CM Siddaramaiah: ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರದ ಅನುದಾನ ತರಲು ಪ್ರಯತ್ನಿಸಲಿ: ಸಿಎಂ
CM Siddaramaiah: ಕರ್ನಾಟಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 46,859 ಕೋಟಿ ಖರ್ಚು ಮಾಡಲಾಗುತ್ತಿದೆ. 2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24,960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ 22,758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18,561ಕೋಟಿ ಮಾತ್ರ ಬಿಡುಗಡೆ ಆಗಿದೆ. 4,195 ಕೋಟಿ ರೂಪಾಯಿಗಳು ಬಿಡುಗಡೆ ಆಗಿರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.


ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಸುಮಾರು 4,195 ಕೋಟಿ ರೂ. ಗಳ ಕೇಂದ್ರದ ಪಾಲು ಬಿಡುಗಡೆಯಾಗಿಲ್ಲ. ಈ ದಿಸೆಯಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಕೇಂದ್ರವನ್ನು ಒತ್ತಾಯಿಸಿ ಬಾಕಿ ಅನುದಾನವನ್ನು ತರಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ವಿಧಾನಸೌಧದಲ್ಲಿ ಬುಧವಾರ ಅವರು ಮಾತನಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಅನುದಾನವನ್ನು ಒದಗಿಸುವಂತೆ ಪ್ರಧಾನಮಂತ್ರಿಯವರನ್ನು, ಕೇಂದ್ರ ವಿತ್ತಸಚಿವರನ್ನೂ ಈಗಾಗಲೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದರ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿದರು.
ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಲು ರಚಿಸಲಾದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯನ್ನು ಇಂದು ನಡೆಸಲಾಗಿದೆ. ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳಿದ್ದು, ಅವುಗಳ ಪ್ರಗತಿಪರಿಶೀಲನೆ ನಡೆಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು 50:50 , 60:40 , 70:30 ರಷ್ಟಿರುತ್ತದೆ. ಕರ್ನಾಟಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 46,859 ಕೋಟಿ ಖರ್ಚು ಮಾಡಲಾಗುತ್ತಿದೆ. 2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24,960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ 22,758ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18,561 ಕೋಟಿ ಮಾತ್ರ ಬಿಡುಗಡೆ ಆಗಿದೆ 4,195 ಕೋಟಿ ರೂಪಾಯಿಗಳು ಬಿಡುಗಡೆ ಆಗಿರುವುದಿಲ್ಲ ಎಂದರು.
ಶೇ.100 ರಷ್ಟು ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಸೂಚನೆ
ರಾಜ್ಯದ ಪಾಲು ಹೆಚ್ಚಿರುವ ಕೇಂದ್ರ ಪುರಸ್ಕೃತ ಯೋಜನೆಗಳಡಿ ಶೇ. 83 ರಷ್ಟು ಅನುದಾನ ಖರ್ಚಾಗಿದ್ದು, ಕೇಂದ್ರದಿಂದ ತಡವಾಗಿ ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ವಿಷಯಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ. ಆದ್ದರಿಂದ 2025-26 ರ ಸಾಲಿನಿಂದ ಶೇ.100 ರಷ್ಟು ಅನುದಾನವನ್ನು ಖರ್ಚು ಮಾಡಬೇಕಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ನಿಟ್ಟಿನಲ್ಲಿ ನಿಗದಿತ ಸಮಯದಲ್ಲಿ ಅನುದಾನ ಬಿಡುಗಡೆ ಮಾಡಲು ಕೇಂದ್ರವನ್ನು ಕೋರುವಂತೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರಿಗೂ ಸೂಚಿಸಲಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | DISHA Meeting: ನರೇಗಾದಲ್ಲಿ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ
ಬಾಕಿ ಅನುದಾನ ಬಿಡುಗಡೆಗಾಗಿ ಕೇಂದ್ರಕ್ಕೆ ಪತ್ರ:
ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಅನುದಾನ ನೀಡದೇ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣವನ್ನು ಮಾಡುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ತನ್ನ ಪಾಲನ್ನು ನೀಡಲೇಬೇಕು. ಕೇಂದ್ರದ ಪಾಲು ನೀಡಲು ರಾಜ್ಯ ಸರ್ಕಾರ ಪತ್ರ ಬರೆದಿದೆ ಎಂದರು.