Actor Ganesh: ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋಲ್ಡನ್ ಸ್ಟಾರ್; ಯಾರಿಗೂ ಗೊತ್ತಿರದ ಇಂಟ್ರಸ್ಟಿಂಗ್ ವಿಚಾರಗಳು ಇಲ್ಲಿವೆ!
ಮುಂಗಾರು ಮಳೆ, ಚೆಲ್ಲಾಟ, ಗಾಳಿಪಟ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜುಲೈ 2ರಂದು ಇವರ ಜನ್ಮ ದಿನವಾಗಿದ್ದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಿನಿಮಾ ಸೆಲೆಬ್ರಿಟಿಗಳು ಆತ್ಮಿಯರು ಶುಭಾಶಯ ಕೋರಿದ್ದಾರೆ.

Actor Ganesh


ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ನಟರಾಗಿರುವ ಗಣೇಶ್ ಅವರ ಸಿನಿ ಜರ್ನಿ ಅಭಿಮಾನಿಗಳಿಗೂ ಸ್ಫೂರ್ತಿ ನೀಡಿದೆ ಎನ್ನಬಹುದು. ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬವನ್ನು ಕುಟುಂಬದ ಹಾಗೂ ಆಪ್ತರ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿದ್ದ ಗಣೇಶ್ ಅವರು ಈ ಬಾರಿ ಶೂಟಿಂಗ್ ನಿಮಿತ್ತ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಈ ಮೊದಲೇ ಸ್ಪಷ್ಟಪಡಿಸಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗುವ ಮೊದಲು ಕಾಮಿಡಿ ಶೋ ನಡೆಸುತ್ತಿದ್ದರು. ಅಮೃತಧಾರೆ, ಅಹಂ ಪ್ರೇಮಸ್ಮಿ..ಹೀಗೆ ಹಲವು ಸಿನಿಮಾದಲ್ಲಿ ಸಹ ನಟರಾಗಿ ಸಣ್ಣ ಪಾತ್ರದ ಮೂಲಕ ಅಭಿನಯ ಮಾಡಿದ್ದರು. ಇದರ ಜೊತೆಗೆ ಖಾಸಗಿ ವಾಹಿನಿಯಲ್ಲಿ ಕಾಮಿಡಿ ಶೋ ನಡೆಸಿಕೊಟ್ಟು ಕಾಮಿಡಿ ಟೈಂ ಗಣೇಶ್ ಎಂದೇ ಖ್ಯಾತಿ ಪಡೆದಿದ್ದರು.

2006ರಲ್ಲಿ ತೆರೆಕಂಡ ಚೆಲ್ಲಾಟ ಚಿತ್ರದಿಂದ ಗಣೇಶ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ಭರ ವಸೆಯ ನಟರಾಗಿ ಮಿಂಚಿದರು. ಅನಂತರ ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ತೆರೆಗೆ ಬಂದ ಮುಂಗಾರು ಮಳೆ ಚಿತ್ರ ಗಣೇಶ್ ಅವರು ಅದ್ಭುತವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಈ ಮೂಲಕ ಇಲ್ಲಿಂದ ಅವರಿಗೆ ಗೋಲ್ಡನ್ ಸ್ಡಾರ್ ಎಂಬ ಬಿರುದು ಕೂಡ ಸಿಕ್ಕಿತು.

2007ರಲ್ಲಿ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಮೆಕ್ಯಾನಿಕ್ ಪಾತ್ರದಲ್ಲಿ ಅಭಿನಯಿಸಿ ಖ್ಯಾತಿ ಕೂಡ ಪಡೆದು ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಲಿಸ್ಟ್ ಸೇರಿದೆ. ಇದೇ ವರ್ಷ ಹುಡುಗಾಟ ಸಿನಿಮಾ ಕೂಡ ರಿಲೀಸ್ ಆಗಿದ್ದು ಅದು ಸಾಧಾರಣ ಯಶಸ್ಸು ಕಂಡಿತ್ತು.

ನಂತರ 2007 ಅಕ್ಟೋಬರ್ 7ರಂದು ಕೃಷ್ಣ ಸಿನಿಮಾ ತೆರೆಕಂಡು ಭರ್ಜರಿ ಯಶಸ್ಸಿನ ಮೂಲಕ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆಯಿತು. ಹೀಗೆ ಒಂದೇ ವರ್ಷ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಇವರು ಫೇಮ್ ಗಿಟ್ಟಿಸಿಕೊಂಡಿದ್ದಾರೆ.

ಇದಾದ ಬಳಿಕ ಅರಮನೆ, ಬೊಂಬಾಟ್, ಸರ್ಕಸ್, ಸಂಗಮ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಬಳಿಕ ತೆರೆಕಂಡ ಮಳೆಯಲಿ ಜೊತೆಯಲಿ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ನೀಡಿದೆ. ಉಲ್ಲಾಸ ಉತ್ಸಾಹ, ಏನೋ ಒಂಥರ, ಕೂಲ್, ಮದುವೆ ಮನೆ, ಶೈಲು, ಮುಂಜಾನೆ, ರೋಮಿಯೊ, ಖುಷಿ ಖುಷಿಯಲಿ, ಸಕ್ಕರೆ, ಬುಗುರಿ, ಸ್ಟೈಲ್ ಕಿಂಗ್, ಝೂಮ್, ಮುಂಗಾರು ಮಳೆ 2, ಗಾಳಿಪಟ, ಮುಗುಳುನಗೆ , ಚಮಕ್ , ಆರೆಂಜ್, 99, ಬಾನದಾರಿಯಲ್ಲಿ ಸೇರಿದಂತೆ ಅನೇಕ ಸಿನಿಮಾದಲ್ಲಿ ನಟಿಸಿ ಬಹುಬೇಡಿಕೆಯ ನಟರೆಂಬ ಖ್ಯಾತಿ ಪಡೆದಿದ್ದಾರೆ.

ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಶಿಲ್ಪ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಇತ್ತೀಚೆಗಷ್ಟೇ ಗಣೇಶ್ ಅವರ ವಿಶೇಷ ಫೋಟೊ ತೆಗೆದಿದ್ದರು. ಇದನ್ನು ಗಣೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು 'ಪಿನಾಕ' ಸಿನಿಮಾ ಶೂಟಿಂಗ್ ನಿಮಿತ್ತ ಬ್ಯುಸಿಯಾಗಿದ್ದು, ತಮ್ಮ ಬರ್ತ್ ಡೇ ಸಲೆಬ್ರೇಶನ್ ಮಾಡಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

'ಕೃಷ್ಣಂ ಪ್ರಣಯ ಸಖಿ' ಚಿತ್ರ ಭರ್ಜರಿ ಯಶಸ್ವಿಯಾದ ಬಳಿಕ ಇದೀಗ 'ಪಿನಾಕ' ಹಾಗೂ 'ಯುವರ್ಸ್ ಸಿನ್ಸಿಯರ್ಲಿ ರಾಮ್’ ಚಿತ್ರದಲ್ಲಿ ನಟಿಸಲಿದ್ದು, ಈ ವರ್ಷ ಈ ಎರಡು ಸಿನಿಮಾ ರಿಲೀಸ್ ಆಗಲಿವೆ.