Nita Ambani: ಬನಾರಸಿ ಸೀರೆಯಲ್ಲಿ ನೀತಾ ಅಂಬಾನಿ ಮೋಡಿ
ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಯಾವುದೇ ಬಾಲಿವುಡ್ ತಾರೆಯರಿಗಿಂತ ಕಡಿಮೆಯಲ್ಲ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ. ಇವರು ಧರಿಸುವ ಪ್ರತಿಯೊಂದು ಸೀರೆ, ಆಭರಣಗಳು ಎಲ್ಲರ ಮನ ವೆ. ಇದೀಗ ಅವರು ಹಸಿರು ಬಣ್ಣದ ಜರಿತಾರಿ ಸೀರೆಯುಟ್ಟು, ಅದಕ್ಕೆ ತಕ್ಕಂತೆ ಆಭರಣ ಧರಿಸಿ ಮೋಡಿ ಮಾಡಿದ್ದಾರೆ. ಇದರ ಚಿತ್ರಗಳನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಸಾಕಷ್ಟು ಮೆಚ್ಚುಗೆಯನ್ನೂ ಗಳಿಸಿದೆ.



ಆಭರಣ, ಉಡುಗೆಯಿಂದ ಫ್ಯಾಷನ್ ಪ್ರಿಯರ ಗಮನ ಸೆಳೆಯುವ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಇದೀಗ ಹಸಿರು ಬಣ್ಣದ ಜರಿತಾರಿ ಸೀರೆಯುಟ್ಟು ಕಂಗೊಳಿಸಿದ್ದಾರೆ. ಅದಕ್ಕೆ ತಕ್ಕಂತೆ ಆಭರಣ ಧರಿಸಿ ಮೋಡಿ ಮಾಡಿರುವ ಅವರು ಇದರ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.

ನೀತಾ ಅಂಬಾನಿ ಹಸಿರು ಬಣ್ಣದ ಬನಾರಸಿ ಸೀರೆಯನ್ನು ಉಟ್ಟು ಸಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಗೆ ಪೂರಕವಾಗಿ ಅತ್ಯಂತ ಸುಂದರವಾದ ವಜ್ರದ ಬ್ರೇಸ್ಲೆಟ್ ಧರಿಸಿದ್ದು, ಕೂದಲಿಗೆ ಬ್ರೋಚೆಗಳಿಂದ ಅಲಂಕರಿಸಿದ್ದಾರೆ. ಇದು ಫ್ಯಾಷನ್ ಪ್ರಿಯರನ್ನು ಮೋಡಿ ಮಾಡುವಂತಿದೆ.

ಹಸಿರು ಬಣ್ಣದ ಬನಾರಸಿ ಸೀರೆಯಲ್ಲಿ ಅದ್ಭುತ ಫೋಟೋಶೂಟ್ ಮಾಡಿಸಿಕೊಂಡಿರುವ ನೀತಾ ಅಂಬಾನಿ ಇದಕ್ಕೆ ಜೋಡಿಯಾಗಿ ವಜ್ರದ ಆಭರಣಗಳನ್ನು ಧರಿಸಿದ್ದಾರೆ. ಇದರಲ್ಲಿ ಭಾರಿ ಗಾತ್ರದ ಕಿವಿಯೋಲೆಗಳು, ಬ್ರೇಸ್ಲೆಟ್ ಎಲ್ಲರ ಗಮನ ಸೆಳೆದಿದೆ. ಸೀರೆಯ ಬಣ್ಣಕ್ಕೆ ಹೊಂದುವ ಉಂಗುರ ಮತ್ತು ಕೂದಲಿಗೆ ಬ್ರೋಚ್ ಹಾಕಿಕೊಂಡಿದ್ದಾರೆ.

ಸೊಗಸಾದ ಆಭರಣಗಳ ಮೇಲೆ ನೀತಾ ಅಂಬಾನಿ ಅವರ ಪ್ರೀತಿ ಎಲ್ಲರಿಗೂ ಗೊತ್ತೇ ಇದೆ. ಅನೇಕ ಬಾರಿ ಇವರು ಧರಿಸಿರುವ ವಜ್ರದ ಆಭರಣಗಳು ಪ್ರತಿಯೊಬ್ಬ ಆಭರಣ ಪ್ರಿಯರ ಕನಸಾಗಿರುತ್ತದೆ. ಸೆಲೆಬ್ರಿಟಿ ಕೇಶ ವಿನ್ಯಾಸಕಿ ಯಿಯಾನಿ ತ್ಸಪಟೋರಿ ಬಿಡುಗಡೆ ಮಾಡಿರುವ ಈ ಹೊಸ ಫೋಟೋಶೂಟ್ನಲ್ಲಿ ನೀತಾ ಅಂಬಾನಿ ಅದ್ಭುತ ವಿನ್ಯಾಸದ ಆಭರಣಗಳೊಂದಿಗೆ ಹಸಿರು ಬನಾರಸಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

