kmc manipal: ಆಯೋರ್ಟಾ ರಕ್ತ ಸೋರಿಕೆ; ಕೆಎಂಸಿ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ದೇಹದ ವಿವಿಧ ಭಾಗಗಳಿಗೆ ಹೃದಯದಿಂದ ರಕ್ತ ಪೂರೈಸುವ ಮಹಾಪಧಮನಿ (ಆಯೋರ್ಟಾದಲ್ಲಿ) ರಕ್ತಸೋರಿಕೆ ಉಂಟಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೆಎಂಸಿ ವೈದ್ಯರ ತಂಡ ವ್ಯಕ್ತಿಯ ಜೀವ ರಕ್ಷಿಸಿದ್ದಾರೆ.


ಮಂಗಳೂರು: ದೇಹದ ವಿವಿಧ ಭಾಗಗಳಿಗೆ ಹೃದಯದಿಂದ ರಕ್ತ ಪೂರೈಸುವ ಮಹಾಪಧಮನಿ (ಆಯೋರ್ಟಾದಲ್ಲಿ) ರಕ್ತಸೋರಿಕೆ ಉಂಟಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೆಎಂಸಿ ವೈದ್ಯರ ತಂಡ ವ್ಯಕ್ತಿಯ ಜೀವ ರಕ್ಷಿಸಿದ್ದಾರೆ. ಇಂತಹ ಆರೋಗ್ಯ ಸಮಸ್ಯೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವೆಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯಾಲಾಜಿಸ್ಟ್ ಡಾ. ಎಮ್ ಎನ್ ಭಟ್, ಇಂಟರ್ವೆನ್ಶನಲ್ ನ್ಯೂರೋ ರೇಡಿಯಾಲಾಜಿಸ್ಟ್ ಡಾ. ಕೀರ್ತಿರಾಜ್ , ಕಾರ್ಡಿಯೋ ಥೋರಾಕಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜನ್ ಡಾ. ಮಾಧವ್ ಕಾಮತ್, ನೆಫ್ರೋಲಾಜಿಸ್ಟ್ ಡಾ. ಅಶೋಕ್ ಭಟ್, ಹಿರಿಯ ಲೆಪರೋಸ್ಕೋಪಿಕ್ ಸರ್ಜನ್ ಡಾ. ಸತ್ಯನಾರಾಯಣ್ ಹಾಗೂ ಅರವಿಳಿಕೆ ತಜ್ಞ ಡಾ. ಸುನೀಲ್ ಅವರ ತಂಡ ರೋಗಿಗೆ ಉತ್ತಮ ಜೀವನವನ್ನು ಪುನರ್ ಆರಂಭಿಸಲು ನೆರವಾಗಿದೆ.
ಏನಿದು ಆಯೋರ್ಟಾ ಸೋರಿಕೆ?
ಇದೊಂದು ಅಪರೂಪದ ಹಾಗೂ ಜೀವಕ್ಕೆ ಕುತ್ತು ತರುವಂತಹ ಸಮಸ್ಯೆಯಾಗಿದ್ದು ಹೃದಯದಿಂದ ದೇಹದ ಭಾಗಗಳಿಗೆ ರಕ್ತ ಪೂರೈಸುವ ಮಹಾಪಧಮನಿಯಲ್ಲಿ ರಕ್ತ ಸೋರಿಕೆ ಉಂಟಾಗುತ್ತದೆ. ಏಪ್ರಿಲ್ 15ರ ಬೆಳಿಗ್ಗೆ ತೀವ್ರವಾದ ಕಿಬ್ಬೊಟ್ಟೆಯ ನೋವು ಹಾಗೂ ಅನಿಯಂತ್ರಿತ ವಾಂತಿ ಸಮಸ್ಯೆಯಿಂದ ಮಂಗಳೂರಿನ 65 ವರ್ಷ ವಯಸ್ಸಿನ ಶ್ರೀ ಶೆಟ್ಟಿ (ಹೆಸರು ಬದಲಾಯಿಸಲಾಗಿದೆ) ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯೋಲಾಜಿಸ್ಟ್ ಡಾ. ಎಮ್ ಎನ್ ಭಟ್ ಅವರ ನಿರ್ದೇಶನದಂತೆ ತುರ್ತು ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಹಾಗೂ ಸಿ.ಟಿ ಸ್ಕ್ಯಾನ್ ನಡೆಸಿದಾಗ ಕಿಬ್ಬೊಟ್ಟೆಗೆ ರಕ್ತ ಪೂರೈಸುವ ಆಯೋರ್ಟಾದಲ್ಲಿ ಸೋರಿಕೆ ಕಂಡುಬಂದಿದ್ದು ಪೆಲ್ವಿಕ್ ಭಾಗಕ್ಕೆ ರಕ್ತ ಸೋರಿಕೆಯಾಗುತ್ತಿರುವುದು ಪತ್ತೆಯಾಗಿತ್ತು. ಇದರಿಂದ ರೋಗಿಯ ರಕ್ತದೊತ್ತಡ ಏರುಪೇರಾಗಿದ್ದು ಕಿಡ್ನಿ ವೈಫಲ್ಯ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗಿತ್ತು. ಇದು ಮಾರಣಾಂತಿಕವಾಗಿದ್ದು ಸೂಕ್ತ ಚಿಕಿತ್ಸೆ ಕೈಗೊಳ್ಳದಿದ್ದಲ್ಲಿ ಸಾವು ಸಂಭವಿಸುವ ಸಾಧ್ಯತೆ ಶೇ. 100ರಷ್ಟಿದೆ. ರೋಗಿಯ ಜೀವ ರಕ್ಷಣೆಗೆ ಪ್ರತಿ ಕ್ಷಣವೂ ಮುಖ್ಯವಾಗುತ್ತದೆ.
