Ravi Hunj Column: ಪ್ರತ್ಯೇಕ ಧರ್ಮ ಎಂದು ಸಾಬೀತುಪಡಿಸಲು ಯಾವುದೇ ವಿಶೇಷ ಸಂಶೋಧನೆ ಬೇಕಿಲ್ಲ
ವೀರಶೈವವು ಧಾರ್ಮಿಕಮತವಾದರೆ ಲಿಂಗಾಯತವು ಅದರ ಸಾಧನೆಯ ಮಾರ್ಗ ಮಾತ್ರ. ಹಾಗಾಗಿ ಈ ಸಮಯಸಾಧಕರು ಹಚ್ಚಿರುವ ಮೂಗಿನ ತುಪ್ಪದ ಪ್ರತ್ಯೇಕ ಧರ್ಮ ಎಂದಿಗೂ ಕೈಗೂಡದು. ಜನರಿಗೆ ಮಂಕುಬೂದಿ ಎರಚಿದಂತೆ ನ್ಯಾಯಾಂಗಕ್ಕೆ ಮಂಕುಬೂದಿ ಎರಚಲಾಗದು. ಹಾಗಾಗಿ ’ನಮ್ಮಂತೆಯೇ ಪರರು’ ಎಂದುಕೊಂಡ ಈ ಡಾಂಭಿಕರ ಹುಸಿ ಭರವಸೆ ಫಲ ನೀಡದು.


ಬಸವ ಮಂಟಪ (ಭಾಗ-2)
ರವಿ ಹಂಜ್
ಕುರಾನಿನ ಒಂದೊಂದು ಹದೀತುಗಳನ್ನು ಅವುಗಳ ಸಮಗ್ರ ಉಪಕ್ರಮದಲ್ಲಿ ವಿಶ್ಲೇಷಿಸದೆ, ಪೈಗಂಬರರ ಅಂದಿನ ಸಾಮಾಜಿಕ ಜೀವನಕ್ಕೆ ತೂಲಿಸದೆ ಉಗ್ರರು ಕೇವಲ ಇಂದಿನ ವರ್ತಮಾನದ ಸಾಂದರ್ಭಿಕಕ್ಕೆ ಉಲ್ಲೇಖಿಸಿ ಹೇಗೆ ಉಗ್ರವಾದವನ್ನು ಸಮರ್ಥಿಸಿಕೊಳ್ಳುವರೋ, ಅದೇ ರೀತಿ ಬಸವ ತಾಲಿಬಾನಿಗಳು ಸಮಗ್ರತೆ ಮತ್ತು ಷಟ್‌ಸ್ಥಲಗಳಿಗೆ ಅನುಗುಣವಾಗಿ ವಚನಗಳನ್ನು ವಿಶ್ಲೇಷಿಸದೆ ಅದನ್ನು ತಮ್ಮ ಸೈದ್ಧಾಂತಿಕ ಉದ್ದೇಶಕ್ಕೆ ಬಳಸುತ್ತಿರುವುದು ಸುಸ್ಪಷ್ಟ.
ಹಾಗಾಗಿಯೇ ಇವರ ನಿವೃತ್ತ ಪ್ರೊಫೆಸರ್ ಕಂ ಮುಖಂಡ ಪ್ರೊ.ಯಾಪಲಪರವಿಯವರು ತಮ್ಮ ಸತ್ಯ-ಮಿಥ್ಯ ವೇದಿಕೆಯ ಮೇಲಿದ್ದ ಸಮಸ್ತ ಖಾವಿಧಾರಿಗಳನ್ನುದ್ದೇಶಿಸಿ, “ನೀವು ಇಷ್ಟಲಿಂಗ ಪೂಜೆ ಯನ್ನು ಸರಳೀಕರಿಸಬೇಕು. ಬೇರೆ ಪಂಥದೋರು ನೀವು ಎನ್ನ ಹೋಗ್ರಿ, ಫೀಸ್ ಕಟ್ರಿ ಅಂತ ಅನ್ನೋ ಹಂಗ ಸಿಂಪ್ಲಿ- ಮಾಡ್ರಿ. ಯಾಕಂದ್ರ, ನಮ್ಮ ಹುಡುಗರು ಎಲ್ಲೆಲ್ಲೋ ಹೋಗ್ತಾ ಇರ್ತಾರ.
ಏಯ್ ಲಿಂಗ ಕಟ್ಕೊಂಡೀರಿ, ಅಲ್ಲಿಗೆ ಹೋಗಬ್ಯಾಡ್ರಿ ಅಂದ್ರ ಅವು ನಮ್ಮ ಮಾತು ಕೇಳಂಗಿಲ್ಲ. ಹೋಗೇ ತೀರ್ತಾವ. ಯಾಕಂದ್ರ ನಾವೂ ಅಂಥ ಕೆಲವು ಕಡೆ ಹೋಗ್ತಾ ಇರ್ತೇವಿ" ಎಂದು ನಗುತ್ತಾ ತಮ್ಮ ‘ಹೆಮ್ಮೆಯ ಲಂಪಟ’ ನೋಟ ಬೀರಿದರು. ಅದನ್ನು ಕೇಳಿ ಆ ಖಾವಿಧಾರಿಗಳು, ಸಭಿಕರು ಎಲ್ಲರೂ “ಹೌದೌದು, ನಮ್ದು ಬೀ ವಹೀಚ್ ಬಾ" ಎನ್ನುವಂತೆ ಸಹಮತದ ಲಂಪಟ ನಗೆ ನಕ್ಕರು.
