ಪಾಕಿಸ್ತಾನದಿಂದ ಶೆಲ್ ದಾಳಿ; ಜಮ್ಮುವಿನಲ್ಲಿ ಬಿಎಸ್‌ಎಫ್ ಯೋಧ ಹುತಾತ್ಮ: 7 ಮಂದಿಗೆ ಗಾಯ
Mohammed Imteyaz: ಪಾಕಿಸ್ತಾನದ ಅಪ್ರಚೋದಿನ ದಾಳಿಗೆ ಬಿಎಸ್‌ಎಸ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮೇ 10ರಂದು ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕ್ ಶೆಲ್ ದಾಳಿ ನಡೆಸಿದ್ದು, ಬಿಎಸ್‌ಎಫ್ ಯೋಧ ಮೊಹಮ್ಮದ್ ಇಮ್ತಿಯಾಸ್ ವೀರ ಮರಣ ಹೊಂದಿದ್ದಾರೆ.

ಮೊಹಮ್ಮದ್ ಇಮ್ತಿಯಾಸ್

ಶ್ರೀನಗರ: ಪಾಕಿಸ್ತಾನದ ಅಪ್ರಚೋದಿನ ದಾಳಿಗೆ ಬಿಎಸ್‌ಎಸ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಜತೆಗೆ 7 ಮಂದಿ ಗಾಯಗೊಂಡಿದ್ದಾರೆ. ಮೇ 10ರಂದು ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕ್ ಶೆಲ್ ದಾಳಿ ನಡೆಸಿದ್ದು, ಬಿಎಸ್‌ಎಫ್ ಯೋಧ ಮೊಹಮ್ಮದ್ ಇಮ್ತಿಯಾಸ್ (Mohammed Imteyaz) ವೀರ ಮರಣ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮುವಿನ ಆರ್.ಎಸ್.ಪುರ ಸೆಕ್ಟರ್ ಬಳಿ ಈ ದಾಳಿ ನಡೆದಿದೆ. ಗಾಯಗೊಂಡ ಬಿಎಸ್‌ಎಫ್‌ನ 7 ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ʼʼಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತಿಯಾಸ್ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆʼʼ ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
We salute the supreme sacrifice made by BSF #Braveheart Sub Inspector Md Imteyaz in service of the nation on 10 May 2025 during cross border firing along the International Boundary in R S Pura area, District Jammu.
— BSF JAMMU (@bsf_jammu) May 10, 2025
While leading a BSF border out post, he gallantly led from the… pic.twitter.com/crXeVFSgUZ
ʼʼದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಿಎಸ್‌ಎಫ್‌ನ ಧೀರ ಯೋಧ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಇಮ್ತಿಯಾಸ್ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಪಾಕಿಸ್ತಾನ ಅಪ್ರಚೋದಿನ ದಾಳಿ ವೇಳೆ ಅವರು ಮೇ 10ರಂದು ಹುತಾತ್ಮರಾಗಿದ್ದಾರೆ. ಅಂತಾರಾಷ್ಟ್ರೀಯ ಗಡಿ ಜಮ್ಮುವಿನ ಆರ್.ಎಸ್.ಪುರ ಸೆಕ್ಟರ್ ಬಳಿ ಈ ದಾಳಿ ನಡೆದಿದೆʼʼ ಎಂದು ಬಿಎಸ್‌ಎಫ್ ಎಕ್ಸ್ ಮೂಲಕ ತಿಳಿಸಿದೆ. ಇಮ್ತಿಯಾಸ್ ಅವರಿಗೆ ಮೇ 11ರಂದು ಅಂತಿಮ ಗೌರವ ಸಲ್ಲಿಸಲಾಗುತ್ತದೆ. ಗಾಯಗೊಂಡ ಇತರ ಬಿಎಸ್‌ಎಫ್ ಯೋಧರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಭಾರತದ ಸುಮಾರು 2,000 ಕಿ.ಮೀ. ಉದ್ದದ ಗಡಿಯ ರಕ್ಷಣೆಯ ಜವಾಬ್ದಾರಿ ಹೊತ್ತುಕೊಂಡಿದೆ.
