KKR vs RR: ಕೆಕೆಆರ್ ಪ್ಲೇ-ಆಫ್ ಆಸೆ ಜೀವಂತ; ರಾಜಸ್ಥಾನ್ ವಿರುದ್ಧ ಒಂದು ರನ್ ರೋಚಕ ಗೆಲುವು
ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ಯಧುವೀರ್ ಸಿಂಗ್ ಮತ್ತು ಮಹೇಶ್ ತೀಕ್ಷಣ ತಲಾ ಒಂದು ವಿಕೆಟ್ ಕಿತ್ತರು. ಆರ್ಚರ್ ಆರಂಭಿಕ ಎರಡು ಓವರ್‌ಗಳಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು ಉತ್ತಮ ಹಿಡಿತ ಸಾಧಿಸಿದರೂ ಆ ಬಳಿಕದ ಎರಡು ಓವರ್‌ಗಳಲ್ಲಿ ಸರಿಯಾಗಿ ದಂಡಿಸಿಕೊಂಡು ಒಟ್ಟು 30 ರನ್ ಹೊಡೆಸಿಕೊಂಡರು.


ಕೋಲ್ಕತಾ: ಆ್ಯಂಡ್ರೆ ರಸೆಲ್(57*) ಬ್ಯಾಟಿಂಗ್ ಅಬ್ಬರದ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್(KKR vs RR) ತಂಡ ಐಪಿಎಲ್(IPL 2025)18ನೇ ಆವೃತ್ತಿಯಲ್ಲಿ ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಒಂದು ರನ್ ಅಂತರದಿಂದ ಗೆದ್ದು ಪ್ಲೇ-ಆಫ್ ಆಸೆಯನ್ನು ಜೀವಂತ ಉಳಿಸಿಕೊಂಡಿದೆ. ಜತೆಗೆ ಅಂಕಪಟ್ಟಿಯಲ್ಲಿ ಲಕ್ನೋ ತಂಡವನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಟೂರ್ನಿಯಲ್ಲಿ 9ನೇ ಸೋಲು ಅನುಭವಿಸಿದ ರಾಜಸ್ಥಾನ್ 8ನೇ ಸ್ಥಾನದಲ್ಲೇ ಮುಂದುವರಿಯಿತು.
ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗೆ 206 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ವಿರೋಚಿತ ಸೋಲು ಕಂಡಿತು.
ಚೇಸಿಂಗ್ ವೇಳೆ ರಾಜಸ್ಥಾನ್ ಆರಂಭಿಕ ಆಘಾತ ಎದುರಿಸಿತು. 8 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಸೂರ್ಯವಂಶಿ(4) ಮತ್ತು ಕುನಾಲ್ ಸಿಂಗ್ ರಾಥೋಡ್(0) ವಿಕೆಟ್ ಕಳೆದುಕೊಂಡರು. ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಪರಾಗ್ ಮತ್ತು ಜೈಸ್ವಾಲ್ ನಿಂತು ಆಡುವ ಮೂಲಕ ಇನ್ನೇನು ತಂಡಕ್ಕೆ ಆಸರೆಯಾಗುತ್ತಾರೆ ಎನ್ನುವಷ್ಟರಲ್ಲಿ ಜೈಸ್ವಾಲ್(34) ವಿಕೆಟ್ ಕೂಡ ಬಿತ್ತು.
