R T Vittalmurthy Column: ಯೋಗಿಯ ಯೋಗ ನೀರಿನಿಂದ ನೀರಾ ತನಕ
ಒಬ್ಬ ಶಾಸಕ ಆಡಳಿತ ಕೇಂದ್ರದಲ್ಲಿ ಅಪರೂಪಕ್ಕೂ ಕಾಣುತ್ತಿಲ್ಲ ಎಂದರೆ ಏನರ್ಥ? ಎಂಬ ಅಚ್ಚರಿ ಶುರುವಾಗುವ ಕಾಲಕ್ಕೇ ಅವರು ಹೊಸ ಗೆಟಪ್ಪಿನಲ್ಲಿ ಕಾಣಿಸತೊಡಗಿದ್ದಾರೆ. ಅರ್ಥಾತ್, ಅವರೀಗ ಸರಕಾರದಿಂದ ಅನುದಾನ ತರಲು ಬಡಿದಾಡುವ ಶಾಸಕ ಎಂಬುದಕ್ಕಿಂತ ಮುಖ್ಯವಾಗಿ, ತಾವು ಪ್ರತಿ ನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರದ ಆರ್ಥಿಕ ನಕಾಶೆಯನ್ನು ಬದಲಿಸಲು, ಆ ಮೂಲಕ ಕ್ಷೇತ್ರದ ರೈತರಿಗೆ ಶಕ್ತಿ ತುಂಬಲು ಉದ್ಯಮಿಯ ಗೆಟಪ್ಪು ಧರಿಸುತ್ತಿದ್ದಾರೆ. ಇದಕ್ಕಾಗಿ ದೇಶದ ವಿಶಿಷ್ಟ ವಾದ ನೀರಾ ಫ್ಯಾಕ್ಟರಿಯನ್ನು ಸ್ಥಾಪಿಸುವುದು ಯೋಗೇಶ್ವರ್ ಅವರ ಲೇಟೆಸ್ಟು ಪ್ಲಾನ್


ಮೂರ್ತಿಪೂಜೆ
ಇತ್ತೀಚೆಗೆ ನಡೆದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಬಂಪರ್ ಗೆಲುವು ಸಾಧಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಈಗ ಉದ್ಯಮಿಯ ಗೆಟಪ್ಪು ಧರಿಸುತ್ತಿzರೆ. ಅಂದ ಹಾಗೆ, ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಹಡಗು ಹತ್ತಿದ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ದ್ದರು. ಅವರ ಈ ಗೆಲುವಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರ ಪಾತ್ರ ಇತ್ತಾದರೂ, ಸ್ವತಃ ಯೋಗೇಶ್ವರ್ ಅವರ ವೋಟ್ಬ್ಯಾಂಕು ನಿರ್ಣಾಯಕ ಪಾತ್ರ ವಹಿಸಿತ್ತು. ವಾಸ್ತವವಾಗಿ ಸಿ.ಪಿ.ಯೋಗೇಶ್ವರ್ ಅವರ ಗೆಲುವು ಅವರಿಗಿಂತ ಹೆಚ್ಚಾಗಿ ಕಾಂಗ್ರೆಸ್ ಪಾಳಯದ ಆತ್ಮವಿಶ್ವಾಶವನ್ನು ಹೆಚ್ಚಿಸಿತು ಎಂಬುದೇ ಹೆಚ್ಚು ನಿಜ.
