ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಬದುಕು ಡೈರಿಯಲ್ಲಿ ದಾಖಲಿಸದಷ್ಟು ಡಲ್‌ ಆಗಿರಲು ಸಾಧ್ಯವಿಲ್ಲ !

ಯಾರು ಏನೇ ಉಪದೇಶ ಕೊಡಲಿ, ಬೇರೆಯವರ ಡೈರಿ ಹಾಗೂ ಪತ್ರ ಓದುವುದರಲ್ಲಿ ಇರುವ ಖುಷಿಯೇ ಬೇರೆ. ಯಾರ ಡೈರಿಯೂ ಒಮ್ಮೆ ಓದದೇ ಬಿಸಾಡುವಷ್ಟು ನೀರಸವಾಗಿರುವುದಿಲ್ಲವಂತೆ. ಅದಕ್ಕೇ ಅದನ್ನು ಓದಬಾರದು ಹಾಗೂ ಓದದೇ ಇರಲೂಬಾರದು. ಈ ಕಾರಣಕ್ಕೆ ಅನೇಕರು ಡೈರಿ ಬರೆಯತ್ತಾರೆ ಮತ್ತು ಬರೆಯುವುದಿಲ್ಲ. ಡೈರಿ ಬರೆದು, ಅದು ಯಾರಿಗಾದರೂ ಸಿಕ್ಕಿ ಭಾನಗಡಿ ಯಾಗುವುದು ಬೇಡ ಎಂದು ಅದನ್ನು ಬರೆಯುವ ಉಸಾಬರಿಗೇ ಹೋಗುವುದಿಲ್ಲ

ಬದುಕು ಡೈರಿಯಲ್ಲಿ ದಾಖಲಿಸದಷ್ಟು ಡಲ್‌ ಆಗಿರಲು ಸಾಧ್ಯವಿಲ್ಲ !

ನೂರೆಂಟು ವಿಶ್ವ

vbhat@me.com

ಬೇರೆಯವರ ಡೈರಿ ಹಾಗೂ ಪತ್ರವನ್ನು ಓದಲೇಬಾರದು. ಅದರಂಥ ಕೆಟ್ಟ ಹವ್ಯಾಸ ಮತ್ತೊಂದಿಲ್ಲ. ಯಾಕೆಂದರೆ ಅವೆರಡೂ ತೀರಾ ಪರ್ಸನಲ್. ಬೇರೆಯವರ ವೈಯಕ್ತಿಕ ಜೀವನದಲ್ಲಿ ಇಣುಕಿ ನೋಡು ವುದು ಒಳ್ಳೆಯ ಅಭ್ಯಾಸವಲ್ಲ. ಪೋಸ್ಟ್‌ಕಾರ್ಡ್ ಸಿಕ್ಕರೂ ಅದನ್ನು ಓದಬಾರದು’- ಹೀಗೆಂದು ನಾವು ಚಿಕ್ಕವರಿದ್ದಾಗ ಮನೆಯಲ್ಲಿ ಹೇಳುತ್ತಿದ್ದರು. ಶಾಲೆಯಲ್ಲಿ ಮಾಸ್ತರರೂ ಈ ಬಗ್ಗೆ ಹೇಳುತ್ತಿದ್ದರು. ಒಮ್ಮೆ ಸಂಬಂಧಿಕರೊಬ್ಬರ ಡೈರಿಯನ್ನು ಓದುವಾಗ ಸಿಕ್ಕಿಬಿದ್ದು ಕಿವಿ ಹಿಂಡಿಸಿ ಕೊಂಡ ನೆನಪು ಇನ್ನೂ ನನ್ನ ಕಿವಿ ತುದಿಯಲ್ಲಿದೆ. ಯಾರು ಏನೇ ಉಪದೇಶ ಕೊಡಲಿ, ಬೇರೆಯವರ ಡೈರಿ ಹಾಗೂ ಪತ್ರ ಓದುವುದರಲ್ಲಿ ಇರುವ ಖುಷಿಯೇ ಬೇರೆ. ಯಾರ ಡೈರಿಯೂ ಒಮ್ಮೆ ಓದದೇ ಬಿಸಾಡುವಷ್ಟು ನೀರಸವಾಗಿರುವುದಿಲ್ಲವಂತೆ.

ಅದಕ್ಕೇ ಅದನ್ನು ಓದಬಾರದು ಹಾಗೂ ಓದದೇ ಇರಲೂಬಾರದು. ಈ ಕಾರಣಕ್ಕೆ ಅನೇಕರು ಡೈರಿ ಬರೆಯತ್ತಾರೆ ಮತ್ತು ಬರೆಯುವುದಿಲ್ಲ. ಡೈರಿ ಬರೆದು, ಅದು ಯಾರಿಗಾದರೂ ಸಿಕ್ಕಿ ಭಾನಗಡಿ ಯಾಗುವುದು ಬೇಡ ಎಂದು ಅದನ್ನು ಬರೆಯುವ ಉಸಾಬರಿಗೇ ಹೋಗುವುದಿಲ್ಲ.

ಇನ್ನು ಕೆಲವರಿಗೆ ತಮ್ಮ ಜೀವನ ದಾಖಲಿಸುವಷ್ಟು ಅಮೂಲ್ಯ ಅಥವಾ ಮಹತ್ವದ್ದಲ್ಲ ಎಂದು ಅನಿಸಿರಬಹುದು. ಆ ಕಾರಣದಿಂದಲೂ ಡೈರಿ ಬರೆಯುವ ಗೋಜಿಗೆ ಹೋಗುವುದಿಲ್ಲ. ಇನ್ನು ಕೆಲವರಿಗೆ ತಮ್ಮ ಬದುಕಿನ ಘಟನೆಗಳೆಲ್ಲ ದಾಖಲೆಯಾಗಬೇಕು. ತನ್ನ ನಂತರವೂ ಅದು ಇತರರಿಗೆ ಗೊತ್ತಾಗಬೇಕೆಂಬ ಆಸೆಯಿರುತ್ತದೆ. ಅಲ್ಲದೇ ಎಷ್ಟೋ ಘಟನೆಗಳು ಅನೇಕ ವರ್ಷಗಳ ನಂತರ ನಮಗೇ ಮರೆತುಹೋಗಿರುತ್ತವೆ.