ಅಂದರೆ ಧರ್ಮಕ್ಕಾಗಿ ಹೋರಾಡುತ್ತಿರುವ ಈ ಲಿಂಗವಂತರು ಅಂಥ ಹೋಗಬಾರದ ಕಡೆ ಹೋಗುವ ಜಾಗಗಳು ಯಾವುವು? ಖುದ್ದು ಓದುಗರು ಈ ಧರ್ಮಭಂಜಕರ ಮಾತಿನ ಸಾಲುಗಳ ನಡುವಿನ ಧಾರ್ಮಿಕತೆ, ನೈತಿಕತೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂದು ವಿಶ್ಲೇಷಿಸಿ ವಿಮರ್ಶಿಸಿ. ಇಂಥ ವಿಶ್ವಾಸಘಾತುಕ ಕೃತ್ಯಕ್ಕೆ ಯಾವ ಯಾವ ರಾಜಕಾರಣಿ ಬೆಂಬಲಿಸಿzನೆ ಎಂದೂ ನಿರ್ಣಯಿಸಿ. ಏಕೆಂದರೆ, ಧರ್ಮೋ ಭಕ್ಷತಿ ಭಕ್ಷಿತಃ!
ಇದನ್ನೂ ಓದಿ: Ravi Hunj Column: ಬೌದ್ಧಿಕ ದಾರಿದ್ರ್ಯಕ್ಕೆ ಕವಚವಾಗಿ ಬಳಕೆಯಾದ ಬಸವಣ್ಣ !
ಇರಲಿ, ಇಷ್ಟಲಿಂಗಕ್ಕೆ ಯಾವುದೇ ಮೈಲಿಗೆಯಿಲ್ಲ. ಹಾಗಾಗಿ ಲಿಂಗವಂತನು ಗರ್ಭಗುಡಿ ಅಥವಾ ಶೌಚಾಲಯಕ್ಕೆ ಹೋಗಲಿ, ಕಾಯಕದಲ್ಲಿರಲಿ ಅಥವಾ ನಿರ್ವಸನಾಗಿ ಮೈಥುನದಲ್ಲಿರಲಿ, ಇಷ್ಟ ಲಿಂಗವನ್ನು ಬಿಚ್ಚಿಡಬಾರದು ಎಂದೇ ದೀಕ್ಷಾಬೋಧೆಯ ವಿಧಿ ವಿಧಾನವು ತಿಳಿಸುತ್ತದೆ.
ಇಂಥ ಒಂದು ಮೂಲಭೂತ ವಿಷಯವೂ ಈ ಗಾಂಪರ ಗುಂಪಿಗೆ ಗೊತ್ತಿಲ್ಲ. ಬಿಳಿಯ ವಸಧಾರಿ ಸ್ತ್ರೀ ಪುರುಷ ಕೋರಸ್ ಸಹನಟಿ/ಟ ಶರಣರನ್ನು ಬಿಡಿ, ಕಾವಿ ಧರಿಸಿ ಲಿಂಗದೀಕ್ಷೆ ಕೊಡುವ ನಟುವಾಂಗ ಅನುರಕ್ತರಾದರೂ ಅರಿತಿರಬೇಕಲ್ಲವೇ? ‘ಇಸೀ ಲಿಯೇ ಯೇ ಸಬ್ ಕೆ ಸಬ್ ವಹೀಚ್ ಲಿಂಗಾಹತಿ ಹಿ ಹೈ!’ ಹೀಗೆ ಸ್ಪಷ್ಟವಾಗಿ ಅಧರ್ಮೀಯರಾದ ಇವರನ್ನು ತಮ್ಮ ಧರ್ಮದ ರಕ್ಷಕರು ಎಂದು ಬಗೆಯು ವುದು ಬಸವಣ್ಣನಿಗೆ ಮಾಡುವ ಘನಘೋರ ಅಪಚಾರವಾಗಿದೆ ಎಂದು ಅಖಂಡ ವೀರಶೈವ ಲಿಂಗವಂತರು ಒತ್ತು ಹಾಕಿ, ಬಣ್ಣದ ಮೆರುಗು ಕೊಟ್ಟು ದಾಖಲಿಸಿಟ್ಟುಕೊಳ್ಳುವುದು ಸದ್ಯದ ತುರ್ತು.
ವೀರಶೈವವು ಧಾರ್ಮಿಕಮತವಾದರೆ ಲಿಂಗಾಯತವು ಅದರ ಸಾಧನೆಯ ಮಾರ್ಗ ಮಾತ್ರ. ಹಾಗಾಗಿ ಈ ಸಮಯಸಾಧಕರು ಹಚ್ಚಿರುವ ಮೂಗಿನ ತುಪ್ಪದ ಪ್ರತ್ಯೇಕ ಧರ್ಮ ಎಂದಿಗೂ ಕೈಗೂಡದು. ಜನರಿಗೆ ಮಂಕುಬೂದಿ ಎರಚಿದಂತೆ ನ್ಯಾಯಾಂಗಕ್ಕೆ ಮಂಕುಬೂದಿ ಎರಚಲಾಗದು. ಹಾಗಾಗಿ ’ನಮ್ಮಂತೆಯೇ ಪರರು’ ಎಂದುಕೊಂಡ ಈ ಡಾಂಭಿಕರ ಹುಸಿ ಭರವಸೆ ಫಲ ನೀಡದು.
