Urvashi Rautela: ಊರ್ವಶಿ ರೌಟೇಲಾಗೂ ದೇವಾಲಯ ಇದ್ಯಾ? ಡೆಲ್ಲಿ ವಿವಿಯಲ್ಲೂ ನಟಿಗೆ ಪೂಜೆ ನಡೆಯುತ್ತಾ?
ವಿವಾದಾತ್ಮಕ ಹೇಳಿಕೆಗಳಿಂದ ಸದಾ ಚರ್ಚೆಯಲ್ಲಿರುವ ನಟಿ ಊರ್ವಶಿ ರೌಟೇಲಾ (Urvashi Rautela) ಅವರು ಉತ್ತರಾಖಂಡದ ಬದರೀನಾಥದ (Badrinath) ಪಕ್ಕದಲ್ಲಿರುವ ದೇವಾಲಯ (urvashi temple) ನನ್ನದು ಎಂದು ಹೇಳಿ ಇದೀಗ ವಿವಾದ ಸೃಷ್ಟಿಸಿದ್ದಾರೆ. ಈ ದೇವಾಲಯವನ್ನು ನನ್ನ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಇಲ್ಲಿ ಭಕ್ತರು ತಮ್ಮ ಫೋಟೋಗಳಿಗೆ ಹಾರ ಹಾಕುತ್ತಾರೆ. ನಾನು ಇದನ್ನು ತಮಾಷೆಗಾಗಿ ಹೇಳುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಇದು ಈಗ ವಿವಾದವನ್ನು ಉಂಟು ಮಾಡಿದೆ. ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಅರ್ಚಕರು, ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ನಿರೂಪಕ ಸಿದ್ದಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ನಟಿ ಊರ್ವಶಿ ರೌಟೇಲಾ ಉತ್ತರಾಖಂಡದ ಬದರೀನಾಥದ ಪಕ್ಕದಲ್ಲಿರುವ ದೇವಾಲಯ ನನ್ನ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಭಕ್ತರು ಇಲ್ಲಿ ತಮ್ಮ ಫೋಟೋಗೆ ಪೂಜೆ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮನ್ನು ಪೂಜಿಸುತ್ತಾರೆ. ಅವರು ತಮ್ಮನ್ನು ದಂದಮಮಾಯಿ ಎಂದು ಕರೆಯುತ್ತಾರೆ ಎಂಬುದಾಗಿಯೂ ಹೇಳಿದ್ದಾರೆ.

ಒಂದು ಕಾಲದಲ್ಲಿ ಈ ರೀತಿಯ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಊರ್ವಶಿ ರೌಟೇಲಾ ಅವರ ಈ ಹೇಳಿಕೆ ಅವರಲ್ಲಿ ಅರಿವಿನ ಕೊರತೆ ಇರುವುದನ್ನು ಜಗಜ್ಜಾಹೀರುಗೊಳಿಸಿದೆ. ಯಾಕೆಂದರೆ ಉತ್ತರಾಖಂಡದಲ್ಲಿರುವ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದೆ. ಹೀಗಾಗಿ ಅವರ ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಸಂದರ್ಶನದಲ್ಲಿ ಊರ್ವಶಿ ರೌಟೇಲಾ ಅವರು ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಒಂದು ದೇವಾಲಯವಿದೆ. ಬದರಿನಾಥಕ್ಕೆ ಭೇಟಿ ನೀಡಿದರೆ ಅದರ ಪಕ್ಕದಲ್ಲಿ ಊರ್ವಶಿ ದೇವಾಲಯವಿದೆ. ದಕ್ಷಿಣ ಭಾರತದಲ್ಲಿಯೂ ತನ್ನ ಗೌರವಾರ್ಥವಾಗಿ ದೇವಾಲಯ ನಿರ್ಮಿಸುವುದನ್ನು ನೋಡುವ ಆಶಯವಿದೆ ಎಂದು ಹೇಳಿದ್ದರು.

ಈ ಹೇಳಿಕೆ ಸಂಪೂರ್ಣವಾಗಿ ತಪ್ಪಲ್ಲ. ಬದರಿನಾಥದಲ್ಲಿ ಒಂದು ಊರ್ವಶಿ ದೇವಾಲಯವಿದೆ. ಇದು ಮುಖ್ಯ ಬದರಿನಾಥ ದೇವಾಲಯದಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲಿದೆ. ಆದರೆ ಇದು ಊರ್ವಶಿ ರೌಟೇಲಾ ದೇವಾಲಯ ಎನ್ನುವುದು ತಪ್ಪು. ಯಾಕೆಂದರೆ ಈ ದೇವಾಲಯವನ್ನು ನಟಿ ಊರ್ವಶಿಗೆ ಅರ್ಪಿಸಲಾಗಿಲ್ಲ. ಬದರಿನಾಥದಲ್ಲಿರುವ ಊರ್ವಶಿ ದೇವಾಲಯವು ಹಿಂದೂ ಪುರಾಣಗಳಲ್ಲಿ ಬರುವ ಅಪ್ಸರೆಯಾದ ಊರ್ವಶಿಯ ಜನ್ಮಸ್ಥಳ ಎಂದು ನಂಬಲಾಗಿದೆ.

ಬದರಿನಾಥ ದೇವಸ್ಥಾನದಲ್ಲಿ ಭಕ್ತರು ನಿಮಗಾಗಿ ಪ್ರಾರ್ಥಿಸುತ್ತಾರೆಯೇ ಎನ್ನುವ ಸಿದ್ದಾರ್ಥ್ ಪ್ರಶ್ನೆಗೆ ಪ್ರತಿಕ್ರಿಯಿಸಿದ ಊರ್ವಶಿ, ದೇವಾಲಯ ಇದೆ. ಅಲ್ಲಿ ಮತ್ತೇನು ಮಾಡುತ್ತಾರೆ. ಪೂಜೆ ಮಾಡುತ್ತಾರೆ ಅಲ್ಲವೇ ಎಂದಿದ್ದರು. ಬಳಿಕ ಅವರು ತಮ್ಮ ಮಾತು ಮುಂದುವರಿಸುತ್ತಾ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಅವರ ಫೋಟೋಗಳಿಗೆ ಹಾರ ಹಾಕಿ ಅವರನ್ನು ಪ್ರೀತಿಯಿಂದ "ದಂದಮಮಾಯಿ" ಎಂದು ಕರೆಯುತ್ತಾರೆ ಎಂದು ಹೇಳಿದರು.

ಅವರ ಈ ಹೇಳಿಕೆಯೂ ಸಂಪೂರ್ಣವಾಗಿ ತಪ್ಪಲ್ಲ. ಪ್ರತಿ ವರ್ಷ ಪ್ರೇಮಿಗಳ ದಿನದಂದು, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ವಿದ್ಯಾರ್ಥಿಗಳು ದಂದಮಮಾಯಿ ಪೂಜೆ ನಡೆಸುತ್ತಾರೆ. ಇದನ್ನು ವರ್ಜಿನ್ ಮರದ ಆರಾಧನೆ ಎಂದೂ ಕರೆಯುತ್ತಾರೆ. ಕ್ಯಾಂಪಸ್ನಲ್ಲಿರುವ ನಿರ್ದಿಷ್ಟ ಮರಕ್ಕೆ ಆಯ್ದ ಬಾಲಿವುಡ್ ನಟಿಯ ಪೋಸ್ಟರ್ಗಳಿಂದ ಅಲಂಕರಿಸಿ ಹೂಮಾಲೆ, ಧೂಪದ್ರವ್ಯವನ್ನು ಇರಿಸಿ ಪೂಜೆ ಮಾಡಲಾಗುತ್ತದೆ. ಆದರೆ ಇಷ್ಟು ಮಾತ್ರವಲ್ಲ ಈ ಮರಕ್ಕೆ ಬಳಕೆ ಮಾಡಿರುವ ಕಾಂಡೋಮ್ಗಳನ್ನು ಆಭರಣಗಳಂತೆ ನೇತು ಹಾಕಲಾಗುತ್ತದೆ. ಇಲ್ಲಿ ಭಕ್ತಿಗಿಂತ ಹೆಚ್ಚು ತಮಾಷೆಯನ್ನೇ ನಡೆಸಲಾಗುತ್ತದೆ. ಊರ್ವಶಿಯನ್ನುದಂದಮಮಾಯಿ ಎಂದು ಕರೆಯುವುದು ನಿಜವಾದರೂ ಇದು ಗೌರವದ ಸಂಗತಿಯಲ್ಲ.

ನಟಿ ಊರ್ವಶಿಯು ಉತ್ತರಾಖಂಡದ ದೇವಸ್ಥಾನ ತನ್ನದು ಎಂದು ಹೇಳಿರುವುದು ಇದೇ ಮೊದಲೇನಲ್ಲ. 2022ರಲ್ಲಿ ಲ್ಯಾಪ್ಟಾಪ್ನಲ್ಲಿ ಪ್ರದರ್ಶಿಸಲಾದ ತನ್ನ ಫೋಟೋದ ಮುಂದೆ ನಿಜವಾದ ಪೂಜೆಯನ್ನು ಮಾಡುತ್ತಿರುವ ಅಭಿಮಾನಿಯ ಚಿತ್ರವನ್ನು ಆಕೆ ಪೋಸ್ಟ್ ಮಾಡಿದ್ದಳು. ಇದನ್ನು ಆಕೆ "ಊರ್ವಶಿಸಂ" ಎಂದು ಕರೆದಿದ್ದಳು. ಆಕೆ ಕೇವಲ ತನ್ನ ಆರಾಧನೆ ಬಗ್ಗೆ ಮಾತ್ರ ಹೇಳಿಕೊಳ್ಳುತ್ತಿಲ್ಲ. ತನ್ನದೇ ಆದ ಧರ್ಮಗ್ರಂಥವನ್ನು ಸಹ ಬರೆಯುತ್ತಿರುವುದಾಗಿ ಹೇಳಿದ್ದಳು.

ಹಲವಾರು ಸಾಧನೆಗಳನ್ನು ತಾನೇ ಮೊದಲು ಮಾಡಿರುವುದು ಎಂದಿರುವ ನಟಿ ಊರ್ವಶಿ, ರ್ಯಾಂಪ್ ಮೇಲೆ ಚಿನ್ನದ ಮಣಿಪುರಿ ಪೊಟ್ಲಾಯ್ ಧರಿಸಿದ ಮೊದಲ ಭಾರತೀಯ ಮಹಿಳೆ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡಿದ್ದಾರೆ. 2024 ರ ಪ್ಯಾರಿಸ್ ಒಲಿಂಪಿಕ್ಸ್ಗೆ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯ ನಟಿ, ನಿರರ್ಗಳವಾಗಿ ಫ್ರೆಂಚ್ ಮಾತನಾಡಿದ ಮೊದಲ ಬಾಲಿವುಡ್ ನಟಿ, ಕಿರಿಯ ವಿಶ್ವದ ಅತ್ಯಂತ ಸುಂದರ ಮಹಿಳೆ ತಾನು ಎನ್ನುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ. ಆಕೆಯ ಇನ್ಸ್ಟಾಗ್ರಾಮ್ ನಲ್ಲಿ ತನ್ನನ್ನು ತಾನೇ ವರ್ಣಿಸುವ ಶೀರ್ಷಿಕೆಗಳು, ತನಗೆ ತಾನೇ ಕೊಟ್ಟಿರುವ ಪ್ರಶಸ್ತಿಗಳನ್ನು ಒಳಗೊಂಡಿದೆ.

ಇಷ್ಟು ಮಾತ್ರವಲ್ಲದೆ ನಟಿ ಊರ್ವಶಿಯು ಪರ್ವೀನ್ ಬಾಬಿ ಜೀವನಚರಿತ್ರೆಯನ್ನು ತಾವು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ ಅಂತಹ ಯಾವುದೇ ಯೋಜನೆ ಇರಲಿಲ್ಲ. ಇದೆಲ್ಲವೂ "ನಕಲಿ ಸುದ್ದಿ"ಯಾಗಿತ್ತು. ಬಳಿಕ ಕಾಂತಾರ 2 ಚಿತ್ರದಲ್ಲಿ ನಟಿಸುವ ಸುಳಿವು ನೀಡಿದರು, ಈ ಬಗ್ಗೆ ಬಳಿಕ ನಿರ್ಮಾಪಕರು ಸ್ಪಷ್ಟೀಕರಣ ನೀಡಿ ಆಕೆ ಎಂದಿಗೂ ಚಿತ್ರದ ಭಾಗವಾಗಿಲ್ಲ ಎಂದು ಹೇಳಬೇಕಾಯಿತು.