Ravi Hunj Column: ಆಧ್ಯಾತ್ಮಿಕ ವೀರಶೈವ ಬಸವಣ್ಣನನ್ನು ನಿರೂಪಿಸಬೇಕಿದೆ
ಕಲ್ಲಿನ ಲಿಂಗದಿಂದ ಉದ್ಭವಿಸಿದ ರೇಣುಕಾಚಾರ್ಯರು ಪೌರಾಣಿಕ ಎನ್ನುವುದು ಮೇಲೆ ಹೇಳಿದ ರೀತಿಯಲ್ಲಿ ಮಹಾಮಹಿಮ ಸಾಧಕರನ್ನು ‘ಅವತಾರ ಪುರುಷರು’ ಎಂದು ವ್ಯಾಖ್ಯಾನಿಸುವ ಜಾಗತಿಕ ಮಾನವ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸೃಜಿಸಿದ ಪುರಾಣವಾಗಿದೆ. ಅಂದರೆ ಅಂಥ ಸಾಧಕರು ಇರಲೇ ಇಲ್ಲ ಎನ್ನಲಾಗದು. ಏಕೆಂದರೆ ಐತಿಹಾಸಿಕ ಶಿಲಾಸ್ತಂಭಗಳಲ್ಲಿ ಲಿಂಗದಿಂದ ಅವತಾರ ಪುರುಷರು ಉದ್ಭವಿ ಸುವ ಲಿಂಗೋ ದ್ಭವ ಮೂರ್ತಿಗಳು ಭಾರತದ ತುಂಬೆ ಇವೆ


ಬಸವ ಮಂಟಪ (ಭಾಗ-2)
ರವಿ ಹಂಜ್
ವರ್ತಮಾನದಲ್ಲಿ ವೀರಶೈವ ಮಹಾಸಭಾದ ಶಂಕರ್ ಬಿದರಿ ಅವರು, ‘ಬಸವ ಜಯಂತಿಯಂದು ಲಿಂಗವಂತ ವೀರಶೈವರ ಆದ್ಯಪುರುಷರಾದ ರೇಣುಕಾಚಾರ್ಯರ ಫೋಟೋವನ್ನು ಸಹ ಜತೆಗಿಟ್ಟು ಆಚರಿಸಿ’ ಎಂದು ತಮ್ಮ ಮಹಾಸಭಾದ ಶಾಖೆಗಳಿಗೆ ಕೇಳಿಕೊಂಡಿರುವುದನ್ನು ಲಿಂಗಾಹತ ಮಹಾ ಸಭಿಕರು ಉಗ್ರವಾಗಿ ಬಸವಣ್ಣ ಐತಿಹಾಸಿಕ, ರೇಣುಕಾಚಾರ್ಯ ಪೌರಾಣಿಕ ಎಂಬ ಅಭಿಯಾನ ಆರಂಭಿಸಿದ್ದಾರೆ!
ಈ ಹಿನ್ನೆಲೆಯಲ್ಲಿ ಮೇಲಿನ ಎಲ್ಲಾ ವಾಸ್ತವಿಕ ಆಯಾಮದಲ್ಲಿ ನಿಸ್ಸಂಶಯವಾಗಿ ಬಸವಣ್ಣ ಪೌರಾಣಿಕ ವ್ಯಕ್ತಿ ಎನಿಸುತ್ತಾನೆ. ಇನ್ನು ರೇಣುಕಾಚಾರ್ಯರು ಪೌರಾಣಿಕವೇ?!
***
ಕಲ್ಲಿನ ಲಿಂಗದಿಂದ ಉದ್ಭವಿಸಿದ ರೇಣುಕಾಚಾರ್ಯರು ಪೌರಾಣಿಕ ಎನ್ನುವುದು ಮೇಲೆ ಹೇಳಿದ ರೀತಿಯಲ್ಲಿ ಮಹಾಮಹಿಮ ಸಾಧಕರನ್ನು ‘ಅವತಾರ ಪುರುಷರು’ ಎಂದು ವ್ಯಾಖ್ಯಾನಿಸುವ ಜಾಗತಿಕ ಮಾನವ ಪ್ರವೃತ್ತಿಯ ಹಿನ್ನೆಲೆಯಲ್ಲಿ ಸೃಜಿಸಿದ ಪುರಾಣವಾಗಿದೆ. ಅಂದರೆ ಅಂಥ ಸಾಧಕರು ಇರಲೇ ಇಲ್ಲ ಎನ್ನಲಾಗದು. ಏಕೆಂದರೆ ಐತಿಹಾಸಿಕ ಶಿಲಾಸ್ತಂಭಗಳಲ್ಲಿ ಲಿಂಗದಿಂದ ಅವತಾರ ಪುರುಷರು ಉದ್ಭವಿಸುವ ಲಿಂಗೋ ದ್ಭವ ಮೂರ್ತಿಗಳು ಭಾರತದ ತುಂಬೆ ಇವೆ. ಭಾರತೀಯ ಪುರಾತತ್ವ ಇಲಾಖೆ ಪ್ರಮಾಣಿಸಿದ ಒಂದನೇ ಶತಮಾನದ ಗುಡಿಲಿಂಗಮಲ್ಲ, 2ನೇ ಶತಮಾನದ ಕುಶಾಣರು ಆರಾಧಿಸುತ್ತಿದ್ದ ಲಿಂಗೋದ್ಭವ ಮೂರ್ತಿ, 8ನೇ ಶತಮಾನದ ಪಟ್ಟದಕಲ್ಲಿನಲ್ಲಿರುವ ಲಿಂಗೋದ್ಭವ ಮೂರ್ತಿ, 2ನೇ ಶತಮಾನದ ಚೋಳರ ಲಿಂಗೋದ್ಭವಮೂರ್ತಿ ಅಂಥ ಕೆಲವು ಉಲ್ಲೇಖನೀಯ ಶಿಲ್ಪ ಗಳು.