ವೀರಶೈವ ಲಿಂಗಾಯತ ಎರಡೂ ಭಿನ್ನವಲ್ಲದ ಕಾರಣವಾಗಿಯೇ ಜಾಗತಿಕ ಲಿಂಗಾಯತ ಮಹಾ ಸಭಾದ ಉಪಾಧ್ಯಕ್ಷರು ತಮ್ಮ ಮಗನ ವೈವಾಹಿಕ ಸಂಬಂಧವನ್ನು ವೀರಶೈವ ಮಹಾಸಭಾದ ಅಧ್ಯಕ್ಷರ ಮೊಮ್ಮಗಳೊಂದಿಗೆ ಬೆಳೆಸಿzರೆ. ಇದು ಗುರುಹಿರಿಯರು ನಿಶ್ಚಯಿಸಿದ ಮದುವೆಯೇ ಹೊರತು ಪ್ರೇಮವಿವಾಹವಲ್ಲ.
ಒಂದು ವೇಳೆ ವೀರಶೈವ ಲಿಂಗಾಯತ ಬೇರೆಯದೇ ಆಗಿದ್ದರೆ ಅದರ ಮುಖಂಡರು ಈ ವಿವಾಹದ ಮೂಲಕ ಏನು ಸಂದೇಶ ಕೊಡುತ್ತಿzರೆ ಎಂಬುದು ಅವರ ನೈತಿಕತೆಯ ಮೂಲಭೂತ ಪ್ರಶ್ನೆ ಯಾಗುತ್ತದೆ. ಇಷ್ಟೇ ಧರ್ಮ ಭಂಜಕದ ಮೂಲಭೂತ ತರ್ಕ! ಯಾವೊಬ್ಬ ನಾಯಕ, ಮಠಾಧೀಶ ನೂ ನಿಮ್ಮ ಒಳಿತನ್ನು ಕಾಪಾಡುತ್ತಿಲ್ಲ. ಅವರೀರ್ವರೂ ಕಾಪಾಡುತ್ತಿರುವುದು ತಮಗೆ ದಕ್ಷಿಣೆ ಕಕ್ಕಬಲ್ಲ, ವೋಟು ಹೆಕ್ಕಬಲ್ಲ ತಾಕತ್ತಿನವರನ್ನೇ ಹೊರತು ಧರ್ಮದ ಅಸ್ತಿತ್ವವನ್ನಲ್ಲ.
ಹಾಗಾಗಿಯೇ ನಿರ್ವೀರ್ಯಶವ ಮಹಾಸಭಾ ಮತ್ತು ಲಿಂಗಾ ಹತ ಮಹಾಸಭಾ ಎರಡೂ ಅಖಂಡ ವೀರಶೈವರ ಹಿತ ಕಾಪಾಡುವವರಲ್ಲ. ಅಲ್ಲಿರುವ ಎಲ್ಲರೂ ಫಲಾನುಭವ ಬಯಸುವ ಅನುರಕ್ತರೇ ಹೊರತು ಯಾರೂ ಸರ್ವಸಂಗಪರಿತ್ಯಾಗಿಗಳಲ್ಲ. ಇವರೆಲ್ಲರೂ ‘ನೀನು ಚಿವುಟಿದಂತೆ ಮಾಡು, ನಾನು ಸಮಾಧಾನ ಮಾಡಿದಂತೆ ನಟಿಸುತ್ತೇನೆ’ ಎನ್ನುವ ಪರಸ್ಪರ ಸಹಕಾರಿ ಫಲಾನುಭವಿಗಳೇ ಆಗಿದ್ದಾರೆ. ಧರ್ಮಭಂಜಕ, ಮತ್ತೆ ಕಲ್ಯಾಣದ ರಂಗಜಂಗಮನ ಪರಮ ಭಕ್ತನಾದ ಪ್ರಚ್ಛನ್ನ ರೇಣುಕನೆಂಬುವವ ನಿರ್ವೀರ್ಯಶವ ಮಹಾಸಭಾದ ಕಾರ್ಯದರ್ಶಿಯಾಗಿರುವುದಲ್ಲದೇ ಮಹಾ ಸಭಾದ ಆಯಕಟ್ಟಿನ ಜಾಗಗಳಲ್ಲಿ ಶ್ಯಾನೆ ಜನ ‘ಸಾಣೆ’ ಶಿಷ್ಯಂದಿರು ತುಂಬಿದ್ದಾರೆ ಎಂಬುದೇ ಈ ಸಹಕಾರಕ್ಕೆ ಸಾಕ್ಷಿಯಾಗಿದೆ.