ಘಟನೆಯ ಎಲ್ಲ ವಿವರಗಳು ನೆನಪಾಗದೇ ಹೋಗಬಹುದು. ನಮ್ಮ ನೆನಪಿಗಾಗಿ ಇರಲಿ ಎಂದು ಡೈರಿ ಬರೆಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ‘ಪ್ರತಿದಿನ ನಾನು ಡೈರಿ ಬರೆಯುತ್ತಿದ್ದೆ. ಜೈಲಿ ನಲ್ಲಿ ಇದ್ದ ಇಪ್ಪತ್ತೇಳು ವರ್ಷವೂ ಬರೆದೆ. ಎಷ್ಟೋ ವರ್ಷಗಳ ನಂತರ ಅದನ್ನು ಓದಿದಾಗ ಅದು ನನ್ನದೇ ಜೀವನದ ಪುಟಗಳಾ ಅಥವಾ ಬೇರೆಯವರ ಆತ್ಮಕಥನವಾ ಎಂದು ನನಗೇ ಅನಿಸಿದ್ದುಂಟು’ ಎಂದು ನೆಲ್ಸನ್ ಮಂಡೇಲಾ ಹೇಳಿರುವುದು ಅನೇಕರ ಅನಿಸಿಕೆ ಕೂಡ.

ಇದನ್ನೂ ಓದಿ: Vishweshwar Bhat Column: ಅಪರಿಚಿತ, ಅಬ್ಬೇಪಾರಿ ದೇಶಗಳು !

ಡೈರಿ ಅಂದ್ರೆ ನಮ್ಮ ಬದುಕಿನ ಪುಟಗಳು. ನಮ್ಮ ಬದುಕಿನ ಮಗ್ಗುಲು. ನಾವು ಬೆಳೆದು ಬಂದ ಹಂತ ಗಳ ಅನಾವರಣ. ನಮ್ಮ ಹಳೆಯ ಫೋಟೊಗಳಂತೆ, ಹಳೆಯ ಆಲ್ಬಮ್‌ಗಳಂತೆ. ನೆನಪುಗಳ ಬುತ್ತಿ ಯಂತೆ. ಇಂಥದೇ ಚಟುವಟಿಕೆಯಲ್ಲಿ ಜವಾಹರ್‌ಲಾಲ್ ನೆಹರು ಸಹ ನಿರತರಾಗಿದ್ದರು. ಅವರು ಜೈಲಿನಲ್ಲಿದ್ದಾಗ ತಮ್ಮ ಮಗಳು ಇಂದಿರಾಗೆ ನಿಯತವಾಗಿ ಪತ್ರ ಬರೆಯುತ್ತಿದ್ದರು. ಆ ಪತ್ರಗಳನ್ನೆಲ್ಲ ಸೇರಿಸಿ ಹೊರ ತಂದಿರುವ ಪುಸ್ತಕ ತಂದೆ-ಮಗಳ ನಡುವಿನ ಪತ್ರಕ್ಕಿರುವ ಖಾಸಗಿತನ ಮೀರಿ, ಬದುಕಿನ ಅನೇಕ ಅವಕಾಶ, ಸಾಧ್ಯತೆಗಳನ್ನು ವಿಸ್ತಾರಗೊಳಿಸುವ ದಾರಿದೀಪದಂತೆ ಕಂಗೊ ಳಿಸುತ್ತದೆ.

1928ರಲ್ಲಿ ನೆಹರು ಮುಸ್ಸೋರಿ ಜೈಲಿನಲ್ಲಿದ್ದಾಗ, ಈ ಪ್ರಪಂಚದಲ್ಲಿ ಜೀವನ ಹೇಗೆ ಆರಂಭ ವಾಯಿತೆಂದು ಮೊದಲ ಪತ್ರದಲ್ಲಿ ವಿವರಿಸುತ್ತಾರೆ. ಆನಂತರದ ಪತ್ರಗಳಲ್ಲಿ ಭಾಷೆ, ಇತಿಹಾಸ, ಸಂಸ್ಕೃತಿ, ವ್ಯವಹಾರ, ಭೂಗೋಳ, ವಿಜ್ಞಾನ, ಪುರಾಣ, ಸಂಪ್ರದಾಯ, ಆಚರಣೆ ಮುಂತಾದವುಗಳ ಕುರಿತು ಪತ್ರದಲ್ಲಿ ಬರೆಯುತ್ತಾರೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ ಹ್ಯಾರಿ ಟ್ರೂಮನ್‌ನ ಡೈರಿ ಬಹಳ ವರ್ಷಗಳ ತನಕ ಕೌತುಕವನ್ನು ಸೃಷ್ಟಿಸಿತ್ತು. ಟ್ರೂಮನ್ ಪ್ರತಿದಿನ ತನ್ನ ದಿನಚರಿಯನ್ನು ಖುದ್ದಾಗಿ ಬರೆಯುತ್ತಾನೆಂಬುದು ಅನೇಕರಿಗೆ ಗೊತ್ತಿತ್ತು. ಜಪಾನ್ ಮೇಲೆ ಅಣುಬಾಂಬ್ ಹಾಕಿದ ಘಟನೆಯ ಪ್ರಸ್ತಾಪ ಆತನ ಡೈರಿಯಲ್ಲಿ ದಾಖಲಾಗಿರಲೇಬೇಕು ಎಂದು ಅವರೆಲ್ಲ ನಂಬಿದ್ದರು. ಟ್ರೂಮನ್ ನಿಧನದ ನಂತರ ಅವನ ಡೈರಿಯ ಬಗ್ಗೆ ಕುತೂಹಲವಿತ್ತು.