ಇದನ್ನೂ ಓದಿ: Ravi Hunj Column: ವಚನಗಳು ಸಾಹಿತ್ಯ ಪ್ರಕಾರವೇ ಹೊರತು ವೀರಶೈವ ಗ್ರಂಥಗಳಲ್ಲ !
ತೈಮೂರ್, ಘಜ್ನಿ, ಘೋರಿ, ಖಿಲ್ಜಿ, ತುಘಲಕ್, ಔರಂಗಜೇಬರ ದಾಳಿ ಮತ್ತು ದಬ್ಬಾಳಿಕೆಯ ಆಡಳಿತ ದಲ್ಲಿ ನಾಶವಾದ ಪಟ್ಟಣ, ಕಟ್ಟಡಗಳ ನಡುವೆ ಈ ಲಿಂಗೋದ್ಭವ ಶಿಲ್ಪಗಳಲ್ಲದೆ ಅನೇಕ ಇತರೆ ಪಳೆಯುಳಿಕೆಗಳು ಈಗಲೂ ಇವೆ. ಆದರೆ ಕಲ್ಯಾಣದಲ್ಲಿ ಬಸವಣ್ಣನ ಕುರುಹುಗಳೇಕೆ ಇಲ್ಲ? ಬಿಜ್ಜಳ ಪುತ್ರ ಸೋವೇಶ ಈ ಎಲ್ಲಾ ದಾಳಿಕೋರರಿಗಿಂತ ಉಗ್ರವಾಗಿ ತನ್ನದೇ ಪಟ್ಟಣವನ್ನು ಖುದ್ದು ತಾನೇ ನಾಶಮಾಡಿಕೊಂಡನೇ?! ಸಾಮಾನ್ಯವಾಗಿ ರಾಜದ್ರೋಹಿಗಳ ಆಸ್ತಿ ಮುಟ್ಟುಗೋಲು ಮಾಡಿಕೊಂಡು ಅವರನ್ನು ಕೊಲ್ಲುತ್ತಾರೆಯೇ ಹೊರತು ಅವರ ಆಸ್ತಿಗಳ ಲವಲೇಶದ ಕುರುಹೂ ಇಲ್ಲದಂತೆ ನಾಶ ಮಾಡಲು ಸಾಧ್ಯವೇ ಎಂಬುದು ತಾರ್ಕಿಕ ಪರಾಮರ್ಶನ ಜಿಜ್ಞಾಸೆ.
ರೇಣುಕರ ಲಿಂಗೋದ್ಭವದ ಶಿಲ್ಪಗಳ ಹಾಜರಿ ಮತ್ತು ಬಸವಣ್ಣನ ಐತಿಹಾಸಿಕ ಪುರಾವೆಗಳ ಗೈರು ಏನೆನ್ನುತ್ತದೆ? ಒಬ್ಬರನ್ನು ಸಂತ ಎಂದು ಘೋಷಿಸಲು ವ್ಯಾಟಿಕನ್ ಚರ್ಚು ಮಾಪಕಗಳನ್ನು ರೂಪಿಸಿದಂತೆ ಆಯಾಯ ಹಿಂದೂ ಸಂಸ್ಕೃತಿಯಲ್ಲಿ ಸಹ ಸಾಧನೆಗೈದ ವ್ಯಕ್ತಿಗಳನ್ನು ಅವರವರ ಸಾಧನೆಗೆ ತಕ್ಕಂತೆ ದೇವರು, ಅವತಾರ ಪುರುಷ, ಮಹಾ ಮಹಿಮ, ಶಾಪಗ್ರಸ್ತ ಗಣ, ಶಾಪಗ್ರಸ್ತ ಯಕ್ಷಿ ಇತ್ಯಾದಿ ಶ್ರೇಣಿಗಳು ಇದ್ದವೆನಿಸುತ್ತದೆ. ಅದಕ್ಕೆ ತಕ್ಕಂತೆ ಸ್ಮಾರಕಗಳು ಸಹ.
