Pahalgam Terror Attack: ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿ ಜಲವಿದ್ಯುತ್ ಯೋಜನೆಗಳ ಕೆಲಸ ಪ್ರಾರಂಭಿಸಿದ ಭಾರತ
ಭಾರತವು ಸಿಂಧೂ ನದಿಯಲ್ಲಿ (Sindu River) ಜಲವಿದ್ಯುತ್ ಯೋಜನೆಗಳ (Hydroelectric Projects) ಕೆಲಸವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಹೋಗುವ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಕಡಿತಗೊಳಿಸಿದ್ದು, ಝೀಲಂ ನದಿಯ ಕಿಶನ್‌ಗಂಗಾ ಅಣೆಕಟ್ಟಿನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಮೊದಲು ಜಲಾಶಯದ ಕೆಸರನ್ನು ತೆಗೆದು ಜಲಾಶಯ ಮಟ್ಟವನ್ನು ಹೆಚ್ಚಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ.


ನವದೆಹಲಿ: ಕಾಶ್ಮೀರದ ಪಹಲ್ಗಾಮ್ (Pahalgam) ನಲ್ಲಿ ನಡೆದ ಭಯೋತ್ಪಾದಕ ದಾಳಿಯ (Terror Attack) ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ಜಲ ಒಪ್ಪಂದವನ್ನು (Indus Waters Treaty) ಭಾರತ ಸರ್ಕಾರ ರದ್ದುಗೊಳಿಸಿದೆ. ಈ ಮೂಲಕ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯ ಕುರಿತಾಗಿ 1960ರಲ್ಲಿ ಎರಡು ದೇಶಗಳು ಮಾಡಿಕೊಂಡ ಒಪ್ಪಂದ ಕೊನೆಯಾಗಿದೆ. ಈ ಬಳಿಕ ಇದೀಗ ಭಾರತವು ಸಿಂಧೂ ನದಿಯಲ್ಲಿ ಜಲವಿದ್ಯುತ್ ಯೋಜನೆಗಳ (Hydroelectric Projects) ಕೆಲಸವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಎರಡು ಜಲವಿದ್ಯುತ್ ಯೋಜನೆಗಳಿಗೆ ಜಲಾಶಯ ಮಟ್ಟವನ್ನು ಹೆಚ್ಚಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ.
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ಅನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ 1960ರ ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದು ಮಾಡಿದೆ. ಇದರಿಂದ ಪಾಕಿಸ್ತಾನದ ಶೇ. 80ರಷ್ಟು ಭೂಭಾಗಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದೆ.
ಭಾರತವು ಭಾನುವಾರ ಪಾಕಿಸ್ತಾನಕ್ಕೆ ಹೋಗುವ ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಕಡಿತಗೊಳಿಸಿದ್ದು, ಝೀಲಂ ನದಿಯ ಕಿಶನ್‌ಗಂಗಾ ಅಣೆಕಟ್ಟಿನಲ್ಲಿಯೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಜಲಾಶಯದ ಕೆಸರನ್ನು ತೆಗೆದುಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇದನ್ನು ಭಾರತದ ಅತಿದೊಡ್ಡ ಜಲವಿದ್ಯುತ್ ಕಂಪೆನಿ ಸರ್ಕಾರಿ ಸ್ವಾಮ್ಯದ ಎನ್ ಹೆಚ್ ಪಿಸಿ ಲಿಮಿಟೆಡ್ ಮತ್ತು ಜಮ್ಮು ಮತ್ತು ಕಾಶ್ಮೀರದ ಫೆಡರಲ್ ಪ್ರದೇಶದ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ತಕ್ಷಣಕ್ಕೆ ಪಾಕಿಸ್ತಾನಕ್ಕೆ ನೀರು ಸರಬರಾಜಿನಲ್ಲಿ ತೊಂದರೆ ಉಂಟಾಗುವುದಿಲ್ಲ. ಆದರೆ ಭವಿಷ್ಯದಲ್ಲಿ ಇದು ಖಂಡಿತ ಪರಿಣಾಮ ಬೀರುತ್ತದೆ. ಪಾಕಿಸ್ತಾನವು ತನ್ನ ನೀರಾವರಿ, ಜಲವಿದ್ಯುತ್ ಉತ್ಪಾದನೆಗೆ ಭಾರತದ ಮೂಲಕ ಹರಿಯುವ ನದಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದರಲ್ಲಿ 12ಕ್ಕಿಂತಲೂ ಹೆಚ್ಚಿನ ಯೋಜನೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿವೆ.
