ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಪಾಕಿಸ್ತಾನದ 12ನೇ ಅತಿದೊಡ್ಡ ನಗರ ಬಹವಾಲ್ಪುರದ ಮೇಲೆ ದಾಳಿ ನಡೆಸಿದ್ದು ಯಾಕೆ ಗೊತ್ತೇ?

ಭಾರತೀಯ ಸೇನೆಯು ಈ ಬಾರಿ ಪಾಕಿಸ್ತಾನದ 12ನೇ ಅತಿದೊಡ್ಡ ನಗರ ಮತ್ತು ಜೈಶ್-ಎ-ಮೊಹಮ್ಮದ್ ನ ಪ್ರಮುಖ ಕಾರ್ಯಾಚರಣೆ ಕೇಂದ್ರವಾದ ಬಹವಾಲ್ಪುರದ ಮೇಲೆ ದಾಳಿ ನಡೆಸಿದೆ. ಬಹವಾಲ್ಪುರದ ಮೇಲೆ ಭಾರತೀಯ ಸೇನೆ ದಾಳಿ ನಡೆಸಲು ಅತ್ಯಂತ ಪ್ರಮುಖ ಕಾರಣವೂ ಇದೆ. ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ನಡೆದ ಹಲವಾರು ಉಗ್ರರ ದಾಳಿಗಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಗುಂಪಿನ ಪ್ರಮುಖ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತಿದೆ.

ಬಹವಾಲ್ಪುರವನ್ನು ಭಾರತೀಯ ಸೇನೆ ಟಾರ್ಗೆಟ್ ಮಾಡಿದ್ದು  ಯಾಕೆ ?

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಬುಧವಾರ ಮುಂಜಾನೆ ನಡೆದ ಆಪರೇಷನ್‌ ಸಿಂಧೂರ್‌ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದೊಳಗಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ರಾತ್ರಿಯಿಡೀ ಸಂಘಟಿತ ದಾಳಿಗಳನ್ನು ನಡೆಸಿದೆ. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೈಬಾದ (LeT) ಮೂಲಸೌಕರ್ಯವನ್ನೇ ಗುರಿಯಾಗಿ ಮಾಡಲಾಗಿತ್ತು. 2019ರ ಬಾಲಾಕೋಟ್ ವೈಮಾನಿಕ ದಾಳಿಯ ಅನಂತರ ಭಾರತ ಗಡಿಯಾಚೆಗೆ ಉಗ್ರರ ವಿರುದ್ಧ ನಡೆಸಿರುವ ಹೆಚ್ಚು ವ್ಯಾಪಕ ಕ್ರಮಗಳಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ಒಂದಾಗಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಉಗ್ರರ ಚಟುವಟಿಕೆಯ ಕೇಂದ್ರಗಳಾಗಿದ್ದ ಕೋಟ್ಲಿ, ಮುರಿಡ್ಕೆ ಮತ್ತು ಬಹವಾಲ್ಪುರ ಸೇರಿದಂತೆ ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಇದರಿಂದ ವ್ಯಾಪಕ ಹಾನಿಯಾಗಿದೆ ಎಂದು ಪಾಕಿಸ್ತಾನ ಅಧಿಕೃತವಾಗಿ ಒಪ್ಪಿಕೊಂಡಿದೆ.

ಬಹವಾಲ್ಪುರದ ಮೇಲೆ ದಾಳಿ ನಡೆಸಿದ್ದು ಏಕೆ?

ಈ ಬಾರಿ ಭಾರತೀಯ ಸೇನೆಯು ಪಾಕಿಸ್ತಾನದ 12ನೇ ಅತಿದೊಡ್ಡ ನಗರ ಮತ್ತು ಜೈಶ್‌ನ ಪ್ರಮುಖ ಕಾರ್ಯಾಚರಣೆ ಕೇಂದ್ರವಾದ ಬಹವಾಲ್ಪುರದ ಮೇಲೆ ದಾಳಿ ನಡೆಸಿದೆ. ಬಹವಾಲ್ಪುರದ ಮೇಲೆ ಭಾರತೀಯ ಸೇನೆ ದಾಳಿ ನಡೆಸಲು ಅತ್ಯಂತ ಪ್ರಮುಖ ಕಾರಣವೂ ಇದೆ.

ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ನಡೆದ ಹಲವಾರು ಉಗ್ರರ ದಾಳಿಗಳಿಗೆ ಕಾರಣವಾದ ಜೈಶ್-ಎ-ಮೊಹಮ್ಮದ್ ಗುಂಪಿನ ಪ್ರಮುಖ ಕೇಂದ್ರವಾಗಿ ಇದು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಲಾಹೋರ್‌ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ನ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್‌ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ಹೊಂದಿದೆ. ಇದನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದು ಕರೆಯಲಾಗುತ್ತದೆ.

ಸುಮಾರು 18 ಎಕರೆ ವಿಸ್ತೀರ್ಣವಿರುವ ಈ ಕೇಂದ್ರ ಮಸೀದಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮದರಸಾ, ಜಿಮ್ನಾಷಿಯಂ, ಈಜುಕೊಳ ಮತ್ತು ಅಶ್ವಶಾಲೆಗಳನ್ನು ಹೊಂದಿದೆ. ಇಲ್ಲಿ ಸಾರ್ವಜನಿಕವಾಗಿ ಧಾರ್ಮಿಕ ಉಪನ್ಯಾಸಗಳನ್ನು ನಡೆಸಲಾಗುತ್ತದೆ ಎಂದು ತೋರಿಸಿಕೊಂಡರೂ 2011 ರ ಬಳಿಕ ಇಲ್ಲಿ ಸದ್ದಿಲ್ಲದೆ ಉಗ್ರರಿಗೆ ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕೆ ಜೆಇಎಂನ ಸಂಘಟನೆಯಾದ ಅಲ್-ರಹಮತ್ ಟ್ರಸ್ಟ್ ಮೂಲಕ ಹಣವನ್ನು ಒದಗಿಸಲಾಗುತ್ತಿದೆ.

ಬಹವಾಲ್ಪುರದ ಜಾಮಿಯಾ ಮಸೀದಿ ಕ್ಯಾಂಪಸ್ ಪಾಕಿಸ್ತಾನದ 31 ಕಾರ್ಪ್ಸ್ ಮಿಲಿಟರಿ ಕಂಟೋನ್ಮೆಂಟ್‌ನಿಂದ ಕೆಲವೇ ಕೆಲವು ಮೈಲುಗಳಷ್ಟು ದೂರದಲ್ಲಿದೆ. ಇದಕ್ಕೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೆಂಬಲ ನೀಡುತ್ತಿರುವುದಕ್ಕೆ ದಾಖಲೆಗಳೂ ಇವೆ. ಇದಕ್ಕೆ ಪುರಾವೆ ಮತ್ತು ಸಂಬಂಧಗಳ ಬೆಳವಣಿಗೆ ಬಗ್ಗೆ ಸಾಕ್ಷಿಯನ್ನು ಉಪಗ್ರಹ ಚಿತ್ರಣವು ತೋರಿಸಿದೆ. ಹೀಗಾಗಿ ಭಾರತೀಯ ಸೇನೆ ನಡೆಸಿರುವ ಈ ದಾಳಿ ಅತ್ಯಂತ ಮಹತ್ವದ ಕಾರ್ಯಾಚರಣೆಯಲ್ಲಿ ಒಂದಾಗಿದೆ.

azar

ಮಸೂದ್ ಅಜರ್ ಯಾರು?

ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಗೆ ಪ್ರಮುಖ ಕಾರಣ ಜೈಶ್-ಎ-ಮೊಹಮ್ಮದ್ ನ ಸಂಸ್ಥಾಪಕ ಮೌಲಾನಾ ಮಸೂದ್ ಅಜರ್. ಈತ 1968ರಲ್ಲಿ ಬಹಾವಲ್ಪುರದಲ್ಲಿ ಜನಿಸಿದ್ದನು. 1994ರಲ್ಲಿ ಭಾರತೀಯ ಅಧಿಕಾರಿಗಳಿಂದ ಬಂಧಿಸಲ್ಪಡುವ ಮೊದಲು ಹರ್ಕತ್-ಉಲ್-ಮುಜಾಹಿದ್ದೀನ್‌ನಲ್ಲಿ ಧರ್ಮಗುರುವಾಗಿದ್ದನು. 1999ರಲ್ಲಿ ಕಂದಹಾರ್‌ನಲ್ಲಿ ಐಸಿ -814 ವಿಮಾನ ಅಪಹರಣದ ಒತ್ತೆಯಾಳುಗಳಿಗೆ ಬದಲಾಗಿ ಆತನನ್ನು ಬಿಡುಗಡೆ ಮಾಡಿದ ಬಳಿಕ ಆತ ವಿಶ್ವದ ಪ್ರಮುಖ ಉಗ್ರರ ಪಟ್ಟಿಯಲ್ಲಿ ಗುರುತಿಸಿಕೊಂಡನು.

