ಕರ್ನಾಟಕ 2ನೇ ಮನೆ ಎಂದು ಅಭಿಮಾನ ಮೆರೆದಿದ್ದ ಗಾಯಕ ಸೋನು ನಿಗಮ್‌ಗೇನಾಯ್ತು? ಕನ್ನಡಿಗರು ಬ್ಯಾನ್ ಮಾಡುವಂತೆ ಪಟ್ಟು ಹಿಡಿದಿರುವುದೇಕೆ?
Singer Sonu Nigam: ಕನ್ನಡಿಗರ ಮನೆಗೆದ್ದ ಬಾಲಿವುಡ್ ಗಾಯಕ ಸೋನು ನಿಗಮ್ ಇದೀಗ ವಿವಾದದ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ತಮ್ಮವನು ಎಂದೇ ಹೊತ್ತು ಮೆರೆಸಿದ್ದ ಕನ್ನಡಿಗರೇ ಇದೀಗ ಸೋನು ನಿಗಮ್ ವಿರುದ್ದ ಕೆಂಡ ಕಾರುತ್ತಿದ್ದಾರೆ. ಸೋನು ಆಡಿದ ಒಂದೇ ಒಂದು ಮಾತು ಅವರನ್ನು ಇದೀಗ ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡುವಲ್ಲಿಗೆ ಬಂದು ತಲುಪಿದೆ. ಅಷ್ಟಕ್ಕೂ ಆಗಿದ್ದೇನು? ಇಲ್ಲಿದೆ ವಿವರ.

ಸೋನು ನಿಗಮ್.

ಬೆಂಗಳೂರು: 1999ರ ʼಟೈಟಾನಿಕ್ ಹೀರೋಯಿನ್ ನನ್ನ ಚೆಲುವೆʼ..., 2006ರ ʼಅನಿಸುತ್ತಿದೆ ಯಾಕೋ ಇಂದು...ʼ, ʼಮುಂಗಾರು ಮಳೆಯೇ...ʼ, ತೀರಾ ಇತ್ತೀಚೆಗೆ ಬಂದ ʼಮಾಯಾವಿʼ ಹಾಡು ಕೇಳುತ್ತಿದ್ದರೆ ಥಟ್ಟಂತ ನಮ್ಮ ಕಣ್ಣ ಮುಂದೆ ಬರುವ ಚಿತ್ರ ಸುಮಧುರ ಕಂಠದ ಗಾಯಕ ಸೋನು ನಿಗಮ್ ಅವರದ್ದು. ʼʼಕರ್ನಾಟಕ ನನ್ನ 2ನೇ ಮನೆʼʼ ಎಂದು ಹೇಳುತ್ತಲೇ ಕನ್ನಡಿಗರ ಮನೆಗೆದ್ದ ಈ ಬಾಲಿವುಡ್ ಗಾಯಕ ಇದೀಗ ವಿವಾದದ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ತಮ್ಮವನು ಎಂದೇ ಹೊತ್ತು ಮೆರೆಸಿದ್ದ ಕನ್ನಡಿಗರೇ ಇದೀಗ ಸೋನು ನಿಗಮ್ ವಿರುದ್ದ ಕೆಂಡ ಕಾರುತ್ತಿದ್ದಾರೆ. ಸೋನು ಆಡಿದ ಒಂದೇ ಒಂದು ಮಾತು ಅವರನ್ನು ಇದೀಗ ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡುವಲ್ಲಿಗೆ ಬಂದು ತಲುಪಿದೆ. ಅಷ್ಟಕ್ಕೂ ಆಗಿದ್ದೇನು? ಸೋನು ನಿಗಮ್ ಅವರನ್ನು ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡಲು ಮುಂದಾಗಿದ್ದೇಕೆ? ಇಲ್ಲಿದೆ ವಿವರ.
