ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Attack: ಸೋನಾಮಾರ್ಗ್‌ ಸುರಂಗ ದಾಳಿ ನಡೆಸಿದ ಉಗ್ರರ ಗುಂಪಿನಿಂದಲೇ ಪಹಲ್ಗಾಮ್‌ ದಾಳಿ

Z-Morh attack. ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ ಭಯೋತ್ಪಾದಕ ತಂಡವೇ ಕಳೆದ ವರ್ಷ ಸೋನಾಮಾರ್ಗ್‌ನ ಝಡ್-ಮೋರ್ಹ್ ಸುರಂಗ ಯೋಜನೆಯ ಮೇಲೂ ದಾಳಿ ನಡೆಸಿತ್ತು.

ಪಹಲ್ಗಾಮ್‌ ದಾಳಿಯ ಇನ್ನಷ್ಟು ಮಾಹಿತಿ ಬಹಿರಂಗ

Profile Ramesh B May 1, 2025 5:33 PM

ಹೊಸದಿಲ್ಲಿ: ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನುಗ್ಗಿ ಮಾರಣಾಂತಿಕ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದ ಭಯೋತ್ಪಾದಕ ತಂಡದ ಕುರಿತಾದ ಒಂದೊಂದೇ ಬೆಚ್ಚಿಬೀಳಿಸುವ ವಿವರ ಹೊರ ಬೀಳುತ್ತಿದೆ (Pahalgam Attack). ಈ ಗುಂಪು ಹಿಂದೆಯೂ ಜಮ್ಮು ಕಾಶ್ಮೀರದಲ್ಲಿ ರಕ್ತ ಹರಿಸಿತ್ತು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. 2024ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಾಂದರ್‌ಬಾಲ್ ಜಿಲ್ಲೆಯಲ್ಲಿ ನಡೆದ ದಾಳಿಯನ್ನು ಇದೇ ಗುಂಪು ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ಅಂದಿನ ದಾಳಿಯಲ್ಲಿ ಸೋನಾಮಾರ್ಗ್‌ನ ಝಡ್-ಮೋರ್ಹ್ ಸುರಂಗ ಯೋಜನೆಯ (Z-Morh tunnel project) ಬಳಿ 6 ಕಾರ್ಮಿಕರು ಮತ್ತು ಒಬ್ಬ ವೈದ್ಯರು ಮೃತಪಟ್ಟಿದ್ದರು.

ಮೂಲಗಳ ಪ್ರಕಾರ, ಈ ಎರಡೂ ದಾಳಿಗಳನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ) ಬೆಂಬಲಿತ ಭಯೋತ್ಪಾದಕ ಸಂಘಟನೆ ನಡೆಸಿದೆ. ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾಗಿರುವ ಹಲವು ಉಗ್ರರು ಈ ಹಿಂದೆ ಝಡ್-ಮೋರ್ಹ್ ದಾಳಿಯಲ್ಲಿಯೂ ಭಾಗವಹಿಸಿದ್ದರು ಎಂದು ವರದಿ ಹೇಳಿದೆ.

ಶಂಕಿತ ಭಯೋತ್ಪಾದಕರ ರೇಖಾಚಿತ್ರ:



2024ರ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರ ಪೈಕಿ ಓರ್ವನಾದ ಜುಬೈದ್‌ ಅಹಮದ್‌ ಭಟ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಬಳಿಕ ಆತನ ಇಬ್ಬರು ಇಬ್ಬರು ಸಹಚರರನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಪಹಲ್ಗಾಮ್ ಹತ್ಯೆಯಲ್ಲಿ ಭಾಗಿಯಾಗಿರುವ ಲಷ್ಕರ್ ಭಯೋತ್ಪಾದಕ ಹಶಿಮ್ ಮೂಸಾ ಅಲಿಯಾಸ್ ಸುಲೇಮಾನ್ 2024ರ ಝಡ್-ಮೋರ್ಹ್ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಎಂದು ಗುಪ್ತಚರ ಇಲಾಖೆ ದೃಢಪಡಿಸಿದೆ. ಈತನಿಗಾಗಿ ಧೋಧ ಕಾರ್ಯ ಚುರುಕುಕೊಂಡಿದೆ.

