Pahalgam Satellite Images: ಉಗ್ರರ ದಾಳಿಗಿಂತ 2 ತಿಂಗಳ ಹಿಂದೆಯೇ ಪಹಲ್ಗಾಮ್‌ನ ಸ್ಯಾಟಲೈಟ್ ಫೋಟೋಗೆ ಡಿಮ್ಯಾಂಡ್ ಏಕಾಏಕಿ ಹೆಚ್ಚಾಗಿತ್ತು!
Pahalgam Terror Attack: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿರುವ ಈ ಭೀಕರ ಘಟನೆಗೂ ಎಂಟು ವಾರಗಳ ಹಿಂದೆ, ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯೊಂದು ಪಹಲ್ಗಾಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳಿಗಾಗಿ(Pahalgam Satellite Images) ಬಂದಿರುವ ಆರ್ಡರ್‌ಗಳಲ್ಲಿ ಏಕಾಏಕಿ ಹೆಚ್ಚಳ ಗಮನಿಸಿತ್ತು.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ(Pahalgam Terror Attack) ಕೆಲವು ದಿನಗಳ ಹಿಂದೆ ಪ್ರವಾಸಿಗರನ್ನುಗುರಿಯಾಗಿಸಿ ಉಗ್ರರು ನಡೆಸಿದ ನರಮೇಧಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಂಗತಿಯೊಂದು ಹೊರಬಿದ್ದಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು ಹತ್ಯೆ ಮಾಡಿರುವ ಈ ಭೀಕರ ಘಟನೆಗೂ ಎಂಟು ವಾರಗಳ ಹಿಂದೆ, ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯೊಂದು ಪಹಲ್ಗಾಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳಿಗಾಗಿ(Pahalgam Satellite Images) ಬಂದಿರುವ ಆರ್ಡರ್‌ಗಳಲ್ಲಿ ಏಕಾಏಕಿ ಹೆಚ್ಚಳವನ್ನು ಗಮನಿಸಿತ್ತು. ಇದು ಅನುಮಾನಕ್ಕೆ ಎಡೆಮಾಡಿಕೊಡುಂತಹ ಬೆಳವಣಿಗೆ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಫೆಬ್ರವರಿ 2 ಮತ್ತು 22ರ ನಡುವೆ, ಮ್ಯಾಕ್ಸರ್ ಟೆಕ್ನಾಲಜೀಸ್‌ಗೆ ಪಹಲ್ಗಾಮ್‌ನ ಸ್ಯಾಟಲೈಟ್ ಫೋಟೋಗಾಗಿ ಕನಿಷ್ಠ 12 ಆರ್ಡರ್‌ಗಳು ಬಂದಿದ್ದವು. ಇದು ಅಸಮಾನ್ಯ ಬೆಳವಣಿಗೆ ಆಗಿದ್ದು, ಇದು ವಿನಂತಿಯನ್ನು ಮಾಡಿದ ಜನರು ಅಥವಾ ಕಂಪನಿಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಮ್ಯಾಕ್ಸರ್‌ನ ಕ್ಲೈಂಟ್‌ಗಳಲ್ಲಿ ವಿಶ್ವಾದ್ಯಂತ ಸರ್ಕಾರ ಮತ್ತು ರಕ್ಷಣಾ ಸಂಸ್ಥೆಗಳು ಸೇರಿವೆ. ಮ್ಯಾಕ್ಸರ್ ಯುಎಸ್‌ನಲ್ಲಿ ಫೆಡರಲ್ ಅಪರಾಧಗಳಿಗೆ ಸಂಬಂಧಿಸಿದ ಪಾಕಿಸ್ತಾನ ಮೂಲದ ಜಿಯೋ-ಸ್ಪೇಷಿಯಲ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡ ಸ್ವಲ್ಪ ಸಮಯದ ನಂತರ, ಜೂನ್ 2024 ರಲ್ಲಿ ಪಹಲ್ಗಾಮ್ ಉಪಗ್ರಹ ಚಿತ್ರಗಳ ಬೇಡಿಕೆಯು ಅವರ ಪೋರ್ಟಲ್‌ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು ಎಂಬ ಮಾಹಿತಿ ಹೊರಬಿದ್ದಿದೆ.
