Mock Drill: 1971ರಲ್ಲಿ ಮಾಕ್ ಡ್ರಿಲ್ ನಡೆದ ಕೆಲವು ದಿನಗಳ ನಂತರ ಏನಾಯಿತು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಒಡಕಿನ ಸಂಬಂಧವು ತೀವ್ರವಾಗಿದ್ದು, ಯುದ್ಧದ ಗಡಿಗೆ ತಲುಪಿದೆ. ಉಪಖಂಡದಲ್ಲಿ ಯುದ್ಧದ ಭೀತಿ ಆವರಿಸಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಸಂಭಾವ್ಯ ಯುದ್ಧ ಸನ್ನಿವೇಶಕ್ಕೆ ಸಿದ್ಧತೆಗಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರವ್ಯಾಪಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ ಆರಂಭಿಸಲು ಆದೇಶಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ (Pahalgam) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಒಡಕಿನ ಸಂಬಂಧವು ತೀವ್ರವಾಗಿ ಯುದ್ಧದ ಗಡಿಗೆ ತಲುಪಿದೆ. ಉಪಖಂಡದಲ್ಲಿ ಯುದ್ಧದ ಭೀತಿ ಆವರಿಸಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಸಂಭಾವ್ಯ ಯುದ್ಧ ಸನ್ನಿವೇಶಕ್ಕೆ ಸಿದ್ಧತೆಗಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 7ರಂದು ರಾಷ್ಟ್ರವ್ಯಾಪಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ (Mock Drill) ನಡೆಸಲು ಆದೇಶಿಸಿದೆ.
ಈ ಮಾಕ್ ಡ್ರಿಲ್ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಕಂಡಿರದ ಯುದ್ಧಕಾಲದ ಪ್ರೋಟೋಕಾಲ್‌ಗಳನ್ನು ನೆನಪಿಸುತ್ತವೆ. 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ನಾಗರಿಕ ರಕ್ಷಣೆಗೆ ಮಾಕ್ ಡ್ರಿಲ್ ನಡೆಸಲಾಗಿತ್ತು. ಆ ಯುದ್ಧವು ದಕ್ಷಿಣ ಏಷ್ಯಾದ ನಕ್ಷೆಯನ್ನು ಮರುರೂಪಿಸಿದ್ದು ಮಾತ್ರವಲ್ಲ, ಪಾಕಿಸ್ತಾನದ ಪೂರ್ವ ಭಾಗವನ್ನು ಸ್ವತಂತ್ರ ಬಾಂಗ್ಲಾದೇಶವಾಗಿ ರೂಪಿಸಲು ಕಾರಣವಾಯಿತು.
1971ರಲ್ಲಿ ಡಿಸೆಂಬರ್ 3ರಂದು ಔಪಚಾರಿಕವಾಗಿ ಯುದ್ಧ ಆರಂಭವಾಗುವ ಕೆಲವೇ ದಿನಗಳ ಮೊದಲು, ನವೆಂಬರ್‌ನ ಕೊನೆಯಲ್ಲಿ ಮಾಕ್ ಡ್ರಿಲ್‌ಗಳು ಆರಂಭಗೊಂಡಿದ್ದವು. ವಾಯುದಾಳಿ ಎಚ್ಚರಿಕೆಗಳು ಮತ್ತು ಸ್ಥಳಾಂತರ ಕವಾಯತುಗಳನ್ನು ಒಳಗೊಂಡ ನಾಗರಿಕ ರಕ್ಷಣಾ ಅಭಿಯಾನ ನಡೆಸಿದ ವರದಿಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು.
