ಪಾಕ್‌ನ ಐವರು ನುಸುಳುಕೋರರನ್ನು ಹತ್ಯೆಗೈದ ಆಂಧ್ರದ ಸೈನಿಕ ಮುರಳಿ ನಾಯಕ್ ವೀರ ಮರಣ
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರ ಪ್ರದೇಶ ಮೂಲದ ಸೈನಿಕರೊಬ್ಬರು ವೀರ ಮರಣ ಹೊಂದಿದ್ದಾರೆ. ಮುರಳಿ ನಾಯಕ್ (23) ಹುತಾತ್ಮರಾದ ಯೋಧ. ಅವರು 2022ರ ಅಕ್ಟೋಬರ್ನಲ್ಲಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದರು.


ಅಮರಾವತಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರ ಪ್ರದೇಶ ಮೂಲದ ಸೈನಿಕರೊಬ್ಬರು ವೀರ ಮರಣ ಹೊಂದಿದ್ದಾರೆ. ಮುರಳಿ ನಾಯಕ್ (23) ಹುತಾತ್ಮರಾದ ಯೋಧ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯೋಧ ಮುರಳಿ ನಾಯಕ್ 2022ರ ಅಕ್ಟೋಬರ್ನಲ್ಲಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದರು. ಅವರು ಮಹಾರಾಷ್ಟ್ರದ ನಾಸಿಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ (ಮೇ 8) ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕರ್ತವ್ಯದಲ್ಲಿದ್ದಾಗ ಮುರಳಿ ನಾಯಕ್, ಗುಂಡಿನ ಚಕಮಕಿಯಲ್ಲಿ 5 ನುಸುಳುಕೋರರನ್ನು ಹೊಡೆದುರುಳಿಸಿ ಬಳಿಕ ಪ್ರಾಣ ತ್ಯಾಗ ಮಾಡಿದ್ದಾರೆ. ಇವರು ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ತಾಲೂಕಿನ ಗೋರಂಟ್ಲಾ ಮಂಡಲ ಮೂಲದವರು.
ನಾಯಕ್ ತಂದೆ ಶ್ರೀರಾಮ್ ನಾಯಕ್ ಮಗನ ಸಾವಿನ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. "ಶುಕ್ರವಾರ ಬೆಳಗ್ಗೆ ಸರಿ ಸುಮಾರು 9 ಗಂಟೆಗೆ ನಮಗೆ ಸೇನಾ ಅಧಿಕಾರಿಗಳು ಕರೆ ಮಾಡಿ ನಮ್ಮ ಮಗನ ಸಾವಿನ ಸುದ್ದಿ ತಿಳಿಸಿದರು. ಬೆಳಗಿನ ಜಾವ 3:30ರ ಸುಮಾರಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನನ್ನ ಮಗ ಮುರಳಿಯನ್ನು ಕಳೆದುಕೊಂಡಿದ್ದೇವೆ. ಅವನನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಅವನು ಈ ವಿಷಯವನ್ನು ನಮ್ಮಿಂದ ಮುಚ್ಚಿಟ್ಟಿದ್ದನು. ಪಂಜಾಬ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮುರಳಿ ನಮಗೆ ಹೇಳಿದ್ದʼʼ ಎಂದು ದುಃಖ ತೋಡಿಕೊಂಡಿದ್ದಾರೆ.
ಸಚಿವ ವಿ.ಸೋಮಣ್ಣ ಅವರ ಫೇಸ್‌ಬುಕ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: G.S. Siddalingaiah: ಹಿರಿಯ ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ನಿಧನ
ʼʼಮುರಳಿ ನಮಗೆ ಒಬ್ಬನೇ ಮಗ. ಅವನಿಗೆ ಕೇವಲ 23 ವರ್ಷ. ನಮ್ಮ ದುಃಖವನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ದೇಶ ಸೇವೆ ಮಾಡಲು ಸೇನೆಗೆ ಸೇರುವುದು ಅವನ ಗುರಿಯಾಗಿತ್ತು. ನನ್ನ ವಿರೋಧದ ನಡುವೆಯೂ ಅವನು ಸೇನೆಗೆ ಸೇರಿದ್ದ. ಕನಿಷ್ಠ 1 ವರ್ಷ ಸೇನಾ ಸಮವಸ್ತ್ರ ಧರಿಸಲು ಬಯಸಿದ್ದ. ಅವನು ತನ್ನ ಆಸೆ ಈಡೇರಿಸಿಕೊಂಡಿದ್ದಾನೆ. ಬುಧವಾರ ಬೆಳಗ್ಗೆ 8 ಗಂಟೆಗೆ ನಮ್ಮೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡಿದ್ದ'' ಎಂದು ತಿಳಿಸಿದ್ದಾರೆ.
ಸಚಿವ ವಿ.ಸೋಮಣ್ಣ ಮುರಳಿ ನಾಯಕ್ ಅವರಿಗೆ ಸಂತಾಪ ಸೂಚಿಸಿದ್ದಾರೆ. ʼʼದೇಶ ಸೇವೆ ಮಾಡುತ್ತಾ ವೀರ ಮರಣವನ್ನಪ್ಪಿರುವ ವೀರ ಯೋಧ, ಹುತಾತ್ಮ ಮುರಳಿ ನಾಯಕ್ ಅವರಿಗೆ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ದೇಶ ಸೇವೆಯಲ್ಲಿನ ಅವರ ಅದಮ್ಯ ಧೈರ್ಯ, ಶೌರ್ಯ ಹಾಗೂ ಸಂಕಲ್ಪ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಹುತಾತ್ಮ ವೀರಯೋಧನ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು, ಈ ದುಃಖದ ಸಮಯದಲ್ಲಿ ಇಡೀ ದೇಶ ನಿಮ್ಮೊಂದಿಗೆ ನಿಂತಿದೆʼʼ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ
ಅಲ್ಲದೆ ಮುರಳಿ ನಾಯಕ್ ಅವರ ಸಾವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜಕೀಯ ನಾಯಕರು, ಸೇನೆಯ ಅಧಿಕಾರಿಗಳು ಮತ್ತು ಸೈನಿಕರು ಸಂತಾಪ ಸೂಚಿಸಿದ್ದಾರೆ.