ಯಾಕೆಂದರೆ ಲೋಕಸಭಾ ಚುನಾವಣೆಯ ಹೊತ್ತಿಗೆ ಮೇಲೆದ್ದು ನಿಂತ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವು ಕೈ ಪಾಳಯದ ‘ಗುಡ್ದಾ’ ಅಲುಗಾಡುವಂತೆ ಬಾರಿಸಿತ್ತು. ಕಳೆದ ವಿಧಾನಸಭಾ ಚುನಾ ವಣೆಯ ಬಂಪರ್ ಗೆಲುವು ರಿಪೀಟ್ ಆದರೆ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಮಿನಿಮಮ್ ಇಪ್ಪತ್ತರಲ್ಲಿ ಗೆಲುವು ಗ್ಯಾರಂಟಿ ಅಂತ ಕಾಂಗ್ರೆಸ್ ನಂಬಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳು ಜನರ ಮನ ಮುಟ್ಟಿವೆ. ಹೀಗಾಗಿ ತನ್ನ ದಿಗ್ವಿಜಯಕ್ಕೆ ಅಡ್ಡಿಯೇ ಇಲ್ಲ ಅಂತ ಅದು ಭಾವಿಸಿತ್ತು. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಸಿನ ನಿರೀಕ್ಷೆಗಳನ್ನು ಹುಸಿ ಗೊಳಿಸಿದ್ದಷ್ಟೇ ಅಲ್ಲ, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಹತ್ತೊಂಬತ್ತು ಕ್ಷೇತ್ರಗಳಲ್ಲಿ ಗೆಲುವು ದಕ್ಕಿಸಿಕೊಟ್ಟಿತ್ತು.
ಯಾವಾಗ ತನ್ನ ನಿರೀಕ್ಷೆ ತಲೆಕೆಳಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ‘ಡೆಡ್ಲಿ ಪವರ್’ ಆಗಿ ತಲೆ ಎತ್ತಿತೋ, ಆಗ ಸಹಜವಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಶುರುವಾಗಿದೆ. ಇದಕ್ಕೆ ಪೂರಕ ವಾದ ಮತ್ತೊಂದು ಕಾರಣವೆಂದರೆ ಕಾಂಗ್ರೆಸ್ ವಿರೋಧಿ ಮತಗಳನ್ನು ಈ ಮೈತ್ರಿಕೂಟ ಕನ್ಸಾಲಿ ಡೇಟ್ ಮಾಡಲು ಶಕ್ತವಾಗಿದೆ ಎಂಬುದು. ಯಾವಾಗ ಇದು ಮನದಟ್ಟಾಯಿತೋ, ಆಗ ಕಾಂಗ್ರೆಸ್ ಪಾಳಯ, ಮೈತ್ರಿಕೂಟದ ವಿರುದ್ಧ ಬಳಸಬಹುದಾದ ಅಸ್ತ್ರಗಳ ಕಡೆ ಕಣ್ಣು ಹಾಯಿಸ ತೊಡಗಿತು.
ಇಂಥ ಸಂದರ್ಭದ ಅದಕ್ಕೆ ಕಂಡದ್ದು ‘ಯೋಗಾಸ್ತ್ರ’ ಮತ್ತು ಇದು ಕಾಣುವ ವೇಳೆಗೆ ಚನ್ನಪಟ್ಟಣ ಸೇರಿದಂತೆ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿತ್ತು. ಅಂದ ಹಾಗೆ, ಈ ಸಂದರ್ಭದಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯಲಿ ಅಂತ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರೆ ಆಟವೇ ಬದಲಾಗುತ್ತಿತ್ತು.
ಇದನ್ನೂ ಓದಿ: R T Vittalmurthy Column: ಹನುಮಂತ ಹಗ್ಗ ತಿನ್ನುವಾಗ ಪೂಜಾರಿಗೆಲ್ಲಿ ಶಾವಿಗೆ ?
ಆದರೆ ಯೋಗೇಶ್ವರ್ ಅವರಿಗೆ ಟಿಕೆಟ್ ಕೊಟ್ಟರೆ ತಮ್ಮ ಪಕ್ಷದ ನೆಲೆ ಅಭದ್ರವಾಗಬಹುದು ಎಂಬ ಲೆಕ್ಕಾಚಾರಕ್ಕಿಳಿದ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಅವರಿಗೆ ಟಿಕೆಟ್ ನೀಡುವ ಲೆಕ್ಕಾಚಾರಕ್ಕೆ ಬಂದಿದ್ದರು. ಯಾವಾಗ ಇದು ಕನ್ ಫರ್ಮ್ ಆಯಿತೋ, ಆಗ ಯೋಗೇಶ್ವರ್ ಕಾಂಗ್ರೆಸ್ ಕಡೆ ತಿರುಗಿದರು.
