ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ರಾತ್ರಿ ಇಡೀ ಏಸಿಯಲ್ಲೇ ಮಲಗುತ್ತೀರಾ? ಇದನ್ನೊಮ್ಮೆ ಓದಿ

Side Effects of Using AC: ಸೆಕೆಯ ಕಾರಣದಿಂದ ಏಸಿ (ಏರ್‌ ಕಂಡೀಶನರ್‌)ಯನ್ನು ಅತಿಯಾಗಿ ಬಳಸುವವರು ನೀವಾ? ಹಾಗಾದರೆ ನೀವು ಈ ಸುದ್ದಿಯನ್ನು ಓದಲೇ ಬೇಕು. ಅತಿಯಾದ ಏಸಿ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದೇನು ಎನ್ನುವ ವಿವರ ಇಲ್ಲಿದೆ.

ಗಮನಿಸಿ; ಅತಿಯಾದ ಏಸಿ ಬಳಕೆ ಆರೋಗ್ಯಕ್ಕೆ ಮಾರಕ

ಸಾಂದರ್ಭಿಕ ಚಿತ್ರ.

Profile Ramesh B Apr 30, 2025 7:00 AM

ಬೆಂಗಳೂರು: ಸೆಕೆಯ ಕಾರಣದಿಂದ ಫ್ಯಾನ್‌, ಕೂಲರ್‌ ಅಥವಾ ಏಸಿ (ಏರ್‌ ಕಂಡೀಶನರ್‌) ವ್ಯವಸ್ಥೆಯನ್ನು ಅವಲಂಬಿಸದೆ ಇರುವವರು ಬಹುಶಃ ಸಾವಿಲ್ಲದ ಮನೆಯ ಸಾಸಿವೆಯಂತೆ ಎಲ್ಲಿಯೂ ಸಿಗಲಿಕ್ಕಿಲ್ಲ. ಸೆಕೆಯ ಪ್ರತಾಪ ತೀವ್ರವಾಗಿರುವ ನಡುಹಗಲಿನ ಹೊತ್ತಿನಲ್ಲಿ ಹವಾನಿಯಂತ್ರಕಗಳ ಬಳಕೆ ಅತಿ ಹೆಚ್ಚು (Health Tips). ಹೀಗೆ ದಿನದಲ್ಲಿ ಒಂದಿಷ್ಟು ಹೊತ್ತು ಏಸಿ ಅಡಿಯಲ್ಲಿ ಇರುವುದರಿಂದ ತಂಪಾಗುವುದು ನಿಜ, ಆದರೆ ಎಷ್ಟು ಹೊತ್ತು? ದಿನವಿಡೀ ಹವಾನಿಯಂತ್ರಣ ವ್ಯವಸ್ಥೆಯ ಅಡಿಯಲ್ಲೇ ಇರಬಹುದೇ? ರಾತ್ರಿಡೀ ಅದರಡಿಯಲ್ಲೇ ಮಲಗಬಹುದೇ? ಇಡೀ ರಾತ್ರಿ ಏಸಿ ಬಳಸುವ ಬಗ್ಗೆ ಆರೋಗ್ಯ ತಜ್ಞರಿಂದ ಕೆಲವು ಎಚ್ಚರಿಕೆಯ ಮಾತುಗಳೂ ಕೇಳಿ ಬರುತ್ತವಲ್ಲ, ಏನು? ಯಾಕೆ?

ನೋವು: ಅತಿಯಾದ ಏಸಿ ಬಳಕೆಯು ದೇಹದ ಸ್ನಾಯುಗಳನ್ನು ಗಡುಸಾಗಿಸಬಲ್ಲದು. ಇದರಿಂದ ದೇಹದೆಲ್ಲೆಡೆ ನೋವು ಹೆಚ್ಚುತ್ತದೆ. ಈಗಾಗಲೇ ನೋವಿನ ಸಮಸ್ಯೆ ಇದ್ದವರಿಗಂತೂ ಇದು ಇನ್ನಷ್ಟು ಸಂಕಷ್ಟಗಳನ್ನು ತಂದೊಡ್ಡಬಲ್ಲದು. ಹಾಗಾಗಿ ಇಡೀ ರಾತ್ರಿ ಏಸಿ ಉಪಯೋಗಿಸುವುದು ಅನಿವಾರ್ಯ, ಸುಡುವಷ್ಟು ಧಗೆಯಿದೆ ಎಂದಾದರೆ ಸರಿಯಾದ ಹಾಸಿಗೆ-ದಿಂಬುಗಳನ್ನು ಬಳಸಿ. ಬೆನ್ನು, ಕುತ್ತಿಗೆ ಮುಂತಾದೆಡೆ ಒಳ್ಳೆಯ ಆಧಾರ ದೊರೆತರೆ ನೋವಿನ ಬಾಧೆಯನ್ನೂ ಕಡಿಮೆ ಮಾಡಬಹುದು.