ನೀತಾ ಅಂಬಾನಿ ಅವರ ಹೊಸ ಫೋಟೊ ಶೂಟ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಯಿಯಾನಿ, ನೀತಾ ಅಂಬಾನಿ ಭಾರತೀಯ ಐಷಾರಾಮಿ ಬ್ರ್ಯಾಂಡ್ ಸ್ವದೇಶ್ನ ಎರಡು ಸೊಗಸಾದ ಬ್ರೂಚ್ಗಳಿಂದ ತಮ್ಮ ಕೇಶವಿನ್ಯಾಸವನ್ನು ಅಲಂಕರಿಸಿದ್ದಾರೆ. ಇದು ಭಾರತೀಯ ಕರಕುಶಲತೆಯನ್ನು ತೋರಿಸಿದೆ. ಒಂದು ಬ್ರೂಚ್ ಗುಲಾಬಿ ಕಟ್ ವಜ್ರಗಳನ್ನು ಮತ್ತು ಇನ್ನೊಂದು ಬಿಳಿ ಚಿನ್ನದ ಸೂಕ್ಷ್ಮವಾದ ಜೇಡ್ ಹೂವಿನ ತುಣುಕನ್ನು ಒಳಗೊಂಡಿದೆ. ಅವರ ಹೂವಿನ ಕಟ್ ಹೊಂದಿರುವ ವಜ್ರದ ಕಿವಿಯೋಲೆಗಳನ್ನು ಧರಿಸಿದ್ದರೆ, ಇದಕ್ಕೆ ಪೂರಕವಾಗಿ ಪಚ್ಚೆ ಕಟ್ ವಜ್ರದಿಂದ ಅಲಂಕರಿಸಲ್ಪಟ್ಟ ಬ್ರೇಸ್ಲೆಟ್ ಮತ್ತು ಬೃಹತ್ ಪೆಂಡೆಂಟ್ ಹೊಂದಿರುವ ಅದ್ಭುತ ವಜ್ರದ ನೆಕ್ಪೀಸ್ ಅನ್ನು ಕೂಡ ಧರಿಸಿದ್ದಾರೆ ಎಂದು ಹೇಳಿದ್ದಾರೆ.

ನೀತಾ ಅಂಬಾನಿ ಕೈಯಿಂದ ನೇಯ್ದ ಬನಾರಸಿ ಸೀರೆಯನ್ನು ಉಟ್ಟಿದ್ದಾರೆ. ಇದು ಸೂಕ್ಷ್ಮವಾದ ಚಿನ್ನದ ಬ್ರೊಕೇಡ್ ಕಸೂತಿಯೊಂದಿಗೆ ಅಗಲವಾದ ಅಂಚುಗಳನ್ನು ಹೊಂದಿದೆ. ಆರು ಗಜ ಉದ್ದ ಹೊಂದಿರುವ ಈ ಸೀರೆಗೆ ಹಸಿರು ರೇಷ್ಮೆ ಬ್ಲೌಸ್ ಧರಿಸಿದ್ದಾರೆ. ಬ್ಯಾಕ್ಲೆಸ್ ವಿನ್ಯಾಸ, ಅಗಲವಾದ ಯು ನೆಕ್ಲೈನ್ ಹೊಂದಿದ್ದು, ಅರ್ಧ ಉದ್ದದ ತೋಳುಗಳು, ಕತ್ತರಿಸಿದ ಹೆಮ್ ಮತ್ತು ಹಿಂಭಾಗದಲ್ಲಿ ಡೋರಿ ಟೈ ಇದೆ. ಸೀರೆಯನ್ನು ಒಂದು ಸೆರಗು ಹಾಕಿ ಉದ್ದಕ್ಕೆ ಬಿಟ್ಟಿದ್ದಾರೆ ಎಂದು ಯಿಯಾನಿ ತಿಳಿಸಿದ್ದಾರೆ.

ಇನ್ನು ಕೂದಲಿನ ವಿನ್ಯಾಸದ ಬಗ್ಗೆ ಮಾತನಾಡಿರುವ ಯಿಯಾನಿ, ನೀತಾ ಅಂಬಾನಿ ಕೂದಲನ್ನು ಸಂಪೂರ್ಣವಾಗಿ ತಿರುಚಿ ಬನ್ನಲ್ಲಿ ಕಟ್ಟಿದರು. ಎದುರು ಕೆಲವು ಎಳೆಗಳನ್ನು ಸಡಿಲಗೊಳಿಸಿದರು. ಹಸಿರು ಸೀರೆ, ಆಭರಣಕ್ಕೆ ತಕ್ಕಂತೆ ಸಿಂಪಲ್ ಮೇಕಪ್ ಅನ್ನು ಆಯ್ದುಕೊಂಡಿದ್ದಾರೆ.

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರನ್ನು ಮದುವೆಯಾಗಿರುವ ನೀತಾ ಅಂಬಾನಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ. ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನ ಅಧ್ಯಕ್ಷೆ ಮತ್ತು ಸಂಸ್ಥಾಪಕಿಯು ಹೌದು. ನೀತಾ ಅಂಬಾನಿ ಭರತನಾಟ್ಯ ಕಲಾವಿದೆಯಾಗಿಯೂ ಜನಪ್ರಿಯರಾಗಿದ್ದಾರೆ.