Preity Zinta: ಮದುವೆಗೂ ಮುನ್ನವೇ 34 ಮಕ್ಕಳ ತಾಯಿಯಾದ್ರು ಈ ಸ್ಟಾರ್ ನಟಿ! ಏನಿದು ಸ್ಟೋರಿ?
ಕೊಯಿ ಮಿಲ್ಗಯ, ವೀರ್ ಝರಾ, ದಿಲ್ ಸೆ ಸಿನಿಮಾ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಜನ ಮನ ಗೆದ್ದಿದ್ದಾರೆ. 1990ರ ದಶಕದಲ್ಲಿ ಫೇಮಸ್ ಆದ ನಟಿಯರಲ್ಲಿ ಇವರು ಒಬ್ಬರಾಗಿದ್ದು ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿ ಬಹುಬೇಡಿಕೆಯ ನಟಿಯಾಗಿದ್ದರು. ಇತ್ತೀಚೆಗೆ ಇವರಿಗೆ ಸಿನಿಮಾ ಆಫರ್ ಕಡಿಮೆಯಾದರೂ ಪಂಜಾಬ್ ಐಪಿಎಲ್ ಟೀಮ್ ಒಡತಿಯಾಗಿ ಮಿಂಚಿದ್ದಾರೆ. ಇದರ ಜೊತೆಗೆ ಸಾಕಷ್ಟು ಸಮಾಜ ಮುಖಿ ಕೆಲಸದಲ್ಲೂ ಭಾಗಿಯಾಗಿದ್ದು ಮದುವೆಗೂ ಮೊದಲೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ್ದಾರೆ.

Preity Zinta


ಹಿಮಾಚಲ ಪ್ರದೇಶದ ಹಿಂದೂ ವಿಶ್ವಕರ್ಮ ಕುಟುಂಬದ ದುರ್ಗಾನಂದ್ ಜಿಂಟಾ ಅವರ ಮಗಳು ಪ್ರೀತಿ ಜಿಂಟಾ ಅವರು ಶಿಮ್ಲಾದ ಜೀಸಸ್ ಮೇರಿ ಬೋರ್ಡಿಂಗ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಮುಗಿಸಿದರು. ಇವರ ತಂದೆ ದುರ್ಗಾನಂದ್ ಅವರು ಸೇನಾ ಅಧಿಕಾರಿಯಾಗಿದ್ದು ಪ್ರೀತಿ ಜಿಂಟಾ ಅವರಿಗೆ 13 ವರ್ಷದವಿರುವಾಗಲೇ ಕಾರು ಅಪಘಾತದಲ್ಲಿ ಇವರ ತಂದೆ ನಿಧನರಾದರು. ಬಳಿಕ ಶಿಮ್ಲಾದಲ್ಲಿ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿ, ಮನೋವಿಜ್ಞಾನದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.

ಶೈಕ್ಷಣಿಕವಾಗಿ ಸಾಧನೆ ಮಾಡಿದ್ದರೂ ಇವರಿಗೆ ಫ್ಯಾಷನ್ ಮಾಡೆಲಿಂಗ್ ವಿಚಾರದ ಬಗ್ಗೆ ಅಪಾರ ಆಸಕ್ತಿ ಇತ್ತು. ಈ ಮೂಲಕ ಪ್ರೀತಿ ಜಿಂಟಾ ಅವರು 1998ರಲ್ಲಿ ಮಣಿರತ್ನಂ ನಿರ್ದೇಶನದ ದಿಲ್ ಸೇ ಚಿತ್ರದ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದೇ ಚಿತ್ರದಲ್ಲಿ ಬಾಲಿ ವುಡ್ ಖ್ಯಾತ ನಟ ಶಾರುಖ್ ಖಾನ್ ಕೂಡ ಅಭಿನಯಿಸಿ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಬಳಿಕ ಈ ಸಿನಿಮಾ ತಮಿಳಿನಲ್ಲಿ ಕೂಡ ರಿಮೇಕ್ ಆಯಿತು. ಅನಂತರ ಅವರು ಸೋಲ್ಜರ್ ಚಿತ್ರದಲ್ಲಿ ಕೂಡ ನಟಿಸಿದ್ದು ಅದು ಕೂಡ ಬಾಕ್ಸ್ ಆಫೀಸ್ ದಾಖಲೆ ಮಾಡಿದೆ.

