2025ರ ಐಪಿಎಲ್ ಇನ್ನುಳಿದ ಭಾಗಕ್ಕೆ ಅಲಭ್ಯರಾಗಲಿರುವ ಸ್ಟಾರ್ ಆಟಗಾರರು!
ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮೇ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಣ ಪಂದ್ಯದ ಮೂಲಕ ಪುನರಾರಂಭವಾಗಲಿದೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಾಗೂ ಅಂತಾರಾಷ್ಟ್ರೀಯ ಸರಣಿಗಳ ಕಾರಣ ಹಲವು ಸ್ಟಾರ್ ವಿದೇಶಿ ಆಟಗಾರರು ಐಪಿಎಲ್ ಟೂರ್ನಿಯ ಇನ್ನುಳಿದ ಭಾಗಕ್ಕೆ ಅಲಭ್ಯರಾಗಲಿದ್ದಾರೆ.



ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಐಪಿಎಲ್
ಭಾರತ ಹಾಗೂ ಪಾಕಿಸ್ತಾನ ನಡುವಣ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ವಿದ್ವಿಗ್ನ ಪರಿಸ್ಥಿತಿಯ ಕಾರಣದಿಂದಾಗಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಪಂದ್ಯಗಳು ಒಂದು ವಾರದ ಮಟ್ಟಿಗೆ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. ಮೇ 17 ರಂದು ಟೂರ್ನಿಯು ಇನ್ನುಳಿದ ಪಂದ್ಯಗಳು ಪುನರಾರಂಭವಾಗಲಿವೆ

ಐಪಿಎಲ್ ಇನ್ನುಳಿದ ಭಾಗಕ್ಕೆ ಸ್ಟಾರ್ಗಳ ಅಲಭ್ಯ
ತಮ್ಮ-ತಮ್ಮ ರಾಷ್ಟ್ರೀಯ ತಂಡಗಳ ಪರ ಅಂತಾರಾಷ್ಟ್ರೀಯ ಸರಣಿಗಳನ್ನು ಆಬೇಕಾದ ಪರಿಸ್ಥಿತಿಗೆ ಒಳಗಾಗಿರುವ ವಿಶ್ವದ ಹಲವು ಸ್ಟಾರ್ ಆಟಗಾರರು, ಮೇ 17ರಂದು ಆರಂಭವಾಗಲಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗಕ್ಕೆ ಅಲಭ್ಯರಾಗಲಿದ್ದಾರೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಟೂರ್ನಿಯ ಇನ್ನುಳಿದ ಭಾಗದಲ್ಲಿ ಹಲವು ಸ್ಟಾರ್ ಆಟಗಾರರನ್ನು ಕಳೆದುಕೊಳ್ಳಲಿದೆ. ಮೇ 29ರಂದು ಆರಂಭವಾಗಲಿರುವ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಣ ವೈಟ್ ಸರಣಿಗಳ ಕಾರಣ ಜಾಕೋಬ್ ಬೆಥೆಲ್ ಹಾಗೂ ರೊಮ್ಯಾರಿಯೊ ಶೆಫರ್ಡ್ ಅವರನ್ನು ಕಳೆದುಕೊಂಡರೆ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಕಾರಣ ಆಸೀಸ್ ವೇಗಿ ಜಾಶ್ ಹೇಝಲ್ವುಡ್ ಮತ್ತು ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ ಅವರನ್ನು ಕಳೆದುಕೊಳ್ಳಲಿದೆ.

