರಣೆಗಳಿಲ್ಲ. ಅಷ್ಟೇ ಏಕೆ? ಹಿಂದುಳಿದ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಕಲ್ಪಿಸಲು 1972ರಲ್ಲಿ ರಚಿಸಿದ್ದ ಎಲ್.ಜಿ.ಹಾವನೂರು ವರದಿಯನ್ನು‌ ಇದೇ ಪ್ರಬಲ ಸಮುದಾಯಗಳೇ ವಿರೋಧಿಸಿದ್ದವು.

ಆನಂತರ ರಚನೆಯಾದ ಚಿನ್ನಪ್ಪ ರೆಡ್ಡಿ ಆಯೋಗ ಹಿಂದಿನ ವರದಿಗಳೂ ಸೇರಿದಂತೆ ಎಲ್ಲ ಮಾಹಿತಿಗಳನ್ನು ಅಧ್ಯಯನ ಮಾಡಿ ಪ್ರಬಲ ಜಾತಿಗಳನ್ನು ಸಮಾಧಾನ ಪಡಿಸಿದ್ದ ನಂತರ ವರದಿ ಜಾರಿಯಾಗಿತ್ತು. ಇದೇ ರೀತಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಪರಿಶಿಷ್ಟರೇ ವಿರೋಧಿಸಿದ್ದರು. ಇದನ್ನು ಸರಿಪಡಿಸಲು ಸರಕಾರ ನ್ಯಾ.ನಾಗಮೋಹನ್ ದಾಸ್ ಅವರ ಸಮಿತಿ ರಚಿಸಿತ್ತು. ಆದಕ್ಕೂ ಕೆಲವು ಸಮಾಜದವರು ವಿರೋಧ ವ್ಯಕ್ತಪಡಿಸಿದ್ದರು. ಇದನ್ನು ಸರಿಪಡಿಸಲು ಸರಕಾರ ಒಂದಿಷ್ಟು ಕಾಲ ಸಮಿತಿ ಅವಧಿ ಮುಂದೂಡುವ ತಂತ್ರ ರೂಪಿಸಿದೆ.

ಹೀಗೆ ಜಾತಿಗಳ ವಿಚಾರ ಬಂದಾಗ ಯಾವುದೇ ಆಯೋಗದ ವರದಿಗಳು ವಿರೋಧದಿಂದ ಮುಕ್ತ ವಾಗಿಲ್ಲ. ಇನ್ನು ಯಾವುದೇ ಜಾತಿಗೂ ಸಂಬಂಽಸದ ದೇಶ, ಭಾಷೆ, ಅಭಿವೃದ್ಧಿಗೆ ಸಂಬಂಧಿಸಿದ ಡಾ.ಪಿ.ಬಿ.ಮಹಿಷಿ ವರದಿಗೇ ಅಪಾರ ವೀರೋಧ ವ್ಯಕ್ತವಾಗಿ ವರದಿಯ ಶಿಫಾರಸುಗಳನ್ನು (ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಮೀಸಲು) ಈತನಕ ಜಾರಿಗೊಳಿಸಲಾಗಿಲ್ಲ. ಹಾಗೆಯೇ ಪ್ರಾದೇಶಿಕ ಅಸಮಾನತೆ ತೊಡೆದು ಹಾಕುವ ಡಾ.ಡಿ.ಎಂ. ನಂಜುಂಡಪ್ಪ ವರದಿಗೂ ಈತನಕ ಮುಕ್ತಿ ಸಿಕ್ಕಿಲ್ಲ.

