DK Suresh Wife: ಸಂಸದ ಡಿಕೆ ಸುರೇಶ್ ಪತ್ನಿ ತಾನು ಎಂದು ಹೇಳಿಕೊಂಡ ಮಹಿಳೆ; ಕೇಸು
ಶಾಲೆಯೊಂದರಲ್ಲಿ ಕೆಲಸ ಮಾಡುವ ಮಹಿಳೆ ಮೈಸೂರು ಮೂಲದವರಾಗಿದ್ದಾರೆ. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಎರಡೂ ಖಾತೆಗಳಲ್ಲಿ ಸುರೇಶ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಆರೋಪಿ ಮಹಿಳೆ

ರಾಮನಗರ: ಮಹಿಳೆಯೊಬ್ಬರು (woman) ತಾನು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಪತ್ನಿ (MP DK Suresh wife) ಎಂದು ಹೇಳಿಕೊಂಡು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹರಿಬಿಟ್ಟಿದ್ದು, ಇದೀಗ ಸಂಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ವಕೀಲ ಪ್ರದೀಪ್ ಎಂಬವರು ಸುರೇಶ್ ಅವರ ಪರವಾಗಿ ರಾಮನಗರದ ಸಿಇಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ (Fraud Case) ದಾಖಲಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ pavitrah256 ಎಂಬ ಹೆಸರಿನಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ PavitraDksuresh Dodalahalli ಎಂಬ ಹೆಸರಿನಲ್ಲಿ ಖಾತೆ ಹೊಂದಿರುವ ಮಹಿಳೆ, ಎರಡೂ ಜಾಲತಾಣಗಳಲ್ಲಿ ಏ. 8ರಂದು ವಿಡಿಯೊ ಪೋಸ್ಟ್ ಮಾಡಿದ್ದಾರೆ. ಸುರೇಶ್ ಅವರ ಚಿತ್ರದೊಂದಿಗೆ ತನ್ನ ಚಿತ್ರವನ್ನು ಎಡಿಟ್ ಮಾಡಿ ಜೋಡಿಸಿ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಶಾಲೆಯೊಂದರಲ್ಲಿ ಕೆಲಸ ಮಾಡುವ ಮಹಿಳೆ ಮೈಸೂರು ಮೂಲದವರಾಗಿದ್ದಾರೆ. ಪತಿ ಹೆಸರಿನ ಮುಂದೆ ಡಿ.ಕೆ. ಸುರೇಶ್ ಎಂದಿರುವ ನಕಲಿ ಮತದಾರರ ಗುರುತಿನ ಚೀಟಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಎರಡೂ ಖಾತೆಗಳಲ್ಲಿ ಸುರೇಶ್ ಅವರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?: ‘ನಾನು ಮೊದಲು ಡಿ.ಕೆ. ಸುರೇಶ್ ಅವರ ಹೆಂಡತಿಯಾಗಿ ಹೇಳಬೇಕೆಂದರೆ, ನಾನು ಫಸ್ಟ್ ಸುರೇಶ್ ಅವರ ಅಭಿಮಾನಿ. ಯಾಕೆಂದರೆ ಅವರು ಮೂರು ಸಲ ಎಂಪಿಯಾಗಿ ಯಾರೂ ಮಾಡಲಿಕ್ಕಾಗದ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಇಂತಹವರನ್ನು ನನ್ನ ಗಂಡ ಎಂದು ಹೇಳಿಕೊಳ್ಳಲು ಖುಷಿಪಡುತ್ತೇನೆ’ ಎಂದು ಮಹಿಳೆ ವಿಡಿಯೊದಲ್ಲಿ ಹೇಳಿದ್ದಾರೆ.
ದುರುದ್ದೇಶದಿಂದ ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಅಪಪ್ರಚಾರ ನಡೆಸುತ್ತಿರುವ ಮಹಿಳೆ, ಸಾರ್ವಜನಿಕವಾಗಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಸುರೇಶ್ ಅವರ ಸಂಬಂಧಿಕರು ಹಾಗೂ ರಾಜಕಾರಣಿಗಳಿಗೆ ಹತ್ತಿರದವಳು ಎಂದು ಹೇಳಿಕೊಂಡು ನಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ದುರುಪಯೋಗಪಡಿಸಿಕೊಂಡಿದ್ದಾಳೆ. ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಲ್ಲಿ ವಕೀಲ ಪ್ರದೀಪ್ ತಿಳಿಸಿದ್ದಾರೆ.
ದೂರಿನ ಮೇರೆಗೆ ಪೊಲೀಸರು, ಮಹಿಳೆ ವಿರುದ್ದ ಭಾರತೀಯ ನ್ಯಾಯ ಸಂಹಿತೆ 237 (ಉದ್ದೇಶಪೂರ್ವಕವಾಗಿ ಸುಳ್ಳು ಘೋಷಣೆ ಮಾಡಿಕೊಳ್ಳುವ ಅಪರಾಧ), 319 (ಮತ್ತೊಬ್ಬರಂತೆ ನಟಿಸಿ ಮೋಸ ಮಾಡುವ ಅಪರಾಧ), 336 (ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿಸುವ ಅಪರಾಧ) ಹಾಗೂ 353 (ಸಾರ್ವಜನಿಕವಾಗಿ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಕಲಂಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Aishwarya Gowda: ವಂಚನೆ ಪ್ರಕರಣದಲ್ಲಿ ಐಶ್ವರ್ಯ ಗೌಡ 14 ದಿನ ಇಡಿ ಕಸ್ಟಡಿಗೆ