Srivathsa Joshi Column: ಮದರ್ಸ್ ಡೇ ಆರಂಭಿಸಿದವಳೇ ಅದನ್ನು ನಿಲ್ಲಿಸಲಿಕ್ಕೂ ಹೋರಾಡಿದ್ದಳು !
ಉಭಯ ಪಕ್ಷಗಳಲ್ಲಿದ್ದ ಕರುಣಾಮಯಿ ತಾಯಂದಿರನ್ನು ಒಟ್ಟುಗೂಡಿಸಿ ‘ಮದರ‍್ಸ್ ಫ್ರೆಂಡ್‌ಶಿಪ್ ಡೇ’ ಎಂಬ ಸಂಪ್ರದಾಯವನ್ನು ಆರಂಭಿಸಿ ದವಳು. 1905ರಲ್ಲಿ ಆನ್ ಜಾರ್ವಿಸ್ ನಿಧನಳಾದಾಗ ಮಗಳು ಅನ್ನಾ ಜಾರ್ವಿಸ್ ಒಂದೊಮ್ಮೆ ತೀವ್ರವಾಗಿ ಧೃತಿಗೆಟ್ಟರೂ ಅಮ್ಮನ ಆದರ್ಶಗಳನ್ನು ತಾನು ಮುಂದು ವರಿಸಬೇಕು ಎಂದು ಪಣ ತೊಟ್ಟಳು. ಅಮ್ಮನಿಗೆ ಶ್ರದ್ಧಾಂಜಲಿ ರೂಪದಲ್ಲಿ ಬಂದಿದ್ದ ಪತ್ರಗಳನ್ನು, ಅದರಲ್ಲಿ ಸಜ್ಜನರೆಲ್ಲರೂ ಅಮ್ಮನ ಬಗ್ಗೆ ಬರೆದಿದ್ದನ್ನು ಎರಡೆರಡು ಸಲ ಓದಿದಳು


ತಿಳಿರು ತೋರಣ
srivathsajoshi@yahoo.com
ಅನ್ನಾ ಜಾರ್ವಿಸ್‌ಳನ್ನು ಪ್ರತಿವರ್ಷ ಅಮ್ಮಂದಿರ ದಿನದಂದು ನೆನಪಿಸಿಕೊಳ್ಳಲಾಗುತ್ತದೆ, ಆಕೆಯ ಸತತ ಪ್ರಯತ್ನಗಳಿಂದಲೇ ಅಂಥದೊಂದು ಆಚರಣೆಗೆ 1914ರಲ್ಲಿ ಆಗಿನ ಅಮೆರಿಕಾಧ್ಯಕ್ಷ ವುಡ್ರೋ ವಿಲ್ಸನ್‌ರಿಂದ ಒಪ್ಪಿಗೆಯ ಮೊಹರು ಬಿದ್ದದ್ದೆಂಬ ಕಾರಣಕ್ಕೆ. ಅನ್ನಾ ಜಾರ್ವಿಸ್‌ಳ ತಾಯಿ ಆನ್ ಜಾರ್ವಿಸ್ ಆ ಕಾಲದಲ್ಲಿ ಅಮೆರಿಕದಲ್ಲಿ ನಡೆಯುತ್ತಿದ್ದ ಪೌರದಂಗೆಗಳ ವೇಳೆ ಎರಡೂ ಕಡೆಯ ಗಾಯಾಳು ಸೈನಿಕರಿಗೆ ಆರೈಕೆ ಮಾಡಿದವಳು.
ಮಡಿದ ಯೋಧರ ಮಾತೆಯರಿಗೆ ಸಾಂತ್ವನ ನೀಡಿದವಳು. ಉಭಯ ಪಕ್ಷಗಳಲ್ಲಿದ್ದ ಕರುಣಾಮಯಿ ತಾಯಂದಿರನ್ನು ಒಟ್ಟುಗೂಡಿಸಿ ‘ಮದರ‍್ಸ್ ಫ್ರೆಂಡ್‌ಶಿಪ್ ಡೇ’ ಎಂಬ ಸಂಪ್ರದಾಯವನ್ನು ಆರಂಭಿಸಿ ದವಳು. 1905ರಲ್ಲಿ ಆನ್ ಜಾರ್ವಿಸ್ ನಿಧನಳಾದಾಗ ಮಗಳು ಅನ್ನಾ ಜಾರ್ವಿಸ್ ಒಂದೊಮ್ಮೆ ತೀವ್ರವಾಗಿ ಧೃತಿಗೆಟ್ಟರೂ ಅಮ್ಮನ ಆದರ್ಶಗಳನ್ನು ತಾನು ಮುಂದುವರಿಸಬೇಕು ಎಂದು ಪಣ ತೊಟ್ಟಳು. ಅಮ್ಮನಿಗೆ ಶ್ರದ್ಧಾಂಜಲಿ ರೂಪದಲ್ಲಿ ಬಂದಿದ್ದ ಪತ್ರಗಳನ್ನು, ಅದರಲ್ಲಿ ಸಜ್ಜನರೆಲ್ಲರೂ ಅಮ್ಮನ ಬಗ್ಗೆ ಬರೆದಿದ್ದನ್ನು ಎರಡೆರಡು ಸಲ ಓದಿದಳು.
ಸಮಾಜಕ್ಕೆಲ್ಲ ಮಾತೃವಾತ್ಸಲ್ಯದ ಸಿಂಚನ ಮಾಡಿದ್ದ ಅಮ್ಮನ ಬಗೆಗಿನ ಉಲ್ಲೇಖಗಳಿಗೆ ಅಡಿಗೆರೆ ಹಾಕಿಟ್ಟಳು. ಇದಕ್ಕೊಂದು ಅರ್ಥಪೂರ್ಣ ರೂಪ ಕೊಡಬೇಕೆಂದುಕೊಂಡಳು. ರಾಷ್ಟ್ರವ್ಯಾಪಿಯಾಗಿ ಮದರ‍್ಸ್ ಡೇ ಎಂಬೊಂದು ಆಚರಣೆಯನ್ನು ಆರಂಭಿಸುವುದಕ್ಕೆ ಯೋಜನೆ ಸಿದ್ಧಪಡಿಸಿದಳು.