ನಟಿ ಮದುವೆಗೆ ಮುಂಚೆಯೇ 34 ಮಕ್ಕಳಿಗೆ ತಾಯಿಯಾಗಿದ್ದಾರೆ. ಹೆಣ್ಣು ಭ್ರೂಣಹತ್ಯೆ, ಕಡಿಮೆ ಆದಾಯ ಹೊಂದಿರುವ ಹುಡುಗಿಯರು ಎದುರಿಸುವ ಸಮಸ್ಯೆ ಬಗ್ಗೆ ಮನಗಂಡ ನಟಿ ಮಕ್ಕಳನ್ನು ದತ್ತು ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಪ್ರೀತಿ ಜಿಂಟಾ 34 ನೇ ವಯಸ್ಸಿನಲ್ಲಿ ತೆಗೆದುಕೊಂಡ ಒಂದು ದೊಡ್ಡ ನಿರ್ಧಾರ ಅವರ ಜೀವನದಲ್ಲಿ ಒಂದು ಮೈಲಿಗಲ್ಲಾಯಿತು. ತನ್ನ 34 ನೇ ಹುಟ್ಟು ಹಬ್ಬದ ದಿನದಂದೆ ನಟಿ ಪ್ರೀತಿ ಅವರು ಋಷಿಕೇಶದಲ್ಲಿರುವ ಮದರ್ ಮಿರಾಕಲ್ ಅನಾಥಾಶ್ರಮ ದಿಂದ 34 ಹುಡುಗಿಯರನ್ನು ದತ್ತು ಪಡೆದರು. ಹೀಗಾಗಿ ಮದುವೆಗೂ ಮುಂಚೆಯೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ಕರುಣಾಮಯಿ ಎಂದೆ ಹೇಳಲಾಗುತ್ತದೆ.

ನಟಿ ಪ್ರೀತಿ ಜಿಂಟಾ ಅವರು ಮಕ್ಕಳ ಆಹಾರ, ಬಟ್ಟೆ ಮತ್ತು ಇತರ ಅಗತ್ಯಗಳನ್ನ ಜೊತೆಗೆ ಶಿಕ್ಷಣದ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುತ್ತಿದ್ದಾರೆ. ಹೆಣ್ಣುಮಕ್ಕಳ ಜೀವನದ ಬಗ್ಗೆ ತನಗಿರುವ ಕಾಳಜಿಯೇ ಇಷ್ಟೊಂದು ಮಕ್ಕಳನ್ನು ದತ್ತು ಪಡೆಯಲು ಪ್ರೇರೇಪಿಸಿರುವುದಾಗಿ ನಟಿ ಪ್ರೀತಿ ಜಿಂಟಾ ಅವರು ಹೇಳಿದ್ದಾರೆ.

2016ರಲ್ಲಿ ನಟಿ ಪ್ರೀತಿ ಜಿಂಟಾ ಅವರು ಲಾಸ್ ಏಂಜಲೀಸ್ನಲ್ಲಿ ಅಮೆರಿಕದ ತಮ್ಮ ಸ್ನೇಹಿತ ಜೀನ್ ಗುಡೆನಫ್ ಅವರನ್ನು ವಿವಾಹವಾದರು. ಮದುವೆಯ ನಂತರ ಅವರು ಚಲನಚಿತ್ರಗಳಲ್ಲಿ ನಟಿ ಸುವುದನ್ನು ಕಡಿಮೆ ಮಾಡಿದ್ದು ವಿಶೇಷ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡರು. ಬಳಿಕ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಕ್ರಿಕೆಟ್ ತಂಡದ ಸಹ-ಮಾಲೀಕರಾಗಿದ್ದಾರೆ. ಮದುವೆಯಾದ ಐದು ವರ್ಷಗಳ ನಂತರ ತಮ್ಮ 46ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ಮೂಲಕ ಸಿನಿಮಾ ಹೊರತಾಗಿ ಸಮಾಜ ಸೇವೆಯಲ್ಲಿ ಇವರ ನಡೆ ಅನೇಕ ಹೆಣ್ಣು ಮಕ್ಕಳಿಗೆ ಹೊಸ ಬದುಕು ನೀಡಿದಂತಾಗಿದೆ.