CJI BR Gavai: ಭಾರತದ 52ನೇ ಸಿಜೆಐಯಾಗಿ ಭೂಷಣ್ ರಾಮಕೃಷ್ಣ ಗವಾಯಿ ನೇಮಕ
ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ (Chief Justice of India) ಭೂಷಣ್ ರಾಮಕೃಷ್ಣ ಗವಾಯಿ (Justice Bhushan Ramkrishna Gavai ) ಅವರನ್ನು ನೇಮಕ ಮಾಡಲಾಗಿದ್ದು, ಇವರ ನೇಮಕಾತಿಯನ್ನು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದಿಸಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನಿವೃತ್ತಿಯ ಬಳಿಕ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಿಸಲಾಗಿದೆ. ಮೇ 14 ರಂದು ನ್ಯಾಯಮೂರ್ತಿ ಗವಾಯಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ನವದೆಹಲಿ: ಭಾರತದ 52ನೇ ಮುಖ್ಯ ನ್ಯಾಯಮೂರ್ತಿ (Chief Justice of India )ಯಾಗಿ ಭೂಷಣ್ ರಾಮಕೃಷ್ಣ ಗವಾಯಿ (Bhushan Ramkrishna Gavai) ಅವರನ್ನು ನೇಮಕ ಮಾಡಲಾಗಿದ್ದು, ಇವರ ನೇಮಕಾತಿಯನ್ನು ಮಂಗಳವಾರ ರಾಷ್ಟ್ರಪತಿ ( President) ದ್ರೌಪದಿ ಮುರ್ಮು (Droupadi Murmu) ಅವರು ಅನುಮೋದಿಸಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ (Justice Sanjiv Khanna) ಅವರ ನಿವೃತ್ತಿಯ ಬಳಿಕ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ನೇಮಿಸಲಾಗಿದೆ. ನ್ಯಾಯಮೂರ್ತಿ ಖನ್ನಾ ಅವರು ಔಪಚಾರಿಕವಾಗಿ ಅಧಿಕಾರ ತ್ಯಜಿಸಿದ ಒಂದು ದಿನದ ಬಳಿಕ ಅಂದರೆ ಮೇ 14 ರಂದು ನ್ಯಾಯಮೂರ್ತಿ ಗವಾಯಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಮಾಜಿ ಸಿಜೆಐ ಧನಂಜಯ ಯಶ್ವಂತ್ ಚಂದ್ರಚೂಡ್ ಅವರ ಅಧಿಕಾರಾವಧಿ ಕೊನೆಗೊಂಡ ಬಳಿಕ ಆಯ್ಕೆಯಾದ ಸಂಜೀವ್ ಖನ್ನಾ ಅವರು ಕೇವಲ ಆರು ತಿಂಗಳ ಕಾಲ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದರು. ನ್ಯಾಯಮೂರ್ತಿ ಗವಾಯಿ ಅವರು ಆರು ತಿಂಗಳ ಕಾಲ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಯಾಕೆಂದರೆ ಇವರು 2025ರ ನವೆಂಬರ್ 23ರಂದು 65 ನೇ ವಯಸ್ಸನ್ನು ತಲುಪಿದ ಬಳಿಕ ನಿವೃತ್ತಿಯಾಗಲಿದ್ದಾರೆ.
ಬಿ.ಆರ್. ಗವಾಯಿ ಯಾರು?
- ಮಹಾರಾಷ್ಟ್ರದ ಅಮರಾವತಿಯ 1960ರ ನವೆಂಬರ್ 24ರಂದು ಜನಿಸಿದ ಭೂಷಣ್ ರಾಮಕೃಷ್ಣ ಗವಾಯಿ ಅವರು 1985ರ ಮಾರ್ಚ್ 16ರಂದು ವಕೀಲ ವೃತ್ತಿ ಪ್ರಾರಂಭಿಸಿದರು. ಮಾಜಿ ಅಡ್ವೊಕೇಟ್ ಜನರಲ್ ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ರಾಜಾ ಎಸ್. ಭೋನ್ಸಾಲೆ ಅವರೊಂದಿಗೆ 1987ರವರೆಗೆ ಕೆಲಸ ಮಾಡಿದ ಅವರು ಬಳಿಕ 1987ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕಾಲತು ಪ್ರಾರಂಭಿಸಿದರು.
- ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಕಾನೂನಿನಲ್ಲಿ ಪರಿಣತಿ ಹೊಂದಿದ್ದ ಅವರು ನಾಗ್ಪುರ ಮತ್ತು ಅಮರಾವತಿಯ ಪುರಸಭೆಯ ನಿಗಮಗಳು ಹಾಗೂ ಅಮರಾವತಿ ವಿಶ್ವವಿದ್ಯಾಲಯದ ಸ್ಥಾಯಿ ಸಲಹೆಗಾರರಾಗಿಯು ಕಾರ್ಯನಿರ್ವಹಿಸಿದರು.
- 1992ರಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ಸಹಾಯಕ ಸರ್ಕಾರಿ ವಕೀಲ ಮತ್ತು ಹೆಚ್ಚುವರಿ ಸಾರ್ವಜನಿಕ ಅಭಿಯೋಜಕರಾಗಿ ನೇಮಕಗೊಂಡ ಗವಾಯಿ ಅವರು ಅನಂತರ 2000ರಲ್ಲಿ ಸರ್ಕಾರಿ ವಕೀಲ ಮತ್ತು ಸಾರ್ವಜನಿಕ ಅಭಿಯೋಜಕರಾದರು.
- 2003ರ ನವೆಂಬರ್ ತಿಂಗಳಿನಿಂದ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಬಡ್ತಿ ಪಡೆದ ಅವರು 2005ರಲ್ಲಿ ಖಾಯಂ ನ್ಯಾಯಾಧೀಶರಾದರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಮುಂಬೈ, ನಾಗ್ಪುರ, ಔರಂಗಾಬಾದ್ ಮತ್ತು ಪಣಜಿಯ ಎಲ್ಲಾ ಕ್ಷೇತ್ರಗಳ ಪ್ರಕರಣಗಳನ್ನು ನಿರ್ವಹಿಸುವ ಪೀಠಗಳ ಅಧ್ಯಕ್ಷತೆ ವಹಿಸಿದ್ದರು.
- 2019ರ ಮೇ 24ರಂದು ಅವರನ್ನು ಸುಪ್ರೀಂ ಕೋರ್ಟ್‌ಗೆ ಬಡ್ತಿ ಮಾಡಲಾಯಿತು. ಪ್ರಸ್ತುತ ಅವರು ಖನ್ನಾ ಅವರ ಬಳಿಕ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ.
ಇದನ್ನೂ ಓದಿ: Dhruv Rathee: ಹಿಂದಿವಾಲಾಗಳ ಪರ ವಹಿಸಿ ಕನ್ನಡಿಗರನ್ನು ಕೆಣಕಿದ ಧ್ರುವ್ ರಾಠೀ; ನಿರ್ದೇಶಕ ಮಂಸೋರೆ ಕಿಡಿ
ಪ್ರಮುಖ ತೀರ್ಪುಗಳು
- 2018ರ ಚುನಾವಣಾ ಬಾಂಡ್ ಯೋಜನೆಯು ನಾಗರಿಕರ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ದುರ್ಬಲಗೊಳಿಸುತ್ತದೆ ಎಂದು 2024ರಲ್ಲಿ ತೀರ್ಪು ನೀಡಿರುವ ಸಂವಿಧಾನ ಪೀಠದಲ್ಲಿ ಗವಾಯಿ ಅವರು ಕೂಡ ಇದ್ದರು.
- ಬುಲ್ಡೋಜರ್ ಕಾರ್ಯಾಚರಣೆಯ ಬಗ್ಗೆ 2024ರಲ್ಲಿ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರು ನೀಡಿರುವ ತೀರ್ಪಿನಲ್ಲಿ ಆರೋಪಿ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಧ್ವಂಸ ಮಾಡುವುದು ಅಸಂವಿಧಾನಿಕ ಎಂದು ಗವಾಯಿ ಅಭಿಪ್ರಾಯಪಟ್ಟಿದ್ದರು.
- ವಿವೇಕ್ ನಾರಾಯಣ್ ಶರ್ಮಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣ 2023ರ ನೋಟು ರದ್ದತಿಗೆ ಸಂಬಂಧಿಸಿ ನ್ಯಾಯಮೂರ್ತಿ ಗವಾಯಿ ಅವರು ನೋಟು ರದ್ದತಿ ನೀತಿಯನ್ನು ಬೆಂಬಲಿಸಿ ತೀರ್ಪು ನೀಡಿದರು. ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಸಮಾಲೋಚನೆಯ ಬಳಿಕವೇ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇದು ಕಾನೂನುಬದ್ಧವಾಗಿದೆ ಎಂದು ಅವರು ಹೇಳಿದ್ದರು.
- 2023ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ವಿಧಿ 370 ರದ್ದತಿಯನ್ನು ಸರ್ವಾನುಮತದಿಂದ ಎತ್ತಿಹಿಡಿದ ಐದು ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿ ಗವಾಯಿ ಅವರು ಕೂಡ ಇದ್ದರು.