ಮೇ 10, 1908ರಂದು ಭಾನುವಾರ ವೆಸ್ಟ್ ವರ್ಜೀನಿಯಾ ಸಂಸ್ಥಾನದ ಗ್ರಾಫ್ಟನ್ ಎಂಬ ಚಿಕ್ಕ ಪಟ್ಟಣ ದಲ್ಲಿ, ಆನ್ ಜಾರ್ವಿಸ್ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಚರ್ಚ್‌ನಲ್ಲಿ ಮೊತ್ತಮೊದಲ ಮದರ‍್ಸ್ ಡೇ ಸಮಾರಂಭ ನಡೆಯಿತು. ಆವತ್ತೇ ಫಿಲಡೆಲ್ಫಿಯಾ ನಗರದ ಒಂದು ಡಿಪಾರ್ಟ್‌ಮೆಂಟಲ್ ಸ್ಟೋರ್‌ನ ಆಡಿಟೋರಿಯಂನಲ್ಲೂ ಒಂದು ಸಮಾರಂಭ ಇಟ್ಟುಕೊಳ್ಳಲಾಗಿತ್ತು.
ಇದನ್ನೂ ಓದಿ: Srivathsa Joshi Column: ಏಳನೇ ತರಗತಿ ಬೀಳ್ಕೊಡುಗೆಯ ಗ್ರೂಪ್ ಫೋಟೊ ತಂದ ಹಿಗ್ಗು
ಅನ್ನಾ ಜಾರ್ವಿಸ್ ಆಗ ಫಿಲಡೆಲಿಯಾದಲ್ಲಿದ್ದಳು ಆದ್ದರಿಂದ ಗ್ರಾಫ್ಟನ್ನಲ್ಲಿ ನಡೆದ ಸಮಾರಂಭ ದಲ್ಲಿ ಭಾಗವಹಿಸಲಿಕ್ಕಾಗಲಿಲ್ಲ. ಆದರೆ ಅಲ್ಲಿಗೆ ಒಂದು ಬುಟ್ಟಿ ತುಂಬ ಬಿಳಿ ಕಾರ್ನೇಷನ್ ಹೂವು ಗಳನ್ನು ಕಳುಹಿಸಿದಳು. ಅವು ಆಕೆಯ ಅಮ್ಮನ ನೆಚ್ಚಿನ ಹೂವುಗಳು. ಸಮಾರಂಭದಲ್ಲಿ ಭಾಗವಹಿಸಿ ದ್ದವರೆಲ್ಲರೂ ತಮ್ಮತಮ್ಮ ಅಮ್ಮಂದಿರ ಗೌರವಾರ್ಥ, ನಿಷ್ಕಲ್ಮಷ ಪ್ರೀತಿಗೆ ಕೃತಜ್ಞತೆಯ ದ್ಯೋತಕ ವಾಗಿ, ಒಂದೊಂದು ಹೂವನ್ನು ಮುಡಿದುಕೊಳ್ಳಬೇಕು ಎಂಬುದು ಅನ್ನಾಳ ಆಶಯವಾಗಿತ್ತು. ಅಲ್ಲಿ ಯಾವುದೇ ತೆರನಾದ ಆಡಂಬರ ಪ್ರದರ್ಶನ ವಿರಲಿಲ್ಲ, ಅನವಶ್ಯಕ ಗೌಜಿ-ಗದ್ದಲಗಳಿರಲಿಲ್ಲ, ಕೃತಕತೆಯ ಲವಲೇಶವೂ ಇರಲಿಲ್ಲ.
ಅಂಥದೊಂದು ಶುದ್ಧಹೃದಯದ ಮಧುರಭಾವದ ಆಚರಣೆಯ ವಿಚಾರ ಅಮೆರಿಕದ ಬೇರೆ ಊರುಗಳಿಗೂ ಪಸರಿಸಿತು. ಅದರ ಪ್ರಾಮುಖ್ಯವನ್ನು ವಿವರಿಸುತ್ತ ಅನ್ನಾ ಜಾರ್ವಿಸ್ ಉದ್ದುದ್ದ ಪತ್ರಗಳನ್ನು ಬರೆದು ದೇಶ-ವಿದೇಶಗಳ ಸಂಘ-ಸಂಸ್ಥೆಗಳಿಗೆ ಕಳುಹಿಸಿದಳು. ಸಾಧ್ಯವಿದ್ದಲ್ಲೆಲ್ಲ ತಾನೇ ಹೋಗಿ ಪ್ರಚಾರ ನಡೆಸಿದಳು. ಫಿಲಡೆಲಿಯಾದ ಜಾನ್ ವಾನಾಮೇಕರ್ ಮತ್ತು ಎಚ್.ಜೆ. ಹೈನ್ಜ್ ಮೊದಲಾದ ಧನಿಕ ದಾನಿಗಳು ಆಕೆಗೆ ನೆರವಾದರು.