ಹಾಗಾಗಿಯೇ ರೇಣುಕರನ್ನು ಅವತಾರ ಪುರುಷರು ಎಂದೂ, ಬಸವಣ್ಣನನ್ನು ಶಾಪಗ್ರಸ್ತ ಗಣ ಎಂದೂ ವರ್ಣಿಸಿರುವುದು. ಈ ತಾರ್ಕಿಕ ಹಿನ್ನೆಲೆಯಲ್ಲಿ ಸಹ ಸಾಧನೆಗೆ ಹಿಡಿದ ಮಾಪಕದಂತೆ ರೇಣುಕರು ‘ಅವತಾರ ಪುರುಷರು’ ಮತ್ತು ಬಸವಣ್ಣನು ‘ಭಕ್ತಿ ಭಂಡಾರಿ’ ಎನಿಸುತ್ತದೆ. ಈ ರೀತಿಯ ಒಂದು ಶ್ರೇಣೀಕರಣ ಈಗಲೂ ವೀರಶೈವ ಗುರು ವಿರಕ್ತ ಪೀಠಗಳ ಮಠಗಳಲ್ಲಿಯೂ ಇದೆ. ಆದರೂ ಕಟ್ಟಕಡೆಯ ಮಠದ ಪೀಠಿಯೂ ಜಗದ್ಗುರು ಎಂದೇ ಸ್ವಘೋಷಿಸಿಕೊಳ್ಳುತ್ತಾರೆ ಎಂಬುದು ಮತ್ತೊಂದು ಉಪಕತೆಯಾಗುತ್ತದೆ.
“ಸಾಮಾನ್ಯವಾಗಿ ಒಂದು ಸಂಸ್ಕೃತಿಯು ಸಾಮಾಜಿಕವಾಗಿ ತನ್ನ ನಂಬಿಕೆ, ಮೌಲ್ಯಗಳಿಗನು ಗುಣ ವಾಗಿ ಬಹುಮತದಿಂದ ಒಪ್ಪಿದ ಪ್ರಮುಖ ಐತಿಹಾಸಿಕ ಘಟನೆಗಳನ್ನು, ವ್ಯಕ್ತಿಗಳನ್ನು ಸಾಂಕೇತಿಕ ವಾಗಿ ಶ್ರೇಣೀಕರಿಸಿ ಪ್ರತಿನಿಧಿಗಳಾಗಿ ರೂಪಾಂತರಿಸಿ ಪ್ರತಿಬಿಂಬಿಸುವ ಸಾಕಾರ ರೂಪವೇ ಪೌರಾಣಿಕ ಕಥೆ" ಎಂದು ಜಾಗತಿಕವಾಗಿ ಸಾಂಸ್ಕೃತಿಕ ಅಧ್ಯಯನದ ಸಂಶೋಧಕರು ಭಾರತದ ಪುರಾಣ ಗಳನ್ನೂ ಸೇರಿಸಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಪೌರಾಣಿಕ ಕಥೆಗಳಿಗೆ ತಾಳೆಯಾಗುವಂಥ ಉತ್ಖನನ, ಐತಿಹಾಸಿಕ ದಾಖಲೆಯ ಪುರಾವೆಗಳು ಸಿಕ್ಕರೆ ಆಗ ಈ ಪೌರಾಣಿಕಗಳಿಗೆ ಐತಿಹಾಸಿಕ ಮೌಲ್ಯ ಬರುತ್ತದೆ. ಹಾಗಾಗಿ ಜಾಗತಿಕ ಮಾನವಿಕ ಪ್ರವೃತ್ತಿಯ ಅನ್ವಯ ಆಗಿ ಹೋದ ಮಹಾಮಹಿಮ ಸಾಧಕರನ್ನು ದೈವತ್ವಕ್ಕೇರಿಸಿ ಪೂಜಿಸುವ ಪರಿಪಾಠದ ಹಿನ್ನೆಲೆಯಲ್ಲಿ ಸಹ ರೇಣುಕರನ್ನು ಪೌರಾಣಿಕವಾಗಿ ಲಿಂಗೋದ್ಭವರು ಎನ್ನಲಾಗಿದೆ. ಅದಕ್ಕೆ ತಕ್ಕಂತೆ ಉತ್ಖನನ ಪುರಾವೆಯಾಗಿ ಮೇಲೆ ತಿಳಿಸಿದ ಲಿಂಗೋದ್ಭವ ಮೂರ್ತಿಗಳಿವೆ.
