Chinmoy Krishna Das: ಬಾಂಗ್ಲಾದೇಶ ಹೈಕೋರ್ಟ್‌ನಿಂದ 6 ತಿಂಗಳ ಬಳಿಕ ಚಿನ್ಮಯ್ ಕೃಷ್ಣ ದಾಸ್‌ಗೆ ಜಾಮೀನು
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾದ ಇಸ್ಕಾನ್ ನಾಯಕ, ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು ಅವರಿಗೆ ಕೊನೆಗೂ ಜಾಮೀನು ಲಭಿಸಿದೆ. 2024ರ ನ. 25ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಬುಧವಾರ (ಏ. 30) ಬಾಂಗ್ಲಾದೇಶ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಚಿನ್ಮಯ್ ಕೃಷ್ಣ ದಾಸ್ ಪ್ರಭು.

ಢಾಕಾ: ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಬಂಧನಕ್ಕೊಳಗಾದ ಇಸ್ಕಾನ್ ನಾಯಕ, ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಪ್ರಭು (Chinmoy Krishna Das) ಅವರಿಗೆ ಕೊನೆಗೂ ಜಾಮೀನು ಲಭಿಸಿದೆ. 2024ರ ನ. 25ರಂದು ಢಾಕಾ (Dhaka) ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು. ದೇಶದ್ರೋಹದ ಆರೋಪದ ಪ್ರಕರಣದಲ್ಲಿ ಚಿನ್ಮಯ್ ಅವರನ್ನು ಪ್ರಮುಖ ಆರೋಪಿ ಎಂದು ಹೇಳಿ ಬಾಂಗ್ಲಾ ಸರ್ಕಾರ ಅವರನ್ನು ವಶಕ್ಕೆ ಪಡೆದಿತ್ತು. ಅವರ ಬಿಡುಗಡೆಗೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಪ್ರತಿಭಟನೆಯನ್ನೂ ನಡೆಸಿದ್ದರು. ಬುಧವಾರ (ಏ. 30) ಬಾಂಗ್ಲಾದೇಶ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಮೊಹಮ್ಮದ್ ಅಟೋರ್ ರೆಹಮಾನ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ಅಲಿ ರೆಜಾ ಅವರನ್ನೊಳಗೊಂಡ ನ್ಯಾಯಪೀಠ ಈ ಆದೇಶವನ್ನು ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ಏ. 23ರಂದು ಚಿನ್ಮಯ್ ಅವರ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಜಿ ತಮ್ಮ ಕಕ್ಷಿದಾರರಿಗೆ ಜಾಮೀನು ನೀಡುವಂತೆ ಹೈಕೋರ್ಟ್ ಪೀಠಕ್ಕೆ ಮನವಿ ಸಲ್ಲಿಸಿದ್ದರು. ವಿಚಾರಣೆ ಇಲ್ಲದೆ ಜೈಲಿನಲ್ಲಿರುವ ಚಿನ್ಮಯ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರು ನ್ಯಾಯಾಲಯದ ಗಮನ ಸೆಳೆದಿದ್ದರು.
Bangladesh High Court grants bail to Chinmoy Krishna Das in sedition case
— ANI Digital (@ani_digital) April 30, 2025
Read @ANI Story | https://t.co/ExdmccUxY2#Bangladesh #ChinmoyKrishnaDas pic.twitter.com/QRQgajdjtP
ಈ ಸುದ್ದಿಯನ್ನೂ ಓದಿ: Chinmoy Krishna Das: ಚಿನ್ಮಯ್ ಕೃಷ್ಣ ದಾಸ್ ಅನುಯಾಯಿಗಳ ವಿರುದ್ಧ ಮತ್ತೆ ಪ್ರಕರಣ ದಾಖಲು
2024ರ ಆ. 5ರಂದು ಶೇಖ್ ಹಸೀನಾ ಅವರ ಅವಾಮಿ ಲೀಗ್ ಸರ್ಕಾರ ಪತನವಾದ ನಂತರ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಕೇವಲ ಶೇ. 8ರಷ್ಟು ಇರುವ ಹಿಂದೂಗಳ ಮೇಲೆ ದೇಶದ ವಿವಿದ ಭಾಗಗಳಲ್ಲಿ ದಾಳಿ ನಡೆಯುತ್ತಿದ್ದವು. ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅಲ್ಪಸಂಖ್ಯಾತರನ್ನು ರಕ್ಷಿಸಬೇಕು ಎಂದು ಚಿನ್ಮಯ್ ಆಗ್ರಹಿಸಿದ್ದರು. ಜತೆಗೆ ಸಾಕಷ್ಟು ಹೋರಾಟ ಸಂಘಟಿಸಿದ್ದರು. ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಪ್ರಮುಖ ಧ್ವನಿ ಎತ್ತುತ್ತಲೇ ಇದ್ದ ಚಿನ್ಮಯ್ ಅವರನ್ನು ಇದೇ ಕಾರಣಕ್ಕೆ ಅಕ್ರಮವಾಗಿ ಬಂಧಿಸಲಾಗಿತ್ತು ಎನ್ನುವ ಆರೋಪವೂ ಕೇಳಿ ಬಂದಿತ್ತು.
ಬೃಹತ್ ಪ್ರತಿಭಟನೆ
ಆ. 5ರಂದು ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯಿಂದಾಗಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ ನಂತರ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದಿದೆ. ನ. 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ್ರೋಹ ಪ್ರಕರಣದಲ್ಲಿ ಚಿನ್ಮಯ್ ಕೃಷ್ಣ ದಾಸ್ ಬಂಧಸಿದ್ದರಿಂದ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ನ. 26ರಂದು ಚಿನ್ಮಯ್ ಜಾಮೀನು ನಿರಾಕರಿಸಿದ ನಂತರ ಚಟ್ಟೋಗ್ರಾಮ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಸೈಫುಲ್ ಇಸ್ಲಾಮ್ ಅಲಿಫ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು.
ಡಿ. 3ರಂದು ಬಾಂಗ್ಲಾದೇಶದ ನ್ಯಾಯಾಲಯವು ಚಿನ್ಮಯ್ ಕೃಷ್ಣ ಅವರ ಪರವಾಗಿ ಯಾವುದೇ ವಕೀಲರು ಹಾಜರಾಗದ ಕಾರಣ ಸರ್ಕಾರದ ಮನವಿಯ ಮೇರೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಜ. 2ಕ್ಕೆ ಮುಂದೂಡಿತ್ತು. ಫೆಬ್ರವರಿಯಲ್ಲಿ ಬಾಂಗ್ಲಾದೇಶ ಹೈಕೋರ್ಟ್ ದಾಸ್ ಅವರಿಗೆ ಜಾಮೀನು ಏಕೆ ನೀಡಬಾರದು ಎಂದು ವಿವರಿಸುವಂತೆ ಸರ್ಕಾರವನ್ನು ಕೇಳಿತ್ತು. ಇದೀಗ ಕೊನೆಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.