ಪರಾಗ್ ಏಕಾಂಗಿ ಹೋರಾಟ
ಜೈಸ್ವಾಲ್ ವಿಕೆಟ್ ಬೀಳುತ್ತಿದ್ದಂತೆ ರಾಜಸ್ಥಾನ್ ನಾಟಕೀಯ ಕುಸಿತ ಕಂಡಿತು. ವನಿಂದು ಹಸರಂಗ ಮತ್ತು ಧ್ರುವ ಜುರೇಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಒಂದೆಡೆ ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ಮೂಲಕ ಕೆಕೆಆರ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ರಿಯಾನ್ ಪರಾಗ್ 45 ಎಸೆತಗಳಿಂದ 95 ರನ್ ಬಾರಿಸಿದರು. ಅವರ ಈ ಅಬ್ಬರದ ಬ್ಯಾಟಿಂಗ್ ಇನಿಂಗ್ಸ್‌ನಲ್ಲಿ ಬರೋಬ್ಬರಿ 8 ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡಿತ್ತು. ಇದರಲ್ಲಿ 5 ಸಿಕ್ಸರ್ ಮೊಯಿನ್ ಅಲಿ ಅವರ ಒಂದೇ ಓವರ್‌ನಲ್ಲಿ ದಾಖಲಾಗಿತ್ತು. ಶಿಮ್ರಾನ್ ಹೆಟ್‌ಮೇರ್(29) ರನ್ ಗಳಿಸಿದರು.
ಅಂತಿಮ ಓವರ್‌ನಲ್ಲಿ ಸಿಡಿದು ನಿಂತ ಶುಭಂ ದುಬೆ ಶಕ್ತಿ ಮೀರಿ ಬ್ಯಾಟಿಂಗ್ ನಡೆಸುವ ಮೂಲಕ ರಾಜಸ್ಥಾನ್‌ಗೆ ಗೆಲುವಿನ ಆಸೆ ಹುಟ್ಟಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಒಂದು ಎಸೆತಕ್ಕೆ ಮೂರು ರನ್ ಬೇಕಿದ್ದಾಗ ಜೋಫ್ರ ಆರ್ಚರ್ ರನೌಟ್ ಆಗಿ ಒಂದು ರನ್ ಅಂತರದಿಂದ ತಂಡ ಸೋಲು ಕಂಡಿತು. ಕೆಕೆಆರ್ ಉತ್ತಮ ಬೌಲಿಂದದ ದಾಳಿ ನಡೆಸಿದ ಮೊಯಿನ್ ಅಲಿ, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಕಿತ್ತರು.
ರಸೆಲ್ ಅಬ್ಬರ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಕೆಕೆಆರ್ ಪರ ವಿಂಡೀಸ್‌ನ ಸ್ಫೋಟಕ ಬ್ಯಾಟರ್ ಆ್ಯಂಡ್ರೆ ರಸೆಲ್ 25 ಎಸೆತಗಳಿಂದ 6 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ ಅಜೇಯ 57 ರನ್ ಬಾರಿಸಿ 2025ರ ಐಪಿಎಲ್‌ನಲ್ಲಿ ಮೊದಲ ಅರ್ಧಶತಕ ಸಿಡಿಸಿ ಲಯಕ್ಕೆ ಮರಳಿದರು. ಉಳಿದಂತೆ ಅಂಗ್‌ಕ್ರಿಶ್ ರಘುವಂಶಿ 44, ನಾಯಕ ಅಜಿಂಕ್ಯ ರಹಾನೆ 30 ರನ್ ಕೊಡುಗೆ ಸಲ್ಲಿಸಿದರು. ಅಂತಿಮ ಹಂತದಲ್ಲಿ ಸಿಡಿದು ನಿಂತ ರಿಂಕು ಸಿಂಗ್ 6 ಎಸೆತಗಳಿಂದ ಅಜೇಯ 19 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು. ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್(35) ರನ್ ಗಳಿಸಿದರು.
ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ಯಧುವೀರ್ ಸಿಂಗ್ ಮತ್ತು ಮಹೇಶ್ ತೀಕ್ಷಣ ತಲಾ ಒಂದು ವಿಕೆಟ್ ಕಿತ್ತರು. ಆರ್ಚರ್ ಆರಂಭಿಕ ಎರಡು ಓವರ್‌ಗಳಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು ಉತ್ತಮ ಹಿಡಿತ ಸಾಧಿಸಿದರೂ ಆ ಬಳಿಕದ ಎರಡು ಓವರ್‌ಗಳಲ್ಲಿ ಸರಿಯಾಗಿ ದಂಡಿಸಿಕೊಂಡು ಒಟ್ಟು 30 ರನ್ ಹೊಡೆಸಿಕೊಂಡರು.