ಇಂದಿಗೂ ಅವನ ಡೈರಿಯನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಮಹತ್ವದ ಐತಿಹಾಸಿಕ ದಾಖಲೆಯೆಂದು ಸಂರಕ್ಷಿಸಿಡಲಾಗಿದೆ. ‘1945 ಆಗಸ್ಟ್ 6. ಇಂದು ಬೆಳಗ್ಗೆ ಹನ್ನೊಂದು ಗಂಟೆಗೆ ನಾವು ಮೂವರು ಅಂದರೆ ನಾನು, ರಷ್ಯಾದ ಅಧ್ಯಕ್ಷ ಜೋಸೆಫ್ ಸ್ಟಾಲಿನ್, ಬ್ರಿಟನ್ ಪ್ರಧಾನಿ ವಿನ್‌ಸ್ಟಲ್ ಚರ್ಚಿನ್ ಭೇಟಿಯಾದೆವು. ಅವರನ್ನು ಭೇಟಿ ಮಾಡುವ ಮುನ್ನ ಲಾರ್ಡ್ ಮೌಂಟ್‌ಬ್ಯಾಟನ್ ಮತ್ತು ಜನರಲ್ ಮಾರ್ಷಲ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ‌

ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಭಯಾನಕವಾದ ಬಾಂಬ್‌ನ ಬಗ್ಗೆ ನಾವು ಚರ್ಚಿಸಿದೆವು. ನ್ಯೂ ಮೆಕ್ಸಿಕೊ ಮರುಭೂಮಿಯಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿತ್ತು. ಹದಿಮೂರು ಪೌಂಡ್ ಭಾರದ ಸ್ಫೋಟಕ ಆರುನೂರು ಅಡಿ ಆಳದ ಕಂದಕವನ್ನು ನಿರ್ಮಿಸಿತ್ತು. ಸ್ಫೋಟಿಸಿದ ಜಾಗದಿಂದ ಸುಮಾರು ಅರ್ಧಮೈಲಿ ದೂರದಲ್ಲಿದ್ದ ಸ್ಟೀಲ್ ಟವರ್ ತತ್ತರಿಸಿತ್ತು. ಹತ್ತು ಸಾವಿರ ಯಾರ್ಡ್ ದೂರದಲ್ಲಿದ್ದ ಜನರು ಬಾಂಬ್ ಸ್ಫೋಟದ ಹೊಡೆತಕ್ಕೆ ಹಾರಿ ಬಿದ್ದಿದ್ದರು.

ಹಿರೋಷಿಮಾದ ಮೇಲೆ ಅಣುಬಾಂಬ್ ಹಾಕುವುದಕ್ಕಿಂತ ಹನ್ನೆರಡು ದಿನಗಳ ಮೊದಲು ಆ ಬಾಂಬ್ ಅನ್ನು ಯಾವ ರೀತಿ ಉಪಯೋಗಿಸುವುದೆಂಬುದರ ಬಗ್ಗೆ ಸುದೀರ್ಘ ಚರ್ಚೆಯಾಗಿತ್ತು’ ಎಂದು ಟ್ರೂಮನ್ ಆ ದಿನದ ಎಲ್ಲ ವಿವರಗಳನ್ನು ಎಳೆಎಳೆಯಾಗಿ ತಮ್ಮ ಡೈರಿಯಲ್ಲಿ ಬರೆಯುತ್ತಾ ಹೋಗುತ್ತಾರೆ. ಇದಕ್ಕಿಂತ ನಿಖರ, ಕಣ್ಣಿಗೆ ಕಟ್ಟುವ, ಸಣ್ಣ ಸಣ್ಣ ಸಂಗತಿಗಳನ್ನೊಳಗೊಂಡ, ರೋಚಕ ವಿವರಗಳು ಟ್ರೂಮನ್ ಡೈರಿಯಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗಲಾರದು. ಹೀಗಾಗಿ ಇಂದಿಗೂ ಜಪಾನ್‌ನ ಹಿರೋಷಿಮಾ, ನಾಗಸಾಕಿ ಅಣುಬಾಂಬ್ ಕಥನ ಆರಂಭವಾಗುವುದೇ ಟ್ರೂಮನ್ ಡೈರಿಯಿಂದ!

ಕೆಲವರ್ಷಗಳ ಹಿಂದೆ ಲಂಡನ್‌ನ ಸೆಕೆಂಡ್ ಹ್ಯಾಂಡ್ ಬುಕ್ ಶಾಪ್‌ನಲ್ಲಿ ನನಗೆ ‘ಹೆಮಿಂಗ್ವೆ ಡೈರೀಸ್’ ಎಂಬ ಪುಸ್ತಕ ಸಿಕ್ಕಿತು. ಆತ ತನ್ನ ಒಂಬತ್ತನೆ ವಯಸ್ಸಿನಿಂದ ಡೈರಿ ಬರೆಯಲಾರಂಭಿಸಿದ್ದ. ಆತನ ಡೈರಿಯ ಮೊದಲನೆ ಕೆಲ ಸಾಲುಗಳು ಹೀಗಿದ್ದವು-‘ನನ್ನ ಹೆಸರು ಅರ್ನೆಸ್ಟ್ ಹೆಮಿಂಗ್ವೆ. ನಾನು ಹುಟ್ಟಿದ್ದು 1899ರ ಜುಲೈ 21 ರಂದು. ಕಿಪ್ಲಿಂಗ್, ಓ ಹೆನ್ರಿ ಹಾಗೂ ಸ್ಟಿವರ್ಟ್ ಎಡ್ವರ್ಡ್ ವೈಟ್ ನನ್ನ ಮೆಚ್ಚಿನ ಬರಹಗಾರರು.

