UN Security Council: ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ವಿರೋಧಿ ಪಾಕ್ ಹೇಳಿಕೆಗೆ ಫಲ ಸಿಗಲಿಲ್ಲ
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕ್ ಕೋರಿಕೆಯ ಮೇರೆಗೆ ಕರೆಯಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗೌಪ್ಯವಾದ ಕೆಲವೇ ಗಂಟೆಗಳ ಸಭೆಯಲ್ಲಿ ಯಾವುದೇ ಹೇಳಿಕೆ, ನಿರ್ಣಯವನ್ನು ಕೈಗೊಳ್ಳಲಾಗಲಿಲ್ಲ. ಚರ್ಚೆಯಿಂದ ಯಾವುದೇ ಮಹತ್ವದ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.


ವಾಷಿಂಗ್ಟನ್: ಕಾಶ್ಮೀರದ (Kashmir) ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ (Pahalgam Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ನಿರ್ಮಾಣವಾಗಿದೆ. ಈ ಬಗ್ಗೆ ಆತಂಕಗೊಂಡಿರುವ ಪಾಕಿಸ್ತಾನದ ಕೋರಿಕೆಯ ಮೇರೆಗೆ ಕರೆಯಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (United Nations Security Council) ಸಭೆ (UNSC meeting) ಯಾವುದೇ ನಿರ್ಣಯಗಳನ್ನು ಕೈಗೊಳ್ಳಲಾಗದೆ ಕೊನೆಗೊಂಡಿದೆ. ನಾಗರಿಕರ ಮೇಲೆ ನಡೆದ ದಾಳಿಯ ಅನಂತರ ಎರಡು ರಾಷ್ಟ್ರಗಳ ಮಧ್ಯೆ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಎರಡು ರಾಷ್ಟ್ರಗಳು ಮಿಲಿಟರಿ ಸನ್ನಾಹವನ್ನು ಹೆಚ್ಚಿಸುತ್ತಿದ್ದು, ಯುದ್ಧಕ್ಕೆ ಸನ್ನದ್ಧವಾಗುತ್ತಿವೆ. ಎರಡೂ ಕಡೆಯವರು ಸಂಯಮದಿಂದ ಇರಬೇಕೆಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕೋರಿಕೆಯ ಮೇರೆಗೆ ಕರೆಯಲಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗೌಪ್ಯವಾದ ಕೆಲವೇ ಗಂಟೆಗಳ ಸಭೆಯಲ್ಲಿ ಯಾವುದೇ ಹೇಳಿಕೆ, ನಿರ್ಣಯವನ್ನು ಕೈಗೊಳ್ಳಲಾಗಲಿಲ್ಲ. ಚರ್ಚೆಯಿಂದ ಯಾವುದೇ ಮಹತ್ವದ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಪಾಕಿಸ್ತಾನದ ಪ್ರತಿನಿಧಿಯಾಗಿ ಭಾಗವಹಿಸಿದ ಅಸಿಮ್ ಇಫ್ತಿಕರ್ ಅಹ್ಮದ್, ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು. 26 ನಾಗರಿಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ವಿಶ್ವಸಂಸ್ಥೆಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಸಿದ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಎತ್ತಿತು. ಭಾರತವು ಇಲ್ಲಿ ಮಿಲಿಟರಿ ಕ್ರಮಗಳನ್ನು ಹೆಚ್ಚಿಸುತ್ತಿದ್ದು, ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.
ಭಾರತವು ಇತ್ತೀಚೆಗೆ ಸಿಂಧೂ ಜಲ ಒಪ್ಪಂದವನ್ನು ರದ್ದು ಗೊಳಿಸಿರುವುದನ್ನು ಆಕ್ರಮಣಕಾರಿ ಕೃತ್ಯ ಎಂದ ಅಹ್ಮದ್ ಹೇಳಿದ್ದಾರೆ. ಇದು ಗಡಿಯಾಚೆಗಿನ ಭಯೋತ್ಪಾದನೆಯನ್ನು ಬೆಂಬಲಿಸುವಲ್ಲಿ ಇಸ್ಲಾಮಾಬಾದ್‌ನ ಪಾತ್ರದಿಂದ ಜಾಗತಿಕ ಗಮನವನ್ನು ಬೇರೆಡೆಗೆ ತಿರುಗಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ಭಾರತ ಹೇಳಿದೆ.
ಪ್ರಸ್ತುತ 15 ರಾಷ್ಟ್ರಗಳ ಪ್ರಬಲ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿರುವ ಪಾಕಿಸ್ತಾನವು ಈ ಸಮಸ್ಯೆಯನ್ನು ಪರಿಹರಿಸಲು ಗೌಪ್ಯವಾಗಿ ಸಮಾಲೋಚನೆಗಳನ್ನು ನಡೆಸುವಂತೆ ಕೋರಿತ್ತು.