ಸೋನು ನಿಗಮ್ ಮೂಲತಃ ಹರಿಯಾಣದವರು. 1973ರ ಜುಲೈ 30ರಂದು ಹರಿಯಾಣದ ಫರಿದಾಬಾದ್‌ನಲ್ಲಿ ಜನಿಸಿದ ಸೋನು ನಿಗಮ್ ಸುಮಾರು 3 ದಶಕಗಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 32 ಭಾಷೆಗಳ 6 ಸಾವಿರಕ್ಕೂ ಹೆಚ್ಚು ಹಾಡುಗಳು ಅವರ ಧ್ವನಿಯಿಂದ ಮೂಡಿ ಬಂದಿವೆ. ರೊಮ್ಯಾಂಟಿಕ್ ಹಾಡುಗಳಿಗೆ ಜನಪ್ರಿಯರಾದ ಅವರು ಶಾಸ್ತ್ರೀಯ, ಭಕ್ತಿ ಸಂಗೀತದಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದಾರೆ. ಗಝಲ್ ಮೂಲಕವೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ಆಧುನಿಕ ರಫಿ ಎಂದೇ ಸೋನು ನಿಗಮ್ ಅವರನ್ನು ಕರೆಯಲಾಗುತ್ತದೆ.
ಸೋನು ನಿಗಮ್ ಅವರದ್ದು ಸಂಗೀತ ಹಿನ್ನೆಲೆಯ ಕುಟುಂಬ. ಅವರ ತಂದೆ ಅಗಮ್ ಕುಮಾರ್ ನಿಗಮ್ ಮತ್ತು ಸಹೋದರಿ ತೀಶಾ ನಿಗಮ್ ವೃತ್ತಿಪರ ಹಾಡುಗಾರರು. ಬಾಲ್ಯದಲ್ಲೇ ಸಂಗೀತ ಕೇಳಿ ಬೆಳೆಯುತ್ತಿದ್ದ ಸೋನು ತಮ್ಮ 4 ವರ್ಷದಲ್ಲೇ ವೇದಿಕೆ ಮೇಲೆ ಹಾಡಿ ಭೇಷ್ ಎನಿಸಿಕೊಂಡವರು. ಹೌದು, ಆಗ ಸೋನು ನಿಗಮ್‌ಗೆ ಕೇವಲ 4 ವರ್ಷ ವಯಸ್ಸು. ತಂದೆ ಅಗಮ್ ನಿಗಮ್ ಅವರೊಂದಿಗೆ ವೇದಿಕೆ ಮೇಲೆ ಮೊಹಮ್ಮದ್ ರಫಿಯ ʼಕ್ಯಾ ಹುವಾ ತೇರಾ ವಾದಾʼ ಹಾಡನ್ನು ಹಾಡಿ ಗಮನ ಸೆಳೆದರು. ಅದಾದ ಬಳಿಕ ಹಿಂತಿರುಗಿ ನೋಡಲೇ ಇಲ್ಲ.
ಈ ಸುದ್ದಿಯನ್ನೂ ಓದಿ: Sonu Nigam: ಸಾರಿ ಕರ್ನಾಟಕ; ಕನ್ನಡಿಗರ ಕ್ಷಮೆ ಕೋರಿದ ಗಾಯಕ ಸೋನು ನಿಗಮ್
19ನೇ ವಯಸ್ಸಿನಲ್ಲಿ ಮುಂಬೈಗೆ ಬಂದಿಳಿದ ಸೋನು ನಿಗಮ್ ಉಸ್ತಾದ್ ಘುಲಾಮ್ ಮುಸ್ತಫಾ ಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತರು. ಮದುವೆ ಸಮಾರಂಭಗಳಲ್ಲಿ ತಂದೆಯೊಂದಿಗೆ ಹಾಡುತ್ತಿದ್ದ ಸೋನು ನಿಗಮ್ 1990ರಲ್ಲಿ ʼಜಾನಮ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಆದರೆ ಆ ಚಿತ್ರ ತೆರೆಗೆ ಬರಲೇ ಇಲ್ಲ. ಅದಾಗಿ 3 ವರ್ಷ ಕಳೆದ ಬಳಿಕ ಅಂದರೆ 1993ರಲ್ಲಿ ತೆರೆಕಂಡ ʼಆಜ ಮೇರಿ ಜಾನ್ʼ ಹಿಂದಿ ಚಿತ್ರಕ್ಕಾಗಿ ಸೋನು ನಿಗಮ್ ಧ್ವನಿ ನೀಡಿದರು.
ಮೊದಲ ಹಾಡಿನಲ್ಲೇ ಬಾಲಿವುಡ್‌ನ ಗಮನ ಸೆಳೆದ ಸೋನು ನಿಗಮ್ ಅವರನ್ನು ಹುಡುಕಿಕೊಂಡು ಅವಕಾಶಗಳು ಹರಿದು ಬರತೊಡಗಿದವು. ಈ ವೇಳೆ ಅವರು 1995ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಸರೆಗಮಪʼ ಹಾಡಿನ ರಿಯಾಲಿಟಿ ಶೋ ನಡೆಸಿಕೊಟ್ಟರು. 2000 ಇಸವಿಯ ನಂತರ ಸೋನು ನಿಗಮ್ ಬಾಲಿವುಡ್‌ನಲ್ಲಿ ಟಾಪ್ ಸಿಂಗರ್ ಎನಿಸಿಕೊಂಡರು. ಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಮಿಂಚತೊಡಗಿದರು.