ಫಿಶಿಂಗ್, ಹೈಕಿಂಗ್, ಶೂಟಿಂಗ್, ಫುಟ್‌ಬಾಲ್ ಹಾಗೂ ಬಾಕ್ಸಿಂಗ್ ಅಂದ್ರೆ ನನಗೆ ಬಹಳ ಇಷ್ಟ. ಇಂಗ್ಲಿಷ್, ಜೀವಶಾಸ್ತ್ರ ಹಾಗೂ ರಸಾಯನಶಾಸ್ತ್ರ ನನ್ನ ಮೆಚ್ಚಿನ ವಿಷಯಗಳು. ನನಗೆ ದೊಡ್ಡವ ನಾದ ಬಳಿಕ ವಿಪರೀತ ಪ್ರವಾಸ ಮಾಡಬೇಕು ಹಾಗೂ ಬರೆಯಬೇಕು ಎಂಬ ಆಸೆಯಿದೆ. ನನಗೆ ಸಾಹಿತಿ ಅಥವಾ ಬರಹಗಾರನಾಗಬೇಕೆಂಬ ಕನಸಿದೆ’.

1908ರಲ್ಲಿ ಬರೆದ ಈ ಡೈರಿಯ ಮಹತ್ವಕ್ಕೆ ಬೆಲೆ ಕಟ್ಟಲಾಗದು. ತಾವು ಏನಾಗಬೇಕೆಂದು ಒಂಬತ್ತನೇ ವಯಸ್ಸಿನ ಮಕ್ಕಳಿಗೆ ತಿಳಿಯುವುದಿಲ್ಲ. ಆದರೆ ಆ ವಯಸ್ಸಿನಲ್ಲಿ ತಾನು ಏನಾಗಬೇಕೆಂದು ಹೆಮಿಂಗ್ವೆ ಆಗಲೇ ನಿರ್ಧರಿಸಿದ್ದ. ಬರಹಗಾರನಾಗಲು ಆ ದಿನಗಳಿಂದಲೇ ತಯಾರಿ ನಡೆಸಿದ್ದ. ತಾನು ಕಂಡ ಪ್ರತಿಯೊಂದು ಸಂಗತಿಗಳನ್ನು ಆಪ್ತವಾಗಿ, ಉತ್ಕಟವಾಗಿ ಬರೆಯುತ್ತಿದ್ದ. ಹನ್ನೆರಡನೇ ವಯಸ್ಸಿಗೆ ಬರುವಷ್ಟರಲ್ಲಿ ತಾನು ಬರಹಗಾರನಲ್ಲದೇ ಮತ್ತೇನೂ ಆಗಬಾರದೆಂದು ನಿರ್ಧರಿಸಿದ್ದಾಗಿ ಹೆಮಿಂಗ್ವೆ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ.

ತನ್ನ ಮೊದಲ ಡೈರಿಯ ಪುಟಗಳ ಬಗ್ಗೆ ಸುಮಾರು ನಲವತ್ತು ವರ್ಷಗಳ ನಂತರ ‘ನನ್ನ ಈಗಿನ ಬರಹಗಳಿಗಿಂತ ಅಂದಿನ ಬರಹಗಳೇ ಚೆನ್ನಾಗಿದ್ದವು. ಆಗ ನನ್ನ ಬರಹದಲ್ಲಿ ಕೃತಕ ಭಾವ ಇರಲಿಲ್ಲ. ಅಮಾಯಕತೆ ಇತ್ತು. ನನ್ನ ಭಾವನೆಗಳು ತೀರಾ ನೈಜವಾಗಿದ್ದವು. ಅನಿಸಿದ್ದನ್ನು ಹಾಗೆಯೇ ಹಸಿಹಸಿ ಯಾಗಿ ಬರೆಯುತ್ತಿದ್ದೆ. ಬರಹಗಾರನ ಸಂವೇದನೆ ಎಂಬ ಬಾಹ್ಯ ಒತ್ತಡಗಳು ನನ್ನನ್ನು ಕಾಡುತ್ತಿರ ಲಿಲ್ಲ.

ಅಷ್ಟಕ್ಕೂ ನಾನು ಬರಹಗಾರ ಎಂಬುದು ಆಗ ನನಗೆ ಗೊತ್ತೂ ಇರಲಿಲ್ಲ. ನಾವು ಯಾರೆಂಬುದು ಗೊತ್ತಾದ ಬಳಿಕ ಸೋಗು ಹಾಕಲಾರಂಭಿಸುತ್ತೇವೆ. ಈ ಕಾರಣದಿಂದ ನನಗೆ ಆರಂಭಿಕ ಡೈರಿಗಳು ಆಪ್ತವಾಗುತ್ತವೆ. ನಾನು ನನ್ನ ಅಂದಿನ ಡೈರಿಗಳಿಂದಲೂ ಪ್ರಭಾವಿತನಾಗಿದ್ದೇನೆ’ ಎಂದು ಹೆಮಿಂಗ್ವೆ ಬರೆದುಕೊಂಡಿದ್ದಾನೆ.