ಈ ಕಾರ್ಯದರ್ಶಿಯು ಮಹಾಸಭಾದ ಧಾರ್ಮಿಕ ಕಚೇರಿಯಲ್ಲಿ ಕುಳಿತೇ ಪೂರ್ಣಾವಧಿ ವರ್ಗಾವಣೆ ದಂಧೆ, ಸರಕಾರಿ ದಲಾಲಿ ಮಾಡುತ್ತಿರುವುದನ್ನು ಅರ್ಧ ಗಂಟೆ ಮಹಾಸಭಾ ಕಚೇರಿಯ ಮುಂದೆ ನಿಂತರೆ ಸಾಕು ಅರ್ಥವಾಗುತ್ತದೆ. ‘ಸ್ವಜಾತಿ ಬಂಧು’ ಎಂಬ ಕಾರಣಕ್ಕೆ ಈ ಕಾರ್ಯದರ್ಶಿಯು ಹೇಳಿದಂತೆ ರಾಷ್ಟ್ರೀಯ ಅಧ್ಯಕ್ಷರು ತಲೆಯಾಡಿಸುತ್ತಾರೆ ಎಂದು ಎಡೆ ಸುದ್ದಿಯಿದೆ.
ಹೀಗೆ ಮಹಾಸಭಾದ ಪವಿತ್ರ ಉದ್ದೇಶಗಳು ಇಂಥ ಅಪವಿತ್ರ ‘ಮೈತ್ರಿ’ಯಿಂದ ಕಲುಷಿತಗೊಂಡಿವೆ ಎಂಬುದು ಕಣ್ಣಿಗೆ ರಾಚಿದರೂ ಕಾಣದಷ್ಟು ಸಮಾಜ ಕುರುಡು ಕೂಪಮಂಡೂಕವಾಗಿ ನುಣ್ಣಗೆ ಸಾಣೆ ಹಿಡಿಸಿಕೊಂಡಿದೆ. ಇಂಥ ವಿಷ ವರ್ತುಲದಲ್ಲಿ ಸಿಲುಕಿರುವ ಸಮಾಜವನ್ನು ಸತ್ಯಾಸತ್ಯತೆಯ ಮಂಥನದ ಮೂಲಕ ಚಿಂತನೆಗೆ ಹಚ್ಚಿರುವ ‘ವಿಶ್ವವಾಣಿ’ಯನ್ನು ಬಸವ ವಿರೋಧಿ, ಲಿಂಗಾಯತ ವಿರೋಧಿ, ಜಾಹೀರಾತು ಪತ್ರಿಕೆ ಇತ್ಯಾದಿಯಾಗಿ ಬಿಂಬಿಸುವ ಪ್ರಯತ್ನವನ್ನು ಈ ಬೆತ್ತಲಾದ ‘ನಾಟಕೀಯ ವ್ಯಕ್ತಿತ್ವದ ಅಸ್ವಸ್ಥರು’ ಹತಾಶರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಯತ್ನಿಸಿದ್ದಾರೆ.
‘ಮುಳುಗುತ್ತಿರು ವವನಿಗೆ ಹುಲ್ಲು ಕಡ್ಡಿಯೂ ಆಸರೆ’ ಎಂಬ ಗಾದೆಯನ್ನು ಅವರ ಪ್ರಯತ್ನಗಳು ಸಾಬೀತುಪಡಿಸುತ್ತಿವೆ. ಅಂದಹಾಗೆ, ‘ವಿಶ್ವವಾಣಿ’ ಪತ್ರಿಕೆಯು ಹೆಚ್ಚು ಆನ್‌ಲೈನ್ ವೀಕ್ಷಕರನ್ನು ಹೊಂದಿದ ಕನ್ನಡ ದೈನಿಕ ಎಂದು ಗುರುತಿಸಲ್ಪಟ್ಟಿದೆ. ಮೇಲಾಗಿ ಈ ಸರಣಿಯಲ್ಲಿ ಕೊಟ್ಟಿರುವ ಎಲ್ಲಾ ಸಂಶೋಧನ ಮಾಹಿತಿ, ಸಾಕ್ಷಿ, ಪುರಾವೆಗಳು ಸಾರ್ವತ್ರಿಕವಾಗಿ ಸದಾ ತೆರೆದಿಟ್ಟಿರುವ ಮಾಹಿತಿ!
ಸಮಾಜದ ಕಟ್ಟಕಡೆಯ ಯಾ ಮೊತ್ತಮೊದಲ ಎಂಬ ಭೇದವಿಲ್ಲದೆ ಯಾರು ಬೇಕಿದ್ದರೂ ತಮ್ಮ ಬೆರಳ/ಬಾಯಿಯ ತುದಿಯ ತಂತ್ರಜ್ಞಾನವನ್ನು ಬಳಸಿ ತಮ್ಮ ಮಿದುಳ ತುದಿಯ ನರಮಂಡಲ ದಿಂದ ಲಿಂಗಪ್ರಮಾಣವಾಗಿ ಪರಿಶೀಲಿಸಬಹುದು, ಆಚರಣೆ, ಸಂಪ್ರದಾಯ, ವಿಚಾರ, ಜೀವನಶೈಲಿ ಯಲ್ಲಿ ಯಾವುದೇ ವ್ಯತ್ಯಾಸವಿಲ್ಲದ ಲಿಂಗವಂತ ವೀರಶೈವ ಸಮಾಜ ‘ಅರಿದೊಡೆ ಆರದು, ಮರೆದೊಡೆ ಮೂರದು’ ಎಂಬುದನ್ನು ಅರಿತುಕೊಳ್ಳಬೇಕು. ಏಕೆಂದರೆ, ಈ ಮತಧರ್ಮವು ಆರದೆ ಸದಾ ಬೆಳಗುವುದೋ ಮೂರಾಬಟ್ಟೆಯಾಗುವುದೋ ಎಂದು ನಿಶ್ಚಯಿಸುವ ಸಮಯ ಈಗ ಅದರ ಮುಂದಿದೆ, ಅದೇ ಕೇಂದ್ರ ಸರಕಾರ ಘೋಷಿಸಿರುವ ಜಾತಿ ಗಣತಿ!
