ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Purnam Kumar Shaw: ಪ್ರಧಾನಿ ಮೋದಿಯಿಂದ ಎಲ್ಲವೂ ಸಾಧ್ಯ; ಪಾಕ್‌ನಿಂದ ಸುರಕ್ಷಿತವಾಗಿ ಮರಳಿದ ಬಿಎಸ್‌ಎಫ್‌ ಯೋಧನ ಪತ್ನಿಯಿಂದ ಕೇಂದ್ರಕ್ಕೆ ಧನ್ಯವಾದ

BSF Soldier: ಏ. 23ರಂದು ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ರೇಂಜರ್‌ ಸೆರೆ ಹಿಡಿದಿದ್ದ ಭಾರತದ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ (ಮೇ 14) ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಇದೀಗ ಅವರ ಪತ್ನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಬಿಎಸ್‌ಎಫ್‌ ಯೋಧನ ಪತ್ನಿಯಿಂದ ಕೇಂದ್ರಕ್ಕೆ ಧನ್ಯವಾದ

ಪೂರ್ಣಮ್ ಕುಮಾರ್ ಶಾ.

Profile Ramesh B May 14, 2025 3:43 PM

ಹೊಸದಿಲ್ಲಿ: ಏ. 23ರಂದು ಪಂಜಾಬ್ ಬಳಿ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನದ ರೇಂಜರ್‌ ಸೆರೆ ಹಿಡಿದಿದ್ದ ಭಾರತದ ಗಡಿ ಭದ್ರತಾ ಪಡೆಯ (BSF Soldier) ಯೋಧ ಪೂರ್ಣಮ್ ಕುಮಾರ್ ಶಾ (Purnam Kumar Shaw) ಅವರನ್ನು ಬುಧವಾರ (ಮೇ 14) ಅಟ್ಟಾರಿಯ ಚೆಕ್ ಪೋಸ್ಟ್‌ನಲ್ಲಿ(Attari–Wagah border) ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಸುಮಾರು 21 ದಿನಗಳ ಬಳಿಕ ಪೂರ್ಣಮ್ ಕುಮಾರ್ ಮನೆಗೆ ಮರಳಿದ್ದು, ಅವರ ಪತ್ನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಪೂರ್ಣಮ್ ಕುಮಾರ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಅವರ ಪತ್ನಿ ರಜನಿ ಶಾ ಇದೀಗ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.

ರಜನಿ ಶಾ ಅವರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: BSF Soldier: ಆಕಸ್ಮಿಕ ಗಡಿ ದಾಟಿದ ಬಿಎಸ್‌ಎಫ್‌ ಯೋಧನ ಬಿಡುಗಡೆ ಮಾಡಿದ ಪಾಕ್‌

ರಜನಿ ಶಾ ಹೇಳಿದ್ದೇನು?

"ಪ್ರಧಾನಿ ಮೋದಿ ಇದ್ದರೆ ಎಲ್ಲವೂ ಸಾಧ್ಯ. ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಮಹಿಳೆಯರ ಮುತೈದೆತನ ಕಸಿದುಕೊಂಡ ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಮೂಲಕ 15-20 ದಿನಗಳಲ್ಲಿ ಸೇಡು ತೀರಿಸಿಕೊಂಡಿದೆ. ಅದಾಗಿ 4-5 ದಿನಗಳ ನಂತರ ಕೇಂದ್ರ ನನ್ನ ಮುತೈದೆತನವನ್ನೂ ಮರಳಿ ತಂದಿದೆ. ಆದ್ದರಿಂದ ನಾನು ನನ್ನ ಕೈಗಳನ್ನು ಮಡಚಿ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆʼʼ ಎಂದು ರಜನಿ ಶಾ ಹೇಳಿದ್ದಾರೆ.

ʼʼನಮಗೆ ಎಲ್ಲರ ಬೆಂಬಲವಿದೆ. ಇಡೀ ದೇಶವೇ ನಮ್ಮ ಪರ ನಿಂತಿದೆ. ನಿಮ್ಮೆಲ್ಲರ ಕಾರಣದಿಂದಾಗಿ ನನ್ನ ಪತಿ ಭಾರತಕ್ಕೆ ಮರಳಲು ಸಾಧ್ಯವಾಯಿತು" ಎಂದು ಅವರು ತಿಳಿಸಿದ್ದಾರೆ. ಜತೆಗೆ ಪೂರ್ಣಮ್‌ ಕುಮಾರ್ ಅವರ ಇತರ ಕುಟುಂಬ ಸದಸ್ಯರು ಕೇಂದ್ರ ಸರ್ಕಾರ ಮತ್ತು ಬಿಎಸ್‌ಎಫ್ ಅಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ಪೂರ್ಣಮ್ ಕುಮಾರ್ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಶ್ರಾದಲ್ಲಿ ಜನಿಸಿ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರನ್ನು ಪಾಕಿಸ್ತಾನ ಪಂಜಾಬ್‌ನ ಅಟ್ಟಾರಿ-ವಾಗ ಗಡಿಯಲ್ಲಿ ಬುಧವಾರ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ಏ. 23ರಂದು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾ ಅವರನ್ನು ರೇಂಜರ್‌ಗಳು ಬಂಧಿಸಿದ್ದರು.

"ತುಂಬಾ ಸಂತಸವಾಗಿದೆ. ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವಲ್ಲಿ ಕೇಂದ್ರ ಸರ್ಕಾರ ಮತ್ತು ಬಿಎಸ್‌ಎಫ್ ಅಧಿಕಾರಿಗಳು ಮಾಡಿದ ಪ್ರಯತ್ನಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕಳೆದ ಎರಡು ವಾರಗಳಿಂದ ನಾವು ಸಾಕಷ್ಟು ಚಿಂತೆ ಅನುಭವಿಸಿದ್ದೆವು. ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೆವು. ಅವರ ಯೋಗಕ್ಷೇಮದ ಬಗ್ಗೆಆತಂಕಗೊಂಡಿದ್ದೆವು" ಎಂದು ಶಾ ಅವರ ಕುಟುಂಬ ಸದಸ್ಯರು ವಿವರಿಸಿದ್ದಾರೆ. "ನಾವು ಈಗ ಪೂರ್ಣಮ್‌ ಕುಮಾರ್ ಅವರೊಂದಿಗೆ ಮಾತನಾಡಲು ಮತ್ತು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಕಾಯುತ್ತಿದ್ದೇವೆ. ನಮ್ಮ ಪ್ರಾರ್ಥನೆಗಳಿಗೆ ಅಂತಿಮವಾಗಿ ಫಲ ಸಿಕ್ಕಿದೆ" ಎಂದು ಅವರು ಹೇಳಿದ್ದಾರೆ.

ಇತ್ತ ಭಾರತದ ಅಧಿಕಾರಿಗಳು ರಾಜಸ್ಥಾನದ ಗಡಿಯಲ್ಲಿ ವಶಕ್ಕೆ ಪಡೆದ ಪಾಕಿಸ್ತಾನದ ರೇಂಜರ್‌ನನ್ನು ಕೂಡ ಕಳುಹಿಸಿಕೊಡಲಾಗಿದೆ.