ಸ್ಯಾಂಡಲ್‌ವುಡ್ ನಂಟು
ಬಾಲಿವುಡ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸೋನು ನಿಗಮ್ ಅವರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಸಂಗೀತ ನಿರ್ದೇಶಕ ಕೋಟಿ ಅವರಿಗೆ ಸಲ್ಲುತ್ತದೆ. 1996ರಲ್ಲಿ ತೆರೆಕಂಡ ಕನ್ನಡದ ʼಜೀವನದಿʼ ಚಿತ್ರದ ʼಎಲ್ಲೋ ಯಾರೋʼ ಸೋನು ನಿಗಮ್ ಧ್ವನಿ ನೀಡಿದ ಮೊದಲ ಕನ್ನಡದ ಹಾಡು. ಅದಾದ ಬಳಿಕ ಅವರು 1999ರಲ್ಲಿ ಬಿಡುಗಡೆಯಾದ ʼಸ್ನೇಹಲೋಕʼ ಚಿತ್ರದ ʼಟೈಟಾನಿಕ್ ಹೀರೋಯಿನ್ʼ ಹಾಡು ಹಾಡುವ ಮೂಲಕ ಜನಪ್ರಿಯರಾದರು. ಹಂಸಲೇಖ ಸಂಗೀತ ನಿರ್ದೇಶನದ ಈ ಹಾಡು ಸೋನು ನಿಗಮ್ ಅವರನ್ನು ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸುವಂತೆ ಮಾಡಿತು. ಅದಾದ ಬಳಿಕ ಅವರು ನಿರಂತರವಾಗಿ ಕನ್ನಡ ಹಾಡುಗಳಿಗೆ ಧ್ವನಿ ನೀಡುತ್ತಲೇ ಬಂದರು.
2000 ಇಸವಿಯ ನಂತರ ಸೋನು ನಿಗಮ್ ಕನ್ನಡ ಸಿಂಗರ್ ಆಗಿಯೇ ಬದಲಾದರು. ʼಪ್ರೀತಿ ನೀ ಇಲ್ಲದೆ ಹೇಗಿರಲಿʼ, ʼಜುಂ ಜುಂ ರೋಮಾಂಚನʼ, ʼಹಂಸವೇ ಹಂಸವೇʼ, ʼಒನ್ಸ್ ಅಪಾನ್ ಟೈಂʼ, ʼಬಾನಿಂದ ಬಾ ಚಂದಿರʼ, ʼಮೊನಾಲಿಸಾʼ, ʼಎಲ್ಲೆಲ್ಲೂ ಹಬ್ಬ ಹಬ್ಬʼ, ʼಓ ಗುಣವಂತʼ ಮುಂತಾದ ಸೋನು ನಿಗಮ್ ಧ್ವನಿ ನೀಡಿದ ಹಾಡುಗಳು ಹಿಟ್ ಲಿಸ್ಟ್ ಸೇರಿವೆ.
ʼಮುಂಗಾರು ಮಳೆʼ ಬಳಿಕ ಇನ್ನಷ್ಟು ಜನಪ್ರಿಯ
ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ಯೋಗ್‌ರಾಜ್ ಭಟ್-ಗಣೇಶ್ ಕಾಂಬಿನೇಷನ್‌ನ ʼಮುಂಗಾರು ಮಳೆʼ. ಮನೋಮೂರ್ತಿ ಸಂಗೀತ ನೀಡಿದ ಈ ಚಿತ್ರ 2006ರಲ್ಲಿ ತೆರೆಗೆ ಬಂತು. ಅದಾದ ಬಳಿಕ ಸೋನು ನಿಗಮ್ ಲಕ್ಕೇ ಬದಲಾಯ್ತು. ಅವರು ಕನ್ನಡ ಚಿತ್ರರಂಗದ ಖಾಯಂ ಸದಸ್ಯರೇ ಆಗಿ ಬದಲಾದರು. ಈ ಚಿತ್ರದ ಗೆಲುವಿನಲ್ಲಿ ಹಾಡುಗಳೂ ಪ್ರಧಾನ ಪಾತ್ರ ವಹಿಸಿದವು. ಇದರಲ್ಲಿನ ಸೋನು ನಿಗಮ್ ಹಾಡಿದ ʼಅನಿಸುತಿದೆ ಯಾಕೋ ಇಂದುʼ ಹಾಡಂತೂ ಟ್ರೆಂಡ್ ಸೃಷ್ಟಿಸಿ ಬಿಟ್ಟಿತು. ಪರಭಾಷಿಕರೂ ಈ ಹಾಡನ್ನು ಗುನುವಂತಾಯ್ತು. ಇಂದಿಗೂ ಈ ಹಾಡು ಹಲವರ ಫೆವರೇಟ್ ಲಿಸ್ಟ್‌ನಲ್ಲಿದೆ.