ಅಲ್ಲಿಗೆ ಯಾರು ಐತಿಹಾಸಿಕ, ಯಾರು ಪುರಾತನ ಎಂಬುದನ್ನು ನೀವೇ ನಿರ್ಧರಿಸಿ. ಏಕೆಂದರೆ ಈ ವ್ಯತ್ಯಾಸವು ಬಸವಣ್ಣನ, ‘ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿ ಯಂತಿರಬೇಕು. ನುಡಿದಡೆ ಸಟಿಕದ ಶಲಾಕೆಯಂತಿರಬೇಕು. ನುಡಿದಡೆ ಲಿಂಗ ಮೆಚ್ಚಿ ಅಹುದಹು ದನಬೇಕು. ನುಡಿಯೊಳಗಾಗಿ ನಡೆಯದಿದ್ದಡೆ, ಕೂಡಲಸಂಗಮದೇವನೆಂತೊಲಿವನಯ್ಯಾ’ ವಚನ ದಷ್ಟೇ ಸುಸ್ಪಷ್ಟ ಮತ್ತು ಖಚಿತ!
ಇನ್ನು ಎಲ್ಲಾ ಸಂಶೋಧಕರು ಬಸವಣ್ಣನ ಚಿತ್ರಣವನ್ನು ವಚನಗಳ ಆಧರಿತ ‘ಶೂನ್ಯ ಸಂಪಾ ದನೆ’ಯ ತಿದ್ದಿದ ತೀಡಿದ ಪರಿಷ್ಕೃತ ಭಾಗದಂತೆ ಏಕಮುಖವಾಗಿಯೇ ಕಟ್ಟಿಕೊಟ್ಟಿದ್ದಾರೆ. “ಶಾಸಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ" ಎನ್ನುವ ಬಸವನುಡಿಗಳ ಕಟ್ಟಾನುಯಾ ಯಿಗಳಾಗಿ ಮತಾಂಧರಂತೆ ತಮ್ಮ ಎಲ್ಲಾ ವಿಶ್ಲೇಷಣೆಯಲ್ಲಿ ತರ್ಕಶಾಸ್ತ್ರಕ್ಕೆ ನಿಗಳವನಿಕ್ಕಿದ್ದಾರೆ. ಈ ಎಲ್ಲಾ ಸಂಶೋಧಕರೂ ತರ್ಕದ ಒರೆಗೆ ಬಸವಣ್ಣನನ್ನು ಹಚ್ಚಿದ್ದರೆ ಬಸವಣ್ಣ ಕೇವಲ ಒಂದು ಪಂಥದ ನಾಯಕನಾಗದೆ ವಿಶ್ವಮಾನವ ಸಂಸ್ಕೃತಿಯ ಪ್ರತೀಕವಾಗುತ್ತಿದ್ದ. ಸಿಡಿದೇಳುವ ಪ್ರವೃತ್ತಿಯ ವಚನ ಕಾರರ ವಚನಗಳು ಮೂಲತಃ ತರ್ಕ, ವಿಡಂಬನೆ, ಕ್ಲೀಷೆಯ ಆದಿಗ್ರಂಥಗಳೆನ್ನಬಹುದು. ಹಾಗಾಗಿಯೇ ಈ ಎಲ್ಲಾ ವಚನಗಳ ಕೊಂಚವೇ ಕೊಂಚ ಆಳಕ್ಕಿಳಿದು ನೋಡಿದಾಗ ಅವುಗಳಲ್ಲಿನ ಸತ್ಯದ ಹೊಳಹು ದೇದೀಪ್ಯಮಾನವಾಗಿ ಗೋಚರಿಸುತ್ತದೆ.
“ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲ ಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ" ಎಂಬುವ ವಚನದ ಆಳಕ್ಕಿಳಿದು ನೋಡಿದಾಗ ಗೋಚರಿಸುವ ಹೊಳಹೇ ಬೇರೆ. ಶಾಸ್ತ್ರ (ವಿಜ್ಞಾನ)ಗಳ ಪರಿಣಿತನು, ವೇದಾಗಮಗಳ ಪಂಡಿತನು, ತರ್ಕದ ಮೂರ್ತವೇ ಆಗಿದ್ದನೆನ್ನುವ ಬಸವಣ್ಣನ ಈ ವಚನವನ್ನು ಇಂದು ಜನಜನಿತವಾಗಿರುವ ತೇಲರ್ಥದಲ್ಲಿ ತಲೆಮಾಸಿ ನಿರೂಪಿಸಿ ರುವುದು ಬಸವಣ್ಣನಿಗೆ ಮಾಡಿದ ಮಹಾದ್ರೋಹ.