ಈ ಸುದ್ದಿಯನ್ನೂ ಓದಿ: Health Tips: ಕಲ್ಲಂಗಡಿಯೆಂಬ ರಸಭರಿತ ಹಣ್ಣಿನ ಸತ್ವಗಳು ಗೊತ್ತೇ?

ಇನ್ನಷ್ಟು ತೊಂದರೆಗಳು: ತೊಂದರೆ ಮೊದಲು ಕಾಣಿಸಿಕೊಳ್ಳುವುದು ಚರ್ಮದಲ್ಲಿ. ಸದಾ ತಣ್ಣಗಿನ ಕೃತಕ ವಾತಾವರಣದಲ್ಲಿ ನೀರು ಕುಡಿಯುವ ದಾಹವೇ ಕಡಿಮೆಯಾಗಬಹುದು. ಇದರಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗಿ, ಚರ್ಮವೆಲ್ಲ ಒಣಗಿದಂತಾಗುತ್ತದೆ. ತ್ವಚೆಯು ಕಾಂತಿ ಕಳೆದುಕೊಂಡು ನಿಸ್ತೇಜವಾಗಿ, ಸುಕ್ಕಾದಂತೆ ಕಾಣುತ್ತದೆ. ಕಣ್ಣೂ ತೇವ ಕಳೆದುಕೊಂಡು ಶುಷ್ಕವಾಗಬಹುದು. ಇದರಿಂದ ಕಣ್ಣು ಕೆಂಪಾಗುವುದು, ತುರಿಕೆಯಂಥ ತೊಂದರೆಗಳು ಗಂಟು ಬೀಳಬಹುದು. ಬಾಯಿ, ಮೂಗು, ಗಂಟಲಿನ ಭಾಗವೆಲ್ಲ ಶುಷ್ಕವಾಗಿ ಅಲರ್ಜಿಯ ಸಾಧ್ಯತೆ ಅಧಿಕವಾಗಬಹುದು. ಒಂದೊಮ್ಮೆ ಸತತವಾಗಿ ಎಸಿ ಬಳಸುವುದು ಅನಿವಾರ್ಯ ಎಂದಾದರೆ, ವಾತಾವರಣದ ತೇವ ಹೆಚ್ಚಿಸುವ ಹ್ಯುಮಿಡಿಫಯರ್‌ ಸಹ ಬಳಸುವುದು ಜಾಣತನ.