ಇಲ್ಲಿ ಈ ಪಂಥವು ಭಂಜಕಪೂರ್ವವಿದ್ದ ಧಾರ್ಮಿಕ ಸಮನ್ವಯದ ಒಗ್ಗಟ್ಟನ್ನು ದಾಖಲಿಸಬೇಕಿದೆ. ಇಲ್ಲದಿದ್ದರೆ ಅದು ಸದ್ಯದ ರಾಜ್ಯ ಸರಕಾರ ಪ್ರಕಟಿಸಿರುವ ಮತ್ತು ಜ್ವಲಂತ ಸುದ್ದಿಯಾಗಿರುವ ಜಾತಿಗಣತಿ ಉ- ಸಮೀಕ್ಷೆಯಂತೆಯೇ ಇರುತ್ತದೆ, ಎಚ್ಚರ! ಮಾಹಿತಿ ತಂತ್ರಜ್ಞಾನದ ಈ ಯುಗ ಮಾನದಲ್ಲಿ ಯಾವುದೇ ಇತಿಹಾಸ, ಸಾಕ್ಷಿ ಪುರಾವೆ, ವಿಶ್ಲೇಷಣೆಗಳನ್ನು ಕುಳಿತ ಪರಿಶೀಲಿಸಬಹುದು. ಹಾಗಿzಗ ಪ್ರತ್ಯೇಕಿಗಳ ಹುಸಿಯನ್ನು ನಂಬಿ ವಿಭಜಿಸಿಕೊಂಡರೆ ಮುಂದಿನ ಜನಾಂಗವು ತಮ್ಮ ವಂಶಜರು ತಂತ್ರಜ್ಞಾನದ ಯುಗದಲ್ಲಿಯೂ ಇಷ್ಟೊಂದು ಕಡುಮೂರ್ಖರಿದ್ದರೇ ಅಥವಾ ಇಷ್ಟೊಂದು ಅನೈತಿಕ ಆತ್ಮವಂಚನೆ ಮಾಡಿಕೊಂಡಿದ್ದರೇ ಎಂದು ಶಪಿಸುವುದು ನಿಶ್ಚಿತ.
ಇನ್ನು ಭಾರತದ ಪ್ರಪ್ರಥಮ ದಾಖಲಿತ ಜನಗಣತಿಯನ್ನು ಆರಂಭಿಸಿದ್ದ ಹತ್ತೊಂಬತ್ತನೇ ಶತಮಾನದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ “ವೀರಶೈವವು ಒಂದು ಜಾತಿಯಾಗಿರದೆ ತನ್ನದೇ ಆದ ಅಗಾಧವೆನ್ನುವಂಥ ಸಾಮಾಜಿಕ ವ್ಯವಸ್ಥೆಯಾಗಿದೆ. ಹಿಂದೂ ಎಂಬುದು ಹೇಗೆ ಒಂದು ಸಾಮಾಜಿಕ ವ್ಯವಸ್ಥೆಯಾಗಿದೆಯೋ ಹಾಗೆಯೇ ವೀರಶೈವವೂ ಒಂದು ಪರ್ಯಾಯ ಸಾಮಾಜಿಕ ವ್ಯವಸ್ಥೆಯಾಗಿದೆ. ಅದಲ್ಲದೆ ವೀರಶೈವರು ಬೇರೆ ಧರ್ಮ ಮತ್ತು ವರ್ಗಗಳ ಜನರನ್ನು ಮತಾಂತರದ ಮೂಲಕ ಒಳಗೊಳ್ಳುತ್ತಾರೆ" ಎಂದು ದಾಖಲಿಸಿದ್ದಾನೆ.
ಹಾಗೆಯೇ ಇನ್ನಿತರೆ ಬ್ರಿಟಿಷ್ ಭಾರತದ ಜನಗಣತಿ ಅಧಿಕಾರಿಗಳು ವೀರಶೈವರಲ್ಲಿನ ವೈವಿಧ್ಯಮಯ ಉದ್ಯೋಗಗಳು, ಜೀವನ ಶೈಲಿಗಳು, ಸಂಸ್ಕೃತಿ ವೈವಿಧ್ಯಗಳು ಈ ಜನಾಂಗವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದನ್ನು ಅತ್ಯಂತ ಕಷ್ಟಕರವಾಗಿಸಿದೆ ಎನ್ನುತ್ತಲೇ ತಮ್ಮ 1881ರ ಜನಗಣತಿಯಲ್ಲಿ ವೀರಶೈವರನ್ನು ಹಿಂದೂ ಧರ್ಮದ ‘ಶೂದ್ರ’ರೆಂದು ದಾಖಲಿಸಿದ್ದಾರೆ.
