ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಸ್‌ಕ್ರೀಂ ಪ್ರಿಯರೇ ಎಚ್ಚರ; ಕೋನ್‌ ಐಸ್‌ಕ್ರೀಂನಲ್ಲಿ ಹಲ್ಲಿಯ ಬಾಲ ಪತ್ತೆ; ಸೇವಿಸಿ ಮಹಿಳೆ ಅಸ್ವಸ್ಥ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಹಿಳೆಯೊಬ್ಬರು ಖರೀದಿಸಿದ ಹವ್ಮೋರ್ ಬ್ರ್ಯಾಂಡ್‌ನ ಕೋನ್‌ ಐಸ್‌ಕ್ರೀಂನಲ್ಲಿ ಹಲ್ಲಿಯ ಬಾಲ ಪತ್ತೆಯಾಗಿದೆ. ಅಸ್ವಸ್ಥಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಿಳೆಯ ದೂರಿನ ಆಧಾರದಲ್ಲಿ ಅಧಿಕಾರಿಗಳು ಐಸ್‌ಕ್ರೀಂ ಮಾರಾಟ ಮಾಡಿದ ಅಂಗಡಿಯನ್ನು ಪರಿಶೀಲಿಸಿದ್ದು, ಪರವಾನಗಿ ಇಲ್ಲದ ಕಾರಣ ಸೀಜ್‌ ಮಾಡಲಾಗಿದೆ.

ಕೋನ್‌ ಐಸ್‌ಕ್ರೀಂನಲ್ಲಿ ಹಲ್ಲಿಯ ಬಾಲ ಪತ್ತೆ

Profile Ramesh B May 15, 2025 4:59 PM

ಗಾಂಧಿನಗರ:‌ ಐಸ್‌ಕ್ರೀಂನಲ್ಲಿ ಹಲ್ಲಿಯ ಬಾಲ ಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ಅಹಮದಾಬಾದ್‌ನ ಮಣಿನಗರದಲ್ಲಿರುವ ಮಹಾಲಕ್ಷ್ಮೀ ಕಾರ್ನರ್ ಎಂಬ ಅಂಗಡಿಯಿಂದ ಮಹಿಳೆಯೊಬ್ಬರು ಮಕ್ಕಳಿಗೆ ಮತ್ತು ಅವರಿಗೆಂದು 4 ಐಸ್‌ಕ್ರೀಂ ಕೋನ್‌ಗಳನ್ನು ಖರೀದಿಸಿದ್ದರು. ಅರ್ಧ ಐಸ್‌ಕ್ರೀಂ ತಿಂದ ನಂತರ ಅವರಿಗೆ ಕೋನ್‌ನಲ್ಲಿ ಹಲ್ಲಿಯ ಬಾಲ ಕಂಡು ಬಂದಿದೆ. ಈ ಘಟನೆ ನಡೆದ ಬಳಿಕ ಮಹಿಳೆಗೆ ತೀವ್ರ ಹೊಟ್ಟೆನೋವು ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಾಣಿಸಿಕೊಂಡವು. ತಕ್ಷಣವೇ ಅವರನ್ನು ಹತ್ತಿರವಿದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼʼನಾವು ನಾಲ್ಕು ಕೋನ್‌ಗಳನ್ನು ತೆಗೆದುಕೊಂಡದ್ದೆವು. ಒಂದರಲ್ಲಿ ಹಲ್ಲಿಯ ಬಾಲ ಕಂಡು ಬಂದಿದೆ. ಅದನ್ನು ಸೇವಿಸಿದ ಬಳಿಕ ನನಗೆ ನಿರಂತರವಾಗಿ ವಾಂತಿ ಆಗುತ್ತಿದೆ. ದೇವರ ಕೃಪೆಯಿಂದ ನನ್ನ ಮಕ್ಕಳು ಇದನ್ನು ತಿನ್ನಲಿಲ್ಲ. ಏನಾದರೂ ಆಗಿದ್ದರೆ ಕಂಪನಿಯ ವಿರುದ್ಧ ಗಂಭೀರ ಪ್ರಕರಣ ಹಾಕುತ್ತಿದ್ದೆವು. ದಯವಿಟ್ಟು ಐಸ್‌ಕ್ರೀಂ ತಿನ್ನುವ ಮೊದಲು ಸರಿಯಾಗಿ ನೋಡಿʼʼ ಎಂದು ಮಹಿಳೆ ಹೇಳಿದ್ದಾರೆ. ಅಹಮದಾಬಾದ್ ಮಹಾನಗರ ಪಾಲಿಕೆಗೆ ದೂರು ನೀಡಿದ ಬಳಿಕ, ಆಹಾರ ಸುರಕ್ಷತಾ ಕಾಯ್ದೆಯಡಿ ಪರವಾನಗಿ ಇಲ್ಲದ ಕಾರಣದಿಂದ ಮಹಾಲಕ್ಷ್ಮಿ ಕಾರ್ನರ್ ಅಂಗಡಿಯನ್ನು ಸೀಜ್ ಮಾಡಲಾಯಿತು. ಜತೆಗೆ ಐಸ್‌ಕ್ರೀಂ ಕಂಪನಿ ಹವ್ಮೋರ್‌ಗೆ 50,000 ರೂ. ದಂಡ ವಿಧಿಸಲಾಗಿದೆ.



ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಆಹಾರ ಇಲಾಖೆ ಅಧಿಕಾರಿ ಡಾ. ಭವಿನ್ ಜೋಶಿ, ʼʼಮಣಿನಗರದಲ್ಲಿ ಐಸ್‌ಕ್ರೀಂ ಕೋನಿನಲ್ಲಿ ಹಲ್ಲಿಯ ಬಾಲ ಕಂಡುಬಂದಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣ ಮಹಿಳೆಯನ್ನು ಸಂಪರ್ಕಿಸಿದಾಗ ಅವರು ಹವ್ಮೋರ್ ಬ್ರ್ಯಾಂಡ್‌ನ ಐಸ್‌ಕ್ರೀಮ್ ಕೋನ್‌ಗಳನ್ನು ಮಹಾಲಕ್ಷ್ಮೀ ಕಾರ್ನರ್ ಎಂಬ ಅಂಗಡಿಯಿಂದ ಖರೀದಿಸಿದ್ದಾರೆ ಎಂಬುದು ದೃಢಪಟ್ಟಿತು. ನಾವು ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಂಗಡಿಯವರ ಬಳಿ ಆಹಾರ ಸುರಕ್ಷತಾ ಪರವಾನಗಿ ಇಲ್ಲದೇ ಇರಲಿಲ್ಲ. ತಕ್ಷಣವೇ ಅಂಗಡಿಯನ್ನು ಸೀಜ್ ಮಾಡಲಾಯಿತುʼʼ ಎಂದು ಹೇಳಿದ್ದಾರೆ.

ತನಿಖೆಯಲ್ಲಿ ಆ ಕೋನ್‌ ಹವ್ಮೋರ್ ಐಸ್‌ಕ್ರೀಂ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಾರೋಡಾ (GIDC) ಫೇಸ್ 1 ಕಾರ್ಖಾನೆಯಲ್ಲಿ ತಯಾರಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂತು. ಕಂಪನಿಯ ಎಲ್ಲ ಬ್ಯಾಚ್‌ಗಳ ಐಸ್‌ಕ್ರೀಂ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ ಕಂಪನಿಗೆ ಅದರ ಸಂಪೂರ್ಣ ಬ್ಯಾಚ್ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ನೋಟಿಸ್ ಜಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.