ಬೆಳಗಿನ ಜಾವ 4-6 ಗಂಟೆಯ ಹೊತ್ತಿಗೆ ದೇಹದ ಉಷ್ಣತೆ ಸಾಕಷ್ಟು ಇಳಿದಿರುತ್ತದೆ. ಈ ಹೊತ್ತಿನಲ್ಲೂ ಏಸಿ ಅಡಿಯಲ್ಲಿ ಮಲಗುವುದರಿಂದ ಜೀರ್ಣಾಂಗಗಳ ಸಮಸ್ಯೆ ಕಾಣಿಸಬಹುದು, ಹಾರ್ಮೋನುಗಳ ಏರುಪೇರಿಗೂ ಕಾರಣವಾಗಬಹುದು. ಹವಾನಿಯಂತ್ರಕ ನೀಡುವಂಥ ಶುಷ್ಕವಾದ ತಣ್ಣನೆಯ ಗಾಳಿಯು ಶ್ವಾಸಕೋಶಗಳಿಗೆ ಕಿರಿಕಿರಿ ನೀಡಬಹುದು. ಇದರಿಂದ ಅಲರ್ಜಿಗಳು, ಅಸ್ತಮಾ ಮತ್ತು ಶ್ವಾಸಕೋಶದ ಸೋಂಕಿನ ತೊಂದರೆ ಉಲ್ಭಣಿಸಬಹುದು. ಜೊತೆಗೆ ದೀರ್ಘ ಕಾಲದವರೆಗೆ ಎಸಿಯ ತಣ್ಣನೆಯ ಗಾಳಿಗೆ ಒಡ್ಡಿಕೊಂಡಾಗ ಫ್ಲೂ ಮಾದರಿಯ ಶೀತ, ಜ್ವರವನ್ನು ಅಂಟಿಸಿಕೊಳ್ಳುವ ಸಾಧ್ಯತೆಗಳೂ ಅಧಿಕ. ಇಂಥ ಸಮಸ್ಯೆಗಳಿಗೆ ಕಡಿವಾಣ ಹಾಕುವ ಉದ್ದೇಶವಿದ್ದರೆ, ಎಸಿ ಫಿಲ್ಟರ್‌ಗಳನ್ನು ಸ್ವಚ್ಛವಾಗಿ ಇರಿಸಬೇಕು. ಉಷ್ಣತೆಯ ಏರಿಳಿತವನ್ನು ಕ್ರಮೇಣ ಮಾಡುವುದೊಳಿತು. ಜೊತೆಗೆ ಏರ್‌ ಪ್ಯೂರಿಫಯರ್‌ ಬಳಸುವ ಬಗ್ಗೆ ಯೋಚಿಸುವುದು ಸೂಕ್ತ.

AC 2

ಆಯಾಸ: ತಾಜಾ ಗಾಳಿಯಿಲ್ಲದೆ, ಇಡೀ ರಾತ್ರಿ ಅದದೇ ಗಾಳಿಯನ್ನು ಉಸಿರಾಡುತ್ತಿದ್ದಾಗ, ಸಹಜವಾಗಿ ದೇಹದ ಚೈತನ್ಯದ ಮಟ್ಟ ಕುಸಿಯುತ್ತದೆ. ಇಡೀ ರಾತ್ರಿ ತಾಜಾ ಗಾಳಿಯನ್ನು ಉಸಿರಾಡಿದಾಗ ಆದಂತಹ ಚೇತೋಹಾರಿಯಾದ ಅನುಭವ ಏಸಿ ಅಡಿಯಲ್ಲಿ ಮಲಗಿದಾಗ ದೊರೆಯುವುದಿಲ್ಲ. ರಾತ್ರಿಡೀ ನಿದ್ದೆ ಮಾಡಿದ್ದರೂ ಮಾರನೇ ದಿನ ಮತ್ತದೇ ಆಯಾಸ, ಸುಸ್ತಿನ ಅನುಭವದಿಂದ ಒದ್ದಾಡಬೇಕಾಗುತ್ತದೆ.

ಪ್ರತಿರೋಧಕತೆ ಕುಂಠಿತ: ಸತತವಾಗಿ ಹವಾನಿಯಂತ್ರಣದಡಿಯಲ್ಲಿ ಇರುವುದರಿಂದ ಪ್ರತಿರೋಧಕತೆ ಸಹ ಕುಂಠಿತವಾಗಬಹುದು. ಮುಖ್ಯವಾಗಿ ತಣ್ಣನೆಯ ಶುಷ್ಕ ವಾತಾವರಣವೇ ಇದಕ್ಕೆಲ್ಲ ಕಾರಣ. ಒಮ್ಮೆ ಯಾವುದಾದರೂ ರೋಗಾಣು ಎಸಿ ವಾತಾವರಣವನ್ನು ಹೊಕ್ಕಿದರೆ, ದೀರ್ಘ ಕಾಲದವರೆಗೆ ಅಲ್ಲಿಯೇ ಇರುತ್ತದೆ. ಹಾಗಾಗಿ ಎಸಿಯಿಂದ ಬಿಡುವು ತೆಗೆದುಕೊಳ್ಳುವುದು ಅಗತ್ಯ. ಸೂಕ್ತವಾದ ಪೋಷಕಾಂಶವನ್ನು ಆಹಾರದ ಮೂಲಕ ತೆಗೆದುಕೊಳ್ಳುವುದು ಸಹ ಇನ್ನೊಂದು ಮುಖ್ಯವಾದ ಅಂಶ.

