'Gayab' Post: ಬಿಜೆಪಿ ಆಕ್ರೋಶಕ್ಕೆ ಮಣಿದ ಕಾಂಗ್ರೆಸ್; ʼಗಯಾಬ್ʼ ಪೋಸ್ಟ್ ಡಿಲೀಟ್
Narendra Modi: ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ʼಗಯಾಬ್ʼ ಪೋಸ್ಟ್ ಶೇರ್ ಮಾಡಿಕೊಂಡಿತ್ತು. ಆ ಮೂಲಕಹುಟ್ಟುಹಾಕುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ಮುಂದಾಗಿತ್ತು. ಇದು ವಿವಾದ ಹುಟ್ಟುಹಾಕುತ್ತಿದ್ದಂತೆ ಇದೀಗ ಪೋಸ್ಟ್ ಡಿಲೀಟ್ ಮಾಡಿದೆ.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ (Congress) ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Pahalgam Attack) ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ʼಗಯಾಬ್ʼ ಪೋಸ್ಟ್ ('Gayab' Post) ಶೇರ್ ಮಾಡಿಕೊಂಡಿತ್ತು. ಇದರಲ್ಲಿ ಪ್ರಧಾನಿ ಮೋದಿ ಅವರನ್ನು ಹೋಲುವಂತ ತಲೆಯಿಲ್ಲದ, ಜುಬ್ಬ ತೊಟ್ಟಿರುವ ದೇಹ, ಕಪ್ಪು ಬಣ್ಣದ ಶೂ ಇರುವ ವ್ಯಕ್ತಿಯ ಚಿತ್ರವನ್ನು ಪೋಸ್ಟ್ ಮಾಡಿತ್ತು. ತಲೆ ಇರಬೇಕಾದ ಜಾಗದಲ್ಲಿ ಗಾಯಬ್ (ಕಾಣೆಯಾಗಿದ್ದಾರೆ) ಎಂದು ಬರೆದುಕೊಂಡಿತ್ತು. ಇದು ಸಾಕಷ್ಟು ವಿವಾದ ಹುಟ್ಟುಹಾಕಿದ್ದಲ್ಲೇ ಬಿಜೆಪಿ ಕಟುವಾಗಿ ಟೀಕಿಸಿತ್ತು. ಕಾಂಗ್ರೆಸ್ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಪೋಸ್ಟ್ ಡಿಲೀಟ್ ಮಾಡಿದ್ದು, ಆ ಮೂಲಕ ಮತ್ತೊಮ್ಮೆ ಕೈ ಸುಟ್ಟುಕೊಂಡಿದೆ.
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರು ಬಲಿಯಾಗಿದ್ದರು. ಈ ಘಟನೆಯನ್ನು ಖಂಡಿಸಿ ಇತ್ತೀಚೆಗೆ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರಲಿಲ್ಲ. ಈ ನಡೆಯನ್ನು ಕಾಂಗ್ರೆಸ್ ಸಹಿತ ವಿಪಕ್ಷಗಳು ಪ್ರಶ್ನಿಸಿದ್ದವು. ಇದಕ್ಕಾಗಿಯೇ ಪ್ರಧಾನಿಯನ್ನು ಟೀಕಿಸಲು ಕಾಂಗ್ರೆಸ್ ಗಯಾಬ್ ಪೋಸ್ಟ್ ಅನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿತ್ತು.
ಪ್ರದೀಪ್ ಭಂಡಾರಿ ಅವರ ಪೋಸ್ಟ್ ಇಲ್ಲಿದೆ:
Under Pressure from people of India the Congress party deletes it's "Sar Tan Se Juda" imagery tweet!