ಆಟೋಬಯೋಗ್ರಫಿ (ಆತ್ಮಕತೆ) ಗಿಂತ ಡೈರಿಯೇ ಹೆಚ್ಚು ಆಪ್ತ ಹಾಗೂ ಸತ್ಯಕ್ಕೆ ಹೆಚ್ಚು ಹತ್ತಿರ. ಡೈರಿ ಬರೆಯುವ ಹವ್ಯಾಸವಿರುವವರಿಗೆ ಆತ್ಮಕತೆಗೆ ಅದೇ ಆಧಾರ. ಆದರೆ ಡೈರಿಯಿಂದ ಆತ್ಮಕತೆಗೆ ಬರುವ ಹೊತ್ತಿಗೆ ಎಷ್ಟೋ ಪ್ರಸಂಗ, ಸಂಗತಿಗಳು ಮಾರ್ಪಾಡಾಗಿರುತ್ತವೆ. ಎಡಿಟ್ ಆಗಿರುತ್ತವೆ. ಡೈರಿಗಳೆಂದರೆ ಸೆನ್ಸಾರ್‌ಗೆ ಒಳಪಡದ ಸಿನಿಮಾಗಳಿದ್ದಂತೆ. ಆತ್ಮಕತೆ ಬರೆಯುವಾಗ ಲೇಖಕನ ಜಾಣ್ಮೆ, politically correctness, ಚತುರಮತಿ ಕೆಲಸ ಮಾಡಿರುತ್ತವೆ. ಯಾರೇ ಆಗಲಿ ಡೈರಿಯಲ್ಲಿ ಸುಳ್ಳು ಬರೆಯುವು ದಿಲ್ಲ. ಅತಿರಂಜನೆಯೂ ಇರುವುದಿಲ್ಲ.

ಆದರೆ ಈ ಮಾತನ್ನು ಆತ್ಮಕತೆಗೆ ಅನ್ವಯಿಸಲಾಗುವುದಿಲ್ಲ. ಎಷ್ಟೋ ಹೇಳಬಾರದ, ಹೇಳಲಾಗದ ಕಠೋರ ಸತ್ಯಗಳು ಆತ್ಮಕತೆಯಲ್ಲಿ ದಾಖಲಾಗುವುದೇ ಇಲ್ಲ. ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರು ಆತ್ಮಕತೆಯಲ್ಲದಿದ್ದರೂ ಆ ಮಾದರಿಯ ಪುಸ್ತಕವನ್ನು ಪ್ರಕಟಿಸಿದಾಗ ‘ಪುಸ್ತಕಗಳಿಗಿಂತ ನಿಮ್ಮ ಡೈರಿಯನ್ನು ಪ್ರಕಟಿಸಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಯಾರೋ ಹೇಳಿದರು.

ಅದಕ್ಕೆ ಅವರು ‘ನನ್ನಂಥ ಬ್ರಹ್ಮಚಾರಿಯ ಡೈರಿಯಲ್ಲಿ ಅಷ್ಟೇನೂ ಆಸಕ್ತಿ ಇರುವುದಿಲ್ಲ ಎಂದು ಆತ್ಮಕತೆ ಬರೆದೆ’ ಎಂದು ಹೇಳಿದ್ದರು. ಆದರೆ ಭಾರತದ ಅಣುಪರೀಕ್ಷೆಯಲ್ಲಿ ಸಕ್ರಿಯರಾಗಿ ತೊಡಗಿಸಿ ಕೊಂಡಿದ್ದ ಡಾ.ಕಲಾಂ ಡೈರಿಯಲ್ಲಿ ಏನಿತ್ತು ಎಂಬುದು ಯಾವತ್ತೂ ಕುತೂಹಲದ ಹಾಗೂ ನಿಗೂಢ ಸಂಗತಿಯೇ. ಇನ್ನು ನೂರು ವರ್ಷದ ನಂತರ ಸಿಕ್ಕರೂ ಅದರ ಸುದ್ದಿಮೌಲ್ಯ ಕಡಿಮೆ ಯಾಗುವುದಿಲ್ಲ.

ಟ್ರೂಮನ್ ಡೈರಿಯಂತೆ ಒಂಥರ ಪತ್ತೆದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಸದಾ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2016ರಲ್ಲಿ ಪ್ರಕಟಿಸಿದ ’ The Turbulent Years 1980-1996’ ಎಂಬ ಶೀರ್ಷಿಕೆಯಲ್ಲಿ ತಮ್ಮ ಭಾಗಶಃ ಆತ್ಮಕತೆಯನ್ನು ಪ್ರಕಟಿಸಿದಾಗ ಅದು ಅನೇಕ ರಹಸ್ಯಗಳನ್ನು ಬಯಲು ಮಾಡಬಹುದೆಂದು ನಿರೀಕ್ಷಿಸಲಾಗಿತ್ತು.

ಆದರೆ ಮುಖರ್ಜಿಯವರು ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿ, ತಮ್ಮ ಡೈರಿಗೆ ತಾವೇ ಕತ್ತರಿ ಪ್ರಯೋಗ ಮಾಡಿದ್ದರು. ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿದ್ದ ದಿವಂಗತ ಜೆಆರ್‌ಡಿ ಟಾಟಾ ಅವರ ಪತ್ರಗಳು ಡೈರಿಯ ಮತ್ತೊಂದು ಮಗ್ಗುಲಿನಂತೆ ತೋರುತ್ತವೆ. ಅವರು ತಮ್ಮ ಆಪ್ತೇಷ್ಟರಿಗೆ ಬರೆದ ಪತ್ರಗಳನ್ನೆಲ್ಲ ಸೇರಿಸಿ JRD Tata Letters ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ. ಎರಡು ಭಾಗಗಳಲ್ಲಿರುವ ಈ ಕೃತಿಗಳಲ್ಲಿ ಟಾಟಾ ಬರೆದ ಐನೂರಕ್ಕೂ ಹೆಚ್ಚು ಪತ್ರಗಳಿವೆ.

