ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ ಟೆಸ್ಟ್ ಭವಿಷ್ಯದ ಬಗ್ಗೆ ಗೌತಮ್ ಗಂಭೀರ್ ದೊಡ್ಡ ಹೇಳಿಕೆ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ಬಳಿಕ ಜೂನ್ನಲ್ಲಿ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಹಮ್ಮಿಕೊಳ್ಳಲಿದೆ. ಇಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ದೊಡ್ಡ ಹೇಳಿಕೆ ನೀಡಿದ್ದಾರೆ.



ಐಪಿಎಲ್ ಆಡುತ್ತಿರುವ ಕೊಹ್ಲಿ, ರೋಹಿತ್
ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಸದ್ಯ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ರಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪರ ಆಡುತ್ತಿದ್ದಾರೆ.

ಕೊಹ್ಲಿ-ರೋಹಿತ್ ಟೆಸ್ಟ್ ಭವಿಷ್ಯ
ಕಳೆದ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಆದರೆ, ಇವರ ಟೆಸ್ಟ್ ಭವಿಷ್ಯದ ಬಗ್ಗೆ ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಮಾತನಾಡಿದ್ದಾರೆ.

ಇಂಗ್ಲೆಂಡ್ ಪ್ರವಾಸ ಯಾವಾಗ?
2025ರ ಐಪಿಎಲ್ ಟೂರ್ನಿಯ ಬಳಿಕ ಅಂದರೆ, ಜೂನ್ನಲ್ಲಿ ಭಾರತ ತಂಡ, ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಮೂಲಕ ಭಾರತ ತಂಡ, ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಭಿಯಾನವನ್ನು ಆರಂಭಿಸಲಿದೆ.

ಹೆಡ್ ಕೋಚ್ ಗೌತಮ್ ಗಂಭೀರ್ ಹೇಳಿದ್ದೇನು?
ಭಾರತ ತಂಡದ ಪ್ರಮುಖ ಆಧಾರ ಸ್ಥಂಭಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರನ್ನು ಹೆಡ್ ಕೋಚ್ ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ. ವೃತ್ತಿ ಜೀವನದ ಆರಂಭ ಹಾಗೂ ಅಂತ್ಯ ಆಟಗಾರರ ನಿರ್ಧಾರವಾಗಿದೆ. ಅವರು ಚೆನ್ನಾಗಿ ಆಡುತ್ತಿರುವವರೆಗೂ ತಂಡದ ಭಾಗವಾಗಿರುತ್ತಾರೆಂದು ಹೇಳಿದ್ದಾರೆ.

ಆಟಗಾರರ ವೈಯಕ್ತಿಕ ನಿರ್ಧಾರ
"ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಉತ್ತಮ ಪ್ರದರ್ಶನ ತೋರುತ್ತಿರುವವರೆಗೂ ಭಾರತ ತಂಡದ ಭಾಗವಾಗಿರುತ್ತಾರೆ. ಆಟಗಾರರ ವೃತ್ತಿ ಜೀವನದ ಆರಂಭ ಹಾಗೂ ಅಂತ್ಯ ಎರಡೂ ಕೂಡ ಆಟಗಾರರ ವೈಯಕ್ತಿಕ ನಿರ್ಧಾರವಾಗಿರುತ್ತದೆ," ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.

ನಿಮ್ಮನ್ನು ಯಾರೂ ನಿಲ್ಲಿಸುವುದಿಲ್ಲ
"ಕ್ರಿಕೆಟ್ಗೆ ನಿವೃತ್ತಿ ಪಡೆಯಿರಿ ಎಂದು ಆಟಗಾರರಿಗೆ ಕೋಚ್, ಸೆಲೆಕ್ಟರ್ ಹಾಗೂ ಬಿಸಿಸಿಐ ಸೇರಿದಂತೆ ಯಾರೂ ಕೂಡ ಹೇಳುವುದಿಲ್ಲ. ನಿಮ್ಮ ವಯಸ್ಸು 40 ಆಗಿದ್ದು, ಚೆನ್ನಾಗಿ ಆಡುತ್ತಿದ್ದರೆ, ನೀವು 45ರ ವರೆಗೂ ತಂಡದ ಭಾಗವಾಗಿರಬಹುದು. ನಿಮ್ಮನ್ನು ಯಾರೂ ತಡೆಯುವವರು ಯಾರು?," ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.