— Pradeep Bhandari(प्रदीप भंडारी)🇮🇳 (@pradip103) April 29, 2025
This will not hide the Anti National Pro Pakistan Charactersitic of Congress!#PehelgamTerrorAttack pic.twitter.com/zAgHiIxod1
ಈ ಸುದ್ದಿಯನ್ನೂ ಓದಿ: Congress Poster: ʻಗಾಯಾಬ್ʼ ಪೋಸ್ಟರ್ ಶೇರ್... ಮೋದಿಯನ್ನು ದೂಷಿಸಲು ಹೋಗಿ ಮತ್ತೆ ವಿವಾದಕ್ಕೆ ಸಿಲುಕಿದ ಕಾಂಗ್ರೆಸ್
ಕಾಂಗ್ರೆಸ್‌ನ ಈ ಪೋಸ್ಟ್ ಅನ್ನು ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಕೂಡ ಹಂಚಿಕೊಂಡಿದ್ದ. ನಾಟಿ ಕಾಂಗ್ರೆಸ್ ಎನ್ನುವ ಹ್ಯಾಶ್‌ಟ್ಯಾಗ್ ಜತೆ ಈ ಪೋಸ್ಟರ್ ಅನ್ನು ಹಂಚಿಕೊಂಡು, ʼʼಕತ್ತೆಗೆ ಕೊಂಬು ಇಲ್ಲದ್ದನ್ನು ನೋಡಿದ್ದೇವೆ. ಆದರೆ ಇದರಲ್ಲಿ ಮೋದಿಗೆ ತಲೆಯೇ ಇಲ್ಲʼʼ ಎಂದು ಬರೆದುಕೊಂಡಿದ್ದ. ಇದರಿಂದ ಕೆರಳಿದ ಬಿಜೆಪಿಯು, ʼಕಾಂಗ್ರೆಸ್ ಕಾ ಹಾಥ್, ಪಾಕಿಸ್ತಾನ್‌ಕೇ ಸಾಥ್ʼ (ಪಾಕಿಸ್ತಾನಕ್ಕೆ ಕಾಂಗ್ರೆಸ್ ಬೆಂಬಲ) ಎಂದು ತಿರುಗೇಟು ನೀಡಿತ್ತು.
ಅಲ್ಲದೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ಮೈತ್ರಿ ಮಾಡಿಕೊಂಡಿದೆ ಮತ್ತು ರಾಷ್ಟ್ರದ ಸಮಗ್ರತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದರು. "ಈ ಭಯೋತ್ಪಾದಕ ದಾಳಿಯಲ್ಲಿ, ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ನಿಲ್ಲುತ್ತದೆಯೇ ಹೊರತು ತಮ್ಮ ಸ್ವಂತ ರಾಷ್ಟ್ರದೊಂದಿಗೆ ಅಲ್ಲ ಎಂಬ ಸಂಕೇತಗಳನ್ನು ಅದು ಶತ್ರು ದೇಶಕ್ಕೆ ನೀಡುತ್ತಿದೆ. ಇದು ಕಾಂಗ್ರೆಸ್‌ನ ಮುಗ್ಧ ಪೋಸ್ಟ್ ಅಲ್ಲವೇ ಅಲ್ಲ. ಬದಲಾಗಿ ಇದು ನಮ್ಮ ರಾಷ್ಟ್ರದ ಸಮಗ್ರತೆಯನ್ನು ದುರ್ಬಲಗೊಳಿಸಲು ಮತ್ತು ದೇಶದ ಪ್ರಧಾನಿಯನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿರುವ ಕೆಟ್ಟ ಯೋಜನೆ" ಎಂದು ವಾಗ್ದಾಳಿ ನಡೆಸಿದ್ದರು.
ತಮ್ಮ ಟೀಕೆಯನ್ನು ಮತ್ತಷ್ಟು ಮುಂದುವರಿಸಿದ ಗೌರವ್ ಭಾಟಿಯಾ, ಕಾಂಗ್ರೆಸ್ ಅನ್ನು "ಲಷ್ಕರ್-ಎ-ಪಾಕಿಸ್ತಾನ್ ಕಾಂಗ್ರೆಸ್" ಎಂದು ಉಲ್ಲೇಖಿಸಿದ್ದರು. "ನಮ್ಮ ನಡುವೆ ಒಂದು ರಾಷ್ಟ್ರೀಯ ರಾಜಕೀಯ ಪಕ್ಷವಿದೆ. ನಾವು ಅದನ್ನು ಲಷ್ಕರ್-ಎ-ಪಾಕಿಸ್ತಾನ್ ಕಾಂಗ್ರೆಸ್ ಎಂದು ಕರೆಯಬಹುದುʼʼ ಎಂದು ಹೇಳಿದ್ದರು. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಸ್ಲೀಪರ್ ಸೆಲ್‌ಗಳಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಾತ್ರವಲ್ಲ ಕಾಂಗ್ರೆಸ್‌ನ ಈ ಪೋಸ್ಟ್‌ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಒಗ್ಗಟ್ಟಿನಿಂದ ಇರಬೇಕಾದ ಸಮಯದಲ್ಲಿಯೂ ರಾಜಕೀಯ ನಡೆಸುವ ಕಾರಣಕ್ಕೆ ಕಾಂಗ್ರೆಸ್ ಅನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಈ ಎಲ್ಲ ಕಾರಣಗಳಿಂದ ಕೈ ಪಡೆ ಇದೀಗ ಈ ಪೋಸ್ಟ್ ಡಿಲೀಟ್ ಮಾಡಿದೆ.