Operation Sindoor: ಭಾರತದ ಪ್ರತೀಕಾರಕ್ಕೆ ನಲುಗಿದ ಭಯೋತ್ಪಾದಕರು; ಉಗ್ರ ಮಸೂದ್ ಅಝರ್ ಕುಟುಂಬದ 14 ಮಂದಿ ಬಲಿ
ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕವಾಗಿ ಭಾರತ ಆಪರೇಷನ್ (Operation Sindoor) ಸಿಂಧೂರದ ಮೂಲಕ ವೈಮಾನಿಕ ದಾಳಿ ನಡೆಸಿದೆ. ಉಗ್ರ ಮಸೂದ್ ಅಝರ್‌ನ ಕುಟುಂಬಸ್ಥರು ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತನ ಸಹೋದರ, ಸಹೋದರಿಯರು ಸೇರಿದಂತೆ ಒಟ್ಟು 14 ಜನರು ಸಾವನ್ನಪ್ಪಿದ್ದಾರೆ.


ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕವಾಗಿ ಭಾರತ ಆಪರೇಷನ್ ಸಿಂಧೂರದ (Operation Sindoor) ಮೂಲಕ ವೈಮಾನಿಕ ದಾಳಿ ನಡೆಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಜೆಇಎಂನ ಪ್ರಬಲ ಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿಗಳನ್ನು ನಡೆಸಲಾಗಿದ್ದು, ಪ್ರತಿ ಸ್ಥಳದಲ್ಲಿ ಅಂದಾಜು 25–30 ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಉಗ್ರ ಮಸೂದ್ ಅಝರ್‌ನ ಕುಟುಂಬಸ್ಥರು ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತನ ಸಹೋದರ, ಸಹೋದರಿಯರು ಸೇರಿದಂತೆ ಒಟ್ಟು 14 ಜನರು ಸಾವನ್ನಪ್ಪಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಅಝರ್ ಎಲ್ಲಿದ್ದ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಈ ಸುದ್ದಿಯನ್ನೂ ಓದಿ: Operation Sindoor: ನೋಡ ನೋಡುತ್ತಿದ್ದಂತೆ ಕ್ಷಿಪಣಿಗಳ ಎಂಟ್ರಿ; ವೈಮಾನಿಕ ದಾಳಿಗೆ ಬೆಚ್ಚಿದ ಪಾಕ್, ಹೇಗಿತ್ತು ಗೊತ್ತಾ ಆಪರೇಷನ್ ಸಿಂಧೂರ್? ದೃಶ್ಯಗಳು ವೈರಲ್
ಏತನ್ಮಧ್ಯೆ, ಪಾಕಿಸ್ತಾನ ಇದೀಗ ಭಾರತಕ್ಕೆ ಶರಣಾಗುವಂತೆ ಕಾಣಿಸುತ್ತಿದೆ. ಭಾರತದ ರಾಜತಾಂತ್ರಿಕ ನಡೆಗೆ ಬೆದರಿದ್ದ ಪಾಕ್ ಇದೀಗ ವೈಮಾನಿಕ ದಾಳಿಗೆ ಬೆಚ್ಚಿ ಬಿದ್ದಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ , ಭಾರತ ತನ್ನ ಕಾರ್ಯಾಚರಣೆಯನ್ನು ಹಿಂದೆಗೆದುಕೊಂಡರೆ ನಾವು ಸುಮ್ಮನಿರುತ್ತೇವೆ. ಮುಂದಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಭಾರತ ನಮ್ಮ ನೆಲದ ಮೇಲೆ ದಾಳಿ ನಡೆಸಿದೆ. ಅವರು ತಮ್ಮ ಕಾರ್ಯಾಚರಣೆಯನ್ನು ಹಿಂಪಡೆದರೆ, ನಾವೂ ಹಿಂದೆ ಸರಿಯುತ್ತೇವೆ. ನಾವೂ ಎಂದಿಗೂ ದಾಳಿ ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ನಮ್ಮ ಮೇಲೆ ದಾಳಿಯಾದರೆ ನಾವು ಪ್ರತಿಕ್ರಿಯಿಸುತ್ತೇವೆ. ಇದೆಲ್ಲಾ ಶಮನವಾಗಬೇಕೆಂದರೆ, ಭಾರತ ಪ್ರತೀಕಾರದ ದಾಹವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ದಾಳಿ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಅಪರಾಧಿಗಳನ್ನು ನ್ಯಾಯಾಂಗ ಕಟಕಟೆಗೆ ಕರೆತರುವುದು ಅತ್ಯವಶ್ಯಕ. ಕಾಶ್ಮೀರದಲ್ಲಿ ಅಬಿವೃದ್ಧಿ ತಡೆಯುವುದೇ ಪಾಕಿಸ್ತಾನದ ಗುರಿ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದು ನಮ್ಮ ಕರ್ತವ್ಯ. ಭಾರತಕ್ಕೆ ಮತ್ತೆ ಉಗ್ರರು ನುಸುಳದಂತೆ ತಡೆಯವ ನಿಟ್ಟಿನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.