Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಯೂಟರ್ನ್!
Operation sindoor: ವಿಜಯಪುರ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ಪಾಕ್ ಪರ ಪೋಸ್ಟ್ ಹಾಕಿದ್ದಾಳೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಕ್ಷಮೆಯಾಚಿಸಿ, ತನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ.


ವಿಜಯಪುರ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ (Operation sindoor) ನಿರ್ಮಾಣವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನದ ಪರ ಪೋಸ್ಟ್ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕ್ ಪರ ಪ್ರೇಮ ಮೆರೆದಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ಧ್ ಫಾರೂಖಿ ಶೇಖ್ ಎಂಬಾಕೆ ಪಾಕ್ ಪರ ಪೋಸ್ಟ್ ಹಾಕಿದ್ದಾಳೆ. " ನನ್ನ ಪಾಕಿಸ್ತಾನಿ ಸ್ನೇಹಿತರೇ, ಐಒಜೆಕೆ, ಎಜೆಕೆ ಜನರೇ, ಗಡಿಯ 200 ಕಿ.ಮೀ ವ್ಯಾಪ್ತಿಯಲ್ಲಿ ನೀವು ಓಡಾಡಬೇಡಿ, ದಯವಿಟ್ಟು ಒಳನಾಡಿಗೆ ಹೋಗಿ. ಅಲ್ಲಾಹ್ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸುತ್ತಾನೆ" ಎಂದು ಪಾಕ್ ಧ್ವಜದೊಂದಿಗೆ ಪೋಸ್ಟ್ ಹಾಕಿದ್ದಾಳೆ.
ಈ ಪೋಸ್ಟ್‌ಗೆ ಹಿಂದುಪರ ಸಂಘಟನೆಗಳು ಸೇರಿ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಯೂಟರ್ನ್ ಹೊಡೆದಿದ್ದು, ಕ್ಷಮೆಯಾಚಿಸಿ ಪೋಸ್ಟ್ ಮಾಡಿದ್ದಾಳೆ.
ನನ್ನ ಪೋಸ್ಟ್ ಬಹಳಷ್ಟು ಜನರಿಗೆ ನೋವು ತಂದಿದೆ. ನಾನು ಎಲ್ಲರಿಗೂ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ಭಾರತದಲ್ಲಿ ಹುಟ್ಟಿ ಬೆಳೆದಿದ್ದು, ಇದು ನನ್ನ ತಾಯ್ನಾಡು. ನನ್ನ ಮೂರ್ಖತನದ ಪೋಸ್ಟ್‌ಗೆ ನಾನು ಮತ್ತೊಮ್ಮೆ ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಇನ್ಮುಂದೆ ಎಂದಿಗೂ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ, ಜೈ ಹಿಂದ್' ಎಂದು ಭಾರತದ ಧ್ವಜ ಚಿತ್ರದೊಂದಿಗೆ ವಿದ್ಯಾರ್ಥಿನಿ ಪೋಸ್ಟ್ ಮಾಡಿದ್ದಾಳೆ.
ಈ ಸುದ್ದಿಯನ್ನೂ ಓದಿ | Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