ಫ್ರಾನ್ಸಿಸ್ ಬುಕನನ್ ಹ್ಯಾಮಿಲ್ಟನ್ ಮತ್ತು ಬ್ರಿಟಿಷ್ ಜನಗಣತಿ ಅಧಿಕಾರಿಗಳ ಅಭಿಪ್ರಾಯದಂತೆ ವೀರಶೈವವು ಬೌದ್ಧ, ಜೈನ, ಸಿಖ್ ಧರ್ಮಗಳಂತೆಯೇ ಹಿಂದೂ ಸಂಸ್ಕೃತಿಯ ಧರ್ಮವಾಗುತ್ತದೆ. ಈ ವಿವರಗಳು 1871 and the 1881 colonial era census of British India ವರದಿಗಳಲ್ಲಿವೆ. ಆಸಕ್ತರು ಗಮನಿಸಬಹುದು.
ಇನ್ನು ಈ ಜನಗಣತಿಯಲ್ಲಿ ಬ್ರಿಟಿಷರು ತಮ್ಮನ್ನು ‘ಶೂದ್ರ’ ಎಂದ ವರ್ಗೀಕರಿಸಿದ್ದನ್ನು ವಿರೋಧಿಸಿ ವೀರಶೈವರು, ಬ್ರಾಹ್ಮಣರ ಕೈಯಿಂದ ಮಾಡಿದ ಅಡುಗೆಯನ್ನೂ ತಿನ್ನದ ನಮ್ಮನ್ನು ಕನಿಷ್ಠ ‘ಬ್ರಾಹ್ಮಣ-ಸಮಾನ’ ಎಂದು ಪರಿಗಣಿಸಬೇಕು ಎಂದು 1881ರ ಜನಗಣತಿಯನ್ನು ಒಪ್ಪದೆ ತಿರಸ್ಕರಿಸಿದ್ದರು. ಕಡೆಗೆ 1926ರಲ್ಲಿ ಬಾಂಬೆ ಹೈಕೋರ್ಟ್ ‘ವೀರಶೈವರು ಶೂದ್ರರಲ್ಲ’ ಎಂದು ತೀರ್ಪು ಕೊಟ್ಟು ವೀರಶೈವರ ಬೇಡಿಕೆಯನ್ನು ಈಡೇರಿಸುತ್ತದೆ.
ಇಂಥ ಐತಿಹಾಸಿಕ ತೀರ್ಪನ್ನು ಭಂಜಕರು ಇದು ಕೇವಲ ಜಂಗಮರಿಗೆ ಅನ್ವಯಿಸಿದೆ ಎಂದು ಸುಳ್ಳು ಬಿತ್ತಿ ಜನಾಂಗೀಯ ದ್ವೇಷವನ್ನು ಹಬ್ಬಿಸಿದ್ದಾರೆ. ಈ ಕೋರ್ಟ್ ದಾಖಲೆಯನ್ನು ಯಾರು ಬೇಕಿದ್ದರೂ ಖುದ್ದು ಓದಿ ತಿಳಿದುಕೊಳ್ಳಬಹುದು. ಈ ತೀರ್ಪಿಗೂ ಮುನ್ನ 1910ರಲ್ಲಿ ಮಹಾಸಭಾ ‘ಬಸವ ಮತ್ತು ಅಲ್ಲಮ’ ಇಬ್ಬರನ್ನೂ ಜಂಟಿಯಾಗಿ ವೀರಶೈವ ಧರ್ಮವನ್ನು ಪ್ರಚುರಪಡಿಸಿದವರೆಂದು ತನ್ನ ಸಂಕಥನವನ್ನು ಮಂಡಿಸಿ ವೀರಶೈವವು ಬೇರೆಯದೇ ಆದ ಧರ್ಮ ಎಂಬ ಬೇಡಿಕೆಯನ್ನು ಇಟ್ಟಿತ್ತು.
ಆದರೂ ಪ್ರತ್ಯೇಕ ಧರ್ಮ ಮಾನ್ಯತೆ ಅಂದೂ ಸಿಕ್ಕಿರಲಿಲ್ಲ. ಏಕೆಂದರೆ ಅಂದಿನ ವೀರಶೈವ ಮಹಾ ಸಭಿಕರು ಸಹ ಅಬ್ರಹಾಮಿಕ್ ಧರ್ಮಗಳ ರೀತಿ ಅಂದಿನ ಸರಕಾರದ ಪ್ರಕಾರ ಧರ್ಮಕ್ಕೊಬ್ಬ ಸಂಸ್ಥಾಪಕ ಇರಲೇಬೇಕು ಎಂದು ತಿಳಿದಿದ್ದರೇ ಹೊರತು ಹಿಂದೂ ಮೂಲದ ವಿಕಸಿತ ಧರ್ಮ ಗಳನ್ನು ತಾರ್ಕಿಕವಾಗಿ ಬ್ರಿಟಿಷರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಿಲ್ಲ. ಅಂದಿನ ಬ್ರಿಟಿಷ್ ಆಡಳಿತದಲ್ಲಿ ಸರಕಾರಕ್ಕೆ ತಿಳಿಸುವುದು ಕಷ್ಟವಿದ್ದರೂ ಇದ್ದಿತೇನೋ!