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕು ಎನ್ನುವ ಗುರಿಯಲ್ಲಿ 2000ದ ಜನವರಿಯಲ್ಲಿ ಕರಾಚಿಯಲ್ಲಿ ಜೈಶ್-ಎ-ಮೊಹಮ್ಮದ್ ಅನ್ನು ಮಸೂದ್ ಅಜರ್ ಪ್ರಾರಂಭಿಸಿದ್ದನು. ಆದರೆ ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಪಾಕಿಸ್ತಾನ ಸರ್ಕಾರ 2002ರಲ್ಲಿ ಜೆಇಎಂ ಅನ್ನು ನಿಷೇಧಿಸಿತು. ಆದರೆ ಐಎಸ್‌ಐ ಬೆಂಬಲ ಮತ್ತು ಅಂಗಸಂಸ್ಥೆ ಟ್ರಸ್ಟ್‌ಗಳಿಂದ ಬರುತ್ತಿರುವ ಹಣದಿಂದಾಗಿ ಈ ಗುಂಪು ಕಾರ್ಯನಿರ್ವಹಿಸುವುದನ್ನು ಇಂದಿಗೂ ಮುಂದುವರೆಸಿದೆ ಎನ್ನಲಾಗತ್ತದೆ.

ಭಾರತದ ಮೇಲೆ ಜೈಶ್ ನ ಭಯೋತ್ಪಾದಕ ದಾಳಿಗಳು

ಭಾರತದ ಮೇಲೆ ನಡೆದ ಹಲವಾರು ದಾಳಿಗಳಲ್ಲಿ ಜೆಇಎಂ ಕೈವಾಡವಿರುವುದು ಸ್ಪಷ್ಟವಾಗಿದೆ. 2000ದ ಏಪ್ರಿಲ್ ತಿಂಗಳಲ್ಲಿ ಶ್ರೀನಗರದ 15 ಕಾರ್ಪ್ಸ್ ಪ್ರಧಾನ ಕಚೇರಿಯ ಹೊರಗೆ ಜೈಶ್-ಎ-ಮೊಹಮ್ಮದ್ ನ ಉಗ್ರರು ನಾಲ್ವರು ಭಾರತೀಯ ಸೈನಿಕರನ್ನು ಕೊಂದು ಹಾಕಿದರು.

2001ರ ಅಕ್ಟೋಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

2001ರ ಡಿಸೆಂಬರ್ ತಿಂಗಳಲ್ಲಿ ಎಲ್‌ಇಟಿ ಸಹಯೋಗದೊಂದಿಗೆ ಜೈಶ್-ಎ-ಮೊಹಮ್ಮದ್ ಭಾರತದ ಸಂಸತ್ತಿನ ಮೇಲೆ ದಾಳಿ ನಡೆ 14 ಮಂದಿಯನ್ನು ಕೊಂದು ಹಾಕಿತ್ತು.

2016ರ ಜನವರಿಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಪಠಾಣ್‌ಕೋಟ್ ವಾಯುನೆಲೆಯ ಮೇಲೆ ದಾಳಿ ಮಾಡಿತ್ತು. ಇದರಲ್ಲಿ ಮೂವರು ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು.

2016ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಉರಿ ದಾಳಿಯಲ್ಲಿ ಜೆಇಎಂ ಭಯೋತ್ಪಾದಕರು 19 ಸೈನಿಕರನ್ನು ಕೊಂದರು. ಇದು ಪಾಕಿಸ್ತಾನದ ವಿರುದ್ಧ ಭಾರತ ಸರ್ಜಿಕಲ್ ಸ್ಟ್ರೈಕ್‌ ನಡೆಸಲು ಕಾರಣವಾಯಿತು.

2019ರ ಫೆಬ್ರವರಿ ತಿಂಗಳಲ್ಲಿ ನಡೆದ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಸಿಆರ್‌ಪಿಎಫ್ ಜವಾನರು ಮೃತಪಟ್ಟಿದ್ದರು. ಇದರಿಂದ ಭಾರತೀಯ ಸೇನೆ ಪಾಕಿಸ್ತಾನದ ಬಾಲಕೋಟ್ ಮೇಲೆ ವಾಯುದಾಳಿ ನಡೆಸಿತ್ತು. ಬಳಿಕ 2019ರ ಮೇ ತಿಂಗಳಲ್ಲಿ ವಿಶ್ವಸಂಸ್ಥೆಯು ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿತು.

ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯನ್ನು ಕಾಶ್ಮೀರ ಟೈಗರ್ಸ್ ಅಥವಾ ಕಾಶ್ಮೀರ ಫ್ರೀಡಂ ಆರ್ಮಿ ಎಂಬ ಹೆಸರಿನಲ್ಲಿ ಲಷ್ಕರ್ ಎ ತೈಬಾದ ಬೆಂಬಲದೊಂದಿಗೆ ಜೈಶ್-ಎ-ಮೊಹಮ್ಮದ್ ಆಯೋಜಿಸಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Operation Sindoor: ಉಗ್ರರ ನೆಲೆ ಧ್ವಂಸ- ರಾಹುಲ್‌ ಗಾಂಧಿ ಫಸ್ಟ್‌ ರಿಯಾಕ್ಷನ್‌ ಇಲ್ಲಿದೆ

ಜೈಶ್-ಎ-ಮೊಹಮ್ಮದ್ ನಿರ್ವಹಿಸುತ್ತಿವುದು ಯಾರು?

ಪ್ರಸ್ತುತ ಜೈಶ್-ಎ-ಮೊಹಮ್ಮದ್ ಸಂಘಟನೆಯ ನಾಯಕತ್ವವು ಅಜರ್‌ನ ಸಹೋದರ ಮತ್ತು ಸಹಾಯಕರು ನಿರ್ವಹಿಸುತ್ತಿದ್ದಾರೆ. ಅಜರ್ ಸಾಂಕೇತಿಕ ಮುಖ್ಯಸ್ಥನಾಗಿದ್ದು, ಅನಾರೋಗ್ಯದ ಕಾರಣದಿಂದ ಆತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. 2024ರ ಜೂನ್ ನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಆತ ಕೊನೆಯ ಬಾರಿಗೆ ಕಾಣಿಸಿಕೊಂಡನು.

ಜೈಶ್-ಎ-ಮೊಹಮ್ಮದ್ ನಾಯಕತ್ವವನ್ನು ಈಗ ಆತನ ಸಹೋದರ ಅಬ್ದುಲ್ ರೌಫ್ ಅಜರ್ ಕೈಯಲ್ಲಿದೆ. ಇತನೊಂದಿಗೆ ಜೈಶ್-ಎ-ಮೊಹಮ್ಮದ್ ನ ಹಿರಿಯ ಕಾರ್ಯಕರ್ತರಾದ ಶಾ ನವಾಜ್ ಖಾನ್ (ಅಕಾ ಸಜ್ಜಿದ್ ಜಿಹಾದಿ) ಮತ್ತು ಮೌಲಾನಾ ಮುಫ್ತಿ ಮೊಹಮ್ಮದ್ ಅಸ್ಗರ್‌ ಇದರ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇವರು ಮುಜಫರಾಬಾದ್, ಖೈಬರ್ ಪಖ್ತುನ್ಖ್ವಾ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಾದ್ಯಂತ 300ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡಿರುವ ತಂಡಕ್ಕೆ ನೇಮಕಾತಿ ಮತ್ತು ತರಬೇತಿಯನ್ನು ನಡೆಸುತ್ತಾರೆ.

ಬಹಾವಲ್ಪುರ್ ಕ್ಯಾಂಪಸ್ ಅನ್ನು 2019ರಲ್ಲಿ ಸ್ವಾಧೀನಪಡಿಸಿಕೊಂಡು ಜೈಶ್-ಎ-ಮೊಹಮ್ಮದ್ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವುದಾಗಿ ಪಾಕಿಸ್ತಾನ ಹೇಳಿಕೊಂಡಿದ್ದರೂ ಇದು ಕೇವಲ ಹೇಳಿಕೆ ಮಾತ್ರ ಎಂದು ಭಾರತೀಯ ಗುಪ್ತಚರ ಇಲಾಖೆ ಹೇಳಿದೆ. ಮಸೂದ್ ಅಜರ್ ಪಾಕಿಸ್ತಾನಿ ಮಿಲಿಟರಿ ರಕ್ಷಣೆಯಲ್ಲಿಯೇ ಇದ್ದಾನೆ ಎನ್ನಲಾಗುತ್ತಿದೆ.