Tarrif On Movies: ಚಿತ್ರರಂಗಕ್ಕೂ ಶಾಕ್ ಕೊಟ್ಟ ಟ್ರಂಪ್- ವಿದೇಶಿ ಸಿನಿಮಾಗಳ ಮೇಲೆ 100% ಸುಂಕ
Tarrif on Movies: ಹಲವು ದೇಶಗಳ ಮೇಲೆ ಅಧಿಕ ಪ್ರಮಾಣದ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಚಿತ್ರರಂಗಕ್ಕೆ ಶಾಕ್ ನೀಡಿದ್ದಾರೆ. ವಿದೇಶದಲ್ಲಿ ನಿರ್ಮಿತವಾದ ಎಲ್ಲ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ಅಧಿಕಾರ ನೀಡಲಾಗಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಹಲವು ದೇಶಗಳ ಮೇಲೆ ಅಧಿಕ ಪ್ರಮಾಣದ ಸುಂಕ (Tariff on Movies) ವಿಧಿಸಿದ್ದ ಅಮೆರಿಕ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್(Donald Trump), ಈಗ ಚಿತ್ರರಂಗಕ್ಕೆ ಶಾಕ್ ನೀಡಿದ್ದಾರೆ. ವಿದೇಶದಲ್ಲಿ ನಿರ್ಮಿತವಾದ ಎಲ್ಲ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ಅಧಿಕಾರ ನೀಡಲಾಗಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಬೇರೆ ರಾಷ್ಟ್ರಗಳು ಅಮೆರಿಕದ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ದೇಶದಿಂದ ದೂರವಿಡಲು ಆಕರ್ಷಕ ಯೋಜನೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
"ಅಮೆರಿಕದ ಚಲನಚಿತ್ರ ಉದ್ಯಮವು ತೀವ್ರವಾಗಿ ಕುಸಿಯುತ್ತಿದೆ. ಇತರ ದೇಶಗಳು ನಮ್ಮ ಚಿತ್ರ ನಿರ್ಮಾಪಕರನ್ನು ಆಕರ್ಷಿಸುವ ಮೂಲಕ ಹಾಲಿವುಡ್ ಮತ್ತು ಇತರ ಪ್ರದೇಶಗಳನ್ನು ಹಾಳುಮಾಡುತ್ತಿವೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ ಮತ್ತು ಪ್ರಚಾರದ ಒಂದು ರೂಪವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.
ಚಲನಚಿತ್ರಗಳು ಅಮೆರಿಕದಲ್ಲೇ ನಿರ್ಮಾಣವಾಗಬೇಕೆಂದು ಕರೆ ನೀಡಿರುವ ಟ್ರಂಪ್, ವಿದೇಶದಲ್ಲಿ ನಿರ್ಮಿತವಾದ ಎಲ್ಲ ಚಿತ್ರಗಳ ಮೇಲೆ 100% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. "ನಾನು ವಾಣಿಜ್ಯ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರಿಪ್ರೆಸೆಂಟೇಟಿವ್‌ಗೆ, ವಿದೇಶದಲ್ಲಿ ತಯಾರಾದ ಎಲ್ಲ ಚಲನಚಿತ್ರಗಳ ಮೇಲೆ 100% ಸುಂಕ ವಿಧಿಸುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಆದೇಶಿಸುತ್ತಿದ್ದೇನೆ. ನಾವು ಮತ್ತೆ ಅಮೆರಿಕದಲ್ಲಿ ಚಿತ್ರಗಳನ್ನು ನಿರ್ಮಿಸಬೇಕು" ಎಂದು ಟ್ರಂಪ್ ಹೇಳಿದ್ದಾರೆ.
ಇದೇ ವೇಳೆ, ಡೊನಾಲ್ಡ್ ಟ್ರಂಪ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯಲ್ಲಿರುವ ಕುಖ್ಯಾತ ಆಲ್ಕಾಟ್ರಾಜ್ ಜೈಲನ್ನು ಪುನರ್‌ನಿರ್ಮಿಸಿ ಮತ್ತೆ ತೆರೆಯಲು ಬ್ಯೂರೋ ಆಫ್ ಪ್ರಿಸನ್ಸ್‌ಗೆ ಸೂಚನೆ ನೀಡಿದ್ದಾರೆ. ಈ ಜೈಲಿನಲ್ಲಿ ಅಮೆರಿಕದ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ಅಪರಾಧಿಗಳನ್ನು ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: US-China tariff War: ಅಮೆರಿಕದ ಸುಂಕದ ವಿರುದ್ದ ಹೋರಾಡಲು ಭಾರತದ ನೆರವು ಕೇಳಿದ ಚೀನಾ; ಚೈನೀಸ್ ಅಧಿಕಾರಿ ಹೇಳಿದ್ದೇನು?
"ಆಲ್ಕಾಟ್ರಾಜ್ ಅನ್ನು ಪುನರ್‌ನಿರ್ಮಿಸಿ ಮತ್ತು ತೆರೆಯಿರಿ" ಎಂದು ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನಾವು ಗಂಭೀರ ರಾಷ್ಟ್ರವಾಗಿದ್ದಾಗ, ಅತ್ಯಂತ ಗಂಭೀರ ಅಪರಾಧಿಗಳನ್ನು ಜೈಲಿನಲ್ಲಿಟ್ಟು, ಇತರರಿಗೆ ಹಾನಿಯಾಗದಂತೆ ದೂರವಿಡುತ್ತಿದ್ದೆವು ಎಂದಿದ್ದಾರೆ. ಆಲ್ ಕಪೋನ್‌ನಂತಹ ಕುಖ್ಯಾತ ಅಪರಾಧಿಗಳನ್ನು ಇರಿಸಲಾಗಿದ್ದ ಈ ಫೆಡರಲ್ ಜೈಲು 1963ರಲ್ಲಿ ಮುಚ್ಚಲ್ಪಟ್ಟಿತು. ಈಗ ಇದು ಸ್ಯಾನ್ ಫ್ರಾನ್ಸಿಸ್ಕೋದ ಪ್ರಮುಖ ಪ್ರವಾಸಿ ತಾಣವಾಗಿದೆ. "ಇಂದು, ನಾನು ಬ್ಯೂರೋ ಆಫ್ ಪ್ರಿಸನ್ಸ್, ನ್ಯಾಯ ಇಲಾಖೆ, ಎಫ್‌ಬಿಐ ಮತ್ತು ಹೋಮ್‌ಲ್ಯಾಂಡ್ ಸೆಕ್ಯುರಿಟಿಗೆ, ಆಲ್ಕಾಟ್ರಾಜ್ ಅನ್ನು ವಿಸ್ತರಿಸಿ, ಪುನರ್‌ನಿರ್ಮಿಸಿ ತೆರೆಯಲು ಆದೇಶಿಸುತ್ತಿದ್ದೇನೆ" ಎಂದು ಟ್ರಂಪ್ ಬರೆದುಕೊಂಡಿದ್ದಾರೆ.