ಇಂತಪ್ಪ ಬ್ರಿಟಿಷ್ ಆಡಳಿತದ 1910ರ ಬೇರೆಯದೇ ಆದ ಧರ್ಮ ಎಂಬ ಸಂಕಥನವು
ಇಪ್ಪತ್ತೊಂದನೇ ಶತಮಾನದ ಪ್ರಜಾಪ್ರಭುತ್ವದಲ್ಲಿ ‘ನಿಜದ ಕಾಳಾಮುಖ ಪರಂಪರೆಯ ವೀರಶೈವ ಜಂಗಮನಾಗಿದ್ದ ಅಲ್ಲಮ’ನನ್ನು ಬಯಲಾಗಿಸಿ ಇಲ್ಲಮನೆನ್ನಿಸಿ ಅದೇ ಜಂಗಮ ಬಸವನನ್ನು ‘ಸಂಕಥನದ ಬಸವಣ್ಣ’ನಾಗಿಸಿ ತಮ್ಮ ಧರ್ಮ ಸಂಸ್ಥಾಪಕನೆಂದು ಈಗ ಮೀಸಲಾತಿ ಬೇಕೆನ್ನುತ್ತಿದೆ. ಯಾವ ಪಂಥ ನಾವು ಶೂದ್ರರಲ್ಲ ಎಂದಿತ್ತೋ ಅದೇ ಪಂಥ ತಮ್ಮ ಆದಿ ಪರಂಪರೆಯ ಅಲ್ಲಮನನ್ನು ಅಕ್ಷರಶಃ ಗುಹೆಗೆ ತಳ್ಳಿ ಬಸವಣ್ಣನಿಗೆ ಕಿರೀಟ ತೊಡಿಸಿ ಕುದುರೆಯ ಮೇಲೆ ಕೂರಿಸಿ ವೀರ-ಶೈವನಾಗಿಸಿತ್ತೋ ಅದೇ ರಾಜಕಿಯ-ಪ್ರೇರಿತವರ್ಗ ಬಸವಣ್ಣನನ್ನು ನೆಲದ ಮೇಲೆ ಕುಳ್ಳಿರಿಸಿ ಕೈಗೆ ಓಲೆಗರಿ ಕಟ್ಟು ಕೊಟ್ಟು ಲಿಂಗಾಯತ ಧರ್ಮ ಸಂಸ್ಥಾಪಕ ಎನ್ನುತ್ತಿದೆ.
ಹಾಗಾಗಿ ಈ ಪ್ರಚ್ಛನ್ನ ಪ್ರತ್ಯೇಕತೆಯ ಅಧಃಪತನದ ಫಲಿತಾಂಶ ಸುಸ್ಪಷ್ಟ. ಸಮಗ್ರವಾಗಿ ಈ ಎಲ್ಲಾ ಹಿನ್ನೆಲೆಯಲ್ಲಿ ವೀರಶೈವ ಲಿಂಗವಂತ ಮತವು ಪ್ರತ್ಯೇಕ ಧರ್ಮ ಎಂದು ಸಾಬೀತುಪಡಿಸಲು ಯಾವುದೇ ವಿಶೇಷ ಸಂಶೋಧನೆ, ಸಂಕಥನ, ಮಾರ್ಪು, ತೋರ್ಪು ಬೇಕಿಲ್ಲ. ಕೇವಲ ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕ ಅಂಶಗಳನ್ನು ನ್ಯಾಯಯುತವಾಗಿ ಪ್ರಶ್ನಿಸಿದರೆ ಸಾಕು, ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಲೇಬೇಕು!
ಏಕೆಂದರೆ ಇದು ಅಬ್ರಹಾಮಿಕ್ ಮತದ ಬ್ರಿಟಿಷ್ ಆಡಳಿತವಲ್ಲ, ನಮ್ಮದೇ ಆದ ಹಿಂದೂ ಪ್ರಭೇದದ ಧರ್ಮದವರಿಗಾಗಿಯೇ ರೂಪುಗೊಂಡ ಪ್ರಜಾಪ್ರಭುತ್ವ ರಾಷ್ಟ್ರ. ಈಗ ಬೇಕಿರುವುದು ಅಂಥ ಸಮಗ್ರತೆಯ ಕಾನೂನಾತ್ಮಕ ಹೋರಾಟದ ತಾರ್ಕಿಕ ಮಾರ್ಗ ಮಾತ್ರ! ಏಕೆಂದರೆ, ಭಾರತದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪ್ರಕಾರ: ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ನಂಬುವ ಅಥವಾ ನಂಬದಿರುವ ಹಕ್ಕನ್ನು ಹೊಂದಿದ್ದಾನೆ. ಧರ್ಮವನ್ನು ಪ್ರಚಾರ ಮಾಡುವ, ಆಚರಿಸುವ, ಪ್ರಸಾರ ಮಾಡುವ, ಧಾರ್ಮಿಕ ನಂಬಿಕೆಗಳನ್ನು ವ್ಯಕ್ತಪಡಿಸುವ, ಧಾರ್ಮಿಕ ಪದ್ಧತಿ ಗಳನ್ನು ಆಚರಿಸುವ ಮತ್ತು ಇತರರೊಂದಿಗೆ ತನ್ನ ನಂಬಿಕೆಗಳನ್ನು ಹಂಚಿಕೊಳ್ಳಲು ಸ್ವತಂತ್ರ ನಾಗಿದ್ದಾನೆ. ಹಾಗೆಯೇ ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸುವ ಹಕ್ಕನ್ನು ಸಂವಿಧಾನ ಗುರುತಿಸುತ್ತದೆ.