ಮತ್ತದನ್ನೇ ನಿರೀಕ್ಷಿಸುತ್ತಿದ್ದ ಸಿದ್ದು, ಡಿಕೆಶಿ ಕೂಡಾ ಸಟಕ್ಕಂತ ಕೈ ನೀಡಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಹಡಗಿಗೆ ಹತ್ತಿಸಿಕೊಂಡರು. ಫೈನಲಿ, ಉಪಚುನಾವಣೆ ನಡೆದಾಗ ಚನ್ನಪಟ್ಟಣದ ಮತ ಬ್ಯಾಂಕ್ ಸಾಲಿಡ್ಡಾಗಿ ಯೋಗೇಶ್ವರ್ ಅವರ ಕೈ ಹಿಡಿಯಿತು. ಆ ಮೂಲಕ ದೈತ್ಯನಂತೆ ಮೇಲೆದ್ದು ನಿಂತಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬಕಾಬರಲೆ ಮಲಗಿ ಕೈ ಪಾಳಯದ ಆತ್ಮವಿಶ್ವಾಸ ಮರು ಕಳಿಸುವಂತೆ ಮಾಡಿತು.
ಯೋಗಿ ಮಂತ್ರಿ ಆಗದಿದ್ದರೆ ಆಪತ್ತು
ಹೀಗೆ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆದ್ದು ಕಾಂಗ್ರೆಸ್ ಪಾಲಿಗೆ ಟಾನಿಕ್ ನೀಡಿದ್ದೇನೋ ಆಯಿತು. ಆದರೆ ಮುಂದೇನು? ಎಂಬ ಪ್ರಶ್ನೆ ಎದ್ದಾಗ ಕೈ ಪಾಳಯದ ಕೆಲವರು ಅನುಮಾನದ ಮಾತನಾಡಿ ದ್ದರು. “ಇವತ್ತೇನೋ ಯೋಗೇಶ್ವರ್ ಗೆದ್ದಿದ್ದಾಯಿತು. ಆದರೆ ಇನ್ನು ಆರು ತಿಂಗಳಲ್ಲಿ ಅವರು ಮಂತ್ರಿಯಾಗದಿದ್ದರೆ ಆಟ ಶುರುವಾಗುತ್ತದೆ. ಯೋಗೇಶ್ವರ್ ಅವರಿಗೆ ಸುಮ್ಮನೆ ಕುಳಿತು ಅಭ್ಯಾಸ ವಿಲ್ಲ.
ಎಷ್ಟೇ ಆದರೂ ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಉರುಳಿಸಲು ಯಡಿಯೂರಪ್ಪ ಅವರ ಜತೆಗಿದ್ದ ‘ಮಾಸ್ಟರ್ ಮೈಂಡ್’ ಅವರೇ. ಹೀಗಿದಾಗ ಕಾಂಗ್ರೆಸ್ನವರು ಅವರನ್ನು ಕರೆದು ಕೆಲಸವಿಲ್ಲದೆ ಕೂರಿಸಿದರೆ ಸುಮ್ಮನಿರುತ್ತಾರಾ? ಡೆಫಿನೆಟ್ಲಿ ಭಸ್ಮಾಸುರ ಆಗುತ್ತಾರೆ" ಎಂದಿದ್ದರು. ಆದರೆ ಉಪಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಯೋಗೇಶ್ವರ್ ಫುಲ್ ಕೂಲಾದರು. ವಿಧಾನ ಸಭೆಯ ಕಾರಿಡಾರುಗಳ ಆಗಲಿ, ಶಾಸನಸಭೆಯ ಮೊಗಸಾಲೆಯಲ್ಲಿಯೇ ಆಗಲಿ ಅವರು ಕಾಣಿಸಲಿಲ್ಲ.