ಜೆಆರ್‌ಡಿಯವರು ಹೊಸ ಪುಸ್ತಕ ಬಿಡುಗಡೆಯಾದಾಗಲೆಲ್ಲ ಅದನ್ನು ಖರೀದಿಸಿ ತರುತ್ತಿದ್ದರಂತೆ. ಅವರು ಓದುವುದಕ್ಕಿಂತ ಮುನ್ನ ಕೊಳೆಯಾಗಬಾರದೆಂದು ಪುಸ್ತಕಕ್ಕೆ ಬೈಂಡ್ ಹಾಕುತ್ತಿದ್ದರಂತೆ. ಕೊನೆಗೆ ಆ ಕೆಲಸವನ್ನು ತಮ್ಮ ಕಾರ್ಯದರ್ಶಿಗೆ ವಹಿಸಿದ್ದರಂತೆ. ಆತ ಎಲ್ಲ ಪುಸ್ತಕಗಳಿಗೆ ಬೈಂಡ್ ಹಾಕಿ, ಅದರ ಹೆಸರನ್ನು ಪ್ರತ್ಯೇಕ ಲೇಬಲ್ ಮೇಲೆ ಬರೆದು ಅಂಟಿಸಿ ಕೊಡುತ್ತಿದ್ದನಂತೆ. ಒಮ್ಮೆ ಜೆಆರ್‌ಡಿ ದಿಲ್ಲಿಗೆ ಹೋಗುವಾಗ ವಿಮಾನದಲ್ಲಿ ಓದಲೆಂದು ಒಂದು ಪುಸ್ತಕವನ್ನು ಒಯ್ದಿದ್ದರಂತೆ.

ಕಾರ್ಯದರ್ಶಿ ಬೈಂಡ್ ಮೇಲೆ ಲೇಬಲ್‌ನ್ನು ಉಲ್ಟಾ ಅಂಟಿಸಿದ್ದ. ಇದನ್ನು ಗಮನಿಸಿದ ಜೆಆರ್‌ಡಿ, ‘ನಿನಗೆ ಪುಸ್ತಕಕ್ಕೆ ಬೈಂಡ್ ಹಾಕುವಂತೆ ಹೇಳಿದ್ದೆ. ಆದರೆ ನೀನು ಲೇಬಲ್ ಹಚ್ಚುವಾಗ ಉಲ್ಟಾ ಹಚ್ಚಿರುವೆ. ನಿನ್ನ ದೃಷ್ಟಿಯಲ್ಲಿ ಇದು ಸಣ್ಣ ಲೋಪವಿರಬಹುದು. ಆದರೆ ನಾನು ಇದನ್ನು ಗಂಭೀರ ಲೋಪವೆಂದು ಭಾವಿಸಿರುವೆ. ನಾವು ಮಾಡುವ ಕೆಲಸದಲ್ಲಿ ಬೇರೆಯವರು ಲೋಪವನ್ನು ಎತ್ತಿ ತೋರಿಸಬಾರದು. ನಮ್ಮ ಕೆಲಸ ಹಾಗಿರಬೇಕು. ಚುಚ್ಚಿಸಿಕೊಳ್ಳದೇ, ನೋಯಿಸಿಕೊಳ್ಳದೇ ಗುಂಡು ಸೂಜಿಯನ್ನು ತಯಾರಿಸಬೇಕು.

ಅದು ಪ್ರತಿಸಲ ಚುಚ್ಚಿದರೆ ಯಾರೂ ಅದನ್ನು ತಯಾರಿಸುವ ಉಸಾಬರಿಗೆ ಹೋಗುತ್ತಿರಲಿಲ್ಲ. ಸಣ್ಣ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು’ ಎಂದು ಪತ್ರ ಬರೆದಿದ್ದರು. ಜೆಆರ್‌ಡಿಯ ಈ ಪತ್ರ ಅವರಿಗೆ ನಾಟಿತು. ಆತ ಕೆಲಸದೆಡೆಗೆ ತನ್ನ ಧೋರಣೆಯನ್ನೇ ಬದಲಿಸಿಕೊಂಡ. ಇದಾಗಿ ಒಂಬತ್ತು ವರ್ಷಗಳ ನಂತರ ಅವನಿಗೆ ಜೆಆರ್‌ಡಿ ಪತ್ರ ಬರೆದರು ‘ನಿನ್ನ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ. ನೀನು ಸಣ್ಣಪುಟ್ಟ ಸಂಗತಿಗಳಿಗೂ ನೀಡುತ್ತಿರುವ ಮಹತ್ವ ನನಗೆ ಬಹಳ ಇಷ್ಟವಾಯಿತು. ನಾನು ಬರೆದ ಪತ್ರಗಳನ್ನು ಮಡಚಿ ಪೋಸ್ಟ್ ಮಾಡುವ ಬದಲು, ಸ್ವಲ್ಪವೂ ಮಡಚದೇ ಇಡೀ ಕಾಗದದ ಅಳತೆಯ ಕವರ್‌ನೊಳಗೆ ಹಾಕಿ ಕಳಿಸುತ್ತಿದ್ದೀಯಾ. ಹೀಗೆ ಮಾಡುವಂತೆ ನಾನು ನಿನಗೆ ಹೇಳಿರಲಿಲ್ಲ. ಆದರೆ ನೀನು ಮಡಚಿದ್ದರೆ ನಾನೇ ನಿನಗೆ ಹಾಗೆ ಮಾಡದಂತೆ ಹೇಳುತ್ತಿದ್ದೆ.