ಗುಜರಾತ್ ಟೈಟನ್ಸ್
ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡ ಕೂಡ ಕೆಲ ಸ್ಟಾರ್ ಆಟಗಾರರನ್ನು ಕಳೆದುಕೊಳ್ಳಲಿದೆ. ವಿಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಸೀಮಿತ ಓವರ್ಗಳ ಸರಣಿ ಕಾರಣ ಜೋಸ್ ಬಟ್ಲರ್, ಶೆರ್ಫೆನ್ ಋದರ್ಫೋರ್ಡ್ ಅವರನ್ನು ಕಳೆದುಕೊಳ್ಳಲಿದೆ. ಇನ್ನು ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಕಾರಣ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರ ಸೇವೆಯನ್ನು ಕಳೆದುಕೊಳ್ಳಲಿದೆ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್ ತಂಡ ಮೂವರು ಸ್ಟಾರ್ ಆಟಗಾರರ ಸೇವೆಯನ್ನು ಕಳೆದುಕೊಳ್ಳಲಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪೈನಲ್ ಕಾರಣ ಕಾರ್ಬಿನ್ ಬಾಷ್, ರಯಾನ್ ರಿಕೆಲ್ಟನ್ ಅವರನ್ನು ಕಳೆದುಕೊಳ್ಳಲಿದೆ. ಇನ್ನು ವಿಂಡೀಸ್ ಎದುರು ಏಕದಿನ ಸರಣಿಯ ಕಾರಣ ವಿಲ್ ಜ್ಯಾಕ್ಸ್ ಕೂಡ ಮುಂಬೈಗೆ ಅಲಭ್ಯರಾಗಲಿದ್ದಾರೆ.

ಪಂಜಾಬ್ ಕಿಂಗ್ಸ್
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಪಂಜಾಬ್ ಕಿಂಗ್ಸ್ ಕೂಡ ಇಬ್ಬರು ಸ್ಟಾರ್ಗಳನ್ನು ಕಳೆದುಕೊಳ್ಳಲಿದೆ. ದಕ್ಷಿಣ ಆಫ್ರಿಕಾದ ಮಾರ್ಕೊ ಯೆನ್ಸನ್ ಹಾಗೂ ಆಸ್ಟ್ರೇಲಿಯಾ ಜಾಶ್ ಇಂಗ್ಲಿಸ್ ಅವರು ಟೆಸ್ಟ್ ಚಾಂಪಿಯನ್ಷಿಪ್ ಕಾರಣ ಐಪಿಎಲ್ನ ಇನ್ನುಳಿದ ಭಾಗಕ್ಕೆ ಅಲಭ್ಯರಾಗಲಿದ್ದಾರೆ.

ಲಖನೌ ಸೂಪರ್ ಜಯಂಟ್ಸ್
ಲಖನೌ ಸೂಪರ್ ಜಯಂಟ್ಸ್ ತಂಡದ ಏಡೆನ್ ಮಾರ್ಕ್ರಮ್ ಹಾಗೂ ಶಮರ್ ಜೋಸೆಫ್ ಅವರು ಕೂಡ ಟೂರ್ನಿಯ ಇನ್ನುಳಿದ ಭಾಗಕ್ಕೆ ಅಲಭ್ಯರಾಗಲಿದ್ದಾರೆ. ಏಡೆನ್ ಮಾರ್ಕ್ರಮ್ಗೆ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಇದೆ. ಇನ್ನು ಶಮರ್ ಜೋಸೆಫ್ಗೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಇದೆ.

ಚೆನ್ನೈ, ರಾಜಸ್ಥಾನ್
ವೆಸ್ಟ್ ಇಂಡೀಸ್ ಎದುರು ಏಕದಿನ ಸರಣಿಯ ಕಾರಣ ಇಂಗ್ಲೆಂಡ್ ತಂಡದ ಜೋಫ್ರಾ ಆರ್ಚರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅಲಭ್ಯರಾಗಲಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಜೇಮಿ ಓವರ್ಟನ್ ಅವರು ವಿಂಡೀಸ್ ಎದುರು ಏಕದಿನ ಸರಣಿ ಆಡುವ ಕಾರಣ ಚೆನ್ನೈ ಸೂಪರ್ ಕಿಂಗ್ಸ್ಗೆ ಅಲಭ್ಯರಾಗಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್
ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ರೇಸ್ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಇಬ್ಬರು ಸ್ಟಾರ್ಗಳು ಅಲಭ್ಯರಾಗಲಿದ್ದಾರೆ.ಹರಿಣ ಪಡೆಯ ಟ್ರಿಸ್ಟನ್ ಸ್ಟಬ್ಸ್ ಹಾಗೂ ಆಸೀಸ್ನ ಮಿಚೆಲ್ ಸ್ಟಾರ್ಕ್ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಆಡುವ ಕಾರಣ ಡೆಲ್ಲಿ ತಂಡಕ್ಕೆ ಅಲಭ್ಯರಾಗಲಿದ್ದಾರೆ.