Vishwavani Editorial: ಸಂಚುಕೋರರಿಗೆ ಶಾಸ್ತಿಯಾಗಲಿ
ಭಾರತದಲ್ಲಿ ಇಂಥ ಯಾವುದೇ ವಿಧ್ವಂಸಕ ಕೃತ್ಯಗಳನ್ನು ತಾನು ನಡೆಸಿದಾಗಲೂ ‘ನಾನವನಲ್ಲ, ನಾನವನಲ್ಲ’ ಎಂದೇ ಅಮಾಯಕವಾಗಿ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನದ ಮತ್ತೊಂದು ಮುಖವಾಡ ವೀಗ ಬಯಲಾದಂತಾಗಿದೆ. ಇಷ್ಟಾಗಿಯೂ, ಮೊನ್ನಿನ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಬರೆ ಹಾಕಿಸಿಕೊಂಡ ನಂತರವೂ ಪಾಕಿಸ್ತಾನದ ಠೇಂಕಾರ ನಿಂತಿಲ್ಲ


‘ನರ-ನಾಡಿಗಳಲ್ಲಿ ಹರಿಯುತ್ತಿರುವುದೇ ವಿಷಧಾರೆಯಾಗಿದ್ದರೆ, ಅಮೃತ ಸಿಂಚನವಾಗುವುದಾದರೂ ಹೇಗೆ, ಜೀವಸೆಲೆ ಚಿಮ್ಮುವುದಾದರೂ ಹೇಗೆ?’ ಎಂಬುದೊಂದು ಮಾತಿದೆ. ಮಗ್ಗುಲುಮುಳ್ಳು ದೇಶ ಎನಿಸಿಕೊಂಡಿರುವ ಪಾಕಿಸ್ತಾನಕ್ಕೂ ಮತ್ತು ಅದರ ಗುಪ್ತಚರ ಸಂಸ್ಥೆ ‘ಐಎಸ್ಐ‘ಗೂ ಒಪ್ಪುವಂಥ-ಒಗ್ಗುವಂಥ ಮಾತಿದು. ಹುಟ್ಟಿದಾರಭ್ಯ ಭಾರತದೆಡೆಗೆ ವಿಷ ಕಾರುವುದನ್ನೇ ಉಸಿರಾಗಿಸಿಕೊಂಡಿರುವ ದೇಶವೇ ಪಾಕಿಸ್ತಾನ. ಗಡಿಭಾಗದಲ್ಲಿನ ಉಗ್ರರ ನುಸುಳಿಕೆ, ಭಯೋತ್ಪಾದಕ ದಾಳಿಗಳು, ವಿಧ್ವಂಸಕ ಕೃತ್ಯಗಳು, ಅನಗತ್ಯವಾಗಿದ್ದ ಕಾರ್ಗಿಲ್ ಯುದ್ಧ, ಮುಂಬೈ ಸ್ಫೋಟ ಪ್ರಕರಣ ಹೀಗೆ ಹೇಳುತ್ತ ಹೋದರೆ ಹಲವು ಉದಾಹರಣೆಗಳನ್ನು ಈ ನಿಟ್ಟಿನಲ್ಲಿ ಕೊಡಬಹುದು.
ಇದನ್ನೂ ಓದಿ: Vishwavani Editorial: ನಿಜಕ್ಕೂ ತಪ್ಪಾಗಿರುವುದು ಎಲ್ಲಿ?
ಇವು ಸಾಲದೆಂಬಂತೆ ಪಾಕಿಸ್ತಾನವು ತನ್ನ ಕೃಪಾಶ್ರಯದ ಉಗ್ರರ ಮೂಲಕ ಕಾಶ್ಮೀರದ ಪಹಲ್ಗಾಮ್ ನಲ್ಲಿ ಇತ್ತೀಚೆಗಷ್ಟೇ 26 ಅಮಾಯಕರ ಮಾರಣಹೋಮ ನಡೆಸಿತು, ಅದಕ್ಕೆ ಭಾರತದ ಕಡೆಯಿಂದ ತಕ್ಕ ಶಾಸ್ತಿಯನ್ನೂ ಅನುಭವಿಸಿತು. ಆದರೆ, ಈ ಹತ್ಯಾಕಾಂಡಕ್ಕೂ ಮುನ್ನ ಭಾರತದಲ್ಲಿ ಅತಿ
ದೊಡ್ಡ ಭಯೋತ್ಪಾದಕ ದಾಳಿಯನ್ನು ನಡೆಸಲು ಪಾಕಿಸ್ತಾನದ ‘ಐಎಸ್‌ಐ’ ಸಂಚು ಹೂಡಿತ್ತು ಎಂಬ ಸಂಗತಿ ಈಗ ಬಯಲಾಗಿದೆ. ಅಲ್ಲಿಗೆ, ‘ಹೀನಸುಳಿ ಬೋಳಿಸಿದರೆ ಹೋದೀತೇ?’ ಎಂಬ ನಮ್ಮ ವರ ಜಾಣನುಡಿಗೆ ಪುಷ್ಟಿ ಸಿಕ್ಕಂತಾಗಿದೆ.
ಭಾರತದಲ್ಲಿ ಇಂಥ ಯಾವುದೇ ವಿಧ್ವಂಸಕ ಕೃತ್ಯಗಳನ್ನು ತಾನು ನಡೆಸಿದಾಗಲೂ ‘ನಾನವನಲ್ಲ, ನಾನವನಲ್ಲ’ ಎಂದೇ ಅಮಾಯಕವಾಗಿ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನದ ಮತ್ತೊಂದು ಮುಖವಾಡ ವೀಗ ಬಯಲಾದಂತಾಗಿದೆ. ಇಷ್ಟಾಗಿಯೂ, ಮೊನ್ನಿನ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಯಲ್ಲಿ ಬರೆ ಹಾಕಿಸಿಕೊಂಡ ನಂತರವೂ ಪಾಕಿಸ್ತಾನದ ಠೇಂಕಾರ ನಿಂತಿಲ್ಲ. ಅಂತಾರಾಷ್ಟ್ರೀಯ ಸಮುದಾಯವು ಈ ಉಗ್ರವಾದಿ ರಾಷ್ಟ್ರವನ್ನು ಸಾಮೂಹಿಕವಾಗಿ ಮೂಲೆಗುಂಪು ಮಾಡುವವರೆಗೂ ಆ ಠೇಂಕಾರ ಪ್ರಾಯಶಃ ನಿಲ್ಲುವುದಿಲ್ಲ. ತನ್ನ ರಾಜಕೀಯ ವ್ಯವಸ್ಥೆ ಮೂರಾಬಟ್ಟೆಯಾಗಿದ್ದರೂ, ಆರ್ಥಿಕತೆಯೆಂಬುದು ಧರಾಶಾಯಿಯಾಗಿದ್ದರೂ ಭಾರತದ ವಿರುದ್ಧ ಹೀಗೆ ವಿಷ ಕಕ್ಕುತ್ತಿರುವ ಪಾಕಿಸ್ತಾನಕ್ಕೆ ಮತ್ತು ಅದಕ್ಕೆ ಒತ್ತಾಸೆಯಾಗಿರುವ ಸಂಚುಕೋರರಿಗೆ ತಕ್ಕ ಶಾಸ್ತಿಯಾಗಬೇಕಿದೆ.