ಇಂದಿನ ಬಹುಪಾಲು ವ್ಯಾಖ್ಯಾನಗಳು ವಚನಗಳಲ್ಲಿನ ತರ್ಕ, ವಿಡಂಬನೆ, ಟೀಕೆ, ವಿಮರ್ಶೆಗಳನ್ನೆ ನಿಶ್ಶೂನ್ಯವಾಗಿಸಿವೆ. ಹಾಗಾಗಿಯೇ ಕಮ್ಯುನಿಸ್ಟ್ ಪ್ರಣೀತ ವ್ಯಾಖ್ಯಾನಕಾರರು ವಚನಗಳ ಆಧಾರ ವಾಗಿ ನಿರೂಪಿಸಿರುವ ಬಸವಣ್ಣನ ವ್ಯಕ್ತಿತ್ವವು ಸಂಕುಚಿತವೂ, ಪರಮತ ಅಸಹಿಷ್ಣುವೂ, ಸೃಜನ ಶೀಲವೂ ಎನಿಸಿ ವಾಸ್ತವಿಕ ಬಸವಣ್ಣ ನಿಶ್ಶೂನ್ಯವಾಗಿದ್ದಾನೆ.
ಅಕ್ಷತ ಯೋನಿಯಿಂದ ಯಾವುದೇ ಪುರುಷ ಸಂಪರ್ಕವಿಲ್ಲದೆ ಮಕ್ಕಳು ಹುಟ್ಟುತ್ತವೆಯೇ? ಹಾಗಾಗಿ ಹಾಗೆ ಹುಟ್ಟಿದ ಕ್ರಿಸ್ತನ ಜನ್ಮಾಧರಿತ ಕ್ರಿಸ್ತಪೂರ್ವ, ಕ್ರಿಸ್ತಶಕ ಎನ್ನುವ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸಬೇಡಿ ಎಂದು ಕರೆ ನೀಡುವುದು ಎಷ್ಟು ಮೂರ್ಖತನವೋ ಅಷ್ಟೇ ಮೂರ್ಖತನ- ವಿಶ್ಲೇಷಣಾ ರಹಿತವಾಗಿ ಭಕ್ತಿಲೋಲುಪ್ತ ಸಾಂಕೇತಿಕ ಲಿಂಗೋದ್ಭವವನ್ನು ನಿರಾಕರಿಸುವುದು, ವಚನಕಾರ ಸಿದ್ದರಾಮೇಶ್ವರನು ಕೊಂಡಕ್ಕೆ ಹಾರುವಾಗ ಸಾಕ್ಷಾತ್ ಶಿವನೇ ಅವನ ಕೈಹಿಡಿದು ಉಳಿಸಿದನು ಎನ್ನುವುದು, ಖುದ್ದು ನೀಲಮ್ಮನೂ ಬಸವಣ್ಣನು ಪವಾಡಗಳನ್ನು ಮಾಡಿದನು ಎನ್ನುವ ಭಕ್ತಿ ಲೋಲುಪ್ತತೆಯ ಪ್ರಕ್ಷಿಪ್ತ ವಚನವನ್ನು ಭಜಿಸುವುದು, ಮಾತೆ ಮಹಾದೇವಿಯು ಖುದ್ದು ಬಸವಣ್ಣ ನೇ ತನ್ನ ಕನಸಲ್ಲಿ ಬಂದು, “ತಾಯೇ ಜನನಿ ಜಗನ್ಮಾತೆ, ನನ್ನ ಅಂಕಿತವನ್ನು ‘ಲಿಂಗಾನಂದ’ ಎಂದು ತಿದ್ದು" ಎಂಬ ಪವಾಡವನ್ನು ಅಪ್ಪಿ ಒಪ್ಪಿರುವುದು, ಮೈಸೂರಿನ ಚಾಮುಂಡಿಯ ದೈವತ್ವವನ್ನು, ಮಹಿಷಾಸುರನ ದೆವ್ವತ್ವವನ್ನು ಐತಿಹಾಸಿಕ ಎಂದು ಪ್ರಮಾಣಿಸುತ್ತಿರುವುದು- ಎಲ್ಲವೂ ಇಬ್ಬಗೆಯ ಲಿಂಗಸಂಸ್ಕಾರವಿಲ್ಲದ ಕಮ್ಯುನಿ-ಪ್ರಣೀತ ಲಿಂಗಾಹತಿಗಳ ಇಬ್ಬಗೆಯ ಕೆಲವು ಸಾಂಸ್ಕೃತಿಕ ಸಂಶೋಧನಾ ಉದಾಹರಣೆಗಳು.