ಒಬ್ಬ ಶಾಸಕ ಆಡಳಿತ ಕೇಂದ್ರದಲ್ಲಿ ಅಪರೂಪಕ್ಕೂ ಕಾಣುತ್ತಿಲ್ಲ ಎಂದರೆ ಏನರ್ಥ? ಎಂಬ ಅಚ್ಚರಿ ಶುರುವಾಗುವ ಕಾಲಕ್ಕೇ ಅವರು ಹೊಸ ಗೆಟಪ್ಪಿನಲ್ಲಿ ಕಾಣಿಸತೊಡಗಿದ್ದಾರೆ. ಅರ್ಥಾತ್, ಅವರೀಗ ಸರಕಾರದಿಂದ ಅನುದಾನ ತರಲು ಬಡಿದಾಡುವ ಶಾಸಕ ಎಂಬುದಕ್ಕಿಂತ ಮುಖ್ಯವಾಗಿ, ತಾವು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ಕ್ಷೇತ್ರದ ಆರ್ಥಿಕ ನಕಾಶೆಯನ್ನು ಬದಲಿಸಲು, ಆ ಮೂಲಕ ಕ್ಷೇತ್ರದ ರೈತರಿಗೆ ಶಕ್ತಿ ತುಂಬಲು ಉದ್ಯಮಿಯ ಗೆಟಪ್ಪು ಧರಿಸುತ್ತಿದ್ದಾರೆ. ಇದಕ್ಕಾಗಿ ದೇಶದ ವಿಶಿಷ್ಟ ವಾದ ನೀರಾ ಫ್ಯಾಕ್ಟರಿಯನ್ನು ಸ್ಥಾಪಿಸುವುದು ಯೋಗೇಶ್ವರ್ ಅವರ ಲೇಟೆಸ್ಟು ಪ್ಲಾನ್.
ನೀರಿನಿಂದ ನೀರಾ ತನಕ
ಅಂದ ಹಾಗೆ, ರಾಜಕಾರಣಿಯಾಗಿ ಯೋಗೇಶ್ವರ್ ಏನೇ ವಿವಾದಗಳಿಗೆ ಸಿಲುಕಲಿ, ಆದರೆ ಒಂದು ಕ್ಷೇತ್ರದ ಜನಪ್ರತಿನಿಧಿಯಾಗಿ ಯೋಗಿ ರೋಲ್ ಮಾಡೆಲ. ಈ ಹಿಂದೆ ಚನ್ನಪಟ್ಟಣ ಕ್ಷೇತ್ರದ ಶಾಸಕ ರಾಗಿದ್ದ ಕಾಲದಲ್ಲಿ ಅವರು ಮಾಡಿದ ಬಹುದೊಡ್ಡ ಕೆಲಸ ವೆಂದರೆ ಕ್ಷೇತ್ರದಾದ್ಯಂತ ಇರುವ ಕೆರೆಗಳನ್ನು ದುರಸ್ತಿಗೊಳಿಸಿ ನೀರು ತುಂಬಿಸಿದ್ದು.
ಸದಾಕಾಲ ಬರಗಾಲದಿಂದ ತತ್ತರಿಸುತ್ತಾ, ನೀರಿಗಾಗಿ ಹವಣಿಸುತ್ತಿದ್ದ ಚನ್ನಪಟ್ಟಣ ಕ್ಷೇತ್ರ ಯೋಗೇಶ್ವರ್ ಅವರ ಕೆರೆ ತುಂಬಿಸುವ ಕೆಲಸದಿಂದ ಮೈ ಕೊಡವಿ ಮೇಲೆದ್ದು ನಿಂತಿತು. ಅಷ್ಟೇ ಅಲ್ಲ, ಕ್ಷೇತ್ರದ ಮೂಲೆ ಮೂಲೆಗೂ ತಲುಪಿದ ನೀರಾವರಿಯಿಂದ ನಳನಳಿಸುತ್ತಾ ತನ್ನ ಆರ್ಥಿಕ ಸ್ಥಿತಿಯನ್ನು ಟಾಪ್ ಲೆವೆಲ್ಲಿಗೆ ಏರಿಸಿಕೊಂಡಿತು. ಇವತ್ತು ಚನ್ನಪಟ್ಟಣ ಕ್ಷೇತ್ರದ ಜನ ಯೋಗೇಶ್ವರ್ ಅವರನ್ನು ಭಗೀರಥ ಅಂತ ಕರೆಯುವುದು ಇದೇ ಕಾರಣಕ್ಕಾಗಿ.