ಮೇ ತಿಂಗಳಿಗೆ ಕೌನ್ಸಿಲ್ ಅಧ್ಯಕ್ಷ ಸ್ಥಾನದಲ್ಲಿರುವ ಗ್ರೀಸ್ ಮೇ 5ರಂದು ಮಧ್ಯಾಹ್ನ ಗೌಪ್ಯ ಸಭೆಯನ್ನು ನಿಗದಿಪಡಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕೊಠಡಿಯಲ್ಲಿ ನಡೆಯುವ ಔಪಚಾರಿಕ ಅಧಿವೇಶನಗಳಿಗಿಂತ ಭಿನ್ನವಾಗಿ ಸದಸ್ಯರು ಪ್ರತ್ಯೇಕ ಕೋಣೆಯಲ್ಲಿ ಸಭೆ ಸೇರಿದ್ದರು. ಈ ಸಭೆಯ ಅನಂತರ ಪಾಕಿಸ್ತಾನದ ವಿಶ್ವಸಂಸ್ಥೆಯ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ವರದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮುಂಚಿತವಾಗಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿ ಭಾರತದ ಮಾಜಿ ಖಾಯಂ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್, ಪಾಕಿಸ್ತಾನವು ಮಂಡಳಿಯ ಸದಸ್ಯತ್ವವನ್ನು ಬಳಸಿಕೊಂಡು ಗ್ರಹಿಕೆಗಳನ್ನು ರೂಪಿಸಲು ಪ್ರಯತ್ನಿಸುವ ಚರ್ಚೆಯಿಂದ ಯಾವುದೇ ಪರಿಣಾಮಕಾರಿ ಫಲಿತಾಂಶವನ್ನು ನಿರೀಕ್ಷಿಸಲಾಗುವುದಿಲ್ಲ. ಭಾರತವು ಅಂತಹ ಪಾಕಿಸ್ತಾನಿ ಪ್ರಯತ್ನಗಳನ್ನು ಎದುರಿಸುತ್ತದೆ ಎಂದು ಹೇಳಿದರು.
2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಭಾರತದ ಕ್ರಮವನ್ನು ಚರ್ಚಿಸಲು ಚೀನಾ ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ಗೌಪ್ಯ ಸಭೆ ನಡೆಸುವಂತೆ ಕೋರಿತು. ಆ ಸಭೆಯು ಯಾವುದೇ ಫಲಿತಾಂಶ ಅಥವಾ ಹೇಳಿಕೆಯಿಲ್ಲದೆ ಕೊನೆಗೊಂಡಿತು. ಬೀಜಿಂಗ್ ಬೆಂಬಲದೊಂದಿಗೆ ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯಗೊಳಿಸಲು ಪಾಕಿಸ್ತಾನ ಮಾಡಿದ ಪ್ರಯತ್ನಗಳಿಗೆ ಭಾರಿ ತಿರಸ್ಕಾರ ಎದುರಾಗಿತ್ತು. ಕೌನ್ಸಿಲ್‌ನಲ್ಲಿನ ಅಗಾಧ ಬಹುಮತವು ಕಾಶ್ಮೀರ ವಿಷಯವು ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಒತ್ತಿಹೇಳಿತು.
ಇದನ್ನೂ ಓದಿ: Mallikarjun Kharge: ಪಹಲ್ಗಾಮ್ ದಾಳಿ ಬಗ್ಗೆ ಪ್ರಧಾನಿಗೆ ಮೊದಲೇ ಗೊತ್ತಿತ್ತು- ಖರ್ಗೆ ಸ್ಫೋಟಕ ಹೇಳಿಕೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಗುಟೆರೆಸ್, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಳೆದ ಕೆಲವು ವರ್ಷಗಳ ಬಳಿಕ ಅತ್ಯುನ್ನತ ಮಟ್ಟದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
2 ದೇಶಗಳ ಸಂಬಂಧಗಳು ಹದಗೆಡುತ್ತಿರುವುದನ್ನು ನೋಡುವುದು ನನಗೆ ನೋವುಂಟು ಮಾಡುತ್ತದೆ. ನಾಗರಿಕರನ್ನು ಗುರಿಯಾಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಇದಕ್ಕೆ ಕರಣವಾದವರನ್ನು ಕಾನೂನುಬದ್ಧ ವಿಧಾನಗಳ ಮೂಲಕ ನ್ಯಾಯದ ಕಟಕಟೆಗೆ ತರಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಿಲಿಟರಿ ಮುಖಾಮುಖಿಯನ್ನು ತಪ್ಪಿಸುವುದು ಅತ್ಯಗತ್ಯ ಎಂದು ಹೇಳಿದ ಗುಟೆರೆಸ್, ಈಗ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು ಮತ್ತು ಪರಿಸ್ಥಿತಿಯ ಅಂಚಿನಿಂದ ಹಿಂದೆ ಸರಿಯಬೇಕು. ಇದು ಎರಡೂ ದೇಶಗಳಿಗೆ ನನ್ನ ಸಂದೇಶವಾಗಿದೆ. ಯಾವುದೇ ತಪ್ಪು ಮಾಡಬೇಡಿ ಮಿಲಿಟರಿ ಮಾರ್ಗವು ಪರಿಹಾರವಲ್ಲ ಎಂದು ಹೇಳಿದರು.