ಒಟ್ಟಾರೆ ಪೌರಾಣಿಕವೋ ಐತಿಹಾಸಿಕವೋ, ರಾಷ್ಟ್ರೀಯವಾಗಿ ಸೃಜನಶೀಲ ರಾಮನನ್ನು ಭಾರತೀಯ ಸಮಾಜ ಅಪ್ಪಿ ಒಪ್ಪಿರುವ ಹಿನ್ನೆಲೆಯಲ್ಲಿ ಬಸವಣ್ಣನೂ ಒಪ್ಪಿತವೇ ಆಗಬೇಕು. ಏಕೆಂದರೆ ಮೂರ್ತ ರೂಪದ ಇಂಥ ಒಂದು ಅಮೂರ್ತ ಆದರ್ಶವು ಜಗತ್ತಿನ ಪ್ರತಿಯೊಬ್ಬ ಮನುಷ್ಯಜೀವಿಗೆ ಮಾದರಿ ಯಾಗಲೇಬೇಕು. ರಾಮನು ‘ಮರ್ಯಾದಾ ಪುರುಷೋತ್ತಮ’ ಎನಿಸಿದರೆ ಬಸವಣ್ಣನು ‘ಸಾಂಸ್ಕೃತಿಕ ಪುರುಷೋತ್ತಮ.’ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವೀರಶೈವ ಲಿಂಗವಂತ ಮಾನವ ಧರ್ಮದ ಆಚಾರವಂತ ತತ್ವವನ್ನು ವಿಚಾರವಂತನಾಗಿ ಸಮಾನತೆಯನ್ನು ಮೆರೆಸಿದವನು ಭಕ್ತಿ ಭಂಡಾರಿ ಬಸವಣ್ಣ!
ಹಾಗಾಗಿಯೇ ಈತ ಕೇವಲ ಕರ್ನಾಟಕದ ಸಾಂಸ್ಕೃತಿಕ ಪ್ರತೀಕವಲ್ಲದೆ ಇಡೀ ಮಾನವ ಕುಲದ ಸಾಂಸ್ಕೃತಿಕ ಪ್ರತೀಕವೇ ಎನಿಸಿದ್ದಾನೆ. ಆದರೆ ಅವನನ್ನು ನಿರೂಪಿಸುವಲ್ಲಿ ಕರ್ನಾಟಕದ ಪೂರ್ವ ಗ್ರಹಿ ಸಾಂಸ್ಕೃತಿಕ ಸಂಶೋಧನಾ ವಲಯ ದಾರುಣವಾಗಿ ಸೋತಿದೆ. ತಾರ್ಕಿಕವಾಗಿ ವಾಸ್ತವಿಕ ಹೊಳಹುಗಳನ್ನು ಎತ್ತಿ ಹಿಡಿಯುವ ಕೆಲವೇ ಕೆಲವು ಸಂಶೋಧಕರನ್ನು ಕೂಪಮಂಡೂಕ ಸಂಶೋಧಗ ಲಿಂಗಾಹತಿಗಳು ಗುಂಪುಗೂಡಿ ಸೈದ್ಧಾಂತಿಕ ಮಾಫಿಯಾ ರೂಪಿಸಿ ಗೌಣವಾಗಿಸುವಲ್ಲಿ ನಿರತರಾಗಿದ್ದಾರೆ.
ಉದಾಹರಣೆಗೆ, ಹಿರಿಯ ಸಂಶೋಧಕರಾದ ಪ್ರೊ.ಸಂಗಮೇಶ ಸವದತ್ತಿಮಠರು, “ವಚನಗಳು 12ನೇ ಶತಮಾನದವೇ ಇರಬೇಕು ಎಂದು ಭಾಷಾದೃಷ್ಟಿಯಿಂದ ನೋಡಿದಾಗ ಕೆಲ ಎಳೆಗಳು ಸಿಗುತ್ತವೆ. ಉದಾಹರಣೆಗೆ ಅಕ್ಕಮಹಾದೇವಿಯ ವಚನಗಳಲ್ಲಿ ಶಕಟ ರೇಫ್ ಬಳಕೆ ಆಗಿದೆ. ಆ ವರ್ಣವು 12ನೇ ಶತಮಾನದ ನಂತರ ನಿಂತುಹೋಗಿದೆ. ಆ ಕಾಲದ ಕೆಲವು ಶಬ್ದ ಪ್ರಯೋಗಳು ವಚನಗಳಲ್ಲಿದ್ದರೂ ಅವುಗಳ ಸಂಖ್ಯೆ ಕಡಿಮೆ ಇದ್ದು ವಚನಗಳ ತುಂಬ ಮಧ್ಯಕಾಲೀನ ಕನ್ನಡ ಬಳಕೆ ಆಗಿದೆ.