ಅಂದ ಹಾಗೆ, ಈ ಹಿಂದೆ ಇಂಥ ಸಾಧನೆ ಮಾಡಿದ್ದೇನೋ ಆಯಿತು. ಆದರೆ ಈಗ ಮಾಡುವುದೇನು? ರಾಜಕಾರಣದ ಚದುರಂಗಕ್ಕೆ ಕೈ ಹಾಕಿ ಕಾಯಿಗಳನ್ನು ನಡೆಸಬೇಕೆಂದರೆ ಜಿಲ್ಲೆಯ ರಾಜಕಾರಣದಲ್ಲಿ ಇವತ್ತು ‘ದಿ ಗ್ರೇಟ್ ಬ್ರದರ್ಸ್ ಡಿಕೆಶಿ ಮತ್ತು ಡಿಕೆಸು’ ಅವರದ್ದೇ ಹವಾ. ಮೈತ್ರಿಕೂಟದ ಶಾಸಕರಾಗಿ ದ್ದರೆ ಈ ಗ್ರೇಟ್ ಬ್ರದರ್ಸ್ ಎದುರು ಆಟ ಆಡಬಹುದಿತ್ತು. ಆದರೆ ಗೆದ್ದಿರುವುದೇ ಕಾಂಗ್ರೆಸ್ ಪಕ್ಷ ದಿಂದ. ಸಾಲದೆಂಬಂತೆ ಮೈತ್ರಿಕೂಟ ತೊರೆದು ಬಂದಾಗ ಸ್ನೇಹದ ಕೈ ಚಾಚಿದ್ದೇ ಗ್ರೇಟ್ ಬ್ರದರ್ಸ್.
ಹೀಗಿರುವಾಗ ತಾವು ಮಾಡುವುದೇನು? ಅಂತ ಯೋಗೇಶ್ವರ್ ಯೋಚಿಸಿದ್ದಾರೆ. ಅದರ ಬೆನ್ನ ಕ್ಷೇತ್ರದ ಮತದಾರರ ಋಣ ತೀರಿಸಲು ಬೃಹತ್ ನೀರಾ ಫ್ಯಾಕ್ಟರಿಯ ಸ್ಥಾಪನೆಗೆ ಸಜ್ಜಾಗಿದ್ದಾರೆ. ಇಲ್ಲಿ ಏಳಲಿದೆ ಯೋಗಿಯ ಫ್ಯಾಕ್ಟರಿ ಹೀಗೆ ನೀರಾ ಫ್ಯಾಕ್ಟರಿ ಸ್ಥಾಪಿಸಲು ಯೋಗೇಶ್ವರ್ ಅವರ ನೀಲನಕ್ಷೆಯೇನೋ ತಯಾರಾಗಿದೆ. ಚನ್ನಪಟ್ಟಣದ ಕಾಫಿ ಡೇ ಹಿಂಭಾಗದಲ್ಲಿರುವ ಐವತ್ತು ಎಕರೆ ಭೂಮಿಯಲ್ಲಿ ಈ ಫ್ಯಾಕ್ಟರಿ ಕಟ್ಟಬೇಕು ಎಂಬುದು ಯೋಗಿ ಲೆಕ್ಕಾಚಾರ. ಆದರೆ ಇದರ ಸ್ಥಾಪನೆಗೂ ಮುನ್ನ ನೀರಾ ತಯಾರಿಕೆಯಲ್ಲಿ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಿಕೊಳ್ಳುವ ಕಸರತ್ತಿಗೆ ಅವರು ಇಳಿದಿದ್ದಾರೆ.
ಅಂದ ಹಾಗೆ, ಚನ್ನಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ರೈತರಿಂದ ಪ್ರತಿದಿನ ಮೂರು ಲಕ್ಷ ಲೀಟರು ಗಳಷ್ಟು ನೀರಾ ಸಂಗ್ರಹಿಸಬಹುದು. ಆದರೆ ಇದನ್ನು ಸಂಸ್ಕರಿಸುವ ವಿಧಾನ ಅತ್ಯುಚ್ಚ ಮಟ್ಟ ದಲ್ಲಿರಬೇಕು. ಇಲ್ಲದಿದ್ದರೆ ತೆಂಗಿನ ಮರದಿಂದ ಇಳಿಸುವ ನೀರಾ ಕೆಲವೇ ಹೊತ್ತಿನಲ್ಲಿ ಹೆಂಡವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಇಳಿಸಿದ ನೀರಾ ಮೈನಸ್ ಐದು ಡಿಗ್ರಿ ಟೆಂಪರೇಚರಿನ ಇರುವಂತೆ ನೋಡಿಕೊಳ್ಳಬೇಕು ಮತ್ತು ಅದೇ ಸ್ಥಿತಿಯಲ್ಲಿ ಗ್ರಾಹಕರಿಗೆ ಪೂರೈಕೆ ಆಗಬೇಕು.