ವಿವಿಧ ತಜ್ಞರ ತಂಡ ತಕ್ಷಣ ತುರ್ತು ಎಂಡೋವಾಸ್ಕ್ಯೂಲರ್ ಸ್ಟೆಂಟ್ ಅಳವಡಿಕೆ ಕಾರ್ಯ ಕೈಗೊಂಡಿದ್ದು , 4 ಗಂಟೆಗಳ ಸತತ ಚಿಕಿತ್ಸೆ ಬಳಿಕ ರಕ್ತ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ಸದ್ಯ ರೋಗಿಯ ಸ್ಥಿತಿ ಉತ್ತಮವಾಗಿದ್ದು , ಉತ್ತಮ ಆರೋಗ್ಯದಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಪ್ರಕರಣದ ಕುರಿತು ಮಾತನಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಡಾ. ಎಂ. ಎನ್. ಭಟ್, " ಆಯೋರ್ಟಾದಲ್ಲಿ ರಕ್ತ ಸೋರಿಕೆ ಸಮಸ್ಯೆ ಮಾರಣಾಂತಿಕವಾಗಿದ್ದು ಚಿಕಿತ್ಸೆಯನ್ನುಬಹಳ ತ್ವರಿತವಾಗಿ ಆರಂಭಿಸಬೇಕಾಗುತ್ತದೆ. ಪರೀಕ್ಷೆಯಲ್ಲಿ ಸೋರಿಕೆಯನ್ನು ನಿಲ್ಲಿಸಲು ವಿಶೇಷವಾದ ದೊಡ್ಡ ಪ್ರಮಾಣದ ಸ್ಟೆಂಟ್ ಕಸಿ ಅನಿವಾರ್ಯ ಎಂಬುದನ್ನು ಅರಿತು ಚಿಕಿತ್ಸೆ ಆರಂಭಿಸಲಾಗಿದ್ದು. ಎಷ್ಟೋ ನಗರಗಳಲ್ಲಿ ತುರ್ತು ಸಂದರ್ಭದಲ್ಲಿ ಈ ಸ್ಟೆಂಟ್ ಲಭ್ಯತೆಯೇ ಇರುವುದಿಲ್ಲ” ಎಂದು ತಿಳಿಸಿದ್ದಾರೆ.
ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಇಂಟರ್ವೆನ್ಷನಲ್ ನ್ಯೂರೋ-ರೇಡಿಯಾಲಜಿಸ್ಟ್ ಡಾ. ಕೀರ್ತಿರಾಜ್ ಮಾತನಾಡಿ, " ರೋಗಿಯ ಆರೋಗ್ಯದಲ್ಲಿ ತೀವ್ರ ಅಸ್ಥಿರತೆಯಿಂದಾಗಿ ಈ ಪ್ರಕರಣವು ಅತ್ಯಂತ ಸವಾಲಿ ನದ್ದಾಗಿತ್ತು. ನಿಖರತೆ, ವೇಗ ಮತ್ತು ತಂಡದ ಕೆಲಸವು ನಿರ್ಣಾಯಕವಾಗಿತ್ತು. ಎಂಡೋವಾಸ್ಕ್ಯುಲರ್ ತಂತ್ರಗಳು ಈ ಮಾರಣಾಂತಿಕ ತುರ್ತುಸ್ಥಿತಿಗಳ ನಿರ್ವಹಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿವೆ" ಎಂದು ಹೇಳಿದರು.
" ಜೀವ ಉಳಿಸಲು ಶ್ರಮ ವಹಿಸಿದ ನಮ್ಮ ತಂಡದ ಪರಿಣತಿ ಮತ್ತು ತ್ವರಿತ ಕ್ರಮದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಈ ಸಾಧನೆಯು ನಮ್ಮ ರೋಗಿಗಳಿಗೆ ಅತ್ಯಾಧುನಿಕ ತುರ್ತು ಮತ್ತುಉತ್ತಮ ಆರೈಕೆ ನೀಡುವಲ್ಲಿ ಕೆಎಂಸಿ ಆಸ್ಪತ್ರೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ" ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಘೀರ್ ಸಿದ್ಧಿಕಿ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ ಲೋಕಾರ್ಪಣೆ
ಈ ಯಶಸ್ಸಿನ ಶಸ್ತ್ರಚಿಕಿತ್ಸೆಯು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಒಂದು ಮಹತ್ವದ ಮೈಲಿ ಗಲ್ಲನ್ನು ಸೂಚಿಸುತ್ತದೆ. ಅಸಾಧಾರಣ ಕೌಶಲ್ಯ ಮತ್ತು ಸಹಯೋಗದೊಂದಿಗೆ ಅಪರೂಪದ ಮತ್ತು ಅತ್ಯಂತ ನಿರ್ಣಾಯಕ ತುರ್ತುಸ್ಥಿತಿಗಳನ್ನು ಸಹ ನಿಭಾಯಿಸಲು ಅದರ ಸಿದ್ಧತೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.