ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janardhan Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ; ಏನಿದು ಪ್ರಕರಣ?

ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಜತೆಗೆ 7 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಹಾಗಾದರೆ ಏನಿದು ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣ? ಇಲ್ಲಿದೆ ವಿವರ.

ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿ ಅಪರಾಧಿ; ಏನಿದು ಪ್ರಕರಣ?

ಜನಾರ್ದನ ರೆಡ್ಡಿ.

Profile Ramesh B May 6, 2025 5:04 PM

ಬೆಂಗಳೂರು: ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಜತೆಗೆ 7 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಅವರೊಂದಿಗೆ ಒಎಂಸಿ ಎಂಡಿ ಶ್ರೀನಿವಾಸ ರೆಡ್ಡಿ, ರಾಜಗೋಪಾಲ್ ರೆಡ್ಡಿ, ಅಲಿಖಾನ್ ಕೂಡ ಅಪರಾಧಿಗಳಿಂದು ತಿಳಿಸಿದೆ. ಹಾಗಾದರೆ ಏನಿದು ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣ? ಇಲ್ಲಿದೆ ವಿವರ.

ತೆಲಂಗಾಣದ ಅನಂತಪುರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಈ ಪ್ರಕರಣವನ್ನು 13 ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ತೀರ್ಪು ನೀಡುವ ಮುನ್ನ ಕೋರ್ಟ್‌ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ.

ಈ ಸುದ್ದಿಯನ್ನೂ ಓದಿ: Janardhana Reddy: ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ಕೋರ್ಟ್‌ ಮಹತ್ವದ ತೀರ್ಪು

ಗಾಲಿ ಜನಾರ್ದನ ರೆಡ್ಡಿ (ಮಾಜಿ ಸಚಿವ ಮತ್ತು ಗಣಿ ಉದ್ಯಮಿ), ಬಿ.ವಿ.ಶ್ರೀನಿವಾಸ ರೆಡ್ಡಿ (ಒಎಂಸಿ ವ್ಯವಸ್ಥಾಪಕ ನಿರ್ದೇಶಕ), ಮೆಫಾಜ್ ಅಲಿ ಖಾನ್ (ಜನಾರ್ದನ ರೆಡ್ಡಿ ಅವರ ಆಪ್ತ ಸಹಾಯಕ), ವಿ.ಡಿ.ರಾಜಗೋಪಾಲ್ (ಗಣಿ ಇಲಾಖೆಯ ಮಾಜಿ ನಿರ್ದೇಶಕ), ಕೃಪಾನಂದಂ (ನಿವೃತ್ತ ಐಎಎಸ್ ಅಧಿಕಾರಿ), ಸಬಿತಾ ಇಂದ್ರ ರೆಡ್ಡಿ (ತೆಲಂಗಾಣ ಸಚಿವೆ, ವೈ.ಶ್ರೀಲಕ್ಷ್ಮಿ (ಐಎಎಸ್ ಅಧಿಕಾರಿ) ಮತ್ತು ನಿಧನರಾದ ಆರ್.ಲಿಂಗಾ ರೆಡ್ಡಿ (ಗಣಿ ಇಲಾಖೆಯ ಸಹಾಯಕ ನಿರ್ದೇಶಕ) ಪ್ರಕರಣದ ಆರೋಪಿಗಳಾಗಿದ್ದರು.

ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), 409 (ನಂಬಿಕೆ ಉಲ್ಲಂಘನೆ), 468 ಮತ್ತು 471 (ಫೋರ್ಜರಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (2) ಮತ್ತು 13 (1) (ಡಿ) ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಏನಿದು ಅಕ್ರಮ ಗಣಿಗಾರಿಕೆ?

ಈ ಪ್ರಕರಣದ ತನಿಖೆಯನ್ನು ಸಿಬಿಐ 2009ರಲ್ಲಿ ಕೈಗೆತ್ತಿಕೊಂಡಿತ್ತು. ವೈ.ಎಸ್. ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಒಎಂಸಿ ಕಂಪನಿಗೆ ಓಬಳಾಪುರಂ ಮತ್ತು ಡಿ. ಹಿರೇಹಾಳದಲ್ಲಿ ಕ್ರಮವಾಗಿ 68.5 ಹೆಕ್ಟೇರ್ ಮತ್ತು 39.5 ಹೆಕ್ಟೇರ್‌ ಪ್ರದೇಶವನ್ನು ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು. ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗಾ ರೆಡ್ಡಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ 23 ಅರ್ಜಿದಾರರನ್ನು ನಿರ್ಲಕ್ಷಿಸಿ, ಒಎಂಸಿ ಕಂಪನಿಗೆ ಗುತ್ತಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಕೈಗಾರಿಕಾ ಕಾರ್ಯದರ್ಶಿ ವೈ.ಶ್ರೀಲಕ್ಷ್ಮೀ ಮತ್ತು ಸಚಿವೆ ಸಬಿತಾ ಇಂದ್ರ ರೆಡ್ಡಿ ಒಎಂಸಿಯ ಗುತ್ತಿಗೆ ನೀಡಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನುವ ಆರೋಪವೂ ಇದೆ. ಕರ್ನಾಟಕದ ಅರಣ್ಯ ಭೂಮಿ ಸೇರಿದಂತೆ ತಮ್ಮ ಗುತ್ತಿಗೆ ಪ್ರದೇಶಗಳನ್ನು ಮೀರಿ ಜನಾರ್ದನ್‌ ರೆಡ್ಡಿ ಮತ್ತು ಇತರರು ಅಕ್ರಮವಾಗಿ ಕಬ್ಬಿಣದ ಅದಿರನ್ನು ಗಣಿಗಾರಿಕೆ ಮಾಡಿದ್ದು, ಇದರಿಂದ ಬೊಕ್ಕಸಕ್ಕೆ 884.13 ಕೋಟಿ ರೂ. ನಷ್ಟವಾಗಿದೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಮಾಡಿರುವ ಆರೋಪವೂ ಇವರ ಮೇಲಿದೆ.