ನಮ್ಮ ಕೆಲಸವೇ ನಮ್ಮ ವ್ಯಕ್ತಿತ್ವವನ್ನು ಹೇಳಬೇಕು’. ತಮ್ಮ ಜೀವಿತ ಅವಧಿಯಲ್ಲಿ ಸುಮಾರು ನಲವತ್ತು ಸಾವಿರ ಪತ್ರಗಳನ್ನು ಬರೆದಿದ್ದ ಜೆಆರ್‌ಡಿ ಟಾಟಾ ಅವರನ್ನು ಆ ಅಕ್ಷರಗಳಲ್ಲಿ ಇಂದಿಗೂ ನೋಡಬಹುದು. ಒಮ್ಮೆ ಜೆಆರ್‌ಡಿ ಡಾರ್ಜಿಲಿಂಗ್‌ನ ಟೀ ತೋಟದಲ್ಲಿರುವ ಟಾಟಾ ಗೆಸ್ಟ್‌ಹೌಸ್ ನಲ್ಲಿ ಉಳಿದುಕೊಂಡಿದ್ದರು. ಗೆಸ್ಟ್‌ಹೌಸ್ ಪ್ರವೇಶಿಸುತ್ತಿದ್ದಂತೆಯೇ ಅವರ ಮುಖ ಸ್ವಲ್ಪ ಪೆಚ್ಚಾಯಿತು. ನಂತರ ತಮಗಾಗಿ ಕಾದಿರಿಸಿದ್ದ ರೂಮಿಗೆ ಹೋದರು.

ತಮ್ಮ ಪೋರ್ಟೆಬಲ್ ಟೈಪ್‌ರೈಟರ್ ತೆಗೆದು ಅಲ್ಲಿಂದಲೇ ಗೆಸ್ಟ್‌ಹೌಸ್‌ಗಳ ಉಸ್ತುವಾರಿ ನೋಡಿ ಕೊಳ್ಳುವ ಮುಖ್ಯಸ್ಥನಿಗೆ ಪತ್ರ ಬರೆದರು- ‘ಡಾರ್ಜಿಲಿಂಗ್ ಗೆಸ್ಟ್‌ಹೌಸ್‌ನೊಳಗೆ ಕಾಲಿಡುತ್ತಿದ್ದಂತೆ, ಕಾಲೊರೆಸಿಕೊಳ್ಳುವ ಮ್ಯಾಟನ್ನು ಹಾಕಿದ್ದೀರಿ. ಅದರ ಮೇಲೆ ‘ಟಾಟಾ’ ಎಂದು ಬರೆಯಿಸಿದ್ದೀರಿ. ಒಳಗೆ ಬರುವವರೆಲ್ಲ ಅದನ್ನು ತುಳಿದುಕೊಂಡು ಬರುತ್ತಾರೆ.

ವಿದೇಶಗಳಲ್ಲಿ ಇದು ಸಾಮಾನ್ಯ. ಆದರೆ ನಮ್ಮ ದೇಶದ ಸಂಸ್ಕೃತಿ ಭಿನ್ನ. ಹೆಸರನ್ನು ತುಳಿದು ಕೊಂಡು ಹೋಗುವುದು ಒಳ್ಳೆಯದಲ್ಲ. ನಮ್ಮ ಯಾವುದೇ ಗೆಸ್ಟ್‌ಹೌಸ್‌ನಲ್ಲಿ ಮ್ಯಾಟ್ ಮೇಲೆ ‘ಟಾಟಾ’ ಎಂದು ಇರಕೂಡದು. ಹಾಗೆಯೇ ಗೆಸ್ಟ್‌ಹೌಸ್‌ನಲ್ಲಿರುವ ಹಾಸಿಗೆಯ ತಲೆದಿಂಬುಗಳನ್ನು ಗಮನಿಸಿದೆ. ಅವುಗಳ ಮೇಲೆ ಒಂದು ಮೂಲೆಯಲ್ಲಿ ‘ಟಾಟಾ’ ಎಂದು ಬರೆಯಿಸಿ.

ಮಲಗುವಾಗ ಹಾಗೂ ಏಳುವಾಗ ‘ಟಾಟಾ’ ಎಂಬ ಹೆಸರು ಅದನ್ನು ಬಳಸುವವರ ಮನಸ್ಸಿನಲ್ಲಿ ಸುಳಿದು ಹೋಗಲಿ. ಅಷ್ಟಕ್ಕೂ ತಲೆದಿಂಬಿನಷ್ಟು ಸುದೀರ್ಘವಾಗಿ ಬೇರೆ ಯಾವ ವಸ್ತುವನ್ನೂ ಬಳಸುವುದಿಲ್ಲ’. ಒಮ್ಮೆ ಜೆಆರ್‌ಡಿ ಮತ್ತೊಂದು ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿ ಹಠಾತ್ತನೆ ಕರೆಂಟು ಹೋಯಿತು. ಅವರಿಗೆ ಏನು ಮಾಡಬೇಕೆಂದು ತೋಚದೇ ಸ್ವಲ್ಪ ಗಲಿಬಿಲಿ ಯಾದರು. ಆಗ ಅವರ ಮನಸ್ಸಿನಲ್ಲಿ ಒಂದು ಯೋಚನೆ ಹಾದುಹೋಯಿತು. ತಮ್ಮ ಒಡೆತನದ ಹೋಟೆಲ್ ಮುಖ್ಯಸ್ಥನಿಗೆ ಒಂದು ಪತ್ರ ಬರೆದರು- ‘ಇನ್ನು ಮುಂದೆ ನಮ್ಮ ಎಲ್ಲ ಹೋಟೆಲ್ ರೂಮುಗಳಲ್ಲಿ ಒಂದು ಮೊಂಬತ್ತಿ ಹಾಗೂ ಬೆಂಕಿಪೊಟ್ಟಣವನ್ನು ಇಡುವುದು.

