Sonu Nigam Controversy: ಸೋನು ನಿಗಮ್‌ಗೆ ಪೊಲೀಸ್ ನೋಟೀಸ್, ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ
ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಕುರಿತು ಸೋನು ನಿಗಮ್‌ಗೆ (Sonu Nigam) ಪೊಲೀಸರು ಇಮೇಲ್, ರಿಜಿಸ್ಟರ್ಡ್ ಪೋಸ್ಟ್ ಮೂಲಕ ನೋಟಿಸ್ ನೀಡಿದ್ದು, ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಸೋನು ನಿಗಮ್

ಬೆಂಗಳೂರು: ಕನ್ನಡ ಹಾಡಿನ (Kannada song) ವಿಚಾರದಲ್ಲಿ ಕ್ಯಾತೆ ತೆಗೆದು ಕನ್ನಡಾಭಿಮಾನವನ್ನು ಪಹಲ್ಗಾಂ ದಾಳಿಯ (Pahalgam attack) ಜೊತೆಗೆ ಹೋಲಿಕೆ ಮಾಡಿದ್ದ ಹಿಂದಿ ಗಾಯಕ ಸೋನು ನಿಗಮ್‌ಗೆ (Sonu Nigam Controversy) ನೋಟಿಸ್ ಜಾರಿ ಮಾಡಲಾಗಿದೆ. ಅವಲಹಳ್ಳಿ ಪೊಲೀಸರು ಸೋನು ನಿಗಮ್‌ಗೆ ನೋಟೀಸ್ (notice) ಜಾರಿ ಮಾಡಿದ್ದು, ಇಂದು ರಿಜಿಸ್ಟರ್ಡ್ ಪೋಸ್ಟ್ ಮೂಲಕ ನೋಟಿಸ್ ನೀಡಲಾಗಿದೆ. ನೋಟಿಸ್ ತಲುಪಿದ ಒಂದು ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಕಾರ್ಯಕ್ರಮ ಆಯೋಜಕರಿಗೂ ನೋಟಿಸ್ ನೀಡಲು ಸಿದ್ದತೆ ಮಾಡಲಾಗಿದೆ.
ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡ ಪರ ಹೋರಾಟಗಾರರು ದೂರು ದಾಖಲಿಸಿದ್ದು, ದೂರಿನಲ್ಲಿ ಸೋನು ನಿಗಮ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದೀಗ ಸೋನು ನಿಗಮ್‌ಗೆ ಬೆಂಗಳೂರು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಕುರಿತು ಪೊಲೀಸರು ಇಮೇಲ್, ರಿಜಿಸ್ಟರ್ಡ್ ಪೋಸ್ಟ್ ಮೂಲಕ ನೋಟಿಸ್ ನೀಡಿದ್ದು, ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 352 (1), 351 (2) ಮತ್ತು 353 ರ ಅಡಿಯಲ್ಲಿ ದ್ವೇಷ, ಕ್ರಿಮಿನಲ್ ಮಾನಹಾನಿ ಮತ್ತು ಭಾಷಾ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೋನು ನಿಗಮ್ ಅವರ ಹೇಳಿಕೆಗಳು ಕನ್ನಡಿಗ ಸಮುದಾಯಕ್ಕೆ ತೀವ್ರ ನೋವನ್ನುಂಟು ಮಾಡಿವೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಒಂದು ವಾರದೊಳಗೆ ಸೋನು ನಿಗಮ್‌ಗೆ ವಿಚಾರಣೆಗೆ ಬರಲು ಸೂಚನೆ ನೀಡಲಾಗಿದ್ದು ಕಾರ್ಯಕ್ರಮ ಆಯೋಜಕರಿಗೂ ನೋಟಿಸ್ ನೀಡಲು ಸಿದ್ದತೆ ಮಾಡಲಾಗಿದೆ. ಯಾವ ಕಂಟ್ರಾಕ್ಟ್ ಮೇಲೆ ಕಾರ್ಯಕ್ರಮಕ್ಕೆ ಬಂದಿದ್ದರು? ಎಷ್ಟು ಗಂಟೆಗಳ ಕಾರ್ಯಕ್ರಮ, ಬೇರೆ ಯಾರು ಅವರ ಜೊತೆಯಲ್ಲಿ ಇದ್ದರು ಎಂದು ಪ್ರಶ್ನೆ ಮಾಡಲಾಗುತ್ತದೆ ಎನ್ನಲಾಗಿದೆ.
ಕನ್ನಡದ ಮೇಲೆ ಅಭಿಮಾನ ಇದ್ದರೆ ಸರ್ಕಾರ ಕೂಡಲೇ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹಿಸಿದ್ದಾರೆ. ಇಲ್ಲಿವರೆಗೆ ಕನ್ನಡ ಹಾಡು ಹಾಡಿದ್ದಾರೆ ಅಂತ ಸಿನಿಮಾ ಅವಕಾಶ ಕೊಡುತ್ತಿದ್ದೆವು. ಆದರೆ ಇನ್ಮುಂದೆ ಒಂದೇ ಒಂದು ಕನ್ನಡ ಹಾಡು ಹಾಡಬೇಕಾಗಿಲ್ಲ ಎಂದಿದ್ದಾರೆ. ಸೋನು ನಿಗಮ್ ಹಾಡಿದ ಪರಭಾಷೆಯ ಸಿನಿಮಾ ರಿಲೀಸ್‌ಗೆ ಅವಕಾಶ ಕೊಡಲ್ಲ. ನಮ್ಮ ರಾಜ್ಯದಲ್ಲಿ ಸೋನು ನಿಗಮ್ ಹಾಡಿದ ಸಿನಿಮಾ ನಮಗೆ ಬೇಕಾಗಿಲ್ಲ. ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸುವುದು ಸರಿಯಲ್ಲ. ಸೋನು ನಿಗಮ್ ಬಂಧಿಸಿ ಜೈಲಿಗೆ ಹಾಕಿ. ಸಿಎಂ ಸಿದ್ರಾಮಯ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದ್ದಾರೆ.
ಪರಭಾಷಿಕರನ್ನು ಕರೆಸಿ ಕೋಟಿಗಟ್ಟಲೆ ಹಣ ಕೊಡುವುದನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು. ಕನ್ನಡ ನಟ ನಟಿಯರು ಇದುವರೆಗೆ ಒಬ್ಬೇ ಒಬ್ಬರು ಮಾತಾಡಿಲ್ಲ. ಕನಿಷ್ಠ ಕನ್ನಡ ಗಾಯಕರೂ ಈ ಬಗ್ಗೆ ಏನು ಮಾತಾಡಲಿಲ್ಲ. ಒಬ್ಬರೋ ಇಬ್ಬರು ಮಾತ್ರ ಕನ್ನಡ ವಿಚಾರ ಬಂದಾಗ ಮಾತನಾಡುತ್ತಾರೆ. ಶಿವಣ್ಣ, ಪ್ರೇಮ್‌ನಂಥವರು ಮಾತನಾಡುತ್ತಾರೆ. ಇನ್ನುಳಿದವರು ಯಾವತ್ತು ಮಾತಾಡಿದ್ದಾರೆ? ಕನ್ನಡ ನೆಲ, ಜಲ, ಭಾಷೆ, ಕನ್ನಡಿಗರ ಬಗ್ಗೆ ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Sonu Sigam: ಗೂಂಡಾಗಳಂತೆ ವರ್ತಿಸುತ್ತಿದ್ದರು.... ಮತ್ತೆ ಕನ್ನಡಿಗರನ್ನು ಕೆಣಕಿದ ಸೋನು ನಿಗಮ್