ಅಂದು ಫ್ರಾನ್ಸಿಸ್ ಬುಕನನ್ ಹ್ಯಾಮಿಲ್ಟನ್ ಮತ್ತು ಬ್ರಿಟಿಷ್ ಜನಗಣತಿ ಅಧಿಕಾರಿಗಳ ಅಭಿಪ್ರಾಯ ದಂತೆ ವೀರಶೈವವು ಬೌದ್ಧ, ಜೈನ, ಸಿಖ್ ಮತಧರ್ಮಗಳಂತೆಯೇ ಬೇರೆಯದೇ ಮತದಂತಿದ್ದರೂ ಅದನ್ನು ಹಿಂದೂ ಧರ್ಮ ಎಂದು ಗುರುತಿಸುವ ಅನಿವಾರ್ಯತೆ ಅವರಿಗಿದ್ದ ಕಾರಣ ‘ಶೂದ್ರ’ ಎಂದು ನಮೂದಿಸಿದ್ದರು. ಆದರೆ ಈಗ ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹಾಗಾಗಿ, “ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸುವ ಹಕ್ಕನ್ನು ಸಂವಿಧಾನ ಗುರುತಿಸುತ್ತದೆ" ಎಂಬುದನ್ನು ಸ್ಪಷ್ಟವಾಗಿ ಸರಕಾರ ಗುರುತಿಸಿಲ್ಲ ಎಂದಾಗುತ್ತದೆ. ನಮ್ಮ ಧರ್ಮ ವೀರಶೈವ ಧರ್ಮ. ಇದು ಸನಾತನವಾಗಿ ವಿಕಾಸಗೊಂಡ ಧರ್ಮ. ಇದರ ಧರ್ಮಗ್ರಂಥ ಶಕ್ತಿವಿಶಿಷ್ಟಾದ್ವೈತ. ನಮ್ಮ ಧರ್ಮದ ರೀತಿಯೇ ಹಿಂದೂ ಪ್ರಭೇದದ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಪಾಲಿಸುವ ವಿಕಸಿತ-ಮತಧರ್ಮದ ಅನ್ಯಧರ್ಮೀಯರೂ ಸಂವಿಧಾನದ ಮೂಲಭೂತ ಹಕ್ಕಾದ ಧಾರ್ಮಿಕ ಹಕ್ಕಿನಿಂದ ವಂಚಿತರಾಗಿದ್ದಾರೆ.
ಧಾರ್ಮಿಕ ಹಕ್ಕಿನ ಎ ಅಂಶಗಳನ್ನು ಪಾಲಿಸಲು ನಮಗೆ ಸ್ವಾತಂತ್ರ್ಯವಿದ್ದರೂ ಭಾರತ ಗಣರಾಜ್ಯ ದಲ್ಲಿ ಸಾಂವಿಧಾನಿಕವಾಗಿ ನಮ್ಮ ಧರ್ಮಕ್ಕೆ ಸರಕಾರ ಮಾನ್ಯತೆ ನೀಡದೆ ತಾರತಮ್ಯತೆ ಪಾಲಿಸು ತ್ತಿದೆ. ಹಾಗಾಗಿ ತಕ್ಷಣಕ್ಕೆ ನಮ್ಮ ಧರ್ಮವನ್ನು ಅಧಿಕೃತ ಧರ್ಮ ಎಂದು ಸರಕಾರ ಘೋಷಿಸಬೇಕು ಎಂದು ದಾವೆ ಹೂಡಬೇಕು. ಹಾಗಾದಾಗ ಕೇವಲ ವೀರಶೈವ ಅಲ್ಲದೆ ಅನ್ಯಾಯಕ್ಕೊಳಗಾಗಿರುವ ಹಿಂದೂ ಪ್ರಭೇದದ ಎಲ್ಲಾ ವಿಕಸಿತ ಧರ್ಮಗಳಿಗೂ ನ್ಯಾಯ ಸಿಗುತ್ತದೆ.
ಅಂಥ ಸಮೂಹ ನಾಯಕತ್ವದ ಹೋರಾಟವನ್ನು ಸಂಯುಕ್ತ ವೀರಶೈವ ಧರ್ಮೀಯರು ಆರಂಭಿಸಿ ಸತ್ಯ ಭಾರತದ ದರ್ಶನಕ್ಕೆ ಮುಂದಾಗಬೇಕು. ಹೀಗೆ ಹಿಂದೂ ಪ್ರಭೇದದ ಧರ್ಮಗಳು ಅಧಿಕೃತ ಧರ್ಮಗಳಾದಾಗ ಸತ್ಯಾಧರಿತ ವಾಸ್ತವಿಕ ಧರ್ಮ ಸಮನ್ವಯದ ಚಿತ್ರಣ ಸಿಗುತ್ತದೆ. ಇಲ್ಲದಿದ್ದರೆ ಭಾರತವು ಪ್ರಚ್ಛನ್ನ ಇಸ್ಲಾಮಿಕ್ ಸ್ಟೇಟ್ ಎಂಬ ಬೂದಿ ಮುಚ್ಚಿದ ಕೆಂಡದಂತಿರುವ ವಾಸ್ತವವು ಪ್ರತ್ಯೇಕಿಗಳ ಅಪಾನವಾಯುವನ್ನೇ ಇಂಧನವಾಗಿ ಬಳಸಿ ಮುಂದೆ ಭಗಭಗ ಎಂದು ಪ್ರಜ್ವಲಿಸುತ್ತದೆ.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)