ಪ್ರತಿ ತಿಂಗಳೂ ಬೆಂಕಿಪೊಟ್ಟಣವನ್ನು ಬದಲಿಸುವುದು’. ಒಂದು ತಿಂಗಳಾಗುತ್ತಿದ್ದಂತೆ ಬೆಂಕಿಪೊಟ್ಟಣ ಥಂಡಿ ಹಿಡಿದು ಎಷ್ಟು ಗೀರಿದರೂ ಬೆಂಕಿ ಹತ್ತಿಕೊಳ್ಳದಿದ್ದರೆ ಎಂಬ ಕಾರಣಕ್ಕೆ ಪ್ರತಿ ತಿಂಗಳು ಅದನ್ನು ಬದಲಿಸುವಂತೆ ಸೂಚಿಸಿದ್ದರು. ಇಂದಿಗೂ ಟಾಟಾ ಒಡೆತನದ ಫೈವ್‌ಸ್ಟಾರ್ ಹೋಟೆಲ್‌ಗೆ ಹೋದರೆ ಎಲ್ಲ ರೂಮುಗಳಲ್ಲಿ ಬೆಂಕಿ ಪೊಟ್ಟಣ ಹಾಗೂ ಮೊಂಬತ್ತಿ ಇಟ್ಟಿರುವುದನ್ನು ಗಮನಿಸ ಬಹುದು.

ತಮಗೆ ಯಾರೇ ಪತ್ರ ಬರೆಯಲಿ, ಉತ್ತರ ಬರೆಯದೇ ಹೋಗುತ್ತಿರಲಿಲ್ಲ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಗಾರ್ಡ್‌ನ್‌ನ ಮಾಲಿಯ ಪತ್ರಕ್ಕೂ ಅವರು ಬರೆದಿದ್ದರು, ದೇಶದ ಪ್ರಧಾನಿಗೂ ಬರೆದಿ ದ್ದರು. ಜೆಆರ್‌ಡಿ ಯಾಕೆ ಅಷ್ಟು ದೊಡ್ಡ ವ್ಯಕ್ತಿಯಾದರು ಎಂಬುದನ್ನು ಆ ಪತ್ರಗಳೇ ಸಾರುತ್ತವೆ ನಿಜಕ್ಕೂ ಅವರು Man of Letters’.

ಕೆಲ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ‘ನನಗೆ ಅನಿಸಿದ್ದೆಲ್ಲವನ್ನೂ ನಾನು ಹೇಳುತ್ತೇನೆ, ಬರೆದಿಡುವುದಿಲ್ಲ. ನನಗೆ ಡೈರಿ ಬರೆಯುವ ಅಭ್ಯಾಸ ಇಲ್ಲ. ಇದ್ದಿದ್ದರೆ ಈ ಮಾತುಗಳೆಲ್ಲ ಬರಹದಲ್ಲಿರುತ್ತಿದ್ದವೇನೋ’ ಎಂದು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ನಮಗೆ ಅನಿಸಿದ್ದೆಲ್ಲವನ್ನೂ ಹೇಳಲಾಗುವುದಿಲ್ಲ. ಅದರಲ್ಲೂ ಪ್ರಧಾನಿಯಾದವರಿಗೆ ಬಹಳ ಕಷ್ಟ. ಎಲ್ಲರ ಮಾತಿಗೆ ಎರಡು ಅರ್ಥಗಳಿದ್ದರೆ ಅವರ ಮಾತಿಗೆ ನೂರಾರು. ಹೀಗಾಗಿ ಅವರು ಬರೆಯುವುದೇ ವಾಸಿ. ಅದರಲ್ಲೂ ಡೈರಿಯಲ್ಲಿ ಅನಿಸಿದ್ದೆಲ್ಲವನ್ನೂ ಬರೆಯಬಹುದು.

ಅದನ್ನು ಯಾರೂ ಓದದಂತೆ ಕಾಪಾಡುವುದಷ್ಟೇ ಬರೆದವರು ತೆಗೆದುಕೊಳ್ಳಬೇಕಾದ ಮುತುವರ್ಜಿ ಹಾಗೂ ರಿಸ್ಕ್. ಅದರಲ್ಲೂ ಪ್ರಧಾನಿಯವರು ಡೈರಿಯಲ್ಲಿ ಏನೇ ಬರೆದರೂ ಅದು ಮಹತ್ವದ ದಾಖಲೆಯೇ. ಇತಿಹಾಸದ ತುಣುಕೇ. ಏನೇ ಬರೆದರೂ ಮುಂದೊಮ್ಮೆ ಬಹಿರಂಗವಾದಾಗ ವಿವಾದ ವಾಗದೇ, ಸುದ್ದಿಯಾಗದೇ ಹೋಗುವುದಿಲ್ಲ. ಈ ಕೊಂಚಾವಂಚ ಬೇಡವೆಂದೇ ಮೋದಿ ಬರಹದ ಬದಲು ಭಾಷಣವನ್ನು ನೆಚ್ಚಿಕೊಂಡಿರುವುದು. ಹೀಗಾಗಿ ಅವರನ್ನು Figure of Speech ಎನ್ನಬಹುದು. ಅಂದ ಹಾಗೆ ಯಾರ ಬದುಕು ಸಹ ಒಂದು ಡೈರಿಯಲ್ಲಿ ದಾಖಲಿಸ ದಷ್ಟು ಡಲ್ ಆಗಿರಲು ಸಾಧ್ಯವಿಲ್ಲ.