ಪಾಕಿಸ್ತಾನಕ್ಕೆ ಮಾಹಿತಿಯನ್ನೇ ಕೊಟ್ಟಿಲ್ಲ
1987ರಲ್ಲಿ ಸಲಾಲ್ ಮತ್ತು 2008 ರಲ್ಲಿ ಬಾಗ್ಲಿಹಾರ್ ಯೋಜನೆಗಳನ್ನು ನಿರ್ಮಿಸಿದ ಬಳಿಕ ಮೊದಲ ಬಾರಿಗೆ ಅಣೆಕಟ್ಟಿನ ಜಲಾಶಯ ಮಟ್ಟ ಏರಿಕೆ ಪ್ರಕ್ರಿಯೆ ನಡೆಯುತ್ತಿದೆ. ಸಿಂಧೂ ಜಲ ಒಪ್ಪಂದವು ಈ ಕೆಲಸಗಳಿಗೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ಭಾರತವು ಈ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
ಮೇ 1ರಿಂದ ಮೂರು ದಿನಗಳ ಕಾಲ ಜಲಾಶಯದ ಕೆಸರನ್ನು ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ. ಈ ಕಾರ್ಯಾಚರಣೆ ನಡೆದಿರುವುದು ಇದೇ ಮೊದಲು. ಇದು ಹೆಚ್ಚು ವಿದ್ಯುತ್ ಉತ್ಪಾದನೆಗೆ ಸಹಾಯವಾಗಲಿದೆ ಮತ್ತು ಟರ್ಬೈನ್‌ಗಳಿಗೆ ಹಾನಿಯಾಗದಂತೆ ತಡೆಯುತ್ತದೆ.
ಜಲವಿದ್ಯುತ್ ಯೋಜನೆಗಳಿಗೆ ಜಲಾಶಯದಿಂದ ಕೆಸರುಗಳನ್ನು ಹೊರಹಾಕಲು ಬಹುತೇಕ ಜಲಾಶಯವನ್ನು ಖಾಲಿ ಮಾಡಬೇಕು. ಇದರಿಂದ ಜಲಾಶಯದ ಸಂಗ್ರಹ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲೂ ಇಳಿಕೆಯಾಗಿದೆ. ಜಲಾಶಯದಲ್ಲಿ ಕೆಸರು ತುಂಬಿಕೊಂಡಿದ್ದರಿಂದ 690 ಮೆಗಾವ್ಯಾಟ್ ಸಲಾಲ್ ಯೋಜನೆಯಿಂದ ಉತ್ಪಾದಿಸಲಾಗುತ್ತಿದ್ದ ವಿದ್ಯುತ್ ಅದರ ಸಾಮರ್ಥ್ಯಕ್ಕಿಂತ ಕಡಿಮೆಯಾಗಿತ್ತು. ಯಾಕೆಂದರೆ ಪಾಕಿಸ್ತಾನವು ಜಲಾಶಯದ ಕೆಸರು ತೆಗೆಯುವುದನ್ನು ಈವರೆಗೆ ತಡೆದಿತ್ತು.
ಜಲಾಶಯದ ಕೆಸರು ತೆಗೆಯುವುದು ಸಾಮಾನ್ಯ ವಿಷಯವಲ್ಲ. ಇದರಿಂದ ಸಾಕಷ್ಟು ನೀರಿನ ವ್ಯರ್ಥವಾಗುತ್ತದೆ. ಇದರಿಂದ ಪ್ರವಾಹ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಕೆಳಮಟ್ಟದ ದೇಶಗಳಿಗೆ ಈ ಬಗ್ಗೆ ಮೊದಲೇ ತಿಳಿಸಬೇಕು ಎಂಬುದು ನಿಯಮ.
ಇದನ್ನೂ ಓದಿ: Babil Khan; ಬಾಲಿವುಡ್‌ಗೆ ಬೈಯ್ದು ಕಣ್ಣೀರಿಟ್ಟ ಖ್ಯಾತ ನಟನ ಪುತ್ರ! ಈ ಬಗ್ಗೆ ಕುಟುಂಬದ ಸ್ಪಷ್ಟನೆ ಏನು?
ಪಹಲ್ಗಾಮ್ ದಾಳಿಯಿಂದ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಭಾರತವು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಮುನ್ಸೂಚನೆ ನೀಡದೆಯೇ ಜಲಾಶಯದ ನೀರನ್ನು ಖಾಲಿ ಮಾಡಿ ಶುಚಿಗೊಳಿಸುವ ಕಾರ್ಯ ಮಾಡಿದೆ. ಎರಡು ದೇಶಗಳ ಮಧ್ಯೆ ಬಾಗ್ಲಿಹಾರ್ ಮತ್ತು ಕಿಶನ್‌ಗಂಗಾ ಅಣೆಕಟ್ಟು ದೀರ್ಘಕಾಲದಿಂದ ವಿವಾದದಲ್ಲಿದೆ. ಹೀಗಾಗಿ ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದರೆ ಯುದ್ಧ ಮಾಡಬೇಕಾಗುತ್ತದೆ ಎಂದು ಪಾಕಿಸ್ತಾನ ನೀಡಿರುವ ಬೆದರಿಕೆ ಮಧ್ಯೆ ಪಾಕಿಸ್ತಾನಕ್ಕೆ ಭಾರತ ನಿಯಮಿತ ನೀರು ಹಂಚಿಕೆ ಮತ್ತು ಪ್ರವಾಹ ಎಚ್ಚರಿಕೆ ನೀಡುವುದನ್ನು ಸ್ಥಗಿತಗೊಳಿಸಿದೆ.