Imran Khan: "ತನಗೆ ತಾನೇ ರಾಜ ಎಂದು ಘೋಷಿಸಿಕೊಳ್ಳಬೇಕಿತ್ತು"; ಪಾಕ್ ಸೇನಾ ಮುಖ್ಯಸ್ಥನ ವಿರುದ್ಧ ಇಮ್ರಾನ್ ಖಾನ್ ವಾಗ್ದಾಳಿ
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಅವರು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಸಿಕ್ಕಿರುವುದನ್ನು ಟೀಕಿಸಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಸೇನಾ ಮುಖ್ಯಸ್ಥನನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ.


ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಅವರು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಸಿಕ್ಕಿರುವುದನ್ನು ಟೀಕಿಸಿದ್ದಾರೆ. ಪ್ರಸ್ತುತ ಜೈಲಿನಲ್ಲಿರುವ ಇಮ್ರಾನ್ ಖಾನ್ ಸೇನಾ ಮುಖ್ಯಸ್ಥನನ್ನು ತಾರಾಟೆಗೆ ತೆಗೆದುಕೊಂಡಿದ್ದಾರೆ. ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಬದಲು ರಾಜ ಎಂಬ ಬಿರುದು ನೀಡಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. ಭಾರತದ ಜೊತೆಗಿನ ಇತ್ತೀಚಿನ ಸಂಘರ್ಷದಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ (Pakistan Army Chief) ಜನರಲ್ ಅಸೀಮ್ ಮುನೀರ್‌ಗೆ ಬಡ್ತಿ ನೀಡಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ಜನರಲ್ ಅಸಿಮ್ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಆಗಿ ನೇಮಿಸಲಾಗಿದೆ. ನಿಜ ಹೇಳಬೇಕೆಂದರೆ, ಅವರಿಗೆ 'ರಾಜ' ಎಂಬ ಬಿರುದನ್ನು ನೀಡುವುದು ಹೆಚ್ಚು ಸೂಕ್ತವಾಗಿತ್ತು - ಏಕೆಂದರೆ ಪ್ರಸ್ತುತ ದೇಶವು ಕಾಡಿನ ಕಾನೂನಿನಿಂದ ಆಳಲ್ಪಡುತ್ತಿದೆ. ಮತ್ತು ಕಾಡಿನಲ್ಲಿ ಒಬ್ಬನೇ ರಾಜನಿದ್ದಾನೆ ಎಂದು ಟೀಕಿಸಿದ್ದಾರೆ. ಆಗಸ್ಟ್ 2023 ರಿಂದ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿಯಲ್ಲಿ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ನನಗೆ ಪಾಕಿಸ್ತಾನದ ಕುರಿತು ಚಿಂತೆಯಾಗುತ್ತಿದೆ. ಸರ್ವಾಧಿಕಾರಿಯ ಬಳಿ ಪಾಕಿಸ್ತಾನ ಸಿಲುಕಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್‌ಗೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 1959ರಲ್ಲಿ ಜನರಲ್ ಆಯುಬ್ ಖಾನ್ ಈ ರ‍್ಯಾಂಕ್‌ಗೆ ಏರಿದ ಮೊದಲ ಸೇನಾಧಿಕಾರಿಯಾಗಿದ್ದರು. ಪ್ರಧಾನಮಂತ್ರಿಯ ಕಚೇರಿಯ ಹೇಳಿಕೆಯ ಪ್ರಕಾರ, "ದೇಶದ ಭದ್ರತೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಮತ್ತು ಶತ್ರುವನ್ನು ಸೋಲಿಸಿದ ಉನ್ನತ ಕಾರ್ಯತಂತ್ರ ಮತ್ತು ಧೈರ್ಯದ ನಾಯಕತ್ವಕ್ಕಾಗಿ ಜನರಲ್ ಅಸೀಮ್ ಮುನೀರ್ (ನಿಶಾನ್-ಎ-ಇಮ್ತಿಯಾಜ್ ಮಿಲಿಟರಿ) ಅವರನ್ನು ಫೀಲ್ಡ್ ಮಾರ್ಷಲ್ ರ‍್ಯಾಂಕ್‌ಗೆ ಏರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Viral News: ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ- ನೆಟ್ಟಿಗರಿಂದ ಫುಲ್ ಟ್ರೋಲ್!
ಅಸೀಮ್ ಮುನೀರ್‌ಗೆ ಬಡ್ತಿ ಸಿಗುತ್ತಿದ್ದಂತೆ, ಪಾಕಿಸ್ತಾನದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಸೀಮ್ ವಿರುದ್ಧ ಟೀಕೆಗಳು ಬಂದಿದೆ. ಬಲೂಚಿನಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ಗಲಾಟೆಯನ್ನೇ ಇವರಿಂದ ತಡೆಯಲಾಗಲಿಲ್ಲ. ಇನ್ನು ಫೀಲ್ಡ್ ಮಾರ್ಷಲ್ ರ‍್ಯಾಂಕ್ ಎಂದು ಹಲವರು ವ್ಯಂಗ್ಯವಾಡಿದ್ದಾರೆ.