ಈ ಕುರಿತು ಸಂಶೋಧನೆಗಳೂ ಆಗಿವೆ. ವಿಚಾರ ಸಂಕಿರಣಗಳೂ ಆಗಿವೆ. ಈ ಬಗ್ಗೆ ಹೆಚ್ಚಿನ ಸಂಶೋ ಧನೆಗಳು ಆದರೆ ತಾರ್ಕಿಕವಾಗಿ ವಚನಗಳನ್ನು 12ನೇ ಶತಮಾನದವೆಂಬ ಖಚಿತತೆಯನ್ನು ತರಬಹುದು" ಎನ್ನುತ್ತಾರೆ. ಆದರೆ ಜಾತಿಯ ಕಾರಣ ಇವರ ಎಲ್ಲಾ ಸಂಶೋಧನೆಗಳನ್ನು ಜನಾಂಗೀ ಯ ದ್ವೇಷದ ಲಿಂಗಾಹತಿಗಳು ಗೌಣವಾಗಿಸುತ್ತಾರೆ. ಅದೇ ರೀತಿ ಇನ್ನೊಂದು ವಾಸ್ತವಿಕ ಹೊಳಹು ಎಂದರೆ ಬಸವಣ್ಣನು ಆತ್ಮಹತ್ಯೆ ಮಾಡಿಕೊಂಡಿರದೆ ತನ್ನದೇ ಶರಣ ಪಡೆಯ ಅಪ್ರಾಮಾಣಿಕರ ಕುತಂತ್ರಕ್ಕೆ ಬಲಿಯಾಗಿರಬಹುದು ಎನ್ನುವುದು!
ತುರುಗಾಹಿ ರಾಮಣ್ಣನ ವಚನ ಈ ಬಗ್ಗೆ ಹೊಳಹು ನೀಡುತ್ತದೆ: “ಬಂದಿತ್ತು ದಿನ ಬಸವಣ್ಣ ಕಲ್ಲಿಗೆ ಚನ್ನಬಸವಣ್ಣ ಉಳುವೆಯಲ್ಲಿಗೆ ಪ್ರಭು ಅಕ್ಕ ಕದಳಿದ್ವಾರಕ್ಕೆ ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ ಅಡಗಿಹರೆಲ್ಲರು ಅಡಗಿದುದ ಕೇಳಿ ನಾ ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು"- ಇಲ್ಲಿ ‘ಕಲ್ಲಿಗೆ’ ಎಂದರೆ ನಾನೂ ಸೇರಿದಂತೆ ಹಲವರು ಸಮಾಧಿಗೆ ಎಂದು ಅರ್ಥೈಸಿದ್ದಾರೆ.
ಆದರೆ ‘ಕಲ್ಲಿಗೆ’ಎಂಬುದು ಬಲೆ/ಜಾಲ ಎಂಬ ಅರ್ಥವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಬಸವಣ್ಣನ ಅತೃಪ್ತ ಸಹವರ್ತಿಗಳು ಸೋವೇಶನ ಸೈನ್ಯದ ಜತೆಗೋ ರಾಯಮುರಾರಿಯ ಜತೆಗೋ ಕೈಜೋಡಿಸಿ ಹತ್ಯೆ ಮಾಡಿಸಿರಲೂಬಹುದು. ಅಥವಾ ಮೀನಿನ ಬಲೆಯಲ್ಲಿ ಸಿಲುಕಿಸಿ ಮುಳುಗಿಸಿ ರಲೂ ಬಹುದು. ಇದನ್ನೆ ತಾರ್ಕಿಕವಾಗಿ ವಿಶ್ಲೇಷಿಸುವ ಯಾವ ಸಂಶೋಧನೆಗಳು ನಡೆದಿವೆಯೋ ಗೊತ್ತಿಲ್ಲ. ಏಕೆಂದರೆ ವಚನಗಳನ್ನು ಬಸವ ತಾಲಿಬಾನಿಗಳು ಪ್ರಾಮಾಣಿಸಿದ, ಅಧಿಕೃತಗೊಳಿಸಿದ ಪಾಮರರು ಮಾತ್ರ ವ್ಯಾಖ್ಯಾನಿಸಬೇಕು ಎಂಬ ಲಿಂಗಾಹತ ಬಸವಫತ್ವಾ ಜಾರಿಗೊಳಿಸಿ ದ್ದಾರೆ.