ಆಕಾಶವಾಣಿ (ಆಲ್ ಇಂಡಿಯಾ ರೇಡಿಯೋ) ಮೂಲಕ ಈ ಕವಾಯತುಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ನಗರಗಳಲ್ಲಿ ಸೈರನ್‌ಗಳು ಮೊಳಗುತ್ತಿದ್ದವು, ಜನರು ಆಶ್ರಯ ಪಡೆಯಲು ಮತ್ತು ಬೆಳಕನ್ನು ಆರಿಸಲು ಸೂಚಿಸಲಾಗುತ್ತಿತ್ತು. ಇದು ಶತ್ರು ವಿಮಾನಗಳನ್ನು ಗೊಂದಲಕ್ಕೀಡು ಮಾಡುವ ಮತ್ತು ವೈಮಾನಿಕ ಬಾಂಬ್ ದಾಳಿಗಳಿಂದ ಸಾವುನೋವುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು.
ಈ ಸುದ್ದಿಯನ್ನು ಓದಿ: Pahalgam Terror Attack: ಉಗ್ರರ ದಾಳಿ ಕೇಸ್; ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತ ಅರೆಸ್ಟ್
ಇಂದಿರಾ ಗಾಂಧಿ ನಾಯಕತ್ವದಲ್ಲಿ, ಕೇಂದ್ರ ಗೃಹ ಸಚಿವಾಲಯವು ಪ್ರತಿ ರಾಜ್ಯಕ್ಕೆ ಕಟ್ಟುನಿಟ್ಟಾದ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಿತ್ತು. ಕಾಲ್ಪನಿಕ ಸನ್ನಿವೇಶಗಳಲ್ಲಿ ನಾಗರಿಕರನ್ನು ಬಂಕರ್‌ಗಳಿಗೆ ಸ್ಥಳಾಂತರಿಸುವುದು, ವಾಯುದಾಳಿ ಸೈರನ್‌ಗಳಿಗೆ ಪ್ರತಿಕ್ರಿಯಿಸುವ ಕವಾಯತುಗಳನ್ನು ಒಳಗೊಂಡಿದ್ದವು. ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳದಂತಹ ಗಡಿರಾಜ್ಯಗಳಲ್ಲಿ ಹಾಗೂ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತಾದಂತಹ ಪ್ರಮುಖ ಮಹಾನಗರ ಕೇಂದ್ರಗಳಲ್ಲಿ ಕವಾಯತುಗಳು ನಡೆದಿದ್ದವು.
ಕೇಂದ್ರ ಗೃಹ ಸಚಿವಾಲಯ ಯುದ್ಧಕಾಲದ ತುರ್ತು ಸನ್ನಿವೇಶಕ್ಕೆ ಸಿದ್ಧತೆಯ ಮೇಲೆ ಒತ್ತು ನೀಡಿರುವುದಾಗಿ ವರದಿಯಾಗಿದೆ. ಈ ಕವಾಯತುಗಳನ್ನು ತಕ್ಷಣದ ಸೈನಿಕ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಹೇಳಿಕೆ ಹೊರಡಿಸಿಲ್ಲವಾದರೂ, ವಿಶ್ಲೇಷಕರು ಈ ಕ್ರಮವನ್ನು ದೇಶದ ಜನರಿಗೆ ಮತ್ತು ಗಡಿಯಾಚೆಗಿನ ವೈರಿಗಳಿಗೆ ಕಾರ್ಯತಂತ್ರದ ಸಂಕೇತವಾಗಿ ವ್ಯಾಖ್ಯಾನಿಸಿದ್ದಾರೆ. ಈ ಕವಾಯತುಗಳು ಭಾರತದ ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ಜತೆಗೆ, ಉದ್ವಿಗ್ನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಏಕತೆಯನ್ನು ತೋರಿಸುವ ಗುರಿಯನ್ನು ಹೊಂದಿವೆ. 1971ರ ಯುದ್ಧದ ನಂತರ ಮೊದಲ ಬಾರಿಗೆ ಇಂತಹ ವ್ಯಾಪಕ ಸಿದ್ಧತೆ ಕಂಡುಬಂದಿದ್ದು, ಇದು ದಕ್ಷಿಣ ಏಷ್ಯಾದ ರಾಜಕೀಯ ವಾತಾವರಣದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.