Firefly Festival: ಮಿಂಚುಹುಳಗಳನ್ನು ಕಣ್ತುಂಬಿಕೊಳ್ಳಬೇಕೆ? ಮಹಾರಾಷ್ಟ್ರದ ಈ ತಾಣಗಳಿಗೆ ಭೇಟಿ ನೀಡಿ
ಮಿಂಚುಹುಳಗಳು ಮಕ್ಕಳಲ್ಲಿ ಮಾತ್ರವಲ್ಲ ಎಲ್ಲ ವಯಸ್ಸಿನವರಲ್ಲೂ ಕೌತುಕವನ್ನು ಹುಟ್ಟು ಹಾಕುತ್ತದೆ. ಮಳೆಗಾಲ ಪ್ರಾರಂಭವಾಗಲಿದೆ ಎಂಬ ಮುನ್ಸೂಚನೆಯಂತೆ ಕಾಣಸಿಗುವ ಮಿಂಚು ಹುಳಗಳು, ಬೇರೆ ಯಾವ ಕಾಲದಲ್ಲೂ ಅಷ್ಟಾಗಿ ಕಾಣ ಸಿಗುವುದಿಲ್ಲ. ನಿಮಗೆ ಗೊತ್ತಾ ಮಹಾರಾಷ್ಟ್ರದ ಕಾಡುಗಳು ಸುಂದರವಾದ ಮಿಂಚುಹುಳುಗಳ ತಾಣಗಳಾಗಿವೆ. ಈ ವರ್ಷ ಮೇ 17ರಿಂದ ಪ್ರಾರಂಭವಾಗಿ ಜೂನ್ 22ರವರೆಗೆ ಮಿಂಚುಹುಳುಗಳು ಕಾಣ ಸಿಗಲಿದ್ದು, ನೀವೂ ಒಮ್ಮೆ ಮಹಾರಾಷ್ಟ್ರಕ್ಕೆ ತೆರಳಿ ನಿಸರ್ಗದ ಈ ಕೌತುಕವನ್ನು ಕಣ್ತುಂಬಿಕೊಳ್ಳಬಹುದು. ಯಾವೆಲ್ಲ ತಾಣಗಳಲ್ಲಿ ಮಿಂಚುಹುಳವನ್ನು ನೋಡಬಹುದು ಎನ್ನುವ ವಿವರ ಇಲ್ಲಿದೆ.



ಭಂಡಾರ್ದಾರಾ
ಮಹಾರಾಷ್ಟ್ರದಲ್ಲಿ ಭಂಡಾರ್ದಾರದಲ್ಲಿರುವ ಆರ್ಥರ್ ಸರೋವರವು ಮಿಂಚುಹುಳುಗಳನ್ನು ನೋಡಬಯಸುವವರಿಗೆ ಅತ್ಯಂತ ಅದ್ಭುತವಾದ ಅನುಭವಗಳನ್ನು ನೀಡುವ ತಾಣ. ಸಂಜೆಯಾಗುತ್ತಲೇ ನೀವು ಸರೋವರದ ಬಳಿ ಕ್ಯಾಂಪ್ ಮಾಡಿಕೊಂಡರೆ, ನೀಲಿ-ಹಸಿರು ಬಣ್ಣದ ಸರೋವರದ ನೀರಿನಲ್ಲಿ ಮಿಂಚುಹುಳಗಳ ಬೆಳಕು ಪ್ರತಿಫಲಿಸುವುದನ್ನು ಕಾಣಬಹುದು. ಈ ಪ್ರದೇಶವು ಎಷ್ಟು ಪ್ರಸಿದ್ಧವಾಗಿದೆ ಎಂದರೆ ಟ್ರೆಕ್ಕಿಂಗ್ ಕಂಪನಿಗಳು ನೀಡುವ ಕ್ಯಾಂಪಿಂಗ್ ತಾಣಗಳು ಕಣ್ಮುಚ್ಚಿತೆರೆಯುವ ಮುನ್ನ ಬುಕ್ಕಿಂಗ್ ಫುಲ್ ಬೋರ್ಡ್ಗಳನ್ನು ಹಾಕಿಕೊಳ್ಳುತ್ತವೆ.

ಇಗತ್ಪುರಿ
ಪಶ್ಚಿಮ ಘಟ್ಟಗಳ ಗುಡ್ಡಗಾಡುಗಳು ಮತ್ತು ಮಂಜಿನ ಕಣಿವೆಗಳ ನಡುವೆ ನೆಲೆಗೊಂಡಿರುವ ಈ ವಿಶಿಷ್ಟ ಗಿರಿಧಾಮವು ಏಕಕಾಲಕ್ಕೆ ಸಾವಿರಾರು ಮಿಂಚುಹುಳುಗಳನ್ನು ನೋಡುವ ಅವಕಾಶವನ್ನು ಪ್ರವಾಸಿಗರಿಗೆ ಕಲ್ಪಿಸಿಕೊಡುತ್ತದೆ. ಅಷ್ಟಾಗಿ ಜನಸಂದಣಿಯಿರದ ಈ ಸರೋವರದ ಪಕ್ಕದಲ್ಲಿ ಶಿಬಿರಗಳನ್ನು ಹಾಕಿಕೊಳ್ಳುವ ಅವಕಾಶವನ್ನು ಚಾರಣ ಕಂಪನಿಗಳು ನೀಡುತ್ತಿವೆ. ಸೂರ್ಯಾಸ್ತದ ವೇಳೆಗೆ ಇಲ್ಲಿಗೆ ಭೇಟಿ ಕೊಟ್ಟು ರಾತ್ರಿಯವರೆಗೂ ಉಳಿದುಕೊಂಡರೆ ಮಿಂಚುಹುಳಗಳ ಹೊಳಪನ್ನು ನೋಡಿ ಸಂಭ್ರಮಿಸಬಹುದು.