ವಸ್ತುಸ್ಥಿತಿ ಎಂದರೆ ನೀರಾ ಅನ್ನು ಜನರ ಕೈಗೆ ತಲುಪಿಸಲು ಈ ಹಿಂದೆ ಹಲವರು ಯತ್ನಿಸಿದ್ದಾರೆ. ಇಂಥ ಪ್ರಯತ್ನ ಯಶಸ್ವಿಯಾದರೆ ಕೋಕಾಕೋಲಾ, ಪೆಪ್ಸಿಯಂಥ ಪಾನೀಯಗಳಿಗೆ ಸೆಡ್ಡು ಹೊಡೆ ಯಲು ಸಾಧ್ಯವಾಗುತ್ತದೆ. ಆ ಮೂಲಕ ರೈತರ ಆರ್ಥಿಕ ಸ್ಥಿತಿಯನ್ನು ಬಲಗೊಳಿಸಿದಂತಾಗುತ್ತದೆ ಎಂದು ಲೆಕ್ಕ ಹಾಕಿದ್ದಾರೆ.
ಆದರೆ ಯಾರೆಷ್ಟೇ ಪ್ರಯತ್ನಿಸಿದರೂ ನೀರಾ ಹೆಂಡವಾಗಿ ಬದಲಾಗುವ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಕನಸಿನ ನೀರಾ ಫ್ಯಾಕ್ಟರಿಯನ್ನು ಸ್ಥಾಪಿಸುವ ಮುನ್ನ ಯೋಗೇ ಶ್ವರ್ ಜಗತ್ತಿನ ವಿವಿಧ ದೇಶಗಳಿಗೆ ಹೋಗಿ ಬರುತ್ತಿದ್ದಾರೆ. ಈ ದಿಸೆಯಲ್ಲಿ ಜಪಾನ್ ಪ್ರವಾಸ ಮುಗಿಸಿ ಬಂದಿರುವ ಅವರು ಸದ್ಯದ ಫಿಲಿಫೈನ್ಸ್, ವಿಯೆಟ್ನಾಮ್, ಥಾಯ್ಲೆಂಡ್ ಕಡೆ ಹೋಗುತ್ತಿದ್ದಾರೆ.
ಕಾರಣ? ಇವತ್ತು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ನೀರಾ ಇಳಿಸುತ್ತಿರುವ ರಾಷ್ಟ್ರ ಗಳೆಂದರೆ ಈ ಮೂರೇ. ಅಲ್ಲಿ ಇಳಿಸಲಾಗುತ್ತಿರುವ ನೀರಾದಿಂದ ಸ್ಥಳೀಯ ರೈತರು ಬಂಪರ್ ಲಾಭ ಪಡೆಯುತ್ತಿದ್ದಾರೆ. ಆದರೆ ಇಷ್ಟೆಲ್ಲದರ ನಡುವೆ ಅಲ್ಲಿ ಇಳಿಕೆಯಾಗುತ್ತಿರುವ ಬಹುತೇಕ ನೀರಾ, ರಮ್ ಆಗುತ್ತಿದೆ. ಆದರೆ ಇಳಿಸಿದ ನೀರಾ ನೀರಾ ಆಗಿಯೇ ಉಳಿದು ಗ್ರಾಹಕರಿಗೆ ಪೌಷ್ಟಿಕಾಂಶ ಒದಗಿಸುವ ಪೇಯವಾಗಬೇಕು ಎಂಬುದು ಯೋಗಿಯ ಬಯಕೆ. ತಮ್ಮ ಈ ಬಯಕೆಗೆ ಪೂರಕವಾಗಿ ಅವರು ಮೈಸೂರು ಮತ್ತು ಕಾಸರಗೋಡಿನಲ್ಲಿರುವ ಕೇಂದ್ರ ಸರಕಾರದ ಆಹಾರ ಸಂಸ್ಕರಣಾ ಘಟಕಗಳ ಜತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ.