ಈ ಸುದ್ದಿಯನ್ನೂ ಓದಿ: Supreme Court: "ಭದ್ರತಾ ಪಡೆಗಳ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ"; ಪಹಲ್ಗಾಮ್ ದಾಳಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಝಡ್-ಮೋರ್ಹ್ ಸುರಂಗ ಮೇಲೆ ದಾಳಿ

ಸೋನಾಮಾರ್ಗ್‌ ಸುರಂಗ ಎಂದೂ ಕರೆಯಲ್ಪಡುವ ಝಡ್‌-ಮೋರ್ಹ್ ಸುರಂಗ ಮಾರ್ಗದ ಮೇಲೆ ಕಳೆದ ವರ್ಷ ಉಗ್ರರು ದಾಳಿ ನಡೆಸಿದ್ದರು. 2024ರ ಅಕ್ಟೋಬರ್‌ನಲ್ಲಿ ಉಗ್ರರು‌ ದಾಳಿ ನಡೆಸಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ ಖಾಸಗಿ ಕಂಪನಿಯ ಕಾರ್ಮಿಕರ ಮೇಲೆ ಯದ್ವಾತಥ್ವಾ ಗುಂಡು ಹಾರಿಸಿದ್ದರು. ಇದರಿಂದ 6 ಮಂದಿ ಕಾರ್ಮಿಕರು ಮತ್ತು ಓರ್ವ ವೈದ್ಯ ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದರು.

6.5 ಕಿ.ಮೀ. ಉದ್ದದ 2 ಪಥಗಳ ಈ ಸುರಂಗ ಮಾರ್ಗವನ್ನು 2,700 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮುದ್ರ ಮಟ್ಟದಿಂದ 8,650 ಅಡಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಂಡಿರುವ ಝಡ್-ಮೋರ್ಹ್ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ್ ನಡುವೆ ಸಂಪರ್ಕ ಸಾಧಿಸುತ್ತದೆ.

ಸುರಂಗ ದಾಳಿಯಲ್ಲಿ ಮೃತಪಟ್ಟವರಲ್ಲಿ ಬುಡ್ಗಾಮ್‌ನ ಡಾ.ಶಹನವಾಜ್, ಪಂಜಾಬ್‌ನ ಗುರುದಾಸ್‌ಪುರದ ಗುರ್ಮೀತ್ ಸಿಂಗ್, ಬಿಹಾರದ ಮೊಹಮ್ಮದ್ ಹನೀಫ್, ಫಹೀಮ್ ನಾಸಿರ್ ಮತ್ತು ಕಲೀಮ್, ಮಧ್ಯಪ್ರದೇಶದ ಅನಿಲ್ ಕುಮಾರ್ ಶುಕ್ಲಾ ಮತ್ತು ಜಮ್ಮುವಿನ ಶಶಿ ಅಬ್ರೋಲ್ ಸೇರಿದ್ದಾರೆ. ಅಲ್ಲದೆ ಭಯೋತ್ಪಾದಕರು ಕಂಪನಿಯ 2 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಘಟನಾ ಸ್ಥಳದಲ್ಲಿ ಐಎನ್ಎಸ್ಎಎಸ್ ರೈಫಲ್ ಬಿಟ್ಟು ಹೋಗಿದ್ದರು.

ಪಹಲ್ಗಾಮ್‌ ದಾಳಿ ಮುನ್ನ ಸ್ಥಳ ಪರಿಶೀಲಿಸಿದ್ದ ಉಗ್ರರು

ಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಮುನ್ನ ಉಗ್ರರು ಸ್ಥಳ ಪರಿಶೀಲನೆ ನಡೆಸಿದ್ದರು. ಲಷ್ಕರೆ ಗುಂಪಿನ ಸದಸ್ಯರು ಏ. 15ರಂದು ಪಹಲ್ಗಾಮ್‌ಗೆ ಆಗಮಿಸಿದ್ದರು ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೈಸರನ್‌ ಕಣಿವೆ, ಅರು ಕಣಿವೆ, ಬೇತಾಬ್‌ ಕಣಿವೆ ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಓಡಾಡಿದ ಉಗ್ರರು ಕೊನೆಗೆ ದಾಳಿ ನಡೆಸಲು ಬೈಸರನ್‌ ಕಣಿವೆಯನ್ನು ಆಯ್ದುಕೊಂಡಿದ್ದರು. ಕಡಿಮೆ ಭದ್ರತಾ ವ್ಯವಸ್ಥೆ ಇರುವುದನ್ನು ಮನಗಂಡ ಉಗ್ರರು ಈ ಪ್ರದೇಶವನ್ನು ಆಯ್ದುಕೊಂಡಿದ್ದರು ಎನ್ನಲಾಗಿದೆ.