ಮದರ‍್ಸ್ ಡೇ ಮಹತ್ತ ವನ್ನು ಜನರಿಗೆ ತಿಳಿಸುವ ಕೆಲಸವನ್ನೇ ತನ್ನ ಪೂರ್ಣಾವಧಿ ವ್ಯಾಪ್ತಿಯಾಗಿಸಿ ಕೊಂಡಳು ಅನ್ನಾ ಜಾರ್ವಿಸ್. ಅಮೆರಿಕದ ಬೇರೆಬೇರೆ ಸಂಸ್ಥಾನಗಳ ಸೆನೇಟರ್‌ಗಳು ಮತ್ತಿತರ ಜನಪ್ರತಿನಿಧಿಗಳ ಗಮನಕ್ಕೂ ತಂದಳು. ಅವರಲ್ಲಿ ಕೆಲವರು ಆಕೆಗೆ ಛೀಮಾರಿ ಹಾಕಿದ್ದೂ ಉಂಟು. ಹೆನ್ರಿ ಮೂರ್ ಟೆಲ್ಲರ್ ಎಂಬ ಸೆನೇಟರನಂತೂ ಅದೊಂದು ಅರ್ಥಹೀನ ಪ್ರಸ್ತಾವ, ಪ್ರತಿದಿನವೂ ನಾವು ತಾಯಿಯನ್ನು ಪ್ರೀತ್ಯಾದರಗಳಿಂದ ಕಾಣಬೇಕು, ವರ್ಷದಲ್ಲೊಂದು ದಿನ ಮಾತ್ರ ಎಂದರೆ ಅದರಂಥ ಮೂರ್ಖತನ ಇನ್ನೊಂದಿಲ್ಲ ಎಂದನು.
ಜೇಕಬ್ ಗಾಲ್ಲಿಂಗರ್ ಎಂಬ ಇನ್ನೊಬ್ಬ ಸೆನೇಟರನ ಅಭಿಪ್ರಾಯವೂ ಅದೇ ರೀತಿಯದಾಗಿತ್ತು. ಗತಿಸಿ ಹೋಗಿರುವ ನನ್ನ ಅಮ್ಮನನ್ನು ಮೇ ತಿಂಗಳ ಒಂದು ಭಾನುವಾರದಂದು ಮಾತ್ರ ನೆನಪು ಮಾಡಿ ಕೊಳ್ಳುತ್ತೇನೆ ಎಂಬ ಆಲೋಚನೆ ಆಕೆಗೆ ಗೌರವವಲ್ಲ ಅವಮಾನ ಮಾಡಿದಂತೆ ಎಂದು ಬಿಟ್ಟನು. ಅನ್ನಾ ಜಾರ್ವಿಸ್ ಮಾತ್ರ ಅದಕ್ಕೆಲ್ಲ ಜಗ್ಗಲಿಲ್ಲ.
ತಾನು ಮಾಡುತ್ತಿರುವುದು ಒಳ್ಳೆಯ ಉದ್ದೇಶದ ಒಳ್ಳೆಯ ಕೆಲಸ ಎಂಬ ಆತ್ಮವಿಶ್ವಾಸ ಅವಳಲ್ಲಿತ್ತು. ಸಂಡೇ ಸ್ಕೂಲ್ ಅಸೋಸಿಯೇಷನ್ ಮುಂತಾದ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು. ಅಂತೂ 1914ರಲ್ಲಿ ರಾಷ್ಟ್ರಾಧ್ಯಕ್ಷರ ಸಹಿ ಪಡೆಯುವಲ್ಲಿವರೆಗೆ ಅಭಿಯಾನ ಮುಂದುವರಿದು ಯಶಸ್ವಿ ಯಾಯಿತು.
ಈ ನಡುವೆ ಅಮೆರಿಕದ ಪುಷ್ಪೋದ್ಯಮವು ಅನ್ನಾ ಜಾರ್ವಿಸ್‌ಳ ಅಭಿಯಾನವನ್ನು ಚಾಣಾಕ್ಷತನ ದಿಂದ ಬೆಂಬಲಿಸಿತು. ಆಕೆಗೆ ನೆರವಾಗಲೆಂದು ಅಷ್ಟಿಷ್ಟು ದೇಣಿಗೆಯನ್ನೂ ನೀಡಿತು. ಆಕೆಯೂ ಪುಷ್ಪೋದ್ಯಮಿಗಳ ವಾರ್ಷಿಕ ಅಽವೇಶನಗಳಲ್ಲಿ ಭಾಗವಹಿಸಿ ಭಾಷಣಗಳನ್ನಿತ್ತಳು. ಮದರ‍್ಸ್ ಡೇಯಂದು ಕಾರ್ನೇಷನ್ ಹೂವುಗಳನ್ನು ಉಡುಗೊರೆ ಕೊಡುವ, ಅಲಂಕಾರಕ್ಕೆ ಬಳಸುವ ಸಂಪ್ರದಾಯ ಗಟ್ಟಿಯಾಯಿತು.
ವರ್ಷವರ್ಷವೂ ಮದರ‍್ಸ್ ಡೇ ಆಸುಪಾಸಿನಲ್ಲಿ ಹೂವುಗಳ ಮಾರಾಟ, ಅದರಲ್ಲೂ ಬಿಳಿ ಕಾರ್ನೇ ಷನ್ ಹೂವುಗಳ ಮಾರಾಟ ಹೆಚ್ಚತೊಡಗಿತು. ಎಲ್ಲಿಯವರೆಗೆಂದರೆ, ಕಾಳಸಂತೆಯಲ್ಲಿ ಕಾರ್ನೇಷನ್ ಹೂವುಗಳ ಮಾರಾಟ, ಅಕ್ರಮ ದಾಸ್ತಾನು ಮುಂತಾದ ವಾಮಮಾರ್ಗಗಳನ್ನೂ ಕೆಲ ಲೋಭಿಗಳು ಅನುಸರಿಸಿದರು. ಅದು ಪತ್ರಿಕೆಗಳಲ್ಲಿ ಸುದ್ದಿಯಾಯ್ತು. ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸಲಿಕ್ಕೆ ಕೆಂಪು ಅಥವಾ ಮತ್ತಾವುದೇ ಗಾಢ ಬಣ್ಣದ ಹೂವುಗಳನ್ನು ಜೀವಂತ ಅಮ್ಮಂದಿರ ಗೌರವಾರ್ಥವೂ, ಬಿಳಿ ಬಣ್ಣದ ಹೂವುಗಳನ್ನು ಗತಿಸಿರುವ ತಾಯಂದಿರ ಗೌರವಾರ್ಥವೂ ಬಳಸುವ, ಮುಡಿದು ಕೊಳ್ಳುವ, ಕೊಟ್ಟುಕೊಳ್ಳುವ ರಿವಾಜನ್ನು ಪುಷ್ಪೋದ್ಯಮಿಗಳೇ ಜನರಲ್ಲಿ ಬಿತ್ತಿದರು.
ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದಾಗಿನ ಮಾತೆಮೇರಿಯ ಕಣ್ಣೀರಹನಿಗಳೇ ಕಾರ್ನೇಷನ್ ಹೂವು ಗಳೆಂದು ಅದಕ್ಕೊಂದು ರಿಲೀಜನ್ ಬಣ್ಣ ಬಳಿದವರೂ ಇದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ಅನ್ನಾ ಜಾರ್ವಿಸ್‌ಗೆ ಕಸಿವಿಸಿಯೆನಿಸಿತು. ತಾನು ಕಲ್ಪಿಸಿದ ಮದರ‍್ಸ್ ಡೇ ಕೇವಲ ಭಾವುಕತೆಯ ಅಭಿವ್ಯಕ್ತಿ ಯದೇ ಹೊರತು ಅದೀಗ ವಾಣಿಜ್ಯಮಯವಾಗಿ, ಆಡಂಬರದ ಪ್ರದರ್ಶನವಾಗಿ ಬದಲಾದದ್ದು ಆಕೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ.
1920ರ ಸುಮಾರಿಗೆ ಆಕೆ ಮದರ‍್ಸ್ ಡೇಗೆಂದು ಹೂವುಗಳನ್ನೂ ಉಡುಗೊರೆಗಳನ್ನೂ ಕೊಡು-ಕೊಳ್ಳುವ ಜನರನ್ನು ಹಾಗೆ ಮಾಡದಂತೆ ಎಚ್ಚರಿಸತೊಡಗಿದಳು. ಈ ಹಿಂದೆ ತನಗೆ ಪ್ರೋತ್ಸಾಹ ಮತ್ತು ಧನಸಹಾಯ ಮಾಡಿದ್ದ ವಾಣಿಜ್ಯೋದ್ಯಮಿಗಳನ್ನೂ ಎದುರುಹಾಕಿಕೊಂಡಳು. ಗ್ರೀಟಿಂಗ್ ಕಾರ್ಡ್‌ಗಳ ಮಾರಾಟಗಾರರನ್ನು, ಚಾಕೊಲೇಟ್ ಮತ್ತಿತ್ತರ ಸಿಹಿತಿನಿಸುಗಳ ತಯಾರಕ/ವಿತರಕ ರನ್ನು, ಪುಷ್ಪೋದ್ಯಮಿಗಳನ್ನು- ಇವರೆಲ್ಲ ಹಗಲುದರೋಡೆ ಮಾಡುವವರು, ಡಕಾಯಿತರು, ಸ್ವಾರ್ಥಿ ಲೋಭಿಗಳು, ಗೆದ್ದಲು ಹುಳಗಳು- ಎಂದು ಜರಿದಳು.
ಮಾನವೀಯ ನೆಲೆಯಲ್ಲಿ ಉದಾತ್ತ ಆಶಯದಿಂದ ಆರಂಭಿಸಿದ್ದ ಆಚರಣೆಯನ್ನು ಕೆಲವು ಸ್ವಹಿತಾ ಸಕ್ತ ಶಕ್ತಿಗಳು ದುಡ್ಡು ಮಾಡುವ ದಂಧೆಯಾಗಿ ಪರಿವರ್ತಿಸಿದ್ದು ಅನ್ನಾಗೆ ಬಹಳವೇ ಬೇಸರವಾಗಿತ್ತು. ಕಾರ್ನೇಷನ್ ಹೂವುಗಳ ಬದಲಿಗೆ ಸಾಂಕೇತಿಕವಾಗಿ ಹೂವುಗಳದೇ ಚಿತ್ರವಿರುವ ಒಂದು ಪುಟ್ಟ ಬಿಲ್ಲೆಯನ್ನು ಧರಿಸುವಂತೆ, ಉಡುಗೊರೆ ಕೊಡುವಂತೆ ಜನರಿಗೆ ಮನದಟ್ಟು ಮಾಡಬಹುದೆಂದು ಆಲೋಚಿಸಿದಳು.
ಅದರಂತೆಯೇ ಸಾವಿರಗಟ್ಟಲೆ ಬಿಲ್ಲೆಗಳನ್ನು ಮುದ್ರಿಸಿ ಮಹಿಳೆಯರಿಗೆ, ಶಾಲೆಗಳಿಗೆ, ಚರ್ಚ್ ಗ್ರೂಪ್‌ಗಳಿಗೆ ಉಚಿತವಾಗಿ ಹಂಚಿದಳು. ಪುಷ್ಪೋದ್ಯಮದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವು ದಕ್ಕೆ ಮುಂದಾದಳು. ಕಾರ್ನೇಷನ್ ಹೂವುಗಳ ಜತೆ ಮದರ‍್ಸ್ ಡೇ ಎಂದು ಬರೆದ ವಿನ್ಯಾಸಕ್ಕೆ ಪೇಟೆಂಟ್ ಅರ್ಜಿ ಸಲ್ಲಿಸಿದಳು(ಆ ಪೇಟೆಂಟ್ ಆಕೆಗೆ ಸಿಗಲಿಲ್ಲ). ತಮ್ಮ ವಿರುದ್ಧ ಅನ್ನಾ ಜಾರ್ವಿಸ್ ಅಷ್ಟೊಂದು ವ್ಯಗ್ರಳಾಗಿರುವುದನ್ನು ಕಂಡ ಫ್ಲೋರಿಸ್ಟ್ ಟೆಲಿಗ್ರಾಫ್ ಡೆಲಿವರಿ ಎಂಬ ಸಂಘಟನೆಯು ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಮದರ‍್ಸ್ ಡೇ ದಿನ ಕಾರ್ನೇಷನ್ ಹೂವುಗಳಿಂದ ಬರುವ ಲಾಭದಲ್ಲಿ ಒಂದಿಷ್ಟು ಕಮಿಷನ್ ಅನ್ನು ಅನ್ನಾಗೆ ಕೊಡುವುದಕ್ಕೆ ಮುಂದಾಯಿತು. ಅದು ಅವಳನ್ನು ಇನ್ನಷ್ಟು ಕೆರಳಿಸಿತು!
