Operation Sindoor: 'ಆಪರೇಷನ್ ಸಿಂಧೂರ್'ನಲ್ಲಿ 9 ತಾಣಗಳನ್ನು ಗುರಿಯಾಗಿಸಿದ್ದೇಕೆ?
ಕಾರ್ಯಾಚರಣೆಗೆ ಆಯ್ಕೆ ಮಾಡಲಾದ ಒಂಬತ್ತು ತಾಣಗಳಲ್ಲಿ ಪ್ರತಿಯೊಂದೂ ಭಾರತದ ಮೇಲೆ ನಿರ್ದೇಶಿಸಲಾದ ಪ್ರಮುಖ ಭಯೋತ್ಪಾದಕ ಸಂಚುಗಳು ಮತ್ತು ಒಳನುಸುಳುವಿಕೆ ಪ್ರಯತ್ನಗಳೊಂದಿಗೆ ಸಂಬಂಧ ಹೊಂದಿದ್ದ ಇತಿಹಾಸವನ್ನು ಹೊಂದಿದ್ದವು. ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಭಯೋತ್ಪಾದಕ ಚಟುವಟಿಗಳಿಗೆ ಇವು ಮಹತ್ವದ ಕೊಂಡಿಯಾಗಿತ್ತು.


ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ(pahalgam attack) ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ(IND vs PAK) ಉಗ್ರರ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂಧೂರ್'(Operation Sindoor) ಹೆಸರಿನಲ್ಲಿ ನಿರ್ದಿಷ್ಟ ದಾಳಿ ನಡೆಸಿದೆ. ಭಾರತ ಈ ಒಂಬತ್ತು ನೆಲೆಗಳನ್ನು ಗುರಿಯಾಗಿರಿಸಲು ಕಾರಣ ಏನೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ ದಾಳಿಗೆ ಆಯ್ದುಕೊಂಡ 9 ಸ್ಥಳಗಳಲ್ಲಿ 4 ಪಾಕಿಸ್ತಾನದಲ್ಲಿದ್ದರೆ ಇನ್ನುಳಿದ ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ. ಪ್ರತಿಯೊಂದೂ ತಾಣಗಳು ಭಾರತದ ಮೇಲೆ ಪ್ರಮುಖ ಭಯೋತ್ಪಾದಕ ಸಂಚುಗಳು ಮತ್ತು ಒಳನುಸುಳುವಿಕೆ ಪ್ರಯತ್ನಗಳೊಂದಿಗೆ ಸಂಬಂಧ ಹೊಂದಿದ್ದ ಇತಿಹಾಸವನ್ನು ಹೊಂದಿದ್ದವು. ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಭಯೋತ್ಪಾದಕ ಚಟುವಟಿಗಳಿಗೆ ಇವು ಮಹತ್ವದ ಕೊಂಡಿಯಾಗಿತ್ತು. ಈ ಮೌಲ್ಯಮಾಪನಗಳ ಆಧಾರದ ಮೇಲೆ ಭಾರತ ಈ ತಾಣಗಳನ್ನು ಗುರುತಿಸಿತ್ತು.
ಬಹವಾಲ್ಪುರ್: ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ
ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿರುವ ಬಹವಾಲ್ಪುರ್ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ಈ ನಗರವು ಮಸೂದ್ ಅಜರ್ ನೇತೃತ್ವದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿ ಎಂದು ತಿಳಿದುಬಂದಿದೆ. 2001ರ ಸಂಸತ್ತಿನ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳ ಜವಾಬ್ದಾರಿಯನ್ನು ಈ ಗುಂಪು ಹೊತ್ತುಕೊಂಡಿತ್ತು.
ಮುರಿಡ್ಕೆ: ಲಷ್ಕರ್-ಎ-ತೈಬಾ ನೆಲೆ ಮತ್ತು ತರಬೇತಿ ಮೈದಾನ
ಲಾಹೋರ್‌ನಿಂದ ಸುಮಾರು 40 ಕಿಲೋಮೀಟರ್ ಉತ್ತರಕ್ಕೆ, ಮುರಿಡ್ಕೆ ಲಷ್ಕರ್-ಎ-ತೈಬಾ ಮತ್ತು ಅದರ ದತ್ತಿ ವಿಭಾಗವಾದ ಜಮಾತ್-ಉದ್-ದವಾದ ದೀರ್ಘಕಾಲದಿಂದ ಸ್ಥಾಪಿತವಾದ ಕೇಂದ್ರವಾಗಿದೆ. 200 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಮುರಿಡ್ಕೆ ಭಯೋತ್ಪಾದಕ ಸೌಲಭ್ಯವು ತರಬೇತಿ ಪ್ರದೇಶಗಳು, ಬೋಧನೆ ಕೇಂದ್ರಗಳು ಮತ್ತು ಲಾಜಿಸ್ಟಿಕಲ್ ಬೆಂಬಲ ಮೂಲಸೌಕರ್ಯಗಳನ್ನು ಒಳಗೊಂಡಿದೆ. 2008 ರ ಮುಂಬೈ ದಾಳಿ ಸೇರಿದಂತೆ ಇತರ ದಾಳಿಗಳನ್ನು ಎಲ್‌ಇಟಿ ಆಯೋಜಿಸಿದೆ ಎಂದು ಭಾರತ ಆರೋಪಿಸಿದೆ. 26/11 ದಾಳಿಕೋರರು ಇಲ್ಲಿ ತರಬೇತಿ ಪಡೆದಿದ್ದರು.
