Vishwavani Editorial: ಸಂಭ್ರಮದ ಹೆಜ್ಜೆ ಸದೃಢವಾಗಲಿ
ವಿವಿಧ ಕಾರಣಗಳಿಗಾಗಿ ಒದಗಿರುವ ಬೆಲೆಯೇರಿಕೆಯ ಸ್ಥಿತಿಯಿಂದ ಶ್ರೀಸಾಮಾನ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳು ತತ್ತರಿಸಿವೆ. ಆಳುಗ ವ್ಯವಸ್ಥೆಯ ಸುಸೂತ್ರ ಕಾರ್ಯ ನಿರ್ವಹಣೆಯ ಜತೆ ಜತೆಗೆ ಈ ಸಮಸ್ಯೆಗಳ ನಿವಾರಣೆಯ ಕಡೆಗೂ ಸರಕಾರದ ಸಹಭಾಗಿಗಳು ಗಮನಹರಿಸಬೇಕಿದೆ.


ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರವು ಇಂದು (ಮೇ 20) ತನ್ನ ಎರಡು ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಸಹಜವಾಗಿಯೇ, ಇದು ಕಾಂಗ್ರೆಸ್ ಪಕ್ಷದ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಅತೀವ ಸಂತಸ ತಂದಿದೆ. ಸಮಾಜದ ತಳ ಸಮುದಾಯಗಳ ನೋವು, ನಿರಾಶೆ, ಹತಾಶೆ, ಅಸಹಾಯಕತೆಗಳನ್ನು ತೀರಾ ಹತ್ತಿರದಿಂದ ಕಂಡಿರುವ ಹಾಗೂ ಅವರ ಅಭ್ಯುದಯಕ್ಕೆ ಟೊಂಕ ಕಟ್ಟಿರುವ ಸಿದ್ದರಾಮಯ್ಯನವರು ಈ ಸಂದರ್ಭವನ್ನು ಸಹಜವಾಗಿಯೇ ಸಂಭ್ರಮಿಸುತ್ತಿರಲಿಕ್ಕೂ ಸಾಕು. ಇದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಅನ್ವಯ ವಾಗುವ ಮಾತು. ಸರಕಾರ ಅಸ್ತಿತ್ವಕ್ಕೆ ಬಂದ ಶುರುವಿನಿಂದಲೂ ಈ ‘ಸಿಎಂ-ಡಿಸಿಎಂ’ ಜೋಡಿಯು, ಚುನಾವಣಾ ಸಂದರ್ಭ ದಲ್ಲಿ ಪಕ್ಷವು ಜನತೆಗೆ ಇತ್ತ ಭರವಸೆಯನ್ನು ಹತ್ತು ಹಲವು ಸವಾಲುಗಳ ಹಾಗೂ ಕೊಂಕುಮಾತುಗಳ ನಡುವೆಯೂ ಈಡೇರಿಸಲು ಶ್ರಮಿಸಿರುವುದನ್ನು ತಳ್ಳಿ ಹಾಕಲಾಗದು.
ಇದನ್ನೂ ಓದಿ: Vishwavani Editorial: ಪಾಕಿಸ್ತಾನ ಎಂಬ ಊಸರವಳ್ಳಿ
ಪಯಣ ಇಷ್ಟಕ್ಕೇ ನಿಲ್ಲುವುದಿಲ್ಲ, ದಿನಗಳೆದಂತೆ ಅದು ಹೊಸ ಹೊಸ ಸವಾಲುಗಳನ್ನು ಎದುರಿಸು ತ್ತಲೇ ಹೋಗಬೇಕಾಗುತ್ತದೆ ಎಂಬುದನ್ನು ಇಲ್ಲಿ ಮರೆಯಲಾಗದು. ಸರಕಾರದ ಸಹಭಾಗಿಗಳಾದ ಸಚಿವರು ಮಾತ್ರವಲ್ಲದೆ, ಶಾಸಕರು, ಅಧಿಕಾರಿಗಳು ಪರಸ್ಪರ ಕೈಜೋಡಿಸಿದಾಗ ಮಾತ್ರವೇ ಈ ಸವಾಲನ್ನು ಎದುರಿಸುವ ಶಕ್ತಿ ದೊರಕುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಅಂಥದೊಂದು ಶಕ್ತಿಯ ಮರುಪೂರಣಕ್ಕೆ ಕಾಂಗ್ರೆಸ್ ಸರಕಾರ ಅನುಗಾಲ ಯತ್ನಿಸಲಿ ಹಾಗೂ ಅದರಿಂದಾಗಿ ಜನಕಲ್ಯಾಣದ ಆಶಯಗಳು, ಅಭಿವೃದ್ಧಿ ಚಟುವಟಿಕೆಗಳು ಅಬಾಧಿತವಾಗಿ ನೆರವೇರು ವಂತಾಗಲಿ ಎಂದಷ್ಟೇ ಈ ಸಂದರ್ಭದಲ್ಲಿ ಆಶಿಸಬಹುದು, ಹಾರೈಸಬಹುದು.
ವಿವಿಧ ಕಾರಣಗಳಿಗಾಗಿ ಒದಗಿರುವ ಬೆಲೆಯೇರಿಕೆಯ ಸ್ಥಿತಿಯಿಂದ ಶ್ರೀಸಾಮಾನ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳು ತತ್ತರಿಸಿವೆ. ಆಳುಗ ವ್ಯವಸ್ಥೆಯ ಸುಸೂತ್ರ ಕಾರ್ಯ ನಿರ್ವಹಣೆಯ ಜತೆ ಜತೆಗೆ ಈ ಸಮಸ್ಯೆಗಳ ನಿವಾರಣೆಯ ಕಡೆಗೂ ಸರಕಾರದ ಸಹಭಾಗಿಗಳು ಗಮನಹರಿಸಬೇಕಿದೆ. ಹಾಗಾದಲ್ಲಿ, ‘ಇದು ಜನಪ್ರಿಯ ಸರಕಾರ, ಜನಾನುರಾಗಿ ಸರಕಾರ’ ಎಂಬ ಮಾತಿಗೂ ಪುಷ್ಟಿ ಸಿಕ್ಕಿ ದಂತಾಗುತ್ತದೆ. ಸರಕಾರದ ಸಹಭಾಗಿಗಳು ಈ ನಿತ್ಯಸತ್ಯವನ್ನು ಅರಿತು ನಡೆದರೆ ಒಳಿತು.