ಆದಾಗ್ಯೂ, ಪಾಕಿಸ್ತಾನಿ ಸಂಸ್ಥೆಯಾದ ಬಿಸಿನೆಸ್ ಸಿಸ್ಟಮ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ (ಬಿಎಸ್‌ಐ) ಈ ಚಿತ್ರಗಳಿಗೆ ಆರ್ಡರ್‌ಗಳನ್ನು ನೀಡಿದೆ ಎಂದು ತೋರಿಸಲು ಇನ್ನೂ ಯಾವುದೇ ಪುರಾವೆಗಳಿಲ್ಲ. ಆದರೆ ರಕ್ಷಣಾ ವಿಶ್ಲೇಷಕರು, ತಜ್ಞರು ಮತ್ತು ವಿಜ್ಞಾನಿಗಳ ಪ್ರಕಾ ಕಂಪನಿಯ ಸಂಸ್ಥಾಪಕ ಒಬೈದುಲ್ಲಾ ಸೈಯದ್ ಅವರ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಅನುಮಾನ ಸೃಷ್ಟಿಸುವ ಮಹತ್ವದ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಫೆಬ್ರವರಿಯಲ್ಲಿ, ಪಹಲ್ಗಾಮ್‌ನ ಸ್ಯಾಟಲೈಟ್ ಫೋಟೋಗಾಗಿ ಬೇಡಿಕೆ ಹೆಚ್ಚಾಗಿತ್ತು. ಫೆ. 12, 15, 18, 21 ಮತ್ತು 22 ರಂದು ಖರೀದಿಗಳನ್ನು ಮಾಡಲಾಯಿತು. ಮಾರ್ಚ್‌ನಲ್ಲಿ ಯಾವುದೇ ಆರ್ಡರ್ ಇರಲಿಲ್ಲ. ಆ ನಂತರ ಏಪ್ರಿಲ್ 12 ರಂದು ಅಂದರೆ ಭಯೋತ್ಪಾದಕ ದಾಳಿಗೆ ಹತ್ತು ದಿನಗಳ ಮೊದಲು ಮತ್ತೆ ಸ್ಯಾಟಲೈಟ್ ಫೋಟೋಗಾಗಿ ಆರ್ಡರ್ ಬಂದಿತ್ತು ಎನ್ನಲಾಗಿದೆ. ಉಗ್ರ ದಾಳಿಯ ನಂತರ, ಪ್ರದೇಶದ ಉಪಗ್ರಹ ಚಿತ್ರಗಳಿಗಾಗಿ ಏಪ್ರಿಲ್ 24 ಮತ್ತು 29 ರಂದು ಎರಡು ಆರ್ಡರ್ ಬಂದಿತ್ತು. ಅದು ಕೊನೆಯ ಆರ್ಡರ್ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಆಪರೇಷನ್ ಸಿಂದೂರ್ ದಿನವೇ ಹುಟ್ಟಿದ ಮಗುವಿಗೆ ಸಿಂದೂರಿ ಎಂದು ಹೆಸರು!
ಉಪಗ್ರಹ ಫೋಟೋಗಳ ಬೆಲೆ ಎಷ್ಟು?
ಪ್ರತಿ ಉಪಗ್ರಹ ಚಿತ್ರದ ಆರಂಭಿಕ ಬೆಲೆ 3 ಲಕ್ಷ ರೂ.ರೆಸಲ್ಯೂಶನ್ ಹೆಚ್ಚಾದಂತೆ ದರವೂ ಹೆಚ್ಚಾಗುತ್ತದೆ. ಮ್ಯಾಕ್ಸರ್ ಟೆಕ್ನಾಲಜೀಸ್ ತನ್ನ ಉಪಗ್ರಹಗಳಿಗೆ ಹೆಸರುವಾಸಿಯಾಗಿದ್ದು, ಇವು 15 ಸೆಂ.ಮೀ ನಿಂದ 30 ಸೆಂ.ಮೀ ವರೆಗಿನ ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಹೈ-ಡೆಫಿನಿಷನ್ ಚಿತ್ರಗಳನ್ನು ನೀಡುತ್ತದೆ. ಚಿಕ್ಕ ಪಿಕ್ಸೆಲ್ ಗಾತ್ರಗಳು ಸ್ಪಷ್ಟ ಚಿತ್ರಗಳನ್ನು ನೀಡುತ್ತವೆ. ಭಾರತದಲ್ಲಿ, ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಂತಹ ಸರ್ಕಾರಿ ಸಂಸ್ಥೆಗಳು ಮ್ಯಾಕ್ಸರ್ ಸೇವೆಗಳ ಕ್ಲೈಂಟ್‌ಗಳು. ಹೆಚ್ಚುವರಿಯಾಗಿ, ಕನಿಷ್ಠ 11 ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳು ಮತ್ತು ಕಂಪನಿಗಳು ಮ್ಯಾಕ್ಸರ್ ಟೆಕ್ನಾಲಜೀಸ್‌ನ ಗ್ರಾಹಕರು ಮತ್ತು ಪಾಲುದಾರರಾಗಿದ್ದಾರೆ.