ಹೀಗೆ ಬಸವ ತಾಲಿಬಾನಿಗಳು ತಮ್ಮ ಮೂರ್ಖತನವನ್ನು ಇನ್ನಷ್ಟು ಮೇಲ್‌ಸ್ತರಕ್ಕೇರಿಸಿ(?) ಬಸವಣ್ಣನನ್ನು ತಾರ್ಕಿಕವಾಗಿ ನಿರ್ನಾಮ ಮಾಡುವ ಎ ಕುತರ್ಕಗಳನ್ನು ಕರ್ಮಠರಾಗಿ ಪಾಲಿಸುತ್ತಿದ್ದಾರೆ. ಇವರ ಜನಾಂಗೀಯ ಜುಗುಪ್ಸೆ ಅವರನ್ನೇ ಸುಡುವುದು ನಿಶ್ಚಿತ. ಇವರ ಆದ್ಯ ಮುಖಂಡ ಮಾಜಿ ಐಎಎಸ್ ಅಧಿಕಾರಿ ತಾವಿನ್ನೂ “ಅಂಗ್ರೇಜೋಂಕೆ ಜಮಾನೆ ಕಾ ಲಾರ್ಡ್ ಸಾಬ್" ಎಂಬ ದರ್ಪದಲ್ಲಿ ಬಸವಣ್ಣನ, “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ" ಎಂಬ ಸಹಮಾನವತ್ವದ ಒಂದು ವಚನವನ್ನೂ ಪಾಲಿಸದೆ ಬಸವ ಮುಖಂಡತ್ವದ ಸರ್ವಾಧಿಕಾರಿಯಂತೆ ಎಲ್ಲರನ್ನೂ ಸಾರ್ವಜನಿಕ ಮಾಧ್ಯಮಗಳಲ್ಲಿ ಸಹ ಏಕವಚನದಲ್ಲಿ ಸಂಬೋಧಿಸುವ ಕರ್ಮಠ ಅಹಮ್ಮಿನ ಮಾದರಿಯಾಗಿದ್ದಾರೆ.
ಧರ್ಮದ ತಿರುಳಿನ ಎರಡಿಂಚು ಆಳಕ್ಕೂ ಇಳಿಯದೆ ಕೇವಲ ಜಾತಿಲಾಬಿ ಮಾಡುವ ಕಾವಿಧಾರಿಗಳು, ಸಾಂಸ್ಕೃತಿಕ ಅಧ್ಯಯನಗಳ ಗಂಧಗಾಳಿಯೂ ಇರದ ಆದರೆ ಅದರಲ್ಲಿ ಪಿಎಚ್‌ಡಿ ಪಡೆದ ‘ಡಾ. ದಟ್’, ‘ಡಾ. ದಿಸ್’ ಮಹಾಶಯರು, ಕಳಬೇಡ ಕೊಲಬೇಡ ವಚನದಾಚೆಗೆ ಏನನ್ನೂ ಅರಿಯದ ಶಿಶುವಿಹಾರಿ ಗೌರವ(?) ಡಾಕ್ಟೋರೇಟ್ ಶ್ವೇತವಸಧಾರಿ ಅಣ್ಣಂದಿರು/ಅಕ್ಕಂದಿರು, ವಿಶ್ವವಿದ್ಯಾ ಲಯದ ಪ್ರೊ-ಸರರು, ಸಂಶೋಧಕರು, ಸ್ವಘೋಷಿತ ಬುದ್ಧಿಜೀವಿಗಳು ಈ ಶಿಥಿಲ ಸಂಕಥನವನ್ನು ಸೃಷ್ಟಿಸಿ ಜನಸಾಮಾನ್ಯರಿಗೆ ಮೀಸಲಾತಿಯ ತುಪ್ಪ ಹಚ್ಚಿ ಧಾರ್ಮಿಕ ಶೋಷಣೆ ನಡೆಸುತ್ತಿರುವುದು ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಅಧ್ಯಯನದ ‘ಶತಮಾನದ ವಿಪರ್ಯಾಸ!’ ಲಿಂಗಾಹತ ಚಳವಳಿಯ ಬಳುವಳಿಯೇ ಸದ್ಯದ ಸುದ್ದಿಯಾಗಿರುವ ಜನಗಣತಿಯ ಕುಸಿತ!
ಈ ಕರ್ಮಠರಿಂದ ಬಸವಣ್ಣನನ್ನು ಬಿಡಿಸಿ ಆತನ ಮಾರ್ಕ್ಸ್‌ವಾದಿ ರೂಪವನ್ನು ತೊಡೆದು ಆಧ್ಯಾ ತ್ಮಿಕ ವೀರಶೈವ ಬಸವಣ್ಣನನ್ನು ನಿರೂಪಿಸುವ ಜವಾಬ್ದಾರಿ ಎಲ್ಲಾ ಲಿಂಗವಂತ ವೀರಶೈವರ ತುರ್ತು! ಇಲ್ಲದಿದ್ದರೆ ಇವನಾರವ ಇವನಾರವ ಇವನಾರವರವರವವಷ್ಟೇ.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)