Operation Sindoor: ಯುದ್ಧದ ಹಿನ್ನೆಲೆಯಲ್ಲಿ ವಾಘಾ ಸೇರಿ ಎಲ್ಲ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬೀಟಿಂಗ್ ರಿಟ್ರೀಟ್ ರದ್ದು
Operation Sindoor: ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ. ಆದರೆ ಸೂರ್ಯಾಸ್ತದ ಸಮಯದಲ್ಲಿ ಪ್ರತಿದಿನ ರಾಷ್ಟ್ರಧ್ವಜವನ್ನು ಕೆಳಗಿಳಿಸುವುದು ಎಂದಿನಂತೆ ಮುಂದುವರಿಯುತ್ತದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.

ವಾಘಾ- ಅಟ್ಟಾರಿ ಗಡಿ ಚೆಕ್‌ಪೋಸ್ಟ್

ನವದೆಹಲಿ: ಮುಂದುವರಿದ ಆಪರೇಶನ್ ಸಿಂದೂರ್ (Operation Sindoor) ಹಾಗೂ ಅದರಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ ನಡೆಸುತ್ತಿರುವ ಶೆಲ್- ಡ್ರೋನ್ ದಾಳಿಗಳ ಹಿನ್ನೆಲೆಯಲ್ಲಿ, ಪಂಜಾಬ್‌ನಲ್ಲಿ ಪಾಕಿಸ್ತಾನದ ಗಡಿಯಲ್ಲಿರುವ ಮೂರು ಚೆಕ್‌ಪೋಸ್ಟ್‌ಗಳಾದ ಅಟ್ಟಾರಿ-ವಾಘಾ, ಹುಸೇನ್‌ವಾಲಾ ಮತ್ತು ಸದ್ಕಿಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬೀಟಿಂಗ್ ರಿಟ್ರೀಟ್ (beatnig retreat) ಸಮಾರಂಭಗಳನ್ನು ನಿಲ್ಲಿಸಿದೆ.
ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಇವುಗಳನ್ನು ಕೈಬಿಡಲಾಗಿದೆ. ಆದರೆ ಸೂರ್ಯಾಸ್ತದ ಸಮಯದಲ್ಲಿ ಪ್ರತಿದಿನ ರಾಷ್ಟ್ರಧ್ವಜವನ್ನು ಕೆಳಗಿಳಿಸುವುದು ಎಂದಿನಂತೆ ಮುಂದುವರಿಯುತ್ತದೆ ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಜೆಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ನಂತರ ಬಿಎಸ್‌ಎಫ್ ಈ ನಿರ್ಧಾರ ತೆಗೆದುಕೊಂಡಿದೆ. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ) ದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಆಪರೇಷನ್ ಸಿಂದೂರ್ ಅನ್ನು ಪ್ರಾರಂಭಿಸಿದ್ದವು.
ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಗಳು ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ಪ್ರಮುಖ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದ್ದವು. ಇದರಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನ ಸೇನಾಪಡೆ ಗಡಿಯಲ್ಲಿ ಶೆಲ್‌ಗಳನ್ನು ಹಾಗೂ ಡ್ರೋನ್‌ಗಳಲ್ಲಿ ಭಾರತದೊಳಗೆ ಕಳಿಸುತ್ತಿದೆ. ರಾಜಸ್ಥಾನದಲ್ಲಿ ಒಂದು ಎಫ್ 16 ವಿಮಾನವನ್ನು ಭಾರತದ ವಾಯುಪಡೆ ಹೊಡೆದುರುಳಿಸಿದೆ.
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಲು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಕಾರ್ಯಾಚರಣೆಯ ನಿರಂತರತೆಯನ್ನು ಎತ್ತಿಹಿಡಿಯಲು ಸಚಿವಾಲಯಗಳು ಮತ್ತು ಸಂಸ್ಥೆಗಳ ನಡುವೆ ಸುಗಮ ಸಮನ್ವಯದ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಸಂಪುಟ ಕಾರ್ಯದರ್ಶಿ, ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಅಧಿಕಾರಿಗಳು, ರಕ್ಷಣಾ, ಗೃಹ ವ್ಯವಹಾರಗಳು, ವಿದೇಶಾಂಗ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ವಿದ್ಯುತ್, ಆರೋಗ್ಯ ಮತ್ತು ದೂರಸಂಪರ್ಕ ಸೇರಿದಂತೆ ಪ್ರಮುಖ ಸಚಿವಾಲಯಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರವು ಈ ಸೂಕ್ಷ್ಮ ಸನ್ನಿವೇಶದಲ್ಲಿರುವಾಗ ನಿರಂತರ ಜಾಗರೂಕತೆ, ಸಾಂಸ್ಥಿಕ ಸಮನ್ವಯ ಮತ್ತು ಸ್ಪಷ್ಟ ಸಂವಹನಕ್ಕೆ ಪ್ರಧಾನಿ ಕರೆ ನೀಡಿದರು.
ಇದನ್ನೂ ಓದಿ: Operation Sindoor: ಬಿಎಸ್‌ಎಫ್ ಶಿಬಿರದ ಮೇಲೆ ಮತ್ತೆ ಪಾಕ್ ಡ್ರೋನ್ ದಾಳಿಗೆ ಯತ್ನ