ಕೋಟ್ಲಿ: ಬಾಂಬರ್ ತರಬೇತಿ ಮತ್ತು ಭಯೋತ್ಪಾದನಾ ಉಡಾವಣಾ ನೆಲೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಕೋಟ್ಲಿ ಆತ್ಮಹತ್ಯಾ ಬಾಂಬರ್‌ಗಳು ಮತ್ತು ದಂಗೆಕೋರರಿಗೆ ಪ್ರಮುಖ ತರಬೇತಿ ನೀಡುವ ತಾಣವಾಗಿತ್ತು. ಭಾರತ ಈ ಹಿಂದೆಯೇ ಹಲವು ಬಾರಿ ಇಲ್ಲಿ ಉಗ್ರ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿತ್ತು. ಮೂಲಗಳ ಪ್ರಕಾರ, ಕೋಟ್ಲಿ ಸೌಲಭ್ಯವು ಯಾವುದೇ ಸಮಯದಲ್ಲಿ 50 ಕ್ಕೂ ಹೆಚ್ಚು
ದಂಗೆಕೋರರಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿತ್ತು ಎನ್ನಲಾಗಿದೆ.
ಗುಲ್ಪುರ: ರಾಜೌರಿ ಮತ್ತು ಪೂಂಚ್‌ನಲ್ಲಿ ದಾಳಿಗಳಿಗೆ ಲಾಂಚ್‌ಪ್ಯಾಡ್
2023 ಮತ್ತು 2024 ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್‌ನಲ್ಲಿ ಕಾರ್ಯಾಚರಣೆಗಾಗಿ ಫಾರ್ವರ್ಡ್ ಲಾಂಚ್‌ಪ್ಯಾಡ್ ಆಗಿ ಗುಲ್ಪುರವನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಈ ಸ್ಥಳವನ್ನು ಭಾರತೀಯ ಭದ್ರತಾ ಬೆಂಗಾವಲು ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ರಕ್ಷಣೆ ನೀಡುವ ಸ್ಥಳವಾಗಿತ್ತು.
ಸವಾಯಿ: ಕಾಶ್ಮೀರ ಕಣಿವೆಯ ದಾಳಿಗೆ ಎಲ್‌ಇಟಿ ಶಿಬಿರದ ಸಂಬಂಧ
ಉತ್ತರ ಕಾಶ್ಮೀರದಲ್ಲಿ, ವಿಶೇಷವಾಗಿ ಸೋನ್‌ಮಾರ್ಗ್, ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಲ್ಲಿ ನಡೆದ ದಾಳಿಗಳಿಗೆ ಸವಾಯಿ ಸಂಬಂಧ ಹೊಂದಿತ್ತು.
ಸರ್ಜಲ್ ಮತ್ತು ಬರ್ನಾಲಾ: ಒಳನುಸುಳುವಿಕೆ ಮಾರ್ಗಗಳು
ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಗೆ ಹತ್ತಿರದಲ್ಲಿರುವ ಸರ್ಜಲ್ ಮತ್ತು ಬರ್ನಾಲಾವನ್ನು ಒಳನುಸುಳುವಿಕೆಗೆ ಗೇಟ್‌ವೇ ಪಾಯಿಂಟ್‌ಗಳೆಂದು ಪರಿಗಣಿಸಲಾಗಿತ್ತು.
ಮೆಹಮೂನಾ: ಹಿಜ್ಬುಲ್ ಮುಜಾಹಿದ್ದೀನ್ ಉಪಸ್ಥಿತಿ
ಸಿಯಾಲ್‌ಕೋಟ್ ಬಳಿ ಇರುವ ಮೆಹಮೂನಾ ಶಿಬಿರವನ್ನು ಕಾಶ್ಮೀರದಲ್ಲಿ ಐತಿಹಾಸಿಕವಾಗಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪು ಹಿಜ್ಬುಲ್ ಮುಜಾಹಿದ್ದೀನ್ ಬಳಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗುಂಪಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಭಾರತೀಯ ಅಧಿಕಾರಿಗಳು ಗಡಿಯಾಚೆಯಿಂದ, ವಿಶೇಷವಾಗಿ ಮೆಹಮೂನಾದಂತಹ ಪ್ರದೇಶಗಳಿಂದ, ಸ್ಥಳೀಯ ಬೆಂಬಲ ಜಾಲಗಳು ತರಬೇತಿ ಮತ್ತು ನಿದರ್ಶನ ನೀಡಲಾಗುತ್ತಿತ್ತು.