CM Siddaramaiah: ಹಣೆಗೆ ಸಿಂಧೂರ ಇಟ್ಟುಕೊಂಡೇ ʼಆಪರೇಶನ್ ಸಿಂಧೂರ್ʼ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
Operation Sindoor: "ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ" ಎಂದು ಸಿಎಂ ಸಿದ್ದರಾಮಯ್ಯ (CM Siddaramaih) ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರ ಹಣೆಯ ʼಸಿಂಧೂರʼ ಎಲ್ಲರ ಗಮನ ಸೆಳೆಯಿತು.

ಪ್ರೆಸ್‌ಮೀಟ್‌ನಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ಸೇನೆ ನಡೆಸಿರುವ ವಾಯುಸೇನಾ ದಾಳಿ, ಆಪರೇಶನ್ ಸಿಂಧೂರ್ (Operation Sindoor) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶ್ಲಾಘಿಸಿದ್ದಾರೆ. ಈ ಕುರಿತು ಇಂದು ಮಧ್ಯಾಹ್ನ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆ ಶ್ಲಾಘ್ಯ ಕಾರ್ಯವನ್ನು ಮಾಡಿದೆ. ಇದನ್ನು ನಾವು ಬೆಂಬಲಿಸುತ್ತೇವೆ. ಈ ಕುರಿತಂತೆ ನಮ್ಮ ಪೂರ್ಣ ಬೆಂಬಲ ಕೇಂದ್ರ ಸರಕಾರಕ್ಕೆ ಇದೆ ಎಂದರು. ಈ ಸಂದರ್ಭದಲ್ಲಿ ಅವರು ಹಣೆಗೆ ಕೆಂಪು ಕುಂಕುಮದ ಬೊಟ್ಟನ್ನು (ಸಿಂಧೂರ) ಇಟ್ಟುಕೊಂಡೇ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದಾರೆ. ದೇಶದ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದರು.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ. ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ. ಕಾಶ್ಮೀರದ ಪಹಲ್ಗಾಂವ್ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ ಎಂದವರು ನುಡಿದರು.
ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಉಗ್ರರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿ ಅಡಿಯಲ್ಲಿ ರಾಯಚೂರಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮನ್ನು ರದ್ದುಗೊಳಿಸಲಾಗಿದೆ. ಮಾಕ್ ಡ್ರಿಲ್‌ಗೆ ಸಂಬಂಧಿಸಿ ನೀಡಲಾಗಿರುವ ಎಲ್ಲ ಪ್ರೋಟೋಕಾಲ್‌ಗಳನ್ನೂ ಪಾಲಿಸಲಾಗುವುದು ಎಂದರು.
ಇದನ್ನೂ ಓದಿ: Operation Sindoor: ಉಗ್ರರ 9 ನೆಲೆಗಳು ಉಡೀಸ್; ಧ್ವಂಸಗೊಂಡ ಜೈಶ್ ಪ್ರಧಾನ ಕಚೇರಿಯ ವಿಡಿಯೋ ವೈರಲ್