ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್‌ಗಳಿಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿ.ಕೆ.ಶಿವಕುಮಾರ್

DK Shivakumar: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್‌ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇದಕ್ಕೆ ಅಗತ್ಯ ಹಣ ಮೀಸಲಿಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್‌ಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್

Profile Siddalinga Swamy May 5, 2025 3:00 PM

ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್‌ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 2010ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂಬಂಧ ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ನಾಲ್ಕು ರಾಜ್ಯ ಸರ್ಕಾರದ ಪ್ರತಿನಿಧಿಗಳ ಸಭೆ ಕರೆದಿದೆ. ಈ ವಿಚಾರವಾಗಿ ಸಂಬಂಧಪಟ್ಟ ಸಚಿವರನ್ನು ಕರೆಸಿ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡಿದ್ದು, 2 ದಿನಗಳಲ್ಲಿ ಅವರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ಇವುಗಳ ಆಧಾರದ ಮೇಲೆ ಕೇಂದ್ರ ಸಚಿವಾಲಯದ ಸಭೆಯಲ್ಲಿ ನಾವು ನಮ್ಮ ಬೇಡಿಕೆ ಪ್ರಸ್ತಾಪಿಸುತ್ತೇವೆ ಎಂದು ತಿಳಿಸಿದರು.

ಈ ಯೋಜನೆ ಜಾರಿಗೆ ಸರ್ಕಾರ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದು, ಇದಕ್ಕೆ ಅಗತ್ಯ ಹಣ ಮೀಸಲಿಡಲಾಗುವುದು ಎಂದರು. ಆಂಧ್ರ ಹಾಗೂ ತೆಲಂಗಾಣಕ್ಕೆ 13 ಟಿಎಂಸಿ ನೀರು ಲಾಭವಾಗಲಿದೆ ಎಂದು ಕೇಳಿದಾಗ, ʼಅವರಿಗೆ ಎಷ್ಟಾದರೂ ಲಾಭ ಆಗಲಿ, ನಷ್ಟ ಆಗಲಿ. ನಾವು ಅಣೆಕಟ್ಟನ್ನು 524 ಮೀಟರ್ ಗಳಿಗೆ ಎತ್ತರಿಸಬೇಕು. ಅದಕ್ಕೆ ಎಷ್ಟು ಬೇಕೋ ಅಷ್ಟು ಪ್ರಯತ್ನ ನಾವು ಮಾಡುತ್ತೇವೆʼ ಎಂದು ತಿಳಿಸಿದರು.

ಟನಲ್ ರಸ್ತೆ, ಮೆಟ್ರೋಗೆ ಅಗತ್ಯವಿರುವ ಜಾಗ ಪಡೆಯುತ್ತೇವೆ

ಟನಲ್ ರಸ್ತೆ ಹಾಗೂ ಮೆಟ್ರೋ ಕಾಮಗಾರಿಗೆ ಹೆಬ್ಬಾಳ ಬಳಿಯ ಜಾಗದ ವಿಚಾರವಾಗಿ ನಡೆದ ಸಭೆಯ ಬಗ್ಗೆ ಕೇಳಿದಾಗ, ʼಹೆಬ್ಬಾಳ ಜಂಕ್ಷನ್ ಬಹಳ ಮುಖ್ಯವಾದ ಜಾಗ. ಇಲ್ಲಿ ಮೆಟ್ರೋ ಹಾಗೂ ಟನಲ್ ರಸ್ತೆ ಅವಶ್ಯವಿದೆ. ಹೀಗಾಗಿ ನಾವು ಅಗತ್ಯವಿರುವ ಜಾಗವನ್ನು ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ನಾವು ಯೋಜನೆ ಹಿಂಪಡೆಯಲು ಸಾಧ್ಯವಿಲ್ಲ. ಮೆಟ್ರೋ ಹಾಗೂ ಟನಲ್ ರಸ್ತೆ ಅಧಿಕಾರಿಗಳು ಸೇರಿ ಇದರ ವಿನ್ಯಾಸ ಸಿದ್ಧಪಡಿಸುವಂತೆ ಸೂಚಿಸಿದ್ದೇವೆ. ಇದಕ್ಕೆ ಅಗತ್ಯವಿರುವ ಮಿಲಿಟರಿ ಜಾಗ ಹಾಗೂ ಖಾಸಗಿ ಜಾಗ ಎಷ್ಟು ಬೇಕು ಎಂದು ನಾವು ಚರ್ಚೆ ಮಾಡಿದ್ದೇವೆ. ಟಿಡಿಆರ್ ಅಥವಾ ಎಫ್‌ಎಆರ್ ಮೂಲಕ ಪರಿಹಾರ ನೀಡಲು ನಾವು ಬದ್ಧವಾಗಿದ್ದೇವೆ. ನಾವು ಈ ಜಾಗ ಬಿಟ್ಟು ಕೊಡಲು ಸಿದ್ದವಿಲ್ಲ‌. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಬೇಕಾಗಿದ್ದು, ಇದಕ್ಕೆ ಅಗತ್ಯವಿರುವ ಜಾಗದ ವಿಚಾರವಾಗಿ ನಾವು ಸಭೆ ಮಾಡಿದ್ದೇವೆ ಎಂದರು.

ತಮ್ಮ ಸಮುದಾಯ ತಿಳಿಸಲು ಮುಕ್ತ ಅವಕಾಶ ನೀಡಿದ್ದೇವೆ

ಒಳ ಮೀಸಲಾತಿ ವಿಚಾರವಾಗಿ ಸಮೀಕ್ಷೆ ಆರಂಭವಾಗುತ್ತಿರುವ ಬಗ್ಗೆ ಕೇಳಿದಾಗ, ʼಒಳ ಮೀಸಲಾತಿಗೆ ಸಮೀಕ್ಷೆ ಮಾಡಲು ಸಚಿವ ಸಂಪುಟ ತೀರ್ಮಾನ ಮಾಡಿದೆ. ಇದಕ್ಕಾಗಿ ಸಮಿತಿ ಮಾಡಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ಗೊಂದಲ ಇಲ್ಲದಂತೆ ಜನರು ತಮ್ಮ ಜಾತಿಗಳನ್ನು ಸ್ಪಷ್ಟವಾಗಿ ಮಾಹಿತಿ ನೀಡಬೇಕು ಎಂದು ಮುಕ್ತ ಅವಕಾಶ ಮಾಡಿಕೊಡಲಾಗಿದೆʼ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | BOB Recruitment 2025: 10ನೇ ತರಗತಿ ಪಾಸಾದವರಿಗೆ ಬಂಪರ್‌ ಚಾನ್ಸ್‌; ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ ಬರೋಬ್ಬರಿ 500 ಹುದ್ದೆ

ಧಾರ್ಮಿಕ ಆಚರಣೆಗೆ ಅಡ್ಡಿ ಮಾಡಬಾರದು

ಕಲಬುರ್ಗಿಯಲ್ಲಿ ನೀಟ್ ಪರೀಕ್ಷೆ ವೇಳೆ ಜನಿವಾರ ತೆಗೆಸಿರುವ ಬಗ್ಗೆ ಕೇಳಿದಾಗ, ʼಧಾರ್ಮಿಕ ಆಚರಣೆ, ವಿಚಾರಗಳಿಗೆ ಸರ್ಕಾರ, ಅಧಿಕಾರಿಗಳು ಅಡ್ಡಿ ಮಾಡಬಾರದು. ಕೇಂದ್ರ ಸರ್ಕಾರದ ಈ ಕ್ರಮ ಸರಿಯಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.