ಮೇ 10ರ ಸಂಜೆಯಷ್ಟೇ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದ ಪಾಕಿಸ್ತಾನ ಸಂಜೆಯಾಗುತ್ತಿದ್ದಂತೆ ಉಲ್ಲಂಘಿಸಿದ್ದು, ಮತ್ತೆ ಭಾರತದತ್ತ ದಾಳಿ ಮುಂದುವರಿಸಿದೆ. ಗಡಿ ರಾಜ್ಯಗಳಾದ ಜಮ್ಮು ಕಾಶ್ಮೀರ, ಗುಜರಾತ್, ಪಂಜಾಬ್, ರಾಜಸ್ಥಾನಗಳಲ್ಲಿ ವಿವಿಧ ಕಡೆಗಳಲ್ಲಿ ಪಾಕ್‌ನ ಹಲವು ಡ್ರೋನ್‌ಗಳು ಕಂಡು ಬಂದಿದ್ದು, ಭಾರತೀಯ ಸೇನೆ ಹೊಡೆದುರುಳಿಸಿದೆ.
ಈ ಸುದ್ದಿಯನ್ನೂ ಓದಿ: India-Pak ceasefire:ಕದನ ವಿರಾಮದ ಬೆನ್ನಲ್ಲೇ ಪಾಕ್ ಪುಂಡಾಟ; ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಅಟ್ಯಾಕ್
ಆಂಧ್ರದ ಸೈನಿಕ ಮುರಳಿ ನಾಯಕ್ ವೀರ ಮರಣ
ಅಮರಾವತಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರ ಪ್ರದೇಶ ಮೂಲದ ಸೈನಿಕರೊಬ್ಬರು ಮೇ 8 ವೀರ ಮರಣ ಹೊಂದಿದ್ದರು. ಮುರಳಿ ನಾಯಕ್ (23) ಹುತಾತ್ಮರಾದ ಯೋಧ. ಯೋಧ ಮುರಳಿ ನಾಯಕ್ 2022ರ ಅಕ್ಟೋಬರ್ನಲ್ಲಿ ಅಗ್ನಿವೀರ್‌ಗೆ ಆಯ್ಕೆಯಾಗಿದ್ದರು. ಅವರು ಮಹಾರಾಷ್ಟ್ರದ ನಾಸಿಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 8ರಂದು ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕರ್ತವ್ಯದಲ್ಲಿದ್ದಾಗ ಮುರಳಿ ನಾಯಕ್, ಗುಂಡಿನ ಚಕಮಕಿಯಲ್ಲಿ 5 ನುಸುಳುಕೋರರನ್ನು ಹೊಡೆದುರುಳಿಸಿ ಬಳಿಕ ಪ್ರಾಣ ತ್ಯಾಗ ಮಾಡಿದ್ದರು. ಇವರು ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ತಾಲೂಕಿನ ಗೋರಂಟ್ಲಾ ಮಂಡಲ ಮೂಲದವರು.
ಮುರಳಿ ನಾಯಕ್ ತಂದೆ ಶ್ರೀರಾಮ್ ನಾಯಕ್ ಮಗನ ಸಾವಿನ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿ, "ಮೇ 9ರ ಬೆಳಗ್ಗೆ ಸೇನಾ ಅಧಿಕಾರಿಗಳು ಕರೆ ಮಾಡಿ ನಮ್ಮ ಮಗನ ಸಾವಿನ ಸುದ್ದಿ ತಿಳಿಸಿದರು. ಗುಂಡಿನ ಚಕಮಕಿಯಲ್ಲಿ ನನ್ನ ಮಗ ಮುರಳಿಯನ್ನು ಕಳೆದುಕೊಂಡಿದ್ದೇವೆ. ಅವನನ್ನು ಕಾಶ್ಮೀರದಲ್ಲಿ ನಿಯೋಜಿಸಲಾಗಿತ್ತು. ಅವನು ಈ ವಿಷಯವನ್ನು ನಮ್ಮಿಂದ ಮುಚ್ಚಿಟ್ಟಿದ್ದನು. ಪಂಜಾಬ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಮುರಳಿ ನಮಗೆ ಹೇಳಿದ್ದʼʼ ಎಂದು ದುಃಖ ತೋಡಿಕೊಂಡಿದ್ದರು.