Madenuru Manu: ದರ್ಶನ್ ಸತ್ತೋದ, ಶಿವಣ್ಣ ಇನ್ನೊಂದು 6 ವರ್ಷ; ನಾಲಿಗೆ ಹರಿಬಿಟ್ಟ ಮಡೆನೂರು ಮನು, ಆಡಿಯೋ ವೈರಲ್!
Madenuru Manu: ನಟ ಮಡೆನೂರು ಮನು ಕನ್ನಡದ ಪ್ರಮುಖ ನಟರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ನಟರ ಅಭಿಮಾನಿಗಳು ಗರಂ ಆಗಿದ್ದಾರೆ. ಇದನ್ನು ನಾವು ಸಹಿಸಲ್ಲ, ಇನ್ನು ಮುಂದೆ ಮಡೆನೂರು ಮನುಗೆ ಯಾವುದೇ ಶೋಗಳಲ್ಲಿ ಅವಕಾಶ ಕೊಡಬಾರದು. ಈ ಬಗ್ಗೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡ್ತೀವಿ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.


ಬೆಂಗಳೂರು: ಅತ್ಯಾಚಾರ ಕೇಸ್‌ನಲ್ಲಿ ಬಂಧನವಾಗಿರುವ ನಟ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು (Madenuru Manu) ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ಬಗ್ಗೆ ಮಡೆನೂರು ಮನು ಮಾತನಾಡಿರುವುದು ಎನ್ನಲಾಗಿದೆ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆಡಿಯೋದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಟರ ಬಗ್ಗೆ ಮಡೆನೂರು ಮನು ಮಾತನಾಡಿದ್ದು, ಇದರಿಂದ ನಟರ ಅಭಿಮಾನಿಗಳು ಗರಂ ಆಗಿದ್ದಾರೆ.
ಆಡಿಯೋದಲ್ಲಿ ಏನಿದೆ?
ಮಡೆನೂರು ಮನು ಕನ್ನಡದ ಪ್ರಮುಖ ನಟರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ʼಶಿವರಾಜ್‌ಕುಮಾರ್ ಇನ್ನೊಂದು ಆರು ವರ್ಷ ಬದುಕಿದ್ರೆ ಹೆಚ್ಚು, ಸತ್ತು ಹೋಗ್ತಾರೆ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಮಾರ್ಕೆಟ್‌ನಲ್ಲಿರಬಹುದು. ನಟ ದರ್ಶನ್ ಈಗಾಗಲೇ ಸತ್ತೇ ಹೋದ. ದರ್ಶನ್ ಸರ್‌ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತೆ, ಆದ್ರೆ ಸಿನಿಮಾ ಮಾಡಲ್ಲ. ಈ ಮೂವರ ವಿರುದ್ಧ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನುʼ ಎಂದು ಆಡಿಯೋದಲ್ಲಿದೆ. ಈ ಧ್ವನಿ ಮಡೆನೂರು ಮನು ಅವರದ್ದೇ ಎಂದು ಹೇಳಲಾಗುತ್ತಿದೆ. ಆದರೆ ಸ್ಪಷ್ಟತೆ ಇಲ್ಲ.
ಮಡೆನೂರು ಮನು ಅವರು ಗೆಳೆಯರೊಂದಿಗೆ ಮದ್ಯ ಸೇವಿಸಿದಾಗ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಅಲ್ಲಿದ್ದವರು ಯಾರೋ ಇದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿರಬಹುದು ಎಂದು ಸಂಶಯ ವ್ಯಕ್ತವಾಗುತ್ತಿದೆ. ಆಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಶಿವಣ್ಣ, ಧ್ರುವ ಸರ್ಜಾ ಹಾಗೂ ದರ್ಶನ್ ಅಭಿಮಾನಿಗಳು ಮಡೆನೂರು ಮನು ವಿರುದ್ಧ ಕಿಡಿಕಾರುತ್ತಿದ್ದಾರೆ.
ಈ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್.ರಮೇಶ್, ಕರ್ನಾಟಕ ಫಿಲ್ಮ್ ಚೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ಮನು ವಿರುದ್ಧ ದೂರು ನೀಡುತ್ತೇವೆ. ಸೋಮವಾರ ಮನು ವಿರುದ್ಧ ಜಿಲ್ಲಾಮಟ್ಟದಲ್ಲಿ ಸುಮಾರು 100 ಕೇಸ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಮನು ಇನ್ನೂ ಬೆಳೆಯುತ್ತಿರುವ ನಟ, ಈಗಾಗಲೇ ಒಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾನೆ. ಆಗಲೇ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಇದೇ ಶಿವಣ್ಣ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮನುಗೆ ವಿಶ್ ಮಾಡಿದ್ದರು. ಆ ವ್ಯಕ್ತಿ ಬಗ್ಗೆಯೇ ಹೀಗೆ ಮಾತನಾಡಿದ್ದಾನೆ. ಇದನ್ನು ನಾವು ಸಹಿಸಲ್ಲ, ಇನ್ನು ಮುಂದೆ ಮನುಗೆ ಯಾವುದೇ ಶೋಗಳಲ್ಲಿ ಅವಕಾಶ ಕೊಡಬಾರದು. ಈ ಬಗ್ಗೆ ದೊಡ್ಡಮಟ್ಟದಲ್ಲಿ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Madenuru Manu Case: ನನ್ನ ಗಂಡ ಬೆಳೀತಿದ್ದಾನೆ ಎಂದು ಷಡ್ಯಂತ್ರ: ಮಡೆನೂರು ಮನು ಪತ್ನಿ ಆರೋಪ
ಈ ಆಡಿಯೋ ಅಸಲಿಯೋ, ನಕಲಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದು ಮನು ಅವರದ್ದೇ ಎಂದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಒಂದು ಕೇಸ್‌ನಲ್ಲಿ ಜೈಲುವಾಸದಲ್ಲಿರುವ ಮನು ವಿರುದ್ಧ ಶಿವಣ್ಣ, ಧ್ರುವ ಸರ್ಜಾ, ದರ್ಶನ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.