ಪುರುಷ್ವಾಡಿ
ಹರಿಶ್ಚಂದ್ರಗಡ ಚಾರಣದ ದ್ವಾರ ಎಂದೇ ಪ್ರಸಿದ್ಧವಾಗಿರುವ ಪುರುಷ್ವಾಡಿ ಗ್ರಾಮವು ಮೇ ಮಧ್ಯದಿಂದ ಜೂನ್ ಮಧ್ಯದವರೆಗಿನ ಕಾಲದಲ್ಲಿ ಮಿಂಚುಹುಳುಗಳಿಂದ ತುಂಬಿಕೊಂಡಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಕ್ಯಾಂಪ್ ಹೂಡುತ್ತಾರೆ. ಜತೆಗೆ ಇಲ್ಲಿನ ಗ್ರಾಮೀಣ ಭಾಗದ ಜನಜೀವನ, ಸ್ಥಳೀಯರ ಸಾಂಪ್ರದಾಯಿಕ ಆತಿಥ್ಯವನ್ನು ಸ್ವೀಕರಿಸಿ, ಹೊಸ ಅನುಭವದೊಂದಿಗೆ ತೆರಳುತ್ತಾರೆ.

ರಾಜ್ಮಾಚಿ
ಲೋನಾವಾಲ ಬಳಿ ಇರುವ ರಾಜಮಾಚಿ ಟ್ರಕ್ಕಿಂಗ್, ಕ್ಯಾಂಪಿಂಗ್ ಮತ್ತು ಸಹಜವಾಗಿ ಮಿಂಚುಹುಳುಗಳನ್ನು ವೀಕ್ಷಿಸಲು ಅನುವು ಮಾಡಿಕೊಡುವ ಪ್ರದೇಶವಾಗಿದೆ. ಇಲ್ಲಿನ ಹೆಚ್ಚಿನ ಚಾರಣ ಕಂಪನಿಗಳು ಸಂಜೆ ಮಿಂಚುಹುಳುಗಳನ್ನು ನೋಡಲು ರಾಜ್ಮಾಚಿ ಕೋಟೆಯ ಸಮೀಪಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ. ರಾತ್ರಿಯ ವೇಳೆ ಆಕಾಶದ ತುಂಬಾ ಹಾರಾಡುವ ಮಿಂಚುಹುಳಗಳನ್ನು ನೋಡುವ ಅವಕಾಶವನ್ನು ನೀವು ಮಿಸ್ ಮಾಡಿಕೊಳ್ಳಬೇಡಿ.

ಸಂಧಾನ್ ಕಣಿವೆ
ನೆರಳುಗಳ ಕಣಿವೆ ಎಂದೂ ಕರೆಯಲ್ಪಡುವ ಸಂಧಾನ್ ಕಣಿವೆಯು ಮಿಂಚುಹುಳುಗಳ ತಾಣವೂ ಹೌದು. ಸಂಧಾನ್ ಕಣಿವೆಯ ಮಿಂಚುಹುಳುಗಳ ವೀಕ್ಷಣೆಗೆ ಎರಡು ದಿನಗಳ ಪ್ರವಾಸ ಕೈಗೊಳ್ಳುವ ಅವಕಾಶವಿದ್ದು, ರಾತ್ರಿಯ ಕ್ಯಾಂಪಿಂಗ್, ಟೀಮ್ ಗೇಮ್ಸ್, ಕ್ಯಾಂಪ್ ಫೈರ್, ಸರೋವರದ ನೀರಿನಲ್ಲಿ ವಿಶ್ರಾಂತಿ, ದೋಣಿ ವಿಹಾರ ಮಾತ್ರವಲ್ಲದೆ ಬೆಳಗ್ಗಿನ ಉಪಹಾರ, ರಾತ್ರಿ ಭೋಜನವೂ ಲಭ್ಯವಾಗಲಿದೆ. ಸಂಧಾನ್ ಕಣಿವೆಯಿಂದ, ನೀವು ಕಲ್ಸುಬಾಯ್ ಶಿಖರ, ರತಂಗಡ್ ಕೋಟೆ, ಅಜೋಬಾ ಕೋಟೆ ಮತ್ತು ವಿಲ್ಸನ್ ಅಣೆಕಟ್ಟಿನಂತಹ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡುವ ಅವಕಾಶವೂ ಇದೆ.

ಮಿಂಚುಹುಳಗಳ ಸಮೀಪ ತೆರಳುವ ಮುನ್ನ ಈ ವಿಚಾರ ತಿಳಿದುಕೊಳ್ಳಿ
ಇತ್ತೀಚಿನ ದಿನಗಳಲ್ಲಿ ಸೂಕ್ತವಾದ ವಾಸಸ್ಥಾನಗಳ ಕೊರತೆಯಿಂದಾಗಿ ಮಿಂಚುಹುಳುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಾನವ ಹಸ್ತಕ್ಷೇಪದಿಂದ ಅವುಗಳ ವಾಸಸ್ಥಾನವು ಹಾನಿಗೊಳಗಾದರೆ ಅಥವಾ ತೊಂದರೆಗೊಳಗಾದರೆ ಅವು ಅಲ್ಲಿ ಉಳಿದುಕೊಳ್ಳುವುದಿಲ್ಲ. ಹಾಗೆಂದು ಅವು ವಲಸೆ ಹೋಗುವುದಿಲ್ಲ. ಆದ್ದರಿಂದ ನೀವು ಈ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಮಿಂಚುಹುಳಗಳನ್ನು ವೀಕ್ಷಿಸುವಾಗ, ಅವುಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಿಕೊಳ್ಳಿ.