Harish Poonja: ಕೋಮು ದ್ವೇಷ ಭಾಷಣ ಆರೋಪ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್
ಮುಸ್ಲಿಮರ ವಿರುದ್ಧ ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಮಾತನಾಡಿದ ಅವರು, ಮುಸ್ಲಿಮರ ವಿರುದ್ದ ಅವಹೇಳನಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ.

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ, ಫೈರ್ ಬ್ರ್ಯಾಂಡ್ ಖ್ಯಾತಿಯ ಹರೀಶ್ ಪೂಂಜಾ (Harish Poonja) ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತದೆ. ಇದೀಗ ಮುಸ್ಲಿಮರ ವಿರುದ್ಧ ಕೋಮು ಪ್ರಚೋದಿತ ಭಾಷಣ ಮಾಡಿದ ಆರೋಪದಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದ (Tekkaru Gopalkrishna Temple) ಬ್ರಹ್ಮಕಲಶೋತ್ಸವದಲ್ಲಿ ಶನಿವಾರ (ಮೇ 3) ಮಾತನಾಡಿದ ಅವರು, ಮುಸ್ಲಿಮರ ವಿರುದ್ದ ಅವಹೇಳನಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ಠಾಣೆ ಮೆಟ್ಟಿಲೇರಿದೆ.
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜಾ ಕೋಮು ದ್ವೇಷ ಹರಡಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ತೆಕ್ಕಾರು ನಿವಾಸಿ ಇಬ್ರಾಹಿಂ ಎಸ್.ಬಿ. ಎನ್ನುವವರು ದೂರು ದಾಖಲಿಸಿದ್ದಾರೆ.
ಹರೀಶ್ ಪೂಂಜಾ ಹೇಳಿದ್ದೇನು?
“ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಮಸೀದಿಗೆ ಹೋಗಿ ಕೊಟ್ಟ ಕಾರಣ ಮುಸ್ಲಿಮರು ಟ್ಯೂಬ್ ಒಡೆದಿದ್ದಾರೆ. ಅವರಿಗೆ ಆಹ್ವಾನ ಪತ್ರಿಕೆ ಕೊಡಬಾರದಿತ್ತು. ಅವರನ್ನು ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು ಹಿಂದೂಗಳೇ. ಅವರನ್ನು ಸೇರಿಸಬಾರದು” ಎಂದು ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದೂರಿನಲ್ಲಿ ಏನಿದೆ?
ಹರೀಶ್ ಪೂಂಜಾ ಅವರ ವಿರುದ್ಧ ಬಿಎನ್‌ಎಸ್‌ಎಸ್ (BNSS) ಆಕ್ಟ್ 196, 352(2) ಅಡಿ ಪ್ರಕರಣ ದಾಖಲಿಸಲಾಗಿದೆ. ಭಾಷಣವು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನು ಬಿತ್ತಬಹುದು ಮತ್ತು ಈ ಪ್ರದೇಶದಲ್ಲಿ ಕೋಮು ಸೌಹಾರ್ದತೆಯನ್ನು ಭಂಗಗೊಳಿಸಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಸದ್ಯ ವಿವಾದದ ಕುರಿತಂತೆ ಹರೀಶ್ ಪೂಂಜಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸುದ್ದಿಯನ್ನೂ ಓದಿ: Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಇನ್ನಿಬ್ಬರು ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ
ಸ್ಪೀಕರ್ ವಿರುದ್ದ ಮಾತನಾಡಿದ್ದ ಹರೀಶ್ ಪೂಂಜಾ
ಕೆಲವು ದಿನಗಳ ಹಿಂದೆ ಹರಿಶ್ ಪೂಂಜಾ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ಹಲವು ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹಕ್ಕು ಬಾಧ್ಯತೆ ಸಮಿತಿಗೆ ದೂರು ನೀಡಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಸ್ಪೀಕರ್ ಯು.ಟಿ.ಖಾದರ್, ʼʼಕಳೆದ ವಿಧಾನಮಂಡಲ ಅಧಿವೇಶನದ ವೇಳೆ ಬಿಜೆಪಿ ಶಾಸಕರ ಅಮಾನತು ಕುರಿತು ಪ್ರತಿಕ್ರಿಯಿಸಿದ್ದ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿಶೇಷಾಧಿಕಾರ ಸಮಿತಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ವಿಡಿಯೊ ದೃಶ್ಯಾವಳಿ ಸೇರಿದಂತೆ ಸಾಕ್ಷ್ಯಗಳನ್ನು ವಿಶ್ಲೇಷಿಸಲಿದೆʼʼ ಎಂದು ತಿಳಿಸಿದ್ದರು.
ʼʼಕೆಲ ಶಾಸಕರಿಗೆ ಏನಾದರೂ ಮಾತನಾಡುವ ಚಾಳಿ ಇರುತ್ತದೆ. ತಮಗೆ ಪ್ರಚಾರ ಸಿಗುತ್ತದೆ ಎಂದು ಆ ರೀತಿ ಮಾತನಾಡ್ತಾರೆ. ಅವರ ಹೇಳಿಕೆ ಸಂವಿಧಾನಕ್ಕೆ ಬದ್ಧವಾಗಿರಬೇಕು. ಈ ಕುರಿತು ಕೆಲವು ಶಾಸಕರು ಹಕ್ಕುಚ್ಯುತಿ ಸಮಿತಿಗೆ ದೂರು ಕೊಟ್ಟಿದ್ದಾರೆ. ಸಮಿತಿಯೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆʼʼ ಎಂದು ಹೇಳಿದ್ದರು.