ನಿದ್ರೆಯ ಗುಣಮಟ್ಟ: ಏಸಿ ತಾಪಮಾನವನ್ನು 17, 18 ಡಿಗ್ರಿಗಳಿಗೆ ಇರಿಸಿಕೊಂಡು ಎಂಥಾ ಬೇಸಿಗೆಯಲ್ಲೂ ಬೆಚ್ಚಗೆ ಹೊದ್ದು ಮಲಗುವವರನ್ನು ಹಲವೆಡೆ ಕಾಣಬಹುದು. ಆದರೆ ಇಂಥ ಕೆಲಸಗಳಿಂದ ನಿದ್ದೆಯ ಗುಣಮಟ್ಟ ಕುಸಿಯುತ್ತದೆ ಎನ್ನುವುದು ಮತ್ತೊಂದು ಸಮಸ್ಯೆ. ಹೊರಗಿನ ತಾಪಮಾನಕ್ಕಿಂತ ಮನೆಯೊಳಗೆ ಅಸಹಜವಾಗಿ ಅತಿ ಕಡಿಮೆ ತಾಪಮಾನವನ್ನು ಇರಿಸಿಕೊಂಡು ನಿದ್ರಿಸುವುದರಿಂದ ಚಳಿ ಹೆಚ್ಚಿ, ನಿದ್ರೆಯ ಬದಲು ಚಡಪಡಿಕೆ ಹೆಚ್ಚುವ ಸಂದರ್ಭವೇ ಅಧಿಕ. ಬದಲಿಗೆ ಒಂದಿಷ್ಟು ಹೊತ್ತು ಏಸಿ ಬಳಸಿ ಕೋಣೆಯನ್ನು ತಂಪಾಗಿಸಿಕೊಂಡು, ನಂತರ ಹೊರಗಿನ ಗಾಳಿ ಸಹಜವಾಗಿ ಒಳಗೆಲ್ಲ ಬರುವಂತೆ ಮಾಡುವುದು ಸರಿಯಾದ ಕ್ರಮ. ಈ ಹೊತ್ತಿಗೆ ಫ್ಯಾನ್‌, ಕೂಲರ್‌ ಮುಂತಾದ ಯಾವುದನ್ನೇ ಬಳಸಿದರೂ ಸಮಸ್ಯೆಯಿಲ್ಲ.

AC 3

ವಿದ್ಯುತ್‌ ಶಾಕ್:‌ ಏಸಿ ಮುಟ್ಟಿದರೆ ಶಾಕ್‌ ಹೊಡೆಯದಿದ್ದರೂ, ಸದಾಕಾಲ ಹವಾನಿಯಂತ್ರಕ ಸದ್ದು ಮಾಡುತ್ತಿದ್ದರೆ ವಿದ್ಯುತ್‌ ಬಿಲ್‌ ಏರುವುದು ದಿಟ. ಅಗತ್ಯಕ್ಕೆ ಬೇಕಷ್ಟೇ ಎಸಿಯನ್ನು ಬಳಸುವುದರಿಂದ ಅತಿಯಾದ ವಿದ್ಯುತ್‌ ಖರ್ಚನ್ನೂ ಉಳಿಸಬಹುದು. ಪರಿಸರಕ್ಕೆ ಎಸಿಯಿಂದ ಆಗುವ ಹಾನಿಯನ್ನೂ ಕಡಿಮೆ ಮಾಡಬಹುದು. ಹಾಗಾಗಿ ವಾತಾವರಣ ತಂಪಾಗಿಸುವ ಬದಲಿ ವ್ಯವಸ್ಥೆಯ ಬಗ್ಗೆಯೂ ಚಿಂತಿಸಿ, ಅಗತ್ಯಕ್ಕೆ ತಕ್ಕಷ್ಟೇ ಹವಾನಿಯಂತ್ರಕ ವ್ಯವಸ್ಥೆಯನ್ನು ಬಳಸಿ.