ಅವರ ಈ ಪ್ರಯೋಗ ಯಶಸ್ವಿಯಾಗಿ ನೀರಾ ಫ್ಯಾಕ್ಟರಿ ತಲೆ ಎತ್ತಿದರೆ, ಒಂದು ತೆಂಗಿನ ಮರದಿಂದ ವಾರ್ಷಿಕ ಎರಡು ಸಾವಿರ ರುಪಾಯಿಗಳಷ್ಟು ಆದಾಯ ಪಡೆಯುತ್ತಿರುವ ರೈತರು, ಐದು ಸಾವಿರ ರುಪಾಯಿಗಳನ್ನು ಪಡೆಯುತ್ತಾರೆ ಮತ್ತು ಆ ಮೂಲಕ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆರ್ಥಿಕ ನಕಾಶೆಯೇ ಬದಲಾಗುತ್ತದೆ ಎಂಬುದು ಯೋಗಿಯ ಲೆಕ್ಕಾಚಾರ. ಹೀಗೆ ತಮ್ಮ ಲೆಕ್ಕಾಚಾರವನ್ನು ಬದಲಿಸಿರುವ ಅವರು ನಿತ್ಯದ ರಾಜಕೀಯ ಜಂಜಡಗಳಿಗೆ ತಪ್ಪಿಯೂ ಕೈ ಹಾಕುತ್ತಿಲ್ಲ
ಲಾಸ್ಟ್ ಸಿಪ್: ಇನ್ನು ಉದ್ಯಮಿಯ ಗೆಟಪ್ಪು ಧರಿಸುತ್ತಿರುವ ಯೋಗಿಯನ್ನು ಬಿಜೆಪಿಗೆ ಮರಳಿ ಕರೆತರುವ ಯತ್ನವೂ ಜಾರಿಯಲ್ಲಿದೆ. ಹಾಗೆ ನೋಡಿದರೆ, ಬಿಜೆಪಿಯಲ್ಲಿದ್ದಾಗ ಯೋಗಿ ಪ್ರಳಯಾಂ
ತಕ ಪ್ರಯೋಗಗಳನ್ನು ಮಾಡಿದವರು. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಬಿತ್ತಲ್ಲ? ಇದನ್ನು ಉರುಳಿಸಿದ ಮೂಲವೇ ಯೋಗಿ. ಅವರು ಹೋಗಿ ಯಡಿಯೂರಪ್ಪ ಮತ್ತವರ ಆಪ್ತರಿಗೆ ಈ ಸರಕಾರವನ್ನು ಬೀಳಿಸಬಹುದು ಅಂತ ವಿವರಿಸಿದಾಗ, ‘ಓ! ಭ್ರಮೆ‘ ಅಂದಿದ್ದರಂತೆ ಯಡಿಯೂರಪ್ಪ ಆಪ್ತರು. ಈ ಕೆಲಸಕ್ಕೆ ಕೈ ಹಾಕಿದರೆ ಹಣ ಕಳೆದುಕೊಳ್ಳಬಹುದೇ ಹೊರತು ಬೇರೇನೂ ಆಗಲ್ಲ ಅಂತ ಅವರು ಹೇಳಿದಾಗ, ಇದು ಹೇಗೆ ಸಾಧ್ಯ? ಅಂತ ಯೋಗಿ ವಿವರಿಸಿ ಬೆಚ್ಚಿ ಬೀಳಿಸಿದ್ದರು. ಮುಂದಿನದು ಇತಿಹಾಸ. ಇಂಥ ಯೋಗಿ ಈಗ ಕಾಂಗ್ರೆಸ್ಸಿನಲ್ಲಿದ್ದರೂ ಮುಂದೊಂದು ದಿನ ಅವರನ್ನು ಮರಳಿ ಮನೆಗೆ ಕರೆತರುವುದು ಕೆಲ ಬಿಜೆಪಿ ನಾಯಕರ ಬಯಕೆ. ಮುಂದೇನಾಗು ತ್ತದೋ?