ಮದರ‍್ಸ್ ಡೇಯನ್ನು ವಾಣಿಜ್ಯೀಕರಿಸುವುದರ ವಿರುದ್ಧ ಅನ್ನಾಳ ಸಂಗ್ರಾಮ ಮುಂದುವರಿಯಿತು. 1934ರಲ್ಲಿ ಅಮೆರಿಕದ ಅಂಚೆ ಇಲಾಖೆಯು ಮದರ‍್ಸ್ ಡೇ ಗೌರವಾರ್ಥ ಒಂದು ಅಂಚೆಚೀಟಿ ಬಿಡುಗಡೆ ಮಾಡಿತು. ದುರದೃಷ್ಟಕ್ಕೆ ಅದು ಕೂಡ ಅನ್ನಾಳ ಕೆಂಗಣ್ಣಿಗೆ ಗುರಿಯಾಯ್ತು. ಆ ಅಂಚೆ ಚೀಟಿ ಯಲ್ಲಿದ್ದದ್ದು ಕಲಾವಿದ ಜೇಮ್ಸ್ ವ್ಹಿಸ್ಲರ್ ಎಂಬಾತ ಅವನದೇ ಅಮ್ಮನನ್ನು ರೂಪದರ್ಶಿ ಯಾಗಿಸಿ ರಚಿಸಿದ್ದ ಒಬ್ಬಳು ತಾಯಿಯ ಚಿತ್ರ. ಅನ್ನಾಳ ಸಿಟ್ಟಿಗೆ ಕಾರಣ ಅದರಲ್ಲಿ ಆ ತಾಯಿಯ ಪಕ್ಕದಲ್ಲೊಂದು ಹೂದಾನಿಯಲ್ಲಿ ಕಾರ್ನೇಷನ್ ಹೂವುಗಳಿದ್ದದ್ದು!
ಅದು ಪುಷ್ಪೋದ್ಯಮಕ್ಕೆ ಜಾಹೀರಾತಿನಂತಾಯ್ತು ಎಂದು ಅವಳ ಗ್ರಹಿಕೆ. ಒಮ್ಮೆ ಫಿಲಡೆಲಿಯಾದಲ್ಲಿ ವಾನಾಮೇಕರ್ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗೆ ಟೀ ಕುಡಿಯಲಿಕ್ಕೆಂದು ಹೋಗಿದ್ದ ಅನ್ನಾಗೆ ಅಲ್ಲಿ ಮದರ‍್ಸ್ ಡೇ ಸ್ಪೆಷಲ್ ಎಂದು ಸಲಾಡ್ ಮಾರುತ್ತಿದ್ದದ್ದು ಕಣ್ಣಿಗೆ ಬಿತ್ತು. ವ್ಯಗ್ರಳಾದ ಆಕೆ ಒಂದು ಸಲಾಡ್ ಆರ್ಡರ್ ಮಾಡಿವೇಟರ್ ಅದನ್ನು ತಂದುಕೊಟ್ಟಾಗ ತಟ್ಟೆಯನ್ನು ನೆಲಕ್ಕೆ ಕುಕ್ಕಿ, ಬಿಲ್ ಪಾವತಿಸಿ, ಸಿಟ್ಟು ತೋರಿಸುತ್ತ ಅಲ್ಲಿಂದೆದ್ದು ಹೋಗಿದ್ದಳಂತೆ.
ನಿಜವಾಗಿ ಮದರ‍್ಸ್ ಡೇ ಆಚರಣೆಯೆಂದರೆ ತಾಯಿಯನ್ನು ಭೇಟಿ ಮಾಡಿ ಕುಶಲ ವಿಚಾರಿಸಿ ಸ್ವಲ್ಪ ಹೊತ್ತು ಆಕೆಯೊಂದಿಗೆ ಕಳೆಯುವುದು; ಸಾಧ್ಯವಾಗದಿದ್ದರೆ, ಬಿಚ್ಚುಮನಸ್ಸಿನಿಂದ ಕೈಬರಹದಲ್ಲೇ ತಾಯಿಗೊಂದು ಪತ್ರ ಬರೆಯುವುದು; ಅದುಬಿಟ್ಟು ಹೂವುಗಳನ್ನೋ ಗ್ರೀಟಿಂಗ್ ಕಾರ್ಡ್‌ಗಳನ್ನೋ ಕಾಟಾಚಾರಕ್ಕೆಂಬಂತೆ ಕಳುಹಿಸುವ ರೀತಿಯ ಆಚರಣೆಗಳು ಅನ್ನಾಗೆ ಸುತರಾಂ ಒಪ್ಪಿಗೆಯಿರಲಿಲ್ಲ. ನವಮಾಸಗಳ ಕಾಲ ಹೊತ್ತು, ಹೆತ್ತು, ಸಾಕಿ ಸಲಹಿದ ಅಮ್ಮನಿಗೆ ಯಾವುದೋ ಪೂರ್ವಮುದ್ರಿತ ಒಂದೆರಡು ವಾಕ್ಯಗಳಿರುವ ಗ್ರೀಟಿಂಗ್ ಕಾರ್ಡ್ ಕಳುಹಿಸುವುದೆಂದರೆ ಸೋಮಾರಿತನದ ಪರಮಾವಽ; ಅದಕ್ಕಿಂತ ಒಂದೆರಡು ಸಾಲುಗಳಾದರೂ ಸರಿಯೇ, ಸೊಟ್ಟ ಅಕ್ಷರಗಳಾದರೂ ಸರಿಯೇ, ಮಗ ಅಥವಾ ಮಗಳು ಕೈಬರಹದಲ್ಲಿ ಬರೆದ ಪತ್ರವನ್ನು ಓದಿದ ತಾಯಿಯೊಬ್ಬಳ ಹೃದಯ ಬೆಚ್ಚ ಗಾಗದಿರಲು ಸಾಧ್ಯವೇ ಇಲ್ಲ ಎಂದು ಅನ್ನಾಳ ಅಂಬೋಣ.
