IND vs ENG: 587 ರನ್ ಬಾರಿಸಿ ಪಾಕಿಸ್ತಾನದ ದಾಖಲೆ ಮುರಿದ ಟೀಮ್ ಇಂಡಿಯಾ!
India breaks Pakistan's record: ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ತಂಡ 587 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪಾಕಿಸ್ತಾನ ತಂಡದ ಮಹತ್ವದ ದಾಖಲೆಯನ್ನು ಶುಭಮನ್ ಗಿಲ್ ಪಡೆ ಮುರಿದಿದೆ.

ಪಾಕಿಸ್ತಾನ ತಂಡದ ಟೆಸ್ಟ್ ದಾಖಲೆಯನ್ನು ಮುರಿದ ಭಾರತ.

ನವದೆಹಲಿ: ಇಂಗ್ಲೆಂಡ್ನ ಬ್ಯಾಝ್ಬಾಲ್ಗೆ ಸಡ್ಡು ಹೊಡೆಯುವಂತೆ ಬ್ಯಾಟ್ ಮಾಡಿದ ಭಾರತ ತಂಡದ ಆಟಗಾರರು ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (IND vs ENG) ಪ್ರಥಮ ಪ್ರಥಮ ಇನಿಂಗ್ಸ್ನಲ್ಲಿ 587 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ. ಆ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (WTC) ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (Pakistan) ಹೆಸರಿನಲ್ಲಿದ್ದ ಮಹತ್ತರ ದಾಖಲೆಯನ್ನು ಹಿಂದಿಕ್ಕಿದೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ 579 ರನ್ ಕಲೆ ಹಾಕಿತ್ತು. ಆದರೆ ಶುಭಮನ್ ಗಿಲ್ ಅವರ ಆಕರ್ಷಕ ದ್ವಿಶತಕ (269 ರನ್)ದ ಬಲದಿಂದ ಭಾರತ ತಂಡ 587 ರನ್ ಕಲೆಹಾಕಿದೆ.
2022ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಪಾಕಿಸ್ತಾನ ತಂಡ 75 ರನ್ಗಳಿಂದ ಸೋಲು ಅನುಭವಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 657 ರನ್ ಗಳಿಸಿತ್ತು. ನಂತರ ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ 343 ರನ್ ಗಳ ಗುರಿ ನೀಡಿತ್ತು. ಈ ಕಠಿಣ ಗುರಿ ಹಿಂಬಾಲಿಸಿದ ಪಾಕಿಸ್ತಾನ 268 ರನ್ ಗಳಿಗೆ ಆಲ್ಔಟ್ ಆಗಿತ್ತು. ಇಂಗ್ಲೆಂಡ್ ಪರ ಒಲ್ಲಿ ರಾಬಿನ್ಸನ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 4 ವಿಕೆಟ್ ಪಡೆದು ಪಾಕ್ ಆಟಗಾರರ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದ್ದರು.
IND vs ENG: ಏಕೈಕ ಓವರ್ಗೆ 23 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಪ್ರಸಿಧ್ ಕೃಷ್ಣ!
823 ರನ್ ಕಲೆಹಾಕಿದ್ದ ಇಂಗ್ಲೆಂಡ್
2024ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ವಿರುದ್ದ ಮುಲ್ತಾನ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 556 ರನ್ ಗಳಿಸಿತ್ತು. ನಂತರ ಬ್ಯಾಟ್ ಮಾಡಿದ ಇಂಗ್ಲೆಂಡ್ ಜೋ ರೂಟ್ ದ್ವಿಶತಕ (262 ರನ್) ಹಾಗೂ ಹ್ಯಾರಿ ಬ್ರೂಕ್ ಅವರ ತ್ರಿಶತಕ(317 ರನ್ ) ದ ನೆರವಿನಿಂದ 823 ರನ್ ಗಳಿಸಿತ್ತು. ನಂತರ ದ್ವಿತೀಯ ಇನಿಂಗ್ಸ್ನಲ್ಲಿ 220 ರನ್ಗೆ ಅಲ್ ಔಟ್ ಆದ ಪಾಕಿಸ್ತಾನ, ಇನಿಂಗ್ಸ್ ಹಾಗೂ 47 ರನ್ ಗಳಿಂದ ಸೋಲು ಕಂಡಿತ್ತು.
IND vs ENG: ಭಾರತ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವುದು ಅನುಮಾನ! ಏಕೆ ಗೊತ್ತೆ?
ಡಬ್ಲ್ಯುಟಿಸಿಯಲ್ಲಿ ಭಾರತ ಅತಿ ಹೆಚ್ಚು ರನ್
ಐಸಿಸಿ ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಇದೇ ಮೊದಲ ಬಾರಿ ಭಾರತ ತಂಡ ವಿದೇಶಿ ನೆಲದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದೆ. 2024ರಲ್ಲಿ ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ, 487 ರನ್ ಗಳಿಸಿದ್ದು ಇದುವರೆಗೆ ಅತ್ಯಧಿಕ ಮೊತ್ತವಾಗಿತ್ತು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದ್ದರು. ಭಾರತ ತಂಡ 295 ರನ್ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತ್ತು.
ವಿದೇಶಿ ನೆಲದಲ್ಲಿ ಭಾರತ ತಂಡ ಡಬ್ಲುಟಿಸಿಯಲ್ಲಿ ಹೆಚ್ಚು ರನ್
* 587 ರನ್- ಇಂಗ್ಲೆಂಡ್ ವಿರುದ್ಧ - ಬರ್ಮಿಂಗ್ಹ್ಯಾಮ್ - 2025
* 487/6 ರನ್- ಆಸ್ಟ್ರೇಲಿಯಾ ವಿರುದ್ದ - ಪರ್ತ್
* 471 ರನ್- ಇಂಗ್ಲೆಂಡ್ ವಿರುದ್ಧ - ಲೀಡ್ಸ್ - 2025
IND vs ENG 2nd Test: ಗಿಲ್ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್
ಇಂಗ್ಲೆಂಡ್ ಬಲಿಷ್ಠ ಹೋರಾಟ
ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ, ಪ್ರಥಮ ಇನಿಂಗ್ಸ್ನಲ್ಲಿ 587 ರನ್ ಗಳಿಸಿದ್ದು, ನಂತರ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ವೇಗಿಗಳಾದ ಮೊಹಮ್ಮದ್ ಸಿರಾಜ್ (3 ವಿಕೆಟ್) ಹಾಗೂ ಆಕಾಶ್ ದೀಪ್ (2 ವಿಕೆಟ್) ಅವರ ವೇಗದ ದಾಳಿಗೆ ಸಿಲುಕಿ 85 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 6ನೇ ವಿಕೆಟ್ಗೆ ಜೊತೆಗೂಡಿದ ಹ್ಯಾರಿ ಬ್ರೂಕ್ (91* ರನ್) ಹಾಗೂ ಜೇಮಿ ಸ್ಮಿತ್ (101* ರನ್) ಅವರು 25.2 ಓವರ್ಗಳಲ್ಲಿ 165 ರನ್ ಜೊತೆಯಾಟವಾಡಿದ್ದು. ಮೂರನೇ ದಿನದ ಭೋಜನದ ವೇಳೆಗೆ 249/5 ರನ್ ಗಳಿಸಿ ಪ್ರತಿ ಹೋರಾಟ ನಡೆಸುತ್ತಿದೆ.