ಆದ್ದರಿಂದ ಈಗಿನ ಜಾತಿಗಣಿತಿ ವರದಿಯಲ್ಲಿ ಲಿಂಗಾಯತರು 66.35 ಲಕ್ಷ, ವೀರಶೈವರು 10.49 ಲಕ್ಷ, ಒಕ್ಕಲಿಗರು 61.58 ಎನ್ನುವ ಮಾಹಿತಿ ಸೋರಿಕೆಯಾಗಿದ್ದು, ಈ ಪ್ರಮಾಣ ತೀರಾ ಕಡಿಮೆಯಾಗಿದೆ. ತಮ್ಮ ಜನಾಂಗದವರು ಹೆಚ್ಚಾಗಿದ್ದಾರೆ ಎಂದು ಆ ಸಮಾಜದ ಸಚಿವರು, ಶಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸರಕಾರ ಸರಿಪಡಿಸಿ ಕೇಂದ್ರ ಸರಕಾರದ ಅನುಮೋದನೆಗೆ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಆದರೆ ಇದಕ್ಕೆ ಒಂದು ಸಚಿವ ಸಂಪುಟದ ಉಪಸಮಿತಿ ಅಥವಾ ಅಧಿಕಾರಿಗಳ ಸಮಿತಿ ಅಥವಾ ತಜ್ಞರ ಸಮಿತಿ ರಚಿಸಿ ಐದಾರು ತಿಂಗಳ ಸಮಯ ಪಡೆದು ಅಂತಿಮಗೊಳಿಸುವ ಸಾಧ್ಯತೆಯೂ ಇದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಿತಿ ಮೀರುವ ಹಗ್ಗಜಗ್ಗಾಟ

ಸದ್ಯ ಚಾಲ್ತಿಯಲ್ಲಿರುವಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಶೇ.24, ಹಿಂದುಳಿದ ವರ್ಗಗಳಿಗೆ ಶೇ.32 ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಇಲ್ಲದ ಬಡವರು, ಹಿಂದುಳಿದವರಿಗೆ ಶೇ.10ರಷ್ಟು ಮೀಸಲು ಸೌಲಭ್ಯವಿದೆ. ಆದರೆ ಕಾಂತರಾಜು ವರದಿ ಶಿಫಾರಸು ಪ್ರಕಾರ, ಹಿಂದುಳಿದ ವರ್ಗದ ಮೀಸಲನ್ನು ಶೇ.32ರಿಂದ 51ಕ್ಕೆ ಏರಿಸಬೇಕಾಗುತ್ತದೆ. ಇದನ್ನು ರಾಜ್ಯ ಸರಕಾರ ಅನುಮೋದಿಸಿದರೆ ಒಟ್ಟಾರೆ ಮೀಸಲು ಪ್ರಮಾಣ ಶೇ.85ಕ್ಕೆ ಏರುತ್ತದೆ. ಇದಕ್ಕೆ ಕೇಂದ್ರ ಸರಕಾರ, ಸಂಸತ್ ಅನುಮೋದನೆ ಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಸಾಧುವಲ್ಲ, ಸಾಧ್ಯವೂ ಇಲ್ಲ ಎನ್ನುವುದು ಸರಕಾರಕ್ಕೆ ಹಾಗೂ ಪ್ರತಿಪಕ್ಷಗಳಿಗೆ ಗೊತ್ತಿದೆ. ಆದರೂ ಸರಕಾರ ಪಟ್ಟು ಬಿಡುತ್ತಿಲ್ಲ. ಹೀಗಾಗಿ ಅಹಿಂದಗೆ ಅನುಕೂಲ ವಾದ ಜಾತಿಗಣತಿಗೆ ಬಿಜೆಪಿ ಮತ್ತು ಜೆಡಿಎಸ್ ವಿರೋಧಿಸುತ್ತಿದೆ. ಕಾಂಗ್ರೆಸ್ ಪರವಾಗಿದೆ ಎನ್ನುವ ಸಂದೇಶ ರವಾನೆಗೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ ಈ ವರದಿ ಜಾರಿ ಯಾಗುವುದಕ್ಕಿಂತ ರಾಜಕೀಯ ದಾಳವಾಗುವ ಸಾಧ್ಯತೆಯೇ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.