ʼಮುಂಗಾರು ಮಳೆʼ ಬಳಿಕ ಸೋನು ನಿಗಮ್-ಜಯಂತ್ ಕಾಯ್ಕಿಣಿ-ಮನೋಮೂರ್ತಿ ಕಾಂಬಿನೇಷನ್ ಸೂಪರ್ ಹಿಟ್ ಎನಿಸಿಕೊಂಡಿತ್ತು. ಸೋನು ನಿಗಮ್ ಅವರ ಸ್ಪಷ್ಟ ಕನ್ನಡ ಉಚ್ಛಾರಣೆ, ಮಧುರ ಧ್ವನಿಗೆ ಕನ್ನಡಿಗರು ಮನ ಸೋತಿದ್ದಾರೆ. ಇದೇ ಕಾರಣಕ್ಕೆ ಕನ್ನಡಿಗರು ಅವರನ್ನು ಮನೆ ಮಗನೆಂದೇ ಪರಿಗಣಿಸಿದ್ದಾರೆ. ಹೊರಗಿನವರು ಇಲ್ಲಿ ಬಂದು ಗಮನ ಸೆಳೆಯುವುದೇ ಅಪರೂಪ. ಹಾಗಿದ್ದರೂ ಸೋನು ನಿಗಮ್ ಕನ್ನಡಿಗರಲ್ಲಿ ಒಬ್ಬರಾಗಿ ಬೆರೆತಿದ್ದರು. ಕನ್ನಡದವರೇ ಆಗಿದ್ದರು. ಹಿಂದಿಗಿಂತ ಕನ್ನಡದಲ್ಲೇ ಹೆಚ್ಚು ಹಾಡಿಗೆ ಧ್ವನಿ ನೀಡಿದ್ದರು ಕೂಡ. ಅವರು ಕೂಡ ಹಲವು ಸಂದರ್ಶನಗಳಲ್ಲಿ ಕನ್ನಡಿಗರ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಕರ್ನಾಟಕ ತಮ್ಮ 2ನೇ ಮನೆ ಎಂದು ಆಗಾಗ ಹೇಳಿಕೊಂಡಿದ್ದಾರೆ. ತಾವು ಎಲ್ಲೇ ಕಾರ್ಯಕ್ರಮ ನೀಡಲಿ ಒಬ್ಬನೇ ಒಬ್ಬ ಕನ್ನಡ ಹಾಡು ಹಾಡುವಂತೆ ಬೇಡಿಕೆ ಇಟ್ಟರೆ ಹಾಡುವುದಾಗಿಯೂ ತಿಳಿಸಿದ್ದಾರೆ.
ಅಷ್ಟೆಲ್ಲ ಕನ್ನಡ ಅಭಿಮಾನ ಮೆರೆದ, ಕನ್ನಡಿಗರು ತಮ್ಮವರೆಂದೇ ಹೊತ್ತು ಮೆರೆದಿದ ಸೋನು ನಿಗಮ್ ಹೇಳಿದ ಒಂದೇ ಒಂದು ಡೈಲಾಗ್ ಇದೀಗ ವಿವಾದ ಎಬ್ಬಿಸಿದೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪರಿಣಾಮ ಸ್ಯಾಂಡಲ್‌ವುಡ್‌ನಿಂತ ಬ್ಯಾನ್ ಮಾಡುವ ಹಂತಕ್ಕೆ ಪರಿಸ್ಥಿತಿ ಕೈ ಮೀರಿದೆ.
ಏನಿದು ವಿವಾದ?
