Antonio Guterres: ಪಾಕ್‌ಗೆ ಯುದ್ಧ ಭೀತಿ; ವಿಶ್ವಸಂಸ್ಥೆ ಮುಖ್ಯಸ್ಥರಿಂದ ಎಸ್ ಜೈಶಂಕರ್, ಶೆಹಬಾಜ್ ಷರೀಫ್‌ಗೆ ಕರೆ
ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸೇನೆಗೆ ಸಂಪೂರ್ಣ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದ್ದು, ಭಾರತೀಯ ಸೇನೆ ಯುದ್ಧಕ್ಕೆ ಸನ್ನದ್ಧವಾಗಿದೆ.


ಜಿನಿವಾ: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಸೇನೆಗೆ ಸಂಪೂರ್ಣ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದ್ದು, ಭಾರತೀಯ ಸೇನೆ ಯುದ್ಧಕ್ಕೆ ಸನ್ನದ್ಧವಾಗಿದೆ. ಈ ನಡುವೆ ನಡುವೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Antonio Guterres) ಮಂಗಳವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ( Shehbaz Sharif) ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ಗುಟೆರೆಸ್, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ.
ಈ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್ ಮಾಡಿದ್ದು, ಇಂದು ಸಂಜೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದೆ. ಪಾಕಿಸ್ತಾನದ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸುವ ನಿಲುವನ್ನು ನಾನು ಪುನರುಚ್ಚರಿಸಿದ್ದೇನೆ, ಆಧಾರರಹಿತ ಭಾರತೀಯ ಆರೋಪಗಳನ್ನು ತಿರಸ್ಕರಿಸಿದ್ದೇನೆ ಮತ್ತು ಪಹಲ್ಗಾಮ್ ಘಟನೆಯ ಬಗ್ಗೆ ಪಾರದರ್ಶಕ ಮತ್ತು ತಟಸ್ಥ ತನಿಖೆಗೆ ಕರೆ ನೀಡಿದ್ದೇನೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದವನ್ನು ಪರಿಹರಿಸುವಲ್ಲಿ ವಿಶ್ವಸಂಸ್ಥೆಯು ತನ್ನ ಪಾತ್ರವನ್ನು ವಹಿಸಬೇಕೆಂದು ನಾನು ಒತ್ತಾಯಿಸಿದೆ. ಪಾಕಿಸ್ತಾನವು ಶಾಂತಿಗೆ ಬದ್ಧವಾಗಿದೆ, ಆದರೆ ಸವಾಲು ಎದುರಾದರೆ ತನ್ನ ಸಾರ್ವಭೌಮತ್ವವನ್ನು ಪೂರ್ಣ ಬಲದಿಂದ ರಕ್ಷಿಸುತ್ತದೆ" ಎಂದು ಷರೀಫ್ ಬರೆದಿದ್ದಾರೆ.
ಎಸ್ ಜೈಶಂಕರ್ ಅವರೊಂದಿಗಿನ ಕರೆಯಲ್ಲಿ , ಆಂಟೋನಿಯೊ ಗುಟೆರೆಸ್ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಖಂಡನೆಯನ್ನು ಪುನರುಚ್ಚರಿಸಿದರು. ದಾಳಿ ಕುರಿತು ತನಿಖೆ ನಡೆಸಬೇಕು. ಈ ದಾಳಿಗಳಿಗೆ ಕಾನೂನುಬದ್ಧ ವಿಧಾನಗಳ ಮೂಲಕ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಪಾಕಿಸ್ತಾನದ ವಿರುದ್ಧ ಇನ್ನಷ್ಟು ಕಠಿಣ ಕ್ರಮ
ಪ್ರಧಾನಿ ಮೋದಿ ಸೇನೆಗೆ ಸಂಪೂರ್ಣ ಅಧಿಕಾರ ನೀಡಿದ ನಂತರ ಪಾಕಿಸ್ತಾನಕ್ಕೆ ಭಯ ಶುರುವಾಗಿದೆ. ಪಾಕಿಸ್ತಾನದ ಫೆಡರಲ್ ಮಾಹಿತಿ ಮತ್ತು ಪ್ರಸಾರ ಸಚಿವ ಅತ್ತೌಲ್ಲಾ ತರಾರ್ ಈ ಕುರಿತು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಭಾರತ ಮುಂದಿನ 36 ಗಂಟೆಗಳ ಒಳಗಾಗಿ ತಮ್ಮ ಮೇಲೆ ದಾಳಿ ನಡೆಸುತ್ತದೆ. ಈ ರೀತಿಯ ದಾಳಿ ತಪ್ಪು. ಪಾಕಿಸ್ತಾನ ಭಾರತದ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ಅವರು ಹೇಳಿದ್ದಾರೆ.