Laxmi Hebbalkar: ಬಸವಣ್ಣನವರ ತತ್ವ, ಆದರ್ಶಗಳು ಎಲ್ಲರಿಗೂ ಮಾದರಿ- ಲಕ್ಷ್ಮೀ ಹೆಬ್ಬಾಳ್ಕರ್
Laxmi Hebbalkar: ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಬೆಳಗಾವಿ: ಜಗತ್ತಿನ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ತತ್ವ ಆದರ್ಶಗಳು ಕೇವಲ ಆಚರಣೆಗೆ ಸೀಮಿತವಾಗದೆ, ನಾವೆಲ್ಲರೂ ಅನುಕರಣೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಬುಧವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ತತ್ವ, ಆದರ್ಶಗಳು ಎಲ್ಲರಿಗೂ ಮಾದರಿ ಎಂದರು.
ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂದು ಧರ್ಮ-ಧರ್ಮ ಹಾಗೂ ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಸಂದರ್ಭದಲ್ಲಿ ಬಸವಣ್ಣನವರ ವಿಚಾರಧಾರೆಯಿಂದ ಇಂತವುಗಳನ್ನು ತಡೆಯಲು ಸಾಧ್ಯ. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು ಎಂದು ಹೇಳಿದರು.
ಎಂದೆಂದಿಗೂ ಶಾಶ್ವತವಾಗಿ ಉಳಿಯುವಂತಹ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು 12ನೇ ಶತಮಾನದಲ್ಲೇ ಸಾರಿದ ಮಹಾನ್ ವ್ಯಕ್ತಿ ಬಸವೇಶ್ವರರು ಎಂದು ತಿಳಿಸಿದರು. ರಾಜಕಾರಣದಲ್ಲಿ ಸೋಲೋದು ಗೆಲ್ಲೋದು ಸಾಮಾನ್ಯ, ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸುವಂತೆಯೇ ನಾನು ನನ್ನ ಮಗ ಮೃಣಾಲ್ ಹೆಬ್ಬಾಳಕರ್‌ಗೆ ಹೇಳಿಕೊಟ್ಟಿದ್ದೇನೆ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ಸುದ್ದಿಯನ್ನೂ ಓದಿ | Akshaya Tritiya 2025: ಜಿಯೋ ಗೋಲ್ಡ್ 24ಕೆ ಡೇಸ್; ಶೇ.2ರವರೆಗೆ ಉಚಿತ ಡಿಜಿಟಲ್ ಚಿನ್ನ ಪಡೆಯುವ ಅವಕಾಶ
ಈ ಸಂದರ್ಭದಲ್ಲಿ ರತ್ನಪ್ರಭಾ ಬೆಲ್ಲದ, ಬಸವರಾಜ ಜಗಜಂಪಿ, ಡಾ.ಎಚ್.ಬಿ. ರಾಜಶೇಖರ, ವಿಜಯಕುಮಾರ ಹೊನಕೇರಿ, ಆರ್.ಪಿ. ಪಾಟೀಲ, ಮುರಘೇಂದ್ರಗೌಡ ಪಾಟೀಲ, ಮೃಣಾಲ್ ಹೆಬ್ಬಾಳ್ಕರ್, ವಿದ್ಯಾವತಿ ಭಜಂತ್ರಿ, ಅನಂತ ಬ್ಯಾಕೊಡ್, ಉದಯಕುಮಾರ್ ತಳವಾರ, ಸೋಮಲಿಂಗ ಮಾವಿನಕಟ್ಟಿ, ಮಲಗೌಡ ಪಾಟೀಲ ಹಾಗೂ ಅನೇಕರು ಉಪಸ್ಥಿತರಿದ್ದರು.