ಇತ್ತೀಚೆಗೆ ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದ. ಅದಕ್ಕೆ ಸೋನು ನಿಗಮ್ ಪ್ರತಿಕ್ರಿಯಿಸುತ್ತಾ "ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು" ಎಂದು ಹೇಳಿದ್ದರು. ಈ ರೀತಿ ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಸಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅನೇಕರು ಸೋನು ನಿಗಮ್ ಅವರ ಹೇಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆ.
ಸ್ಪಷ್ಟನೆ ನೆಪದಲ್ಲಿ ಮತ್ತೆ ಕೆಣಕ್ಕಿದ್ದ ಗಾಯಕ
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ರವಾಗುತ್ತಿದ್ದಂತೆ ಅವರು ಸ್ಪಷ್ಟನೆ ನೀಡಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ, ʼʼಕನ್ನಡ... ಕನ್ನಡ... ಕೂಗುವಲ್ಲಿ ವ್ಯತ್ಯಾಸ ಇದೆ. ನಾಲ್ಕೈದು ಜನ ಗೂಂಡಾ ರೀತಿಯಲ್ಲಿ ವರ್ತಿಸುತ್ತಾ ಅಲ್ಲಿ ಕನ್ನಡ ಕನ್ನಡ ಎಂದು ಕೂಗುತ್ತಿದ್ದರು. ಸುಮ್ಮನಿರುವಂತೆ ಅಲ್ಲಿ ಅನೇಕರು ಅವರಿಗೆ ಮನವಿ ಮಾಡುತ್ತಿದ್ದರು. ಕಾರ್ಯಕ್ರಮದ ವಾತಾವರಣ ಹಾಳು ಮಾಡದಿರಿ ಎಂದು ಹೇಳುವುದು ಅನಿವಾರ್ಯವಾಗಿತ್ತು. ಪ್ರೇಕ್ಷಕರಾಗಿ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಉಗ್ರರು ಭಾಷೆ ಯಾವುದೆಂದು ಕೇಳಿರಲಿಲ್ಲ. ಹೀಗಾಗಿ ಅವರಿಗೆ ತಿಳಿ ಹೇಳುವುದು ಅನಿವಾರ್ಯವಾಗಿತ್ತು. ಹಾಗಂತ ಕನ್ನಡಿಗೆರೆಲ್ಲರೂ ಕೆಟ್ಟವರೆಂದಲ್ಲ. ಅಲ್ಲಿನ ಜನರು ಬಹಳ ಒಳ್ಳೆಯವರು. ದೇಶದ ಯಾವ ಭಾಗಕ್ಕೆ ಹೋದರೂ ಇಂತಹ ಕೆಲವೊಂದು ಜನರಿರುತ್ತಾರೆ. ಅಂತಹವರನ್ನು ಆ ಕ್ಷಣವೇ ತಡೆಯುವುದು ಅತ್ಯವಶ್ಯಕ. ಪ್ರೀತಿಯ ಭೂಮಿಯಲ್ಲಿ ದ್ವೇಷದ ಬೀಜ ಬಿತ್ತುವುದನ್ನು ತಡೆಯಲೇಬೇಕು. ಅಲ್ಲಿದ್ದ ನಾಲ್ಕೈದು ಜನ ಕನ್ನಡ ಹಾಡುವಂತೆ ಬೇಡಿಕೆ ಇಟ್ಟಿರಲಿಲ್ಲ. ಬದಲಾಗಿ ಅವರು ನನಗೆ ಬೆದರಿಕೆ ಹಾಕಿದ್ದರುʼʼ ಎಂದು ಹೇಳಿದ್ದರು.
ಸೋನು ನಿಗಮ್ ಅವರ ಈ ವಿಡಿಯೊ ಕೂಡ ಭಾರಿ ವೈರಲಾಗಿದ್ದು, ಕನ್ನಡಿಗರನ್ನು ಗೂಂಡಾ ಎಂದು ಕರೆದಿರುವುದು ಮತ್ತೆ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಕರ್ನಾಟಕ ಫಿಲ್ಮ್ ಚೇಂಬರ್ ಅವರಿಗೆ ಅವಕಾಶ ನೀಡದಿರಲು ನಿರ್ಧರಿಸಿದೆ. ಒಟ್ಟಿನಲ್ಲಿ ʼಮಾತು ಮನೆ ಕಡೆಸಿತುʼ ಎನ್ನುವ ಮಾತು ಸೋನು ನಿಗಮ್ ಪಾಲಿಗೆ ನಿಜವಾಗಿದೆ.