ದತ್ತಿನಿಧಿ ಸಂಗ್ರಹದ ಉದ್ದೇಶಕ್ಕೆ ಮದರ‍್ಸ್ ಡೇಯನ್ನು ಬಳಸುವುದಕ್ಕೂ ಅನ್ನಾ ಜಾರ್ವಿಸ್‌ಳ ತೀವ್ರ ವಿರೋಧವಿತ್ತು. ಫಿಲಡೆಲಿಯಾದಲ್ಲಿ ಒಮ್ಮೆ ಅಮೆರಿಕನ್ ವಾರ್ ಮದರ‍್ಸ್ ಎಂಬ ಸಂಘಟನೆ ಯೊಂದು ಮದರ‍್ಸ್ ಡೇ ದಿನ ದೇಣಿಗೆ ಸಂಗ್ರಹಕ್ಕಾಗಿ ಸಭೆ ನಡೆಸಿದ್ದಾಗ ಅನ್ನಾ ಅಲ್ಲಿಗೆ ಹೋಗಿ ಪ್ರತಿರೋಧ ವ್ಯಕ್ತಪಡಿಸಿದಳು. ಘೋಷಣೆ ಕೂಗಿದಳು. ಕಾರ್ನೇಷನ್ ಹೂವುಗಳ ಮಾರಾಟವನ್ನು ತಡೆಯಲೆತ್ನಿಸಿದಳು. ಅಲ್ಲಿ ಶಾಂತಿಭಂಗ ಮಾಡಿದ್ದಕ್ಕಾಗಿ ಆಕೆಯನ್ನು ಪೊಲೀಸರು ಬಂಧಿಸಿ ಹೊರ ಸಾಗಿಸಿದ ಘಟನೆಯೂ ನಡೆಯಿತು!
ಅನ್ನಾ ಅದ್ಯಾವುದರಿಂದಲೂ ವಿಚಲಿತಳಾಗಲಿಲ್ಲ. ಆಕೆಯ ಧೈರ್ಯ, ದೃಢಸಂಕಲ್ಪ ಮತ್ತು ಮನಸಿನ ಸ್ಪಷ್ಟತೆ ಎಷ್ಟಿತ್ತೆಂದರೆ ಪ್ರಥಮ ಮಹಿಳೆ (ಆಗಿನ ರಾಷ್ಟ್ರಾಧ್ಯಕ್ಷರ ಪತ್ನಿ) ಎಲನಾರ್ ರೂಸ್‌ವೆಲ್ಟ್ ನೇತೃತ್ವದಲ್ಲೊಮ್ಮೆ ಮದರ‍್ಸ್ ಡೇ ಫಂಡ್ ರೈಸಿಂಗ್ ನಡೆದಾಗ ಅದನ್ನು ವಿರೋಧಿಸಿ ಉದ್ದದ ಪತ್ರ ಬರೆದಿದ್ದಳು. ವಿಪರ್ಯಾಸವೆಂದರೆ ಅಲ್ಲಿ ದೇಣಿಗೆ ಸಂಗ್ರಹ ನಡೆದದ್ದು ಗ್ರಾಮೀಣ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮತ್ತು ಬಾಣಂತಿಯರ ಸಾವುಗಳನ್ನು ಕಡಿಮೆ ಮಾಡುವ ಯೋಜನೆ ಗಳಿಗೆಂದೇ.
ಈ ಹಿಂದೆ ಅನ್ನಾಳ ತಾಯಿ ಆನ್ ಜಾರ್ವಿಸ್ ಸಹ ಅಂಥದ್ದೇ ಸೇವೆಯನ್ನು ಮಾಡುತ್ತಿದ್ದದ್ದು. ವ್ಯತ್ಯಾಸವೆಂದರೆ ಆಕೆ ಮದರ‍್ಸ್ ಡೇ ಎಂಬ ಸೆಂಟಿಮೆಂಟ್ ಬಳಸಿ ದುಡ್ಡು ಸಂಗ್ರಹಿಸುತ್ತಿರಲಿಲ್ಲ. ಹಡೆದ 13 ಮಕ್ಕಳ ಪೈಕಿ ಒಂಬತ್ತನ್ನು ಕಳೆದುಕೊಂಡ ನೋವು, ಬೇರೆ ಯಾವ ತಾಯಿಯೂ ಅಂಥ ಸಂಕಟವನ್ನು ಅನುಭವಿಸದಿರಲಿ ಎಂಬ ತುಡಿತಗಳೇ ಆಕೆಗಿದ್ದ ಪ್ರೇರಣೆ. ಅದನ್ನು ಅನ್ನಾ ಸಹ ಅರಿತಿದ್ದಳು. ಆದರೆ ಅನ್ನಾಳ ಆದರ್ಶಗಳೆಲ್ಲ ಅರಣ್ಯರೋದನವಷ್ಟೇ ಆಯಿತು. ಜನರು ಮದರ‍್ಸ್ ಡೇಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವುದು ಅವ್ಯಾಹತವಾಗಿ ಮುಂದುವರಿಯಿತು.
ಮತ್ತೊಮ್ಮೆ ಸಂಸತ್ತಿನಲ್ಲಿ ವಿಧೇಯಕ ಮಂಡಿಸಿ ಮದರ‍್ಸ್ ಡೇ ಆಚರಣೆಯನ್ನು ನಿಷೇಧ ಗೊಳಿಸುವುದಕ್ಕಾದೀತೇ ಎಂದುಕೊಂಡು ಅನ್ನಾ ಜಾರ್ವಿಸ್ ಫಿಲಡೆಲ್ಫಿಲಿಯಾದಲ್ಲಿ ಮನೆಮನೆಗೆ ಹೋಗಿ ಸಹಿ ಸಂಗ್ರಹ ಅಭಿಯಾನ ಸಹ ಮಾಡಿದ್ದಳಂತೆ. ಅಷ್ಟರಲ್ಲಿ ಆಕೆ ದೈಹಿಕವಾಗಿಯೂ ಮಾನಸಿಕವಾಗಿಯೂ ಸಾಕಷ್ಟು ಜರ್ಜರಿತಳಾಗಿದ್ದಳು.
ಸಂಪಾದನೆಯೇನೂ ಇಲ್ಲದೆ ಬಡತನದ ಬೇಗುದಿ ಬೇರೆ. ಸಾಲದೆಂಬಂತೆ ಡಿಮೆನ್ಷಿಯಾ ಕಾಯಿಲೆ ಯೂ ಅವಳನ್ನು ಅಮರಿಕೊಂಡಿತು. ಫಿಲಡೆಲಿಯಾದ ವೆಸ್ಟ್ ಚೆಸ್ಟರ್ ನಲ್ಲಿದ್ದ ಮಾನಸಿಕ ಚಿಕಿತ್ಸಾ ಲಯವೊಂದಕ್ಕೆ ಆಕೆಯನ್ನು ಸೇರಿಸಲಾಯ್ತು. ವಿಪರ್ಯಾಸವೆಂದರೆ ಯಾವ ಪುಷ್ಪೋದ್ಯಮಿ ಗಳನ್ನು ಡಕಾಯಿತರು, ಪರಮಲೋಭಿಗಳು ಎಂದು ಆಕೆ ಜರಿದಿದ್ದಳೋ ಅವರಲ್ಲೇ ಕೆಲವರು ಆಕೆಯ ವೃದ್ಧಾಪ್ಯಕಾಲದ ಆಸ್ಪತ್ರೆ-ಔಷಧ ಖರ್ಚುಗಳನ್ನು ನೋಡಿಕೊಂಡಿದ್ದರು.
ಅದನ್ನು ಅವಳಿಂದ ಗೋಪ್ಯವಾಗಿ ಇಡಲಾಗಿತ್ತು ಅಷ್ಟೇ. ಅಂಥ ವಿಶಿಷ್ಟ ಮಹಿಳೆ ಅನ್ನಾ ಜಾರ್ವಿಸ್ ನವೆಂಬರ್ 24, 1948ರಂದು ಕೊನೆಯುಸಿರೆಳೆದಳು. ಜೀವನದುದ್ದಕ್ಕೂ ಆಕೆ ಮದುವೆ ಮಾಡಿ ಕೊಂಡಿರಲಿಲ್ಲ, ಹಾಗಾಗಿ ಅವಳಿಗೆ ಮಕ್ಕಳಿರಲಿಲ್ಲ. ಅಂದರೆ ಮದರ‍್ಸ್ ಡೇ ಮಹತ್ವವನ್ನು ಜಗತ್ತಿಗೆಲ್ಲ ತಿಳಿಸಬಯಸಿದ್ದ, ತಾಯಂದಿರನ್ನೆಲ್ಲ ಪ್ರೀತಿಯಿಂದ ಗೌರವಿಸಬಯಸಿದ್ದ ಅನ್ನಾ ಜಾರ್ವಿಸ್ ಸ್ವತಃ ತಾಯಿ ಆಗಿರಲಿಲ್ಲ!
ಇತ್ತ ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡಿರುವ ಮದರ‍್ಸ್ ಡೇ ಪ್ರತಿವರ್ಷ ಮೇ ತಿಂಗಳ ಎರಡನೆ ಯ ಭಾನುವಾರದಂದು ಆಚರಣೆಯಾಗುತ್ತದೆ. ವರ್ಷದ ಬೇರೆಲ್ಲ ದಿನಗಳಿಗಿಂತ ಹೆಚ್ಚು ಆವತ್ತು ದೂರವಾಣಿ ಸಂಭಾಷಣೆ ನಡೆಯುತ್ತದೆಂದು ಟೆಲಿಫೋನ್ ಕಂಪನಿಗಳ ಅಂಕಿ-ಅಂಶಗಳು ತಿಳಿಸು ತ್ತವೆ. ರೆಸ್ಟೋರೆಂಟ್ ಗಳಿಗೂ ಆವತ್ತು ಭರ್ಜರಿ ವ್ಯಾಪಾರ, ವ್ಯಾಲೆಂಟೈನ್ಸ್ ಡೇಗಿಂತಲೂ ಹೆಚ್ಚು. ಆಭರಣಗಳು, ಬಟ್ಟೆಬರೆ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳಿಗೆ, ಸ್ಪಾ ಮತ್ತಿತರ ಆರೋಗ್ಯವರ್ಧಕ ಸೇವೆಗಳಿಗೆ ಹೆಚ್ಚು ಡಿಮ್ಯಾಂಡ್. ಗ್ರೀಟಿಂಗ್ ಕಾರ್ಡ್ ಮತ್ತು ಹೂವುಗಳನ್ನಂತೂ ಪ್ರತಿ ನಾಲ್ಕರಲ್ಲಿ ಮೂವರು ಮಾತೆಯರು ಅಂದು ಪಡೆದೇ ಪಡೆಯುತ್ತಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ರಾಶಿರಾಶಿ ಇಮೋಜಿಗಳನ್ನೂ! ಆದರೆ ಈಗಿನ ದಿನಗಳಲ್ಲಿ ಕೈಬರಹದ ಪತ್ರಗಳನ್ನು ಪಡೆಯುವ ತಾಯಿಯರಿದ್ದರೆ ಅಂಥವರನ್ನು ದುರ್ಬೀನು ಹಿಡಿದು ಹುಡುಕಬೇಕೇನೋ. ಒಟ್ಟಿನಲ್ಲಿ ಮದರ‍್ಸ್ ಡೇ ಆಚರಣೆ ಹೇಗಿರಬೇಕೆಂದು ಅನ್ನಾ ಜಾರ್ವಿಸ್ ಬಯಸಿದ್ದಳೋ ಆ ರೀತಿಯೊಂದನ್ನು ಬಿಟ್ಟು ಬೇರೆಲ್ಲ ರೀತಿಗಳಲ್ಲಿ ‘ಧೂಂ ಧೂಂ’ ಆಗಿ ನಡೆಯು ತ್ತಿದೆ. ಬಿಲಿಯನ್ ಡಾಲರ್ ವಹಿವಾಟಿನದು ಎನಿಸಿಕೊಂಡಿದೆ.
ಅನ್ನಾ ಜಾರ್ವಿಸ್‌ಳ ಕಥೆಯನ್ನೋದುವಾಗ ನನಗೆ ಕೆಲವು ವಿಚಾರಗಳು ನೆನಪಿಗೆ ಬರುತ್ತವೆ. ಪರಶಿವನು ಭಸ್ಮಾಸುರನನ್ನು ಸೃಷ್ಟಿಸಿದಾಗ ಆ ದೈತ್ಯನು ಶಿವನ ನಿಯಂತ್ರಣವನ್ನೂ ಮೀರಿ ಅಟಾಟೋಪ ಮೆರೆದ ಕಥೆ. ಹೋಗಲಿ, ಅದಾದರೂ ಪುರಾಣಕಥೆಯ ಒಂದು ಹೋಲಿಕೆ ಅಷ್ಟೇ. ಆದರೆ ಉದಾತ್ತ ಚಿಂತನೆಯ ನಮ್ಮ ಕೆಲವು ಹಬ್ಬ-ಹರಿದಿನಗಳು, ಮದುವೆ-ಮುಂಜಿ-ಗೃಹ ಪ್ರವೇಶಾದಿ ಸಮಾರಂಭಗಳೂ ತೀರಾ ವ್ಯಾಪಾರಪ್ರಚೋದಕ ಆಗಿ ಕಮರ್ಷಿಯಲ್ ಕಮಟು ವಾಸನೆ ಹೊಡೆಯುತ್ತಿರುವುದು ಬೇಸರವೆನಿಸುತ್ತದೆ. ಉದಾಹರಣೆಗೆ, ಅಕ್ಷಯತದಿಗೆಯ ಮೂಲ ಅರ್ಥ ವಿರುವುದು ಕೊಡುವ (ದಾನ ಮಾಡುವ) ನಮ್ಮ ಶಕ್ತಿ ಅಕ್ಷಯವಾಗಲೆಂದು. ಈಗ ಅದು ಚಿನ್ನದ ವ್ಯಾಮೋಹಪರ್ವವಾಗಿ ಪರಿವರ್ತಿತವಾಗಿದೆ.
ಆ ದಿನ ಬಂಗಾರದೊಡವೆ ಖರೀದಿ ಮಾಡದಿದ್ದರೆ ಜನ್ಮವೇ ವ್ಯರ್ಥ ಎಂಬ ಕೀಳರಿಮೆ, ಭ್ರಮೆ ಹರಡ ಲಾಗಿದೆ. ನವರಾತ್ರಿಯಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಸ್ಕಂದಮಾತಾ ಅಂತೆಲ್ಲ ದೇವಿಯ ಹೆಸರುಗಳನ್ನು ಹೇಳಿ, ಹಳದಿ, ಹಸಿರು, ಬೂದು, ಕೇಸರಿ... ಎಂದು ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಎಂಬ ಹೊಸದೊಂದು ಸಂಪ್ರದಾಯ ಹುಟ್ಟಿಕೊಂಡಿದೆ; ಸೀರೆ ವ್ಯಾಪಾರ ಹೆಚ್ಚಿದೆ. ಶರನ್ನವರಾತ್ರಿಗಷ್ಟೇ ಅಲ್ಲ ಈಗೀಗ ಚೈತ್ರನವರಾತ್ರಿಯಲ್ಲೂ ಈ ಕಲರ್ ಚಾರ್ಟ್ ಹರಿದಾಡು ತ್ತದೆ! ಇನ್ನು ರಾಜ್ಯೋತ್ಸವ, ಸಾರ್ವಜನಿಕ ಗಣೇಶೋತ್ಸವ ಸಂದರ್ಭಗಳ ದಂಧೆಯ ಬಗ್ಗೆಯಂತೂ ಕೇಳುವುದೇ ಬೇಡ.
ಅದೇನೇ ಇರಲಿ, ಇಂದು ಈ ಅಂಕಣಬರಹವನ್ನು ಓದುವ ಮತ್ತು ಓದುವವರ ತಾಯಂದಿರಿಗೆಲ್ಲ ಮದರ‍್ಸ್ ಡೇ ಶುಭಾಶಯಗಳು. ಇದು ಗ್ರೀಟಿಂಗ್ ಕಾರ್ಡ್ ಅಲ್ಲ, ಕೈಬರಹದ್ದಲ್ಲದಿದ್ದರೂ ಕೀಬೋರ್ಡಲ್ಲಿ ಕುಟ್ಟಿದ ಸೌಹಾರ್ದ ಸಂದೇಶ, ಆತ್ಮೀಯವಾದದ್ದೇ ಎಂದು ತಿಳಿದುಕೊಳ್